ಸಂಡೆ ಸ್ಪೆಷಲ್ ವಿತ್ ಸಂಯುಕ್ತಾ ಹೊರನಾಡು.

Samyukta Hornad

ಕೋವಿಡ್ ಸಂದರ್ಭದಲ್ಲಿ ಕೆಲಸವಿಲ್ಲದೇ, ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಜನಸಾಮಾನ್ಯರಿಗೆ, ಸಿನಿಮಾ ಯೂನಿಟ್ ನ ಕಲಾವಿದರಿಗೆ, ಸಾಧ್ಯವಾದಷ್ಟು ಆಹಾರ ಧಾನ್ಯ ಕೊಟ್ಟು, ತಕ್ಕಮಟ್ಟಿಗೆ ಊರುಗೋಲಾಗಿ ಕೂಡ ನಿಂತಿದ್ದರು. ಸುಮಾರು ನಾಲ್ಕು ಸಾವಿರ ಬೀದಿ ನಾಯಿಗಳಿಗೆ, ಪಕ್ಷಿಗಳಿಗೆ ಸುಮಾರು ೭೫ ದಿನಗಳ ಕಾಲ ಊಟ ಕೊಟ್ಟಿದಾರೆ. ಇವರ ಹೆಸರಲ್ಲೇ ಹೊರನಾಡು ಅಂತಿದೆ ಅಂದಮೇಲೆ ಅರ್ಥವಾಗಿರಬೇಕಲ್ವಾ? 

ಜೂನಿಯರ್ ದೇವದಾಸ ಅಂತ ಹೇಳಿ ದಿಗಂತ್ ಜೊತೆ ಹೆಜ್ಜೆ ಹಾಕಿದ್ದ, ತನ್ನ ಕಣ್ಣೋಟದಿಂದಲೇ ಪಡ್ಡೆ ಹುಡುಗರ ನಿದ್ದೆಗೆಡಿಸುವ ಗ್ಲಾಮರ್ ಬೊಂಬೆ – ಸಂಯುಕ್ತಾ ಹೊರನಾಡು ಇವತ್ತಿನ ನಮ್ಮ ಸೆಲೆಬ್ರಿಟಿ. ಕ್ಯಾಮೆರಾ ಮುಂದೆ ನಿಂತ ಸಂಯುಕ್ತಾ ಬೇರೆ  ಗ್ಲಾಮರ್ ಲೋಕದಿಂದ ಆಚೆಗಿನ ಸಂಯುಕ್ತಾ ಬೇರೆ. ಸಂಗೀತ, ಡ್ಯಾನ್ಸ್, ನಾಟಕ, ಪ್ರಾಣಿಗಳ ಜೊತೆ ಒಡನಾಟ, ಹತ್ತಾರು ಸಮಾಜಮುಖಿ ಎನ್, ಜಿ, ಓ ಗಳ ಮೂಲಕ ಸಮಾಜಸೇವೆ, ಪೇಂಟಿಂಗ್, ಓದುವುದು, ಬರೆಯುವುದು……. ಅಬ್ಬಬ್ಬಾ. ಹೇಳ್ತಾ ಹೋದರೆ ಒಂದು ಉದ್ದದ ಪಟ್ಟಿಯೇ ತಯಾರಾಗುತ್ತೆ. ದಿನದ ಇಪ್ಪತ್ತನಾಲ್ಕು ಗಂಟೆಯೂ ಸದಾ ಪಾದರಸದಂತೆ ಒಂದಿಲ್ಲ ಒಂದು ಹವ್ಯಾಸಗಳು. ಸಂಯುಕ್ತಾ ದಿನಚರಿಯನ್ನು ಒಮ್ಮೆ ನೋಡಿದರೆ ಇಪ್ಪತ್ತನಾಲ್ಕು ಗಂಟೆ ಕೂಡ ಬಹುಶಃ ಇವರಿಗೆ ಸಾಲದೇನೋ ಅನ್ನಿಸುತ್ತೆ. ಅಷ್ಟು ಎನರ್ಜಿ, ಅಷ್ಟು ಉತ್ಸಾಹ. ಬಬ್ಲಿ ಬಬ್ಲಿ ತರಹ ಕ್ಯಾರೆಕ್ಟರ್ ಆಗಲಿ, ತುಂಬಾ ಸೆನ್ಸಿಟಿವ್ ಭಾವನೆಗಳನ್ನು ಹೊತ್ತಿರುವ ಕಂಪನಿಯೊಂದರ ಸಿ ಈ ಓ ಪಾತ್ರವಾಗಲಿ, ಕ್ಯಾಮೆರಾ ಮುಂದೆ ನಿಂತೊಡನೆ ತಾನೇ ಆ ಪಾತ್ರವಾಗಿ ಹೋಗುವ ಸಂಯುಕ್ತಾ ಹೊರನಾಡು ಇವತ್ತಿನ ನಮ್ಮ ಸೆಲೆಬ್ರಿಟಿ – ಸಂಡೆ ಸ್ಪೆಷಲ್ ಕಾಲಂ ನಲ್ಲಿ.

ಕ್ಯಾಮೆರಾ ಜಗತ್ತಿನ ಆಚೆಗಿನ ಸಂಯುಕ್ತಾ ಹೊರನಾಡು ಹವ್ಯಾಸಗಳ ಬಗ್ಗೆ, ನೋವು-ನಲಿವುಗಳ ಬಗ್ಗೆ ಒಂದು ಚಿಕ್ಕ ಪರಿಚಯ.

ಚಿತ್ರೋದ್ಯಮ: ನಿಮ್ಮ ಸಿನಿಮಾ ಜರ್ನಿ ಬಗ್ಗೆ ಹೇಳ್ತೀರಾ?

ಸಂಯುಕ್ತಾ: ನನ್ನಜ್ಜಿ ಭಾರ್ಗವಿ ನಾರಾಯಣ್. ಮೇಕಪ್ ನಾಣಿ ನಮ್ಮ ತಾತ. ಹಾಗಾಗಿ ನಟನೆ ಅನ್ನುವುದು ನನಗೆ ಬಹುಶಃ ರಕ್ತದಲ್ಲೇ ಬಂದಿರಬಹುದು. ನನ್ನ ಅಜ್ಜಿ ಭಾರ್ಗವಿ ನಾರಾಯಣ್ ಅವರ “ಉಂಡಾಡಿಗುಂಡ” ಅನ್ನುವ ನಾಟಕದ  ಶಾಂತಿ ಅನ್ನುವ ಪಾತ್ರಕ್ಕೆ ಮೊದಲ ಬಾರಿ ಬಣ್ಣ ಹಚ್ಚಿದಾಗ ನನ್ನ ವಯಸ್ಸು ಕೇವಲ ಆರು ವರ್ಷ. ಅದಾದ ಮೇಲೆ ಸಂಪೂರ್ಣವಾಗಿ ರಂಗಭೂಮಿಯಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೆ. ಬಿ ಜಯಶ್ರೀ ರವರ “ಸ್ಪಂದನ” ದಲ್ಲಿ ಕೂಡ ತೊಡಗಿಸಿಕೊಂಡಿದ್ದೆ.

ನಾನು ಪಿಯುನಲ್ಲಿ ಓದುತ್ತಿರುವಾಗ ಪವನ್ ಕುಮಾರ್ ಅವರ ಲೈಫು ಇಷ್ಟೇನೆ ಸಿನಿಮಾ ದ ಕ್ಯಾರೆಕ್ಟರ್ ಗೆ ಆಯ್ಕೆ ಮಾಡಿದರು. ನಿಮಗೆ ಗೊತ್ತಿರೋ ಹಾಗೆ ಜೂನಿಯರ್ ದೇವದಾಸ್ ಅಂತ ಹೇಳ್ತಾ ದಿಗಂತ್ ಅನ್ನು ಗೋಳು ಹೊಯ್ದುಕೊಳ್ಳುವ ಒಂದು ಪತ್ರಕರ್ತೆಯ ಪಾತ್ರ.  ಬಿಟ್ಟೆನೆಂದರೂ ಬಿಡದೀ ಮಾಯೆ ಎನ್ನುವಂತೆ ಬಣ್ಣಹಚ್ಚುವ ಆಸೆ ಇನ್ನು ಜಾಸ್ತಿ ಆಯ್ತು ಅದಾದ್ಮೇಲೆ ಒಗ್ಗರಣೆ ಮಾಡಿದೆ. ಅದಕ್ಕೆ ಫಿಲಂಫೇರ್ ಪ್ರಶಸ್ತಿ ಕೂಡ ಬಂತು. ಇಲ್ಲಿಯವರೆಗೂ ಸುಮಾರು 50 ಸಿನಿಮಾಗಳಾಗಿವೆ. ಹೋದವರ್ಷ ಅರಿಷಡ್ವರ್ಗ, ನಾನು ಮತ್ತು ಗುಂಡ ಅನ್ನುವ ಸಿನಿಮಾಗಳು ರಿಲೀಸ್ ಆಯಿತು. God Of Dharmapuri (GOD) ಮತ್ತು Locked  ಸೇರಿದಂತೆ ಕೆಲವು ತೆಲುಗು ತಮಿಳು ವೆಬ್ ಸೀರೀಸ್ ಅಲ್ಲಿ ಕೂಡ ಕೆಲಸ ಮಾಡಿದೀನಿ. ಉನ್ ಸಮಯಲ್ ಅರಿಯುಲ್, ಅಭಿಯುಮ್ ಅನುವುಮ್, ಕೃಷ್ಣ ಅಂಡ್ ಹಿಸ್ ಲೀಲಾ ಸೇರಿದಂತೆ ತೆಲುಗು, ತಮಿಳು ಸಿನಿಮಾದಲ್ಲಿ ಕೂಡ ಕೆಲಸ ಮಾಡಿದೀನಿ. ಒಗ್ಗರಣೆಗೆ ಫಿಲಂ ಫೇರ್ ಪ್ರಶಸ್ತಿ ಬಂದಿದೆ . ದಯವಿಟ್ಟು ಗಮನಿಸಿ ಯ ಪಾತ್ರ  ಫಿಲಂ ಫೇರ್ ಮತ್ತು ಸೀಮಾ ಗೆ ನಾಮಿನೇಟ್ ಆಗಿದೆ.

ಚಿತ್ರೋದ್ಯಮ: ಯಾವಾಗಲೂ ಉತ್ಸಾಹದಿಂದಲೇ ಇರ್ತೀರಲ್ಲ ಟ್ವೆಂಟಿ ಫೋರ್ ಹೌರ್ಸ್ ಕೂಡ ಲವಲವಿಕೆಯಿಂದ ಇರೋದು ಕಷ್ಟ. ಈ ಎನರ್ಜಿ ನಿಮಗೆ ಎಲ್ಲಿಂದ ಬರುತ್ತೆ?

ಸಂಯುಕ್ತಾ: ಏನು ಕಾರಣ ಅಂತ ಗೊತ್ತಿಲ್ಲ, ಬಟ್ ಕ್ಯಾಮೆರಾ ಮುಂದೆ ನಿಂತು ಬಿಟ್ಟರೆ ಏನೋ ಒಂದು ತರಹ ಎನರ್ಜಿ ನಮ್ಮನ್ನ ಆವರಿಸಿಕೊಂಡುಬಿಡುತ್ತದೆ. ಸಿನಿಮಾ ಫೀಲ್ಡ್ ಕಾರ್ಪೊರೇಟ್ ಇಂಡಸ್ಟ್ರಿ ತರಹ ಅಲ್ಲ. ಇಲ್ಲಿ  ಪ್ರತಿದಿನ ಪ್ರತಿನಿತ್ಯ ನಾವು ಹೊಸ ಜನರ ಜೊತೆ ಕೆಲಸ ಮಾಡ್ತಾ ಇರ್ತೀವಿ. ಹೊಸ ರೀತಿಯ ಆಲೋಚನೆ,  ಹೊಸರೀತಿಯ ವೇಷ-ಭಾಷೆ ಯ ಜನರನ್ನು ನೋಡ್ತಾನೆ ಇರ್ತೀವಿ. ಪ್ರತಿಬಾರಿ ಸಿನಿಮಾ ಸೆಟ್ ಗೆ ಹೋದ ತಕ್ಷಣ ನನಗೆ ಅದು ಯಾವುದೊ ಮದುವೆಮನೆಯ ಗಿಜಿಗಿಜಿಯ ಪಾಸಿಟಿವ್ ಫೀಲ್ ಕೊಡುತ್ತೆ. ಇಲ್ಲಿ ಯಾವುದೊ ಹಬ್ಬ ನಡೀತಾ ಇರೋ ಹಾಗೆ, ನಾವೆಲ್ಲಾ ಒಂದು ಫ್ಯಾಮಿಲಿ ಮೆಂಬರ್ಸ್ ಸೇರಿ ಹಬ್ಬ ಮಾಡ್ತಾ ಇರೋ ಫೀಲ್ ಇರುತ್ತೆ. ಅಷ್ಟು ಸಾಕಲ್ವಾ? ಆಟೋಮ್ಯಾಟಿಕ್ ಆಗಿ ನಮ್ಮ ಮನಸ್ಸು ಆಕ್ಟಿವ್ ಆಗಿ ಸದಾ ಪಾಸಿಟಿವ್ ಯೋಚನಿಗೆಗಳಿಂದಾನೆ ತುಂಬಿ ಹೋಗುತ್ತೆ. ಈ ತಾರಾ ಮನಸ್ಸು ಪಾಸಿಟಿವ್ ಇದ್ರೆ ಸಾಕು, ಎನರ್ಜಿ ಅನ್ನೋದು ಅದಾಗದೇ ಬಂದುಬಿಡುತ್ತೆ.

ಶೂಟಿಂಗ್ ಸಮಯದಲ್ಲಿ ಮಾತ್ರ ಅಲ್ಲ ಬೇರೆ ಸಮಯದಲ್ಲಿ ಕೂಡ ನಾನು ಮನೆಯಲ್ಲಿ ಒಂದೇ ಕಡೆ ಕುಳಿತಿರುವ ಮನಸ್ಥಿತಿ ಇರುವ ಹುಡುಗಿಯಲ್ಲ. ನನಗೆ ಯಾವಾಗಲೂ ಒಂದಲ್ಲ ಒಂದು ಕೆಲಸ ಮಾಡುತ್ತಾನೆ ಇರಬೇಕು. ಯಾವುದಾದರೂ ಎನ್ ಜಿ ಓ ಗೆ ಸಂಬಂಧಿಸಿದ್ದೋ, ಅಥವಾ ಪೇಂಟಿಂಗ್, ಡ್ಯಾನ್ಸ್, ಸಂಗೀತ, ಅಥವಾ ಯಾವುದೋ ಒಂದು ಸಮಾಜಮುಖಿ ಕೆಲಸ ಅಥವಾ ಯಾವುದಾದರೂ ಒಂದು ಒಳ್ಳೆಯ ಪುಸ್ತಕವನ್ನು ಓದುವುದು – ಹೀಗೇ ಒಂದಲ್ಲಾ ಒಂದು ರೀತಿ  ಸದಾಕಾಲ ಆಕ್ಟಿವ್ ಆಗಿ ಇರುವ ಹಾಗೆ ನನ್ನ ಮನಸ್ಸಿಗೆ ಟ್ರೈನಿಂಗ್ ಕೊಟ್ಟಿದೀನಿ.  ಬಹುಶಃ ಇದು ಕೂಡ ನನ್ನ ಎನರ್ಜಿಗೆ ಒಂದು ಕಾರಣ ಇರಬಹುದೇನೋ.

Samyukta Hornad

ಚಿತ್ರೋದ್ಯಮ: ಕ್ಯಾಮೆರಾದಿಂದ ಆಚೆಗಿನ ಸಂಯುಕ್ತಾ ಅಂದರೆ ಪ್ರಾಣಿ ಪ್ರಿಯೆ ಅಂತ ಎಲ್ಲ ಕಡೆ ಕೇಳಿದ್ದೀವಿ. ಇದರ ಬಗ್ಗೆ ಹೇಳ್ತೀರಾ?

ಸಂಯುಕ್ತಾ: ಪ್ರಾಣಿ-ಪಕ್ಷಿಗಳ ಜೊತೆ ಒಡನಾಟ ಅಂದರೆ ನನಗೆ ತುಂಬಾ ಇಷ್ಟ ನನಗೆ ಪ್ರಾಣಿಗಳ ಡಾಕ್ಟರ್ ಆಗಬೇಕು ಅಂತ ತುಂಬಾ ಆಸೆ ಇತ್ತು ಈಗ ಕೂಡ ನಾನು ನನ್ನ ಬಿಡುವಿನ ವೇಳೆಯಲ್ಲಿ ವೇಳೆಯನ್ನು ಪ್ರಾಣಿಗಳ ಜೊತೆ ಕಳೆಯೋಕೆ ಇಷ್ಟಪಡುತ್ತೇನೆ.  ಒಂದಷ್ಟು ಪ್ರಾಣಿಗಳನ್ನು ದತ್ತು ತಗೊಂಡಿದ್ದೇನೆ ಕೂಡ.  ಹೋದ ವರ್ಷ ಇದೇ ಸಮಯದಲ್ಲಿ ಪ್ರಾಣಿಗಳಿಗೆ ಖುದ್ದು ಹೋಗಿ ಆಹಾರ ಕೊಟ್ಟು ಬರುವ ಒಂದು ಕಾರ್ಯಕ್ರಮವನ್ನು ಶುರುಮಾಡಿದೆ. ಕೊರೊನಾ ದಿಂದಾಗಿ ಆಹಾರ ಸಿಗದೆ ಕಂಗಾಲಾಗಿದ್ದ ಸುಮಾರು   4000 ನಾಯಿಗಳಿಗೆ 75 ದಿನಗಳ ಕಾಲ ಈ ರೀತಿ ಊಟ ಕೊಡುವ ಆಹಾರ ಕೊಡುವ ಒಂದು ಕಾರ್ಯಕ್ರಮ ನಡೆಯಿತು. ಭೂಮಿ ಮೇಲೆ ಪ್ರಾಣಿಗಳಿಗೆ ಕೂಡ ಬದುಕಲು ಹಕ್ಕಿದೆ ಹಾಗಾಗಿ ನಾವು ತಿನ್ನುವ ಒಂದು ತುತ್ತಿನಲ್ಲಿ ಒಂದೆರಡು ಅಗಳು ಅನ್ನವನ್ನು ಪ್ರಾಣಿಗಳಿಗೆ ಕೊಟ್ಟರೆ ಅದರಿಂದ ನಮಗೆ ಲಾಸ್ ಏನು ಇಲ್ಲ.  ಅದರಿಂದ ಸಿಗುವ ತೃಪ್ತಿ ಇದೆಯಲ್ಲ. ವಾವ್. ಅದನ್ನು ಪದಗಳಲ್ಲಿ ಹೇಳಲಿಕ್ಕಾಗಲ್ಲ ಕೇವಲ ಅನುಭವಿಸಿದವರಿಗೆ ಮಾತ್ರ ಗೊತ್ತು.

ಪ್ರಾಣಿಗಳಿಗೆ ಊಟ ಹಾಕಿ ನಾವು ಅದಕ್ಕೆ ಸಹಾಯ ಮಾಡ್ತಾ ಇದ್ದೀವಿ ಅಂತ ಅಂದುಕೊಂಡರೆ ಅದು ನಮ್ಮ ಭ್ರಮೆ. ಇದು ಪ್ರತಿಯೊಬ್ಬರ ಕರ್ತವ್ಯ ಕೂಡ. ಪ್ರಾಣಿಯೊಂದು ಹೊಟ್ಟೆ ತುಂಬಾ ಊಟ ಮಾಡಿ ಖುಷಿಯಿಂದ ಬಾಲ ಅಲ್ಲಾಡಿಸುತ್ತಾ ಅದರದೇ ಆದ ಭಾಷೆಯಲ್ಲಿ ನಮಗೆ ಥ್ಯಾಂಕ್ಸ್ ಅಂತ ಹೇಳುತ್ತೆ ಅಲ್ವಾ? ಆ ತೃಪ್ತಿಯ ಮುಂದೆ ಪ್ರಪಂಚದ ಬೇರಾವ ತೃಪ್ತಿಯೂ ಇಲ್ಲ ಅನಿಸುತ್ತೆ.

Samyukta Hornad

ಚಿತ್ರೋದ್ಯಮ: ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಸಂಯುಕ್ತಾ ಯಾವ ರೀತಿಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ತುಂಬಾ ಇಷ್ಟಪಡುತ್ತಾರೆ?

ಸಂಯುಕ್ತಾ: ಇಂತಹದೇ ಪಾತ್ರ ಅಂತ ಏನಿಲ್ಲ. ಹೆಣ್ಣು ಅಂದರೇನೇ ಅದೊಂದು ಭಾವನಾತ್ಮಕ ಜೀವ. ಒಂದೊಂದು ಹೆಣ್ಣಿಗೂ ಅವಳದ್ದೇ ಆದ ಭಾವನೆಗಳು ಇರುತ್ತೆ. ಒಂದು ಚಿಕ್ಕ ಹಳ್ಳಿಯ ಹುಡುಗಿ ಆಗಿರಬಹುದು ಅಥವಾ ದೊಡ್ಡದೊಂದು ಕಂಪನಿಯ ಸಿಇಓ ಆಗಿರಬಹುದು ಅಥವಾ ಪಕ್ಕದ ಮನೆ ಹುಡುಗಿ ಆಗಿರಬಹುದು ಅಥವಾ ಒಬ್ಬ ಪೊಲೀಸ್ ಆಫೀಸರ್ ಆಗಿರಬಹುದು. ಪ್ರತಿಯೊಂದು ಹೆಣ್ಣಿನಲ್ಲೂ ಕೆಲವು ಅಂತರ್ಗತ ಭಾವನೆಗಳು ಅಡಕವಾಗಿರುತ್ತದೆ. ಒಂದು ದೃಷ್ಟಿಯಿಂದ ನೋಡಿದರೆ ಪ್ರತಿಯೊಂದು ಪಾತ್ರವೂ ಒಂದಲ್ಲ ಒಂದು ಭಾವನೆಯನ್ನು ವ್ಯಕ್ತಪಡಿಸುತ್ತಾನೆ ಇರುತ್ತೆ. ಹಾಗಾಗಿ ಭಾವನೆಗಳನ್ನು ವ್ಯಕ್ತಪಡಿಸುವಂತಹ ಪಾತ್ರ, ನನ್ನನ್ನು ನಾನು ಕಂಡು ಕೊಳ್ಳುವಂತಹ ಪಾತ್ರ ಅಂದರೆ ನನಗೆ ತುಂಬಾ ಇಷ್ಟ. ಅದರಲ್ಲೂ ವಿಶೇಷವಾಗಿ ಸಿನಿಮಾ ನೋಡುವವರಿಗೆ ನನ್ನ ಪಾತ್ರ ಸ್ವಲ್ಪನಾದರೂ ಪಾಸಿಟಿವಿಟಿ ಕೊಡಬೇಕು ಕೊಡಬೇಕು ಅಂತ ನನಗೆ ಇಷ್ಟ. ಆ ಪಾತ್ರ ತುಂಬಾ ದಿನ ಪ್ರೇಕ್ಷಕರಿಗೆ ನೆನಪಲ್ಲಿ ಉಳೀಬೇಕು.

Samyukta Hornad family

ಚಿತ್ರೋದ್ಯಮ: As a student, ಸಂಯುಕ್ತಾ,  ಫಸ್ಟ್ ಬೆಂಚ್ ಸ್ಟುಡೆಂಟೋ ಅಥವಾ ಲಾಸ್ಟ್ ಬೆಂಚ್ ಸ್ಟುಡೆಂಟೋ?

ಸಂಯುಕ್ತಾ: ಕಾಲೇಜಲ್ಲಿ ಇರುವಾಗ ಯಾವಾಗಲೂ ಓದುವುದು, ಬರೆಯುವುದು ಅಷ್ಟೇ ನನ್ನ ಪ್ರಪಂಚ. ಪುಸ್ತಕದಿಂದ ಆಚೆಗೆ ಬೇರಾವುದೇ ವಿಷಯದಲ್ಲಿ ತಲೆಹಾಕಲು ಕೂಡ ನನಗೆ ಸಮಯ ಇರಲಿಲ್ಲ. ಕಾಲೇಜಿನಲ್ಲಿ ಓದುತ್ತಾ ಇರುವಾಗ ನಡೆದ ಒಂದು ಘಟನೆ ನನ್ನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲ ಹುಟ್ಟುಹಾಕಿತು. ಆ ಹಂಬಲವೆಂಬ ಬೀಜಕ್ಕೆ ಪಾಸಿಟಿವಿಟಿ ಎಂಬ ನೀರೆರೆದು ಗೊಬ್ಬರ ಹಾಕಿ ಚೆನ್ನಾಗಿ ಆರೈಕೆ ಮಾಡಿದೆ. ಆ ಒಂದು ಚಿಕ್ಕ ಗಿಡ ಇವತ್ತು ಆಲದ ಮರವಾಗಿ ಬೆಳೆದು ನನ್ನನ್ನು ಪ್ರತಿದಿನ ಪ್ರತಿ ಕ್ಷಣ  ಹೊಸ ಹೊಸ ಪ್ರಯೋಗಗಳಿಗೆ ಹೊಸ ರೀತಿಯ ಪಾತ್ರಗಳಿಗೆ ಹೊಸ ರೀತಿಯ ಸಿನಿಮಾಗಳಿಗೆ ಹೊಸ ಹೊಸ ಆಲೋಚನೆಗಳಿಗೆ ಹೊಂದಿಕೊಳ್ಳುವಂತೆ  ಎನರ್ಜಿ ಕೊಡ್ತಾ ಇದೆ.

ಚಿತ್ರೋದ್ಯಮ: ಸಂಯುಕ್ತಾ ರೋಲ್ ಮಾಡೆಲ್ ಯಾರು?

ಸಂಯುಕ್ತಾ: ಇಂತಹದೇ ವ್ಯಕ್ತಿ ಅಂತ ಇಲ್ಲ. ನಾವು ಬೆಳೆದಷ್ಟೂ, ಓದಿದಷ್ಟೂ, ಮೆಚೂರ್ ಆದಷ್ಟೂ, ರೋಲ್ ಮಾಡೆಲ್ ಅನ್ನುವ ಪದದ ವ್ಯಾಪ್ತಿ ಬದಲಾಗ್ತಾನೆ ಇರುತ್ತೆ. ಪರ್ಸನಾಲಿ, ನನ್ನ ಪ್ರಕಾರ ಪುರುಷ ಪ್ರಧಾನ ಸಮಾಜದಲ್ಲಿ ಇದ್ದು, ಸಾಧನೆ ಮಾಡಿರುವ, ಮಾಡ್ತಾ ಇರುವ ಪ್ರತಿಯೊಂದು ಹೆಣ್ಣು ಕೂಡ ನನಗೆ ರೋಲ್ ಮಾಡೆಲ್. ಪ್ರಪಂಚದ ಪ್ರತಿಯೊಂದು ತಾಯಿಯು ಕೂಡ ಅವರ ಮಕ್ಕಳಿಗೆ ರೋಲ್ ಮಾಡೆಲ್. ಹಾಗಾಗಿ ನನ್ನ ಅಮ್ಮ ನನಗೆ ರೋಲ್ ಮಾಡೆಲ್.

ಹಾಗೆ ನೋಡಿದರೆ ನಮ್ಮ ಅಜ್ಜಿ ನನಗೆ ರೋಲ್ ಮಾಡೆಲ್ ಈ ವಯಸ್ಸಿನಲ್ಲಿ ಕೂಡ ಹದಿನೆಂಟರ ಹರೆಯದ ಯುವತಿಯಂತೆ ಪಾದರಸದಂತೆ ಓಡಾಡಿಕೊಂಡಿರುತ್ತಾರೆ ನಗುತ್ತಾರೆ ನಮ್ಮನ್ನ ನಗುತ್ತಿರುತ್ತಾರೆ. ಎಷ್ಟೇ ಅವರಿಗೆ ಮೊನ್ನೆಯಷ್ಟೇ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೂಡ ಸಿಕ್ಕಿದೆ ಸಾಲುಮರದತಿಮ್ಮಕ್ಕ, ಜಯಲಲಿತಾ, ರೇಖಾ, ಕಿತ್ತೂರು ರಾಣಿ ಚೆನ್ನಮ್ಮ – ಹೀಗೆ.  ಹೀಗೆ – ಕೇವಲ ತನ್ನ ಅಸ್ತಿತ್ವಕ್ಕಾಗಿ ಅಲ್ಲದೆ ಸಾಮಾಜಿಕ ಬದ್ಧತೆಯಿಂದ ಸಾಧನೆ ಮಾಡುತ್ತಿರುವ ಪ್ರತಿಯೊಂದು ಹೆಣ್ಣು ಕೂಡ ರೋಲ್ ಮಾಡೆಲ್.

ಚಿತ್ರೋದ್ಯಮ: ಒಂದು ವೇಳೆ ದೇವರು ಪ್ರತ್ಯಕ್ಷರಾಗಿ ನಿಮ್ಮನ್ನು ನೀವು ಬಯಸಿದ ವ್ಯಕ್ತಿಯನ್ನಾಗಿ ಮಾಡ್ತೀನಿ ಅಂದರೆ ನೀವು ಯಾರಾಗಬಯಸುತ್ತೀರಿ?

ಸಂಯುಕ್ತಾ: ನಾನು ನಾನಾಗೇ  ಇರಲಿಕ್ಕೆ ಬಯಸುತ್ತೇನೆ. ಹಾಗೇನಾದರೂ ದೇವರು ಪ್ರತ್ಯಕ್ಷನಾದರೆ, ನಾನು ಕೇಳುವುದಿಷ್ಟೇ – ನೀನು ನನ್ನನ್ನ ಯಾವುದೇ ವ್ಯಕ್ತಿಯನ್ನಾಗಿ ಮಾಡು; ಆದರೆ ನನಗೆ ಆತ್ಮತೃಪ್ತಿ ಸಿಗುವಂತಹ ಕೆಲಸವನ್ನು ನನ್ನಿಂದ ಮಾಡಿಸು. ನೊಂದ ಹೃದಯಗಳಿಗೆ ಸಾಂತ್ವನ ಹೇಳುವ ಹಸಿದ ಹೊಟ್ಟೆಗಳಿಗೆ ಒಂದು ತುತ್ತು ಅನ್ನ ನೀಡುವ ಶಕ್ತಿ ನನಗೆ ಇದ್ದರೆ ಸಾಕು. ಅದನ್ನು ಮಾತ್ರ ನನ್ನಿಂದ ಕಿತ್ತುಕೊಳ್ಳಬೇಡ.

ಸಂಯುಕ್ತಾ ಸಿನಿಮಾ ಜರ್ನಿ ಹೂವಿನ ಹಾಸಿಗೆಯಾಗಿರಲಿ, ಯಶಸ್ಸಿನ ಮೇಲೆ ಯಶಸ್ಸು ಸಿಗಲಿ ಅಂತ ಚಿತ್ರೋದ್ಯಮ.ಕಾಂ ನ ಹಾರೈಕೆ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply