ಸಾಹಿತಿಗಳು ಕಂಡಂತೆ ರಾಜಣ್ಣ

ರಾಜ್ಕುಮಾರ್

ರಾಜಕುಮಾರ್ ಅವರ ಬಗ್ಗೆ ಎಷ್ಟು ಹೇಳಿದರೂ… ಎಷ್ಟು ಬರೆದರೂ ಅದೊಂದು ಖಾಲಿಯಾಗದ ಅಕ್ಷಯ ಪಾತ್ರೆ. ಅ.ನ.ಕೃ, ತ.ರಾ.ಸು, ಟಿ.ಕೆ. ರಾಮರಾವ್, ಭಾರತಿಸುತ ಮುಂತಾದ ಮೇರು ಸಾಹಿತಿಗಳ ಕಾದಂಬರಿ ಆಧಾರಿತ ಚಿತ್ರಗಳಿಗೆ ನಾಯಕನಾಗಿ ಸಾಹಿತ್ಯ ಮತ್ತು ಸಿನಿಮಾಗಳ ನಡುವಿನ ಸದೃಢ ಸೇತುವೆಯಾದವರು ರಾಜಕುಮಾರ್. ಅವರು ತಮ್ಮ ಕೃತಿಗಳ ಚಿತ್ರಗಳಲ್ಲಿ ಅಭಿನಯಿಸುವುದೇ ಆ ಕೃತಿಯ ಭಾಗ್ಯ ಎಂದಂದಿನ ಸಾಹಿತಿಗಳು ಅಂದುಕೊಂಡಿದ್ದರೂ ಅತಿಶಯೋಕ್ತಿಯಲ್ಲ. ಕೇವಲ ಅಂದಿನ ಲೇಖಕರಿಗೆ ಮಾತ್ರವಲ್ಲ; ಈ ತಲೆಮಾರಿನ ಲೇಖಕರಿಗೂ ಕೂಡ ಅಣ್ಣಾವ್ರು ಅಚ್ಚುಮೆಚ್ಚು ಎಂಬುದಕ್ಕೆ ಉದಾಹರಣೆಗಳು ಸಾಕಷ್ಟಿವೆ. ಚಾಮರಾಜನಗರದ ದೇಸಿ ಭಾಷೆಯ ಸೊಗಡಿನಲ್ಲಿ ಲೇಖಕ ಪ್ರಕಾಶರಾಜ್ ಮೇಹು ಅವರು ಬರೆದ “ತಿಮ್ಮಜ್ಜಿಯ ಮ್ಯಾಗ್ಲುಂಡಿ” ಕಾದಂಬರಿಯಲ್ಲಿ ರಾಜಕುಮಾರ್ ಅವರ ಕುರಿತಾದ ಒಂದು ಪ್ರಸಂಗದ ಉಲ್ಲೇಖ ಸ್ವಾರಸ್ಯವಾಗಿದೆ : “ಇಲ್ಲಕಾ ತಮ್ಮಯೈ – ಸಿಂಗನಲ್ಲೂರ್ನ್ ಪುಟ್ಸಾಮ್’ಗ ಸರ್ಯಾಗ್ ವಟ್ಗೆ ಇರ್ನಿಲ್ಲ. ಊರೂರ್ನ ಮ್ಯಾಲೋಗಿ ನಾಟ್ಕ ಮಾಡ್ಕಂಡು ಜೀವ್ನ ಮಾಡ್ತಿದ್ದ, ತಿಳ್ಕ. ನಾವೊಂದ್ಸಲ ಮಾಂಬಳ್ಳಿಗೋಗಿದ್ದಾಗ ಅಲ್ಲಿಗೈ ಇವ್ರ್ ನಾಟ್ಕುದ್ ಕಂಪ್ನಿ ಬಂದಿತ್ತು. ಕರ್ಗಾಗೋಡ್ರು, ಪೋತಣ್ಣವ್ರು ನನ್ ಅಲ್ಲಿಗ್ ಕರ್ಕಂಡೋಗಿ ಪುಟ್ಸಾಮಿ ಗೌಡುನ್ಗ ನನ್ ತೋರ್ಸಿ ಇವ್ರು ಮ್ಯಾಗ್ಲುಂಡಿ ದಾಸಗೌಡ್ರು ಅಂತ. ನಮ್ಮವ್ರಿಯೇ ಅಂತ ಯೋಳುದ್ರು. ಪುಟ್ಸಾಮಿಗೌಡ ಕಂಸುನ್ ಯಾಸ್ದಲ್ಲಿದ್ದವ ನಂಗ ಕೈ ಮುಗ್ದ, ನಾನು ನನಗ್ಯಾಕ ಅಳಿ ಕೈಮುಗ್ದರೀ ನಾ ನಿಮ್ಗಿಂತ ಚಿಕ್ಕಂವ, ನೀವು ಕೈಮುಗುದ್ರ ನಂಗ ಸ್ರೇಯಸ್ಸಲ್ಲ ಅಂತ ನಾನು ತಿರ್ಗಿ ಕೈಮುಗ್ದಿ. ಅಸ್ಟೊತ್ಗ ನಾರ್ದುನ್ ಯಾಸ ಆಕ್ಕಂಡು ಆವ್ರ್ ಮಗ್ ಬಂದ. ಯಾನ ಒಳ್ಳಿ ರಾಜ್ ಕಳೈ, ಮ್ವಕ ವಳ್ಳಿ ಸೂರ್ಯೊಂದ್ ಬಾಗ ಚಂದ್ರೊಂದ್ ಬಾಗ ಅನ್ನಾಗ್ ಉರಿತಿರದು. ಕರ್ಗಗೋಡ್ರು ಅವ್ನ್ ಕರ್ದು ಅವುನ್ಗ ನನ್ನೆಸ್ರೇಳಿ, ಪುಟ್ಸಾಮಿಗೌಡ್ರ ಮಗ ಮುತ್ತಪ್ಪ ಅಂತ ಅಂದ್ರು. ಆಗಂದೇಟ್ಗಿಯೇ ಒಳ್ಳಿ ಅಕ್ಕಿ ಮರಿ ಬಾಯ್ಬುಡಲ್ವ ಆಗ್ ಬಾಯ್’ಬುಟ್ ನೆಗಾಡ್ದ. ನಾನು ನೆಗ್ನಾಡ್ದ. ನಂಗ ಅವ್ನ್ ಮ್ವಕ ನೊಡಿ ಮಾತಾಡಕೆ ಬಾಯ್ ಬರ್ನಿಲ್ಲ. ಬರೀ ನೋಡ್ತಲೇ ಇರ್ಬೇಕು ಅನ್ನುಸ್ಬುಡ್ತು. ಅವ್ನೆ ಬಾಯ್ ಬುಟ್ಟು ಅದ್ಯಾರ್ಗ್ಯ ಯೋಳ್ ಕಳ್ಸಿ ಆಲ್ ತರ್ಸ್ ಕೊಟ್ಟ. ಅದ ಕುಡ್ಕಂಡು ಬ್ಯಳ್ಗಾನ ಕೂತ್ಕಂಡು ಕ್ರಿಸ್ಣಲೀಲಾ ನಾಟ್ಕ ನೋಡ್ದಿ. ಪಾರ್ಟು ಅಂದ್ರ್ಯಾನ. ಪೂರ್ತಿ ನಾಟ್ಕ ಕಳ ಕಟ್ಟುದ್ದಿಯೇ ಇವ್ರ್ ಅಪ್ಪ ಮಕ್ಳಿಂದ ಅಂದ್ರ ಕಣಾ, ರಾಜ್ಕುಮಾರುನ್ ತಮ್ಮ ವರ್ದಪ್ಪ ಅಂತ ಮಕ್ರಂದುನ್ ಪಾರ್ಟ್ ಐನಾತ್ಯಾಗ್ ಮಾಡ್ದ, ರಾಜ್ಕುಮಾರ್ನ್ ತಂಗ ವಬ್ಳು ಸ್ಯಾರ್ದಮ್ಮ ಅಂತ, ಕ್ರಿಸ್ಣುನ್ ಪಾರ್ಟ್ ಆಕ್ಕಂಡು ಪದಾಯೋಳ್ತ ಟೇಜುನ್ ಮ್ಯಾಕ್ ಬಂದೇಟ್ಗೆ ಜನಾಯಲ್ಲಾ ಲ್ವಚ್ಗರೀತ ಮ್ಯಾಕ್ಕೆದ್ಬುಡ್ತು ಕಣಾ, ಏನಾ ಒಂದ್ ನಾಕೈದ್ ವರ್ಸ ಇರ್ಬೈದು ಅದೇನ್ ಚಂದಾಗ್ ಮಟ್ಟಾಡ್ತು ಅಂದೈ, ಅಪ್ಪಾ ಮಕ್ಳೆಲ್ಲುರ್ದು ಒಳ್ಳಿ ಕಂಟ. ಅದಾದ್ ಏಡ್ ಮೂರ್ ವರ್ಸುಕಿಯೇ ಇಂವ ಬೇಡ್ರ್ ಕಣ್ಣಪ್ಪ ಅನ್ನ ಸಿನುಮ್’ದಲ್ಲಿ ಪಾರ್ಟ್ ಮಾಡ್ತವ್ನ ಅಂತ ಕರ್ಗಗೌಡ್ರೇಳುದ್ರು. ಅದ್ರಲ್ಲು ಚಂದಾಗೇ ಮಾಡಿದ್ದ. ಆಗ್ ನೋಡುದ್ಕ ಅವ್ನ ತಿರ್ಗ, ಸರ್ಕಾರ ಈ ಯಂಡುದ್ ಬಾಬ್ ನಿಲ್ಲುಸ್ ಬುಡ್ತಾರ ಅಂತ ನಮ್ಮವ್ರೆಲ್ಲ ಸೇರ್ಕಂಡು ಮೈಸೂರ್ಗಿ ಎಂಟತ್ ದಿನ್ಗಂಟ ಮಾತುಕತ ಮಾಡುದ್ರು ನೋಡು. ಅಲ್ಲೀಗು ಒಂದಿನ ರಾಜ್ಕುಮಾರುನ್ ಕರ್ಸಿದ್ರು. ಗಂಡ, ಎಡ್ತಿ, ತಮ್ಮ ಯಲ್ಲ ಒಟ್ಗೆ ಬಂದಿದ್ರು. ಆಗೊಂದ್ಸಲ ಅವ್ನ ದಂಡಲ್ ನಿಂತ್ಗಂಡ್ ನೋಡ್ದಿ. ಆಗುವೀ ಅವ್ನ ಮಾತಾಡ್ಸಿ ಮಾಂಬಳ್ಳಿ ದಂಡ ಊರ್ಲಿ ಅವ್ನ್ ಜ್ವತಲ್ ಮಾತಾಡ್ಕಂಡು, ಆಲ್ಕುಡುದ್ದ ಯೋಳ್ಬೇಕು ಅಂತ ಅನ್ನುಸ್ತು. ಆಜನ ಮಾತಾಡಾಕ್ ಬುಟ್ರ? ಬುಡ್ನಿಲ್ಲ. ಅವ್ನುವೀ ನನ್ನ ನೋಡಿ ನೆಗ್ನಾಡ್ದ. ನಮ್ ಪುಟ್ರಾಜ ಆಗ ಇನ್ನೂ ಮೊಗ. ಅವ್ನ್ ಎತ್ಗಂಡ್ ನಿಂತಿದ್ದಿ. ಅವ್ನ ಕರ್ಕಂಡು ಮುತ್ತಿಕ್ಕಂಡು ಅವ್ನ್ ಕೈಗ ಅತ್’ರೂಪಾಯ್ ಕೊಟ್ಟ. ಅದೇನ್ಯಾರ ಆಗ್ಲಿ ಅಂವ ನಮ್ ಜಾತೀಲ್ಲುಟ್ಟದ್ದೇ ನಮ್ ಜಾತಿಯವ್ರ್’ಗ ಒಂದ್ ಗೌರವ. ಪುಣ್ಯಾತ್ಮನ್ ಯೋಗ ಚಂದಗದೆ” ಅಂದ. ಪುಟ್ರಾಜುನ್ಗ ಪಿಚ್ಚೇರ್ ಅಂದ್ರ ಗ್ವಂಬ್ಗಳು ಅನ್ನ ಅನುಮಾನ ಪೂರ್ತಿ ವಂಟೋಯ್ತು. ನಾನು ನಮ್ ತಾತುನ್ ಕರ್ಕಡೋಗಿ ಒಂದ್ಸಲ ರಾಜ್’ಕುಮಾರುನ್ ನೋಡ್ಕಂಬರ್ಬೇಕು ಅನ್ನುಸ್ತು…”….ಹೀಗೆ ವಾಸ್ತವವನ್ನು ಸೃಜನಶೀಲವಾಗಿ ಪ್ರಕಾಶ್ ರಾಜ್ ಮೇಹು ಅವರು ತಮ್ಮ ಕಾದಂಬರಿಯಲ್ಲಿ ಅಳವಡಿಸಿದ್ದಾರೆ.

ವಸುಧೇಂದ್ರ ಅವರ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಪುಸ್ತಕದಲ್ಲಿ … ಸುಮಾರು ೩೫-೪೦ ವರ್ಷಗಳ ಹಿಂದೆ ಹೊಸಪೇಟೆ ರಸಮಂಜರಿ ಕಾರ್ಯಕ್ರಮಕ್ಕೆ ಅಣ್ಣಾವ್ರು ಬಂದಾಗ ಸಂಡೂರಿನ ರಾಜಕೀಯ ಧುರೀಣರ ಅರಮನೆಯಲ್ಲಿ ಉಳಿದುಕೊಂಡಿದ್ದರು. ಅಣ್ಣಾವ್ರು ತಮ್ಮೂರಿಗೆ ಬಂದ ಸುದ್ದಿ ತಿಳಿದು ಹಳ್ಳಿಯವರೆಲ್ಲಾ ಅವರನ್ನು ನೋಡಲು ಅರಮನೆಯ ಗೇಟ್ ಬಳಿ ಜಮಾಯಿಸಿದ್ದರು. ಬಂದ ಜನರೆಡೆಗೆ ಅರಮನೆಯ ಮೇಲಿಂದ ಕೈ ಮಾಡುತ್ತಿದ್ದ ಅಣ್ಣಾವ್ರನ್ನ ಕಾಣಲು ಸಾಧ್ಯವಾಗದೆ ಕೊನೆಗೆ ಬಾಲಕ ವಸುಧೇಂದ್ರನನ್ನು ಅವರ ತಾಯಿ ಹೆಗಲ ಮೇಲೆತ್ತಿ ಕೂರಿಸಿಕೊಂಡು ತೋರುತ್ತಾರೆ. ಆದರೆ ಅವರ ತಾಯಿಗೆ ಮಾತ್ರ ಜನಜಂಗುಳಿಯಲ್ಲಿ ಅಣ್ಣಾವ್ರು ಕಾಣುವುದೆ ಇಲ್ಲ. ಅಣ್ಣಾವ್ರು ಒಳಹೋದ ನಂತರ ಜನ ಕರಗಿ ಇವರೂ ಮನೆಯತ್ತ ಹೊರಟು ದಾರಿಯಲ್ಲಿದ್ದ ದೇವಸ್ಥಾನಕ್ಕೆ ಹೋಗುತ್ತಾರೆ. ಆಗ ಹೊಸಪೇಟೆ ಕಾರ್ಯಕ್ರಮಕ್ಕೆ ಹೊರಟಿದ್ದ ಅಣ್ಣಾವ್ರು ದೇವರಿಗೆ ಕೈ ಮುಗಿಯಲು ಇವರಿದ್ದ ದೇವಸ್ಥಾನಕ್ಕೆ ಬರುತ್ತಾರೆ. ಸಾಕ್ಷಾತ್ ದೇವರೇ ಎದುರು ಬಂದಂತೆ ಅಣ್ಣಾವ್ರನ್ನು ಅಷ್ಟು ಹತ್ತಿರದಿಂದ ನೋಡಿ ಇಬ್ಬರೂ ಸಂತೋಷ ಪಡುತ್ತಾರೆ. ಬಾಲಕ ವಸುಧೇಂದ್ರ ಅವರಿಗೆ ಅಣ್ಣಾವ್ರು ‘ಎಷ್ಟನೇ ಕ್ಲಾಸು? ಎಂದು ಕೇಳಿ ‘ಚೆನ್ನಾಗಿ ಓದಬೇಕು’ ಎಂದು ಹೇಳಿ ತಲೆಸವರಿ ಹೊರಡುತ್ತಾರೆ. ಪ್ರತಿರಾತ್ರಿಯಂತೆ ಆ ರಾತ್ರಿಯೂ ‘ದೃಷ್ಟಿ ತೆಗಿತೀಯೆನಮ್ಮಾ?’ ಎಂದು ಅಮ್ಮನಿಗೆ ಕೇಳಿದಾಗ, “ಆತ ದೇವರಂಥಾ ಮನುಷ್ಯ. ಆತನ ಕಣ್ಣು ನಿನ್ನ ಮೇಲೆ ಬಿದ್ದರೆ ನಿಂಗೆ ಒಳ್ಳೇದೇ ಆಗ್ತದೆ. ದೃಷ್ಟಿ ಆಗಂಗಿಲ್ಲ” ಎಂಬ ಅಮ್ಮನ ಮಾತಿನೊಂದಿಗೆ ಬರಹ ಮುಗಿಯುತ್ತದೆ. ಈ ಪ್ರಸಂಗವನ್ನು ಓದುಗರ ಹೃದಯಂಗಮವಾಗುವಂತೆ ವಸುಧೇಂದ್ರ ಅವರು ‘ನಮ್ಮೂರಿಗೂ ಅಣ್ಣಾವ್ರು ಬಂದಿದ್ರು’ ಲೇಖನದಲ್ಲಿ ಬರೆದಿದ್ದಾರೆ.

‘ಕಾಯ್ಕಿಣಿ ಜಗತ್ತು’ ಸಮಾರಂಭದಲ್ಲಿ ಜಯಂತ ಕಾಯ್ಕಿಣಿಯವರು ಹೇಳಿದ ಇನ್ನೊಂದು ಸ್ವಾರಸ್ಯಕರ ಪ್ರಸಂಗ ಇಂತಿದೆ.. ಶಿವರಾಮ ಕಾರಂತರ ‘ಚಿಗುರಿದ ಕನಸು’ ಕಾದಂಬರಿಯನ್ನು ನಿರ್ದೇಶಕ ನಾಗಾಭರಣರು ಚಲನಚಿತ್ರ ಮಾಡುವಾಗ ಜಯಂತ ಕಾಯ್ಕಿಣಿಯವರನ್ನು ತಮ್ಮೊಂದಿಗೆ ಕರೆಯುತ್ತಾರೆ. ಆ ಚಿತ್ರಕ್ಕೆ ಕಾಯ್ಕಿಣಿಯವರದೇ ಚಿತ್ರಕತೆ, ಸಂಭಾಷಣೆ, ಹಾಡುಗಳ ಸಾಹಿತ್ಯ. ಚಿತ್ರೀಕರಣ ಪೂರ್ವ ಚಿತ್ರಕತೆ ಸಿದ್ಧತೆ, ಚರ್ಚೆಯಲ್ಲಿ ತೊಡಗಿದ್ದಾಗ, ಕಾದಂಬರಿಯಲ್ಲಿ ಕಥಾನಾಯಕನ ಅಜ್ಜ ಕುರುಡು ಹುಡುಗಿಯನ್ನು ಮದುವೆಯಾಗಲು ನಿರಾಕರಿಸಿ ಬಂಗಾಡಿ ಬಿಟ್ಟು ದೆಹಲಿ ಹೋಗಿ ಸೇರಿಕೊಳ್ಳುತ್ತಾನೆ. ನಾಯಕ ಅಜ್ಜನ ಪೂರ್ವಪರದ ಜಾಡು ಹಿಡಿದು ಮತ್ತೆ ದೆಹಲಿಯಿಂದ ಬಂಗಾಡಿಗೆ ಬಂದು ನೆಲೆಸುತ್ತಾನೆ. ಸಿನಿಮಾದಲ್ಲಿ ಅಜ್ಜ-ಮೊಮ್ಮಗ ಎರಡೂ ಪಾತ್ರಗಳನ್ನು ಶಿವರಾಜಕುಮಾರ್ ಅವರೇ ಮಾಡುವುದರಿಂದ “ಕುರುಡು ಹುಡುಗಿಯನ್ನು ಮದುವೆಯಾಗಲು ನಿರಾಕರಿಸಿ ಹಳ್ಳಿ ಬಿಟ್ಟು ಹೋಗುವವನು ನಾಯಕ ಹೇಗಾಗುತ್ತಾನೆ?” ಎಂದು ಕಾಯ್ಕಿಣಿಯವರು ಹೇಳಿದಾಗ ನಾಗಾಭರಣ, ರಾಜಕುಮಾರ್, ವರದಪ್ಪ ಎಲ್ಲರಿಗೂ ಕಾಯ್ಕಿಣಿಯವರು ಹೇಳಿದ್ದು ಸರಿ ಎನಿಸಿ ಇದರ ಬದಲು ಬೇರೇನಾದರೂ ಯೋಚನೆ ಮಾಡೋಣವೆಂದು ತೀರ್ಮಾನಿಸುತ್ತಾರೆ. ಮರುದಿನ ಬೆಳಿಗ್ಗೆ ರಾಜಕುಮಾರ್ ಅವರ ಮನೆಗೆ ಕಾಯ್ಕಿಣಿಯವರು ಹೋದಾಗ ಅಣ್ಣಾವ್ರು ಮನೆ ಹೊರಗೆ ನಡೆದಾಡುತ್ತಿದ್ದರಂತೆ. ಇವರನ್ನು ಕಂಡು ಆ ಪಾತ್ರದ ಬಗ್ಗೆ ಏನು ಯೋಚನೆ ಮಾಡಿದಿರಿ ಎಂದು ಕೇಳುತ್ತಾರೆ. ಕಾಯ್ಕಿಣಿಯವರು, “ಕುರುಡು ಹುಡುಗಿಯ ಬದಲು ಅವಳನ್ನು ಚಿಕ್ಕ ಹುಡುಗಿಯಾಗಿಸೋಣ. ಹಿರಿಯರು ಅವಳನ್ನು ಮದುವೆಯಾಗಲು ಹೇಳಿದಾಗ ನಾಯಕನಿಗೆ ಹುಡುಗಿಯನ್ನು ಬಾಲ್ಯದಿಂದ ಎತ್ತಿ ಆಡಿಸಿ ಅವಳ ಮೇಲೆ ತಂಗಿ ಎಂಬ ಭಾವನೆ ಬೆಳೆದಿರುತ್ತದೆ. ಹಾಗಾಗಿ ಮದುವೆಯಾಗಲು ನಿರಾಕರಿಸುತ್ತಾನೆ. ಬಲವಂತ ಮಾಡಿದಾಗ ಹಳ್ಳಿ ಬಿಟ್ಟು ಹೋಗುತ್ತಾನೆ.” ಎನ್ನುತ್ತಾರೆ. ತಕ್ಷಣ ಅಣ್ಣಾವ್ರು ನಡೆಯುವುದನ್ನು ನಿಲ್ಲಿಸಿ ಕಾಯ್ಕಿಣಿಯವರ ಕೈ ಹಿಡಿದುಕೊಂಡು, “ತುಂಬಾ ಒಳ್ಳೆ ಕೆಲಸ ಮಾಡಿದ್ರಿ. ಇಲ್ಲಾಂದಿದ್ರೆ ಆ ಹುಡುಗಿ ಕುರುಡಿಯಾಗಿ ಎಷ್ಟು ಕಷ್ಟಪಡುತ್ತಿದ್ದಳೋ ಏನೋ” ಎಂದು ಭಾವುಕರಾದರಂತೆ.! ರಾಜಕುಮಾರ್ ಅವರು ಚಿತ್ರದಲ್ಲಿನ ಪಾತ್ರಗಳಲ್ಲಿ ಎಷ್ಟು ತಲ್ಲೀನರಾಗಿರುತ್ತಿದ್ದರು ಎಂಬುದಕ್ಕೆ ಈ ಪ್ರಸಂಗ ಒಳ್ಳೆಯ ನಿದರ್ಶನ.

ಲೇಖಕರು:
ಪ್ರಶಾಂತ ಸಾಗರ
admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply