ಸನಾದಿ ಅಪ್ಪಣ್ಣ

ನಿರ್ದೇಶಕ ವಿಜಯ್‌ ಕಂಡರೆ ಬೆರಗಾಗುತ್ತದೆ. ಸಾಮಾಜಿಕ (ಬಡವರ ಬಂಧು), ಚಾರಿತ್ರಿಕ (ಮಯೂರ), ಪೌರಾಣಿಕ (ಶ್ರೀನಿವಾಸ ಕಲ್ಯಾಣ), ಕಾದಂಬರಿ ಆಧಾರಿತ (ಹುಲಿಯ ಹಾಲಿನ ಮೇವು) , ಸಾಹಸ (ಗಂಧದ ಗುಡಿ), ಪ್ರೇಮಕಥೆ (ನಾನಿನ್ನ ಮರೆಯಲಾರೆ) – ಎಲ್ಲಾ ಅಣ್ಣಾವ್ರ ಯಶಸ್ವೀ ಸಿನಿಮಾಗಳು. ಅದಲ್ಲದೇ ಇವರು ವಿಷ್ಣು, ಅನಂತನಾಗ್‌, ಶಂಕರ್‌ ನಾಗ್‌ ಮುಂತಾದವರ ಚಿತ್ರಗಳನ್ನು ಕೂಡ ನಿರ್ದೇಶಿಸಿದ್ದಾರೆ.

ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿ ಆಧಾರಿತ ಸನಾದಿ ಅಪ್ಪಣ್ಣ ಚಿತ್ರವು ೧೯೭೭ರಲ್ಲಿ ಬಿಡುಗಡೆಯಾಗಿದ್ದು ಬೆಂಗಳೂರಿನಲ್ಲಿ ೨೦೦ ದಿನಗಳು, ಹುಬ್ಬಳ್ಳಿಯಲ್ಲಿ ೫೦ ವಾರಗಳು ಓಡಿತು.

ಸುಂದರಿ ಜಯಪ್ರದಾಳ ಮೊದಲ ಕನ್ನಡ ಚಿತ್ರವೆಂಬುದನ್ನೂ ಒಂದು ಹೆಗ್ಗಳಿಕೆ ಎನ್ನಬಹುದೇನೋ… ಆಕೆಯ ನೃತ್ಯದ ಪರಿಣತಿಯನ್ನು ಈ ಚಿತ್ರದಲ್ಲಿ ಒಂದಿಷ್ಟು ಬಳಸಿಕೊಂಡಿದ್ದಾರೆ.

ಎಸ್‌. ಜಾನಕಿಯಮ್ಮನವರು ಕರೆದರೂ ಕೇಳದೇ ಹಾಡಿನಲ್ಲಿ ತಮ್ಮ ಧ್ವನಿಯನ್ನು ಶೆಹನಾಯ್‌ನಂತೆ ಒಂದು ಕಡೆ ಮಾಡಿರುವುದೊಂದು ವೈಶಿಷ್ಟ್ಯ. ಇವರು ತಿಲ್ಲಾನ ಮೋಹನಾಂಬಾಳ್‌ ತಮಿಳು ಚಿತ್ರದ ಹಾಡಿನಲ್ಲಿ ಒಂದು ಕಡೆ ನಾದಸ್ವರದಂತೆಯೂ, ಶಿವ ಶಿವ ಎನ್ನದ ನಾಲಿಗೆ ಏಕೆ ಹಾಡಿನಲ್ಲಿ ಪಿಟೀಲಿನಂತೆಯೂ ಮಾಡಿಕೊಂಡಿರುವುದು ಅವರ ಬಹುಮುಖ ಪ್ರತಿಭೆಗೆ ಸಾಕ್ಷಿ. ಅಂದ ಹಾಗೆ ಆಯಾ ಹಾಡುಗಳಲ್ಲಿ ಆ ವಾದ್ಯಗಳು ಮುಖ್ಯ ಪಾತ್ರ ವಹಿಸಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ.

ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನರಸಂ ಫಣಿಃ ಎನ್ನುವ ಮಾತೊಂದಿದೆ. ಮಕ್ಕಳು, ಹಾವನ್ನು ಸೇರಿ ಅನೇಕ ಪ್ರಾಣಿಗಳು ಗಾನರಸವನ್ನು ಆಸ್ವಾದಿಸುತ್ತವೆ ಎಂಬುದು.

ದಕ್ಷಿಣ ಭಾರತದಲ್ಲಿ ಮಂಗಳವಾದ್ಯವೆಂದರೆ ನಾದಸ್ವರ. ಕೇರಳ, ತಮಿಳುನಾಡು ಮತ್ತು ಕರ್ನಾಟಕದ ದಕ್ಷಿಣಭಾಗದಲ್ಲಿ ಮಂಗಳಕರವಾದ ಸಮಾರಂಭವೆಂದರೆ ನಾದಸ್ವರ (ನಾಗಸ್ವರ!) ಬಳಸುತ್ತಾರೆ. ಒಬ್ಬ ಪ್ರತಿಭಾನ್ವಿತ ನಾದಸ್ವರ ವಾದಕ ಶೇಕ್‌ ಚಿನ್ನಮೌಲಾ ಸಾಹೇಬ್. ಆದರೆ ಉತ್ತರ ಕರ್ನಾಟಕದಲ್ಲಿ ಶೆಹನಾಯ್‌ (ಸನಾದಿ) ಮುಖ್ಯಪಾತ್ರ ವಹಿಸುತ್ತದೆ. ವಾರಾಣಸಿಯ ಪಂಡಿತ್‌ ಬಿಸ್ಮಿಲ್ಲಾಖಾನ್‌ ಭಾರತದ ಅತ್ಯಂತ ಜನಪ್ರಿಯ ಶೆಹನಾಯ್‌ ವಾದಕ.

ಅವರನ್ನು ಕರೆಸುವ ಸಾಹಸ ನಡೆದಿದ್ದು ಈ ಸನಾದಿ ಅಪ್ಪಣ್ಣ ಕಾದಂಬರಿಯನ್ನು ಚಿತ್ರ ಮಾಡಬೇಕೆಂದುಕೊಂಡಾಗ. ಅಬ್ಬಾ… ಕಣ್ಣು ತೇವ ಮಾಡಿಕೊಂಡೇ ಅವರ ಶೆಹನಾಯ್‌ ಆಲಿಸಿದೆ. ಅವರಿಂದಲೇ ಬಹಳ ಚೆನ್ನಾಗಿ ಶೆಹನಾಯ್‌ ನುಡಿಸುವ ನಟನೆ ಮಾಡಿದ್ದೀರಿ ಎಂದು ಹೊಗಳಿಸಿಕೊಂಡ ಅಣ್ಣಾವ್ರು ಕಂಗಳಲ್ಲಿ ನೀರು ತರಿಸುತ್ತಾರೆ. ಅದು ಅವರ ವಾದ್ಯದಿಂದ ಹೊರಹೊಮ್ಮಿದ ಸಂಗೀತವಾಗಿರಬಹುದು, ಅಥವಾ ಅವರ ಅದ್ಭುತ ನಟನೆ ಆಗಿರಬಹುದು(ವಿಶೇಷವಾಗಿ ವಿಧುರನಾದ ನಂತರ ಮಗನಿಗಾಗಿ, ನಂತರ ಮೊಮ್ಮಗನಿಗಾಗಿ ಪರಿತಪಿಸುವ ನಟನೆಯಲ್ಲಿ).

sanadi appanna

ಜಿ.ಕೆ. ವೆಂಕಟೇಶ್‌ ಸಂಗೀತದಲ್ಲಿ ಅನೇಕ ಅವಿಸ್ಮರಣೀಯ ಗೀತೆಗಳೂ ಈ ಚಿತ್ರದಲ್ಲಿವೆ.

ಜಯಪ್ರದ ನರ್ತಕಿಯಾಗಿ (ಕರೆದರೂ ಕೇಳದೇ… ಜಾನಕಿಯಮ್ಮ ಮತ್ತು ಉಡುಪಿ ಜಯರಾಮ್) ನಂತರ ಅಪ್ಪಣ್ಣನ ಪ್ರೇಮಿಯಾಗಿ‌ (ರಾಗ ಅನುರಾಗ ಶುಭಯೋಗ – ಜಾನಕಿಯಮ್ಮ ಮತ್ತು ರಾಜ್‌ಕುಮಾರ್)‌, ವಿರಹ ವೇದನೆಯಲ್ಲಿ ಅಪ್ಪಣ್ಣ ಹಾಡುವಾಗ(ನಿನಗಾಗಿ ಓಡೋಡಿ ಬಂದೆ ನಾನು… ಅಣ್ಣಾವ್ರು) ಆಕಸ್ಮಿಕದಲ್ಲಿ ಹೋಗಿದ್ದ ಕಾಲುಗಳನ್ನು ಮರಳಿ ಪಡೆಯುವಾಗ… ನಂತರ ಅಪ್ಪಣ್ಣನ ಪತ್ನಿಯಾಗಿ ಅವನ ಅವಮಾನವನ್ನು ಸಹಿಸಲಾರದೇ ಅವನಿಂದ ಮಗನನ್ನು ಶೆಹನಾಯ್‌ ಓದಿಸದೇ ದೊಡ್ಡ ಶಿಕ್ಷಣ ಕೊಡಿಸುವೆನೆಂದು ಮಾತು ಪಡೆದು, ಹೆರಿಗೆಯಲ್ಲಿ ಅಸು ನೀಗಿ… ಚೆನ್ನಾಗಿ ನಟಿಸಿದ್ದಾರೆ. ಬಲು ಸುಂದರವಾಗಿಯೂ ಕಾಣುತ್ತಾರೆ.

ಪತ್ನಿ ಸತ್ತ ಮೇಲೆ ಮಗುವನ್ನು ಆಡಿಸುತ್ತಾ ನಾನೇ ತಾಯಿ ನಾನೇ ತಂದೆ ಎಂದು ಪಿಬಿಎಸ್‌ ಧ್ವನಿಯಲ್ಲಿ ಹಾಡುತ್ತಾರೆ. ಮಗುವಿಗೆ ಎರಡು ವರ್ಷಗಳಾಗಿದ್ದಾಗ ಆ ಮಗುವಿನ ಪಾತ್ರ ಮಾಡಿರುವುದು ಯಾರೂಂತೀರಿ? ನಮ್ಮ ಪವರ್‌ ಸ್ಟಾರ್‌ ಮಾಸ್ಟರ್‌ ಲೋಹಿತ್! (ಆಗ)

ತೂಗುದೀಪ ಶ್ರೀನಿವಾಸ್‌, ಶಾಂತಮ್ಮ, ಪಾಪಮ್ಮ, ಸಂಪತ್‌, ಬಾಲಕೃಷ್ಣ, ಎಂ ಎನ್‌ ಲಕ್ಷ್ಮೀದೇವಿ, ಹೊನ್ನವಳ್ಳಿ ಕೃಷ್ಣ ನನಗೆ ಗುರುತು ಸಿಕ್ಕ ಮುಖಗಳು.

ಅಪ್ಪಣ್ಣನ ಮಗ ಹನುಮಂತು ಆಗಿ (ನಂತರ ಎಚ್‌. ರಾವ್)‌ ಅಶೋಕ್‌ ಅಪ್ಪನನ್ನು ಎದುರಿಸುವ, ಬೈಯ್ಯುವ ಪಾತ್ರ. ಭಾಗ್ಯವಂತರು ನೆನಪಾಯಿತು. ಅದರಲ್ಲಿ ಆತನ ಪತ್ನಿಯಾಗಿದ್ದ ಸುಮ ಇದರಲ್ಲೂ ಆತನ ಪತ್ನಿ. ಆದರೆ ಇಲ್ಲಿ ಅಶೋಕ್‌ಗಿಂತ ಹೆಚ್ಚಿನ ಮನುಷ್ಯತ್ವ ಉಳ್ಳವಳು. ಇದರಲ್ಲಿ ಮೊಮ್ಮಗನಾಗಿ ನಟಿಸಿದ ಬೇಬಿ ಮಾಧವಿ ರಾಜ್ಯ ಪ್ರಶಸ್ತಿ ವಿಜೇತೆ(ಅಂತೆ). ಬಲು ಮುದ್ದಾಗಿ ಮಾತಾಡಿ ʼತಾತ ಪೀಪಿʼ ಎಂದೇ ತಾತನನ್ನು (ವಯಸ್ಸಾದ ಅಣ್ಣಾವ್ರು) ಆಟವಾಡಿಸುತ್ತದೆ.

ಮಗುವಿನ ಪ್ರಾಣ ಉಳಿಸಲು ಅಣ್ಣಾವ್ರು ತಮ್ಮ ಅಂತಿಮ ಶೆಹನಾಯ್‌ ವಾದನ ಮಾಡುತ್ತಾರೆ ಎಂಬಲ್ಲಿಗೆ ಕಥೆ ಮುಗಿಯುತ್ತದೆ.

ಇದರಲ್ಲಿನ ಎರಡು ವಿಷಯಗಳು ಬಹಳವೇ ಕಾಡುತ್ತವೆ.

ಸಂಗೀತ ಅರಿಯದವರಿಗೂ ಬಿಸ್ಮಿಲ್ಲಾಖಾನರ ಶೆಹನಾಯ್‌ ಧ್ವನಿ ಮೋಡಿ ಮಾಡುತ್ತದೆ. ನನಗೆ ರಾಗಗಳ ಬಗ್ಗೆ ತಿಳಿಯದು. ಆದರೆ ಇಡೀ ಸಿನಿಮಾದಲ್ಲಿ ಅಲ್ಲಲ್ಲಿ ಅವರು ನುಡಿಸಿರುವ ಶೆಹನಾಯ್‌ ವಾದನ ಮನವನ್ನು ಕಲಕುತ್ತದೆ.

ಇನ್ನು ಈ ಚಿತ್ರದ ಕೇಂದ್ರಬಿಂದು, ಶೀರ್ಷಿಕೆ ಪಾತ್ರಧಾರಿ ಡಾ.ರಾಜ್‌ಕುಮಾರ್‌ ಬಗ್ಗೆ ಹೇಳಲು ನಾನು ಎಷ್ಟರವನು? ಆದರೆ ಅಬ್ಬಾ… ಕೆಲವೆಡೆ ತನಗೆ ಪ್ರವೇಶವಿಲ್ಲ ಎನ್ನುವಾಗಿನ ಸಂಕೋಚ, ಬಸಂತಿಯನ್ನು (ಜಯಪ್ರದ) ಪ್ರೇಮಿಸುವಾಗಿನ ಉತ್ಕಟತೆ, ಅವಳು ಕಾಣದಾದಾಗ ವಿರಹವೇದನೆ, ಅವಳು ಸತ್ತಾಗ ಸಾಯಲು ಪ್ರಯತ್ನಿಸುವುದು, ಮಗುವನ್ನು ಬೆಳೆಸಲು ಸತತ ಪ್ರಯತ್ನ, ಮಗನನ್ನು ಓದಿಸಲು ಅವನಿಗೆ ಫೀಜು ಕಳಿಸಲು ಅನಾರೋಗ್ಯದಲ್ಲಿ ನುಡಿಸುವುದು, ಮಗ ತನ್ನನ್ನು ತಂದೆ ಎಂದೆನ್ನದೇ ತಮ್ಮ ಊರಿನವನು ಎಂದಾಗ ಒಳಗೇ ನಲುಗುವುದು, ತನ್ನ ಸೊಸೆಯ ಬಳಿ ತನ್ನ ಮಗ ತನ್ನನ್ನು ಕೆಲಸದಾಳು ಎಂದು ಪರಿಚಯಿಸಿದಾಗ ಆಘಾತವನ್ನು ನುಂಗಿಕೊಳ್ಳುವುದು, ಅಲ್ಲಿಂದ ಹೊರಟುಹೋಗಬೇಕೆಂದುಕೊಂಡಾಗ ಮೊಮ್ಮಗ ಕಾಲಿಗೆ ತೊಡರಿಕೊಂಡಾಗ ಮಾನಸಿಕ ತುಮುಲ, ಇನ್ನು ಸಹಿಸದಾದಾಗ ಹೆಂಡತಿಯ ಸಮಾಧಿಯ ಬಳಿ ಹೋಗಿ ಪ್ರಾಣ ಬಿಡಲು ಸಿದ್ಧತೆ, ಮೊಮ್ಮಗುವನ್ನು ಕಾಪಾಡಲು ಶೆಹನಾಯ್‌ ನುಡಿಸಿ ತನ್ನ ಪ್ರಾಣಜ್ಯೋತಿಯನ್ನೇ ಧಾರೆಯೆರೆಯುವುದು…

ಯಾಕೋ ಮನಸ್ಸು ಕಲಕಿದಂತಾಗಿಬಿಟ್ಟಿದೆ. ಬೇಗನೆ ಯಾವುದಾದರೂ ಕಾಮಿಡಿ ಸಿನಿಮಾ ನೋಡಿಬಿಡಬೇಕು…

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply