ಅಣ್ಣಾವ್ರು ವಿರೂಪಾಕ್ಷ ಎಂಬ ಒಳ್ಳೆಯ ರಾಜನೂ ರಕ್ತಾಕ್ಷ ಎಂಬ ಅವನ ಕೆಟ್ಟ ತಮ್ಮನೂ ಆಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಶಕ್ತಿಯುಳ್ಳ ಸತಿಯಾಗಿ ಎಂ. ವಿ ರಾಜಮ್ಮ ಅಭಿನಯಿಸಿದ್ದಾರೆ. ಸಾಹುಕಾರ್ ಜಾನಕಿ ಅನೇಕ ನೃತ್ಯಗಳನ್ನು ಮಾಡಿದ್ದಾರೆ. ಬಹಳ ಹಾಡುಗಳಿವೆ. ನನಗೆ ನೆನಪಿರುವ ಹಾಡುಗಳೆಂದರೆ ಪವಡಿಸು ಫಾಲಾಕ್ಷ ಶ್ರೀ ವಿರೂಪಾಕ್ಷ, ಮಾತೆಗೆ ಮಿಗಿಲಾದ ದೇವರಿಲ್ಲ ಮತ್ತು ಬಾರಮ್ಮಾ ಭಾಗ್ಯೇಶ್ವರಿ.
ಕೈಲಾಸದಲ್ಲಿ ಶಿವ ಸತಿಯರ ನೃತ್ಯ ಸಮಯದಲ್ಲಿ ಸತಿಯಾದ ದಾಕ್ಷಾಯಿಣಿಯ ಕೈಗಳ ಬಳೆಗಳು ಭೂಮಿಗೆ ಬಿದ್ದು, ಗಣಗಳು ನಕ್ಕು ಶಾಪಗ್ರಸ್ತರಾಗಿ ಭುವಿಗೆ ಬಿದ್ದು… ಬಹಳವೇ ಟ್ವಿಸ್ಟ್ಸ್ ಇರುವ ಕಥೆ. ಕೇವಲ ಎರಡೂವರೆ ಗಂಟೆಗಳ ಅವಧಿಯಲ್ಲಿ ವಿಶಿಷ್ಟವಾದ ರೀತಿಯಲ್ಲಿ ನಿರೂಪಿಸಿದ್ದಾರೆ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಿರುವ ಕಣಗಾಲ್ ಪ್ರಭಾಕರ ಶಾಸ್ತ್ರಿ.
ಕರ್ನಾಟಕ, ಕನ್ನಡ, ವಿಜಯನಗರ ಎಲ್ಲವೂ ಇರುವ ಈ ಕಥೆಯಲ್ಲಿ ಸತಿ ದಾಕ್ಷಾಯಿಣಿಯನ್ನೇ ಸೋಲಿಸುವ ಹಂಪಿ (ಎಂ ವಿ ರಾಜಮ್ಮ) ಎನ್ನುವ ಹಳ್ಳಿ ಹೆಣ್ಣಿನ ಕಥೆ. ನರಸಿಂಹರಾಜು, ಬಿ. ಜಯ, ರಾಘವೇಂದ್ರ ರಾವ್, ಪಾಪಮ್ಮ ನಾನು ಗುರುತಿಸಿದ ಕೆಲವರು.
ಧರ್ಮಸ್ಥಳದ ಅಣ್ಣಪ್ಪನಾಗಿ ಕೆ ಎಸ್ ಅಶ್ವತ್ಥ್ ಇದ್ದಾರೆ. ದುಷ್ಟ ರಕ್ತಾಕ್ಷನಾಗಿ ಅಣ್ಣಾವ್ರು ಬಹಳ ಮಿಂಚಿದ್ದಾರೆ. ಸೌಮ್ಯ ವಿರೂಪಾಕ್ಷನಾಗಿ ಅನೇಕ ಸಲ ನೋಡಿರುವ ಪಾತ್ರ ನೆನಪಿಸುತ್ತಾರೆ.
1963ರ ಈ ಚಿತ್ರಕ್ಕೆ ಟಿ ಜಿ ಲಿಂಗಪ್ಪ ಸಂಗೀತ ನಿರ್ದೇಶನದಲ್ಲಿ ಒಂದು ಹಾಡು ಈ ಸಮಯ ಆನಂದಮಯ ತರಹದ ಯಮನ್ ರಾಗದ ಹಾಡಿದೆ. ಹಂಸಾನಂದಿ ಮತ್ತು ಷಣ್ಮುಖಪ್ರಿಯ ರಾಗದ ಯಾರು ತಿಳಿಯದು ನಿನ್ನ ಭುಜಬಲದ… ರೀತಿಯ ಮಾತಿನ ಹಾಡಿದೆ.
ಈಶ್ವರ ದಾಕ್ಷಾಯಿಣಿ ಕೈಲಾಸದಲ್ಲಿ ಉಳಿದ ಚಿತ್ರಗಳಲ್ಲಿನಂತೆ ಪಗಡೆ ಆಡದೇ ಚದುರಂಗ ಆಡುತ್ತಾರೆ. ಸಂಭಾಷಣೆ ಬಹಳ ಪ್ರಾಸಬದ್ಧವಾಗಿ ಸೊಗಸಾಗಿದೆ.
ಅಣ್ಣಾವ್ರು ದುಷ್ಟ ಹಾಗೂ ಸಾತ್ವಿಕ ಸಹೋದರರ ದ್ವಿಪಾತ್ರದಲ್ಲಿ ಅಮೋಘ ಅಭಿನಯ ನೀಡಿದ್ದಾರೆ.