ಅತ್ಯಂತ ಜನಪ್ರಿಯ ವಿಠಲನ ಭಕ್ತಾಗ್ರೇಸರನ ಕತೆಯಿದು. ಭದ್ರಗಿರಿ ಕೇಶವದಾಸರ ಸಹಾಯವನ್ನು ನಿರ್ದೇಶಕ ಸುಂದರ ನಾಡಕರ್ಣಿಯವರು ತೆಗೆದುಕೊಂಡಿದ್ದಾರಂತೆ.(1963)
ತುಕಾ(ರಾಜ್‍ಕುಮಾರ್) ಸದಾ ವಿಠ್ಠಲ, ಪಾಂಡುರಂಗ ಎನ್ನುತ್ತಿರುವ ಭಕ್ತ. ಇಡೀ ಹಳ್ಳಿಯ ಜನ ಆತನ ಕಾಲಿಗೆ ಎಲ್ಲೆಂದರಲ್ಲಿ ಬೀಳುತ್ತಿರುತ್ತಾರೆ. ಏನೋ ಬರೆಯುತ್ತಾನೆ, ಏನೋ ಹಾಡುತ್ತಾನೆ, ಒಟ್ಟಿನಲ್ಲಿ ಈ ಲೌಕಿಕ ಪ್ರಪಂಚದಲ್ಲಿ ಆತ ಇರುವುದು ಕಡಿಮೆ.
ಆತನ ಪಾರಮಾರ್ಥಿಕ ಗುಣಕ್ಕೆ ತದ್ವಿರುದ್ಧ ಅವನ ಹೆಂಡತಿ ಜೀಜಾ (ಲೀಲಾವತಿ). ನಿಜ ಹೇಳಬೇಕೆಂದರೆ ಈ ಪಾತ್ರವನ್ನು ಬೇರಾದರೂ ಮಾಡಲು ಸಾಧ್ಯವಿಲ್ಲವೇನೋ ಎನ್ನುವಂತೆ ಜೀವ ತುಂಬಿದ್ದಾರೆ. ಆಕೆಯ ಲೌಕಿಕ ಪ್ರಪಂಚ ಎಂದರೆ ಪತಿಯ ಸೇವೆ, ಮಗ ಮಹದೇವ ಮತ್ತು ಮಗಳು ಕಾಶಿಯ ಯೋಗಕ್ಷೇಮ ಮತ್ತು ಅವಳ ತವರಿನಿಂದ ತಂದಿರುವ ಎಮ್ಮೆಯ ಆರೈಕೆ.
ಸದಾ ಎಲ್.ಆರ್.ಈಶ್ವರಿಯ ಧ್ವನಿಯಲ್ಲಿ ಸಣ್ಣಪುಟ್ಟ ಹಾಡುಗಳನ್ನು ಹೇಳುತ್ತಾ ಎಮ್ಮೆ ತೊಳೆಯುತ್ತ, ಮಕ್ಕಳಿಗೆ ರೊಟ್ಟಿ ನೀಡುತ್ತ, ಮನೆಗೆ ಏನೂ ಧಾನ್ಯ ತರದೆ ಧ್ಯಾನ ಮಾಡುವ ಪತಿಯನ್ನು ಗದರುತ್ತ, ‘ತಾಯೇ ಹೊನ್ನಾದೇವಿ’ ಎಂದು ಅವಳ ದೇವಿಯನ್ನು ಕೂಗುತ್ತಿರುತ್ತಾಳೆ ಜೀಜ. ಅವಳಿಗೆ ಪಾಂಡುರಂಗನನ್ನು ಕಂಡರಾಗದು. ಆ ಕರ್ಪ (ಕರಿಯ) ಎಂದು ಅವನನ್ನು ಮೂದಲಿಸುತ್ತಿರುತ್ತಾಳೆ.
ಯಾರೇನೇ ಅಂದರೂ ತುಕಾನದು ಒಂದೇ ಭಾವ. ಭಕ್ತಿಭಾವ. ಕೋಪ, ಆನಂದ, ದುಃಖ ಏನೂ ಇಲ್ಲ. ಇಡೀ ಹಳ್ಳಿಯಲ್ಲಿ ಇವನನ್ನು ಕಂಡರಾಗದವನು ಮಾಂಬಾಜಿ(ಬಾಲಕೃಷ್ಣ). ಇವನ ಒಬ್ಬ ಶಿಷ್ಯನನ್ನು ವಾದಿರಾಜ್ ಎಂದು ಗುರುತಿಸಿದೆ. ಮಾಂಬಾಜಿಯ ಕೆಲಸಗಳು ಎರಡು. ತುಕಾನ ಪದ್ಯಗಳನ್ನು ಕದ್ದು, ಅದರಲ್ಲಿ ತನ್ನ ಅಂಕಿತ ಹಾಕಿಕೊಳ್ಳುವುದು ಒಂದು. ಹೇಗಾದರೂ ತುಕಾನ ಬರ್ಬಾದ್ ಮಾಡುವುದು ಮತ್ತೊಂದು ಕೆಲಸ. ತನ್ನ ಹೊಲ ಕಾಯುತ್ತಾ ವಿಠಲನ ನಾಮಸ್ಮರಣೆ ಮಾಡುತ್ತಿರುವ ತುಕಾನ ನಾಶಕ್ಕೆ ತನ್ನ ಹೊಲಕ್ಕೆ ತಾನೇ ಬೆಂಕಿ ಹಾಕಿಸಿಕೊಳ್ಳುತ್ತಾನೆ ಎಂದರೆ ಅವನ ಮತ್ಸರದ ಅರಿವು ಆಗಬಹುದು.
ಮಾಂಬಾಜಿಯ ಗೆಳತಿ ಮೇನಕ (ರಾಜಶ್ರೀ) ಒಬ್ಬಳು ನರ್ತಕಿ. ಎಸ್.ಜಾನಕಿ ಸ್ವರದಲ್ಲಿ ‘ಬೇಡ ಕೃಷ್ಣ ರಂಗಿನಾಟ ಸೀರೆ ನೆನೆವುದು’ ಎಂದು ನೃತ್ಯ ಮಾಡುವವಳು, ಮಾಂಬಾಜಿಗೆ ಸವಾಲು ಹಾಕಿ ತುಕಾನನ್ನು ಬುಟ್ಟಿಗೆ ಹಾಕಿಕೊಳ್ಳಲು ಭರತನಾಟ್ಯ ಮಾಡಿ ‘ಏಳಯ್ಯ ಮನಮೋಹನಾ’ (ಎಲ್ ಆರ್ ಈಶ್ವರಿ) ಎನ್ನುತ್ತಾಳೆ. ಕಥಕ್ ದಿರಿಸಿನಲ್ಲಿ ಕುಣಿಯುತ್ತಾಳೆ. ನಂತರ ಲಾವಣಿ ಉಡುಪು. ಊಹೂಂ. ಈ ತುಕಾ ಎಂಬ ವಿಶ್ವಾಮಿತ್ರ ಏಳುವುದಿಲ್ಲ. ಆಗ ‘ಹೇ ಪಂಢರಯ್ಯ ನೀನೆ ಜಗದ ತಂದೆ ಕಣಯ್ಯ’ (ಎಲ್ ಆರ್ ಈಶ್ವರಿ) ಎಂದಾಗ ಎಚ್ಚರಗೊಂಡು ಅವಳೊಂದಿಗೆ ‘ವಿಠಲಾ ವಿಠಲಾ’ ಎಂದು ಹಾಡುತ್ತಾ ಮೆಲ್ಲ ಕುಣಿಯುತ್ತಾನೆ ತುಕಾ. ಅವಳ ಹೃದಯಪರಿವರ್ತನೆಗೊಂಡು ಎಸ್.ಜಾನಕಿ ಧ್ವನಿಯಲ್ಲಿ ‘ಅಮೃತಕ್ಕೂ ತಾ ರುಚಿ ನಾಮ ನಿನ್ನ ದೇವ’ ಹಾಡುತ್ತಾಳೆ. (ಅಮೃತಾಂಚಿ ನೀಕೂಡು ನಾಮ ಮಝೇ ದೇವಾ-ತುಕಾರಾಮನ ಅತ್ಯಂತ ಜನಪ್ರಿಯ ಅಭಂಗ್).
ಅಭಂಗ್ ಎನ್ನುವುದು ಮಹಾರಾಷ್ಟ್ರದ ಭಕ್ತಿ ಹಾಡುಗಳು. ದೇವರ ಪಲ್ಲಕ್ಕಿಯನ್ನು ಊರಿಂದೂರಿಗೆ ಕೊಂಡೊಯ್ಯುವಾಗ ಮಾರ್ಗಾಯಾಸ ತಿಳಿಯದಿರಲೆಂದು ಪಾಂಡುರಂಗನನ್ನು ಸ್ತುತಿಸುವ ಗೀತೆಗಳು. ನಾಮದೇವ, ಜ್ಞಾನದೇವ, ಜಾನಾಬಾಯಿ ಮುಂತಾದವರ ಅಭಂಗಗಳಿವೆ.
ಶಿವಾಜಿ ಮಹಾರಾಜನಾಗಿ ಉದಯಕುಮಾರ್, ಆತನ ಪತ್ನಿಯಾಗಿ ಪಂಢರೀಬಾಯಿ, ತುಕಾನನ್ನು ಶಿಕ್ಷಿಸಿ ತಾನೇ ತೊಂದರೆಗೊಳಗಾಗುವ ಪಾತ್ರದಲ್ಲಿ ಕೆ.ಎಸ್.ಅಶ್ವತ್ಥ್, ಪುಟ್ಟ ಕೃಷ್ಣನಾಗಿ ಕಲಾ(ಈಕೆ ರಾಜ್ ತಂಗಿಯಾಗಿ ಕನಿಷ್ಠ ಎರಡು ನಂತರದ ಚಿತ್ರಗಳಲ್ಲಿ ನಟಿಸಿರುವಾಕೆ) ನಟಿಸಿದ್ದಾರೆ.
ಪಿ.ಬಿ.ಎಸ್ ಧ್ವನಿಯಲ್ಲಿ ಅತ್ಯಂತ ಜನಪ್ರಿಯ ‘ಜಯತು ಜಯ ವಿಠಲಾ ನಿನ್ನ ನಾಮವು ಶಾಂತಿಧಾಮವು’ ಇದೆ. ಅದಲ್ಲದೇ ಸುಮಾರು ಹನ್ನೆರಡಾದರೂ ಪುಟ್ಟ ಪುಟ್ಟ ಭಕ್ತಿ ತುಂಬಿದ ಹಾಡುಗಳಿವೆ… ಪಿ.ಬಿ.ಎಸ್. ಅವರದು. ಎಲ್ಲವೂ ‘ಫುಟ್ ಟ್ಯಾಪಿಂಗ್, ಹ್ಯಾಂಡ್ಸ್ ಕ್ಲ್ಯಾಪ್ಪಿಂಗ್’ ಟ್ಯೂನ್‍ಗಳು. ವಿಜಯಭಾಸ್ಕರ್ ಈ ಚಿತ್ರಕ್ಕೆ ಸಂಗೀತ ನಿರ್ದೇಶಕರು.
ಅಣ್ಣಾವ್ರು ಎಲ್ಲವನ್ನೂ ನಿಧಾನವಾಗಿ ನಿಜಕ್ಕೂ ಬಹಳವೇ ತಾದಾತ್ಮ್ಯತೆಯಿಂದ ನಟಿಸಿದ್ದಾರೆ. ಒಂದು ರೀತಿ ನಮ್ಮನ್ನು ಆವರಿಸಿಕೊಂಡುಬಿಡುತ್ತಾರೆ.
ಆದರೆ ಅವರಿಗೆ ಸರಿಸಾಟಿಯಾಗಿ, ಅವರ ಪಾತ್ರಸ್ವಭಾವಕ್ಕೆ ವಿರುದ್ಧವಾದ ಲೀಲಾವತಿಯವರನ್ನು ನೋಡಲೂ ಕೂಡ ಈ ಚಿತ್ರವನ್ನು ಒಮ್ಮೆ ಎಲ್ಲ ಚಿತ್ರರಸಿಕರೂ ನೋಡಲೇಬೇಕು.
ಪತಿಯ ಮಾತುಗಳನ್ನು ಹಗುರವಾಗಿ ತೆಗೆದುಕೊಂಡು ಅವನು ವೈಕುಂಠಕ್ಕೆ ಹೊರಡುವೆನೆಂದಾಗ ಕೂಡ ಎಮ್ಮೆ ಸಗಣಿ ಬಳಿಯುತ್ತಿದ್ದವಳು, ಪತಿಯಿರುವ ಪುಷ್ಪಕವಿಮಾನವನ್ನು ಬೆನ್ನಟ್ಟುವ ದೃಶ್ಯ ಬಲು ಮನೋಜ್ಞ. ಅವಳು ವಿಠಲನನ್ನು ಗುಡಿಯಲ್ಲಿ ದಬಾಯಿಸುವುದು, ಅವಳ ಕಾಲಿಗೆ ಹಾವು ಕಚ್ಚಿದಾಗ ವಿಠಲ ಅವಳ ಸಹಾಯಕ್ಕೆ ಬಂದಾಗ ಅವನನ್ನು ‘ಬೆಂಡ್’ ಎತ್ತುವುದು ಬಹಳ ಚೆನ್ನಾದ ದೃಶ್ಯಗಳು.
ಅತ್ಯುತ್ತಮ ಕನ್ನಡ ಚಿತ್ರ ಎಂಬ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ.