ಸಿನೆಮಾ ವಿಮರ್ಶೆ : “ಧೂಮ್ 2004” (ಹಿಂದಿ)

ಈಗಾಗಲೇ ಜನರು ಮೆಚ್ಚಿಕೊಂಡು ಭರ್ಜರಿಯಾಗಿ ಓಡಿರುವ ಚಿತ್ರದ ಬಗ್ಗೆ ಹೇಳುತ್ತಿದ್ದೇನೆ ಎಂದುಕೊಳ್ಳಬೇಡಿ. ಈ ಚಿತ್ರವನ್ನು ಜನ ಯಾಕೆ ಮೆಚ್ಚಿಕೊಂಡರು ಅಥವಾ ಈ ಚಿತ್ರ ಜನರ ಮನಸ್ಸನ್ನು ಯಾಕೆ ಗೆದ್ದಿತು ಅಂತ ಹೇಳುತ್ತಿದ್ದೇನೆ.

ಸಿನೆಮಾ ಸಂಬಂಧಿತ ಸಂದರ್ಶನಗಳನ್ನು ಓದುವಾಗ ನೀವು ಒಂದು ವಿಷಯ ಗಮನಿಸಿರಬಹುದು. “ಈ ಸಿನೆಮಾ ಸಿದ್ಧ ಸೂತ್ರಗಳನ್ನು ಮೀರಿದೆ” ಎನ್ನುವ ಮಾತು. ಇದರರ್ಥ ಸಿನೆಮಾ ಮಾಡಲು ಕೆಲವು ಸೂತ್ರಗಳಿದ್ದು, ಕೆಲವು ಸಿನೆಮಾಗಳು ಅದನ್ನು ಪಾಲಿಸುತ್ತವೆ, ಕೆಲವು ಪಾಲಿಸುವುದಿಲ್ಲ. .

ಆ ಸೂತ್ರಗಳು ಯಾವುವು ಅಂತ ನಮ್ಮೆಲ್ಲರಿಗೂ ಗೊತ್ತಿದೆ. ಒಬ್ಬ ಹೀರೋ, ಅವನಿಗೊಬ್ಬ ಹೀರೋಯಿನ್, ಒಬ್ಬ ವಿಲನ್, ಒಂದು ಫೈಟಿಂಗ್, ಐದು ಹಾಡುಗಳು…. ಇನ್ನಷ್ಟು ಮತ್ತಷ್ಟು ಹೀಗೆ.

ಆದರೆ ಅದೆಂಥಾ ಸಿನೆಮಾ ಆಗಲಿ…. ಎಷ್ಟೇ ಬಿಗ್ ಬಜೆಟ್ ಇರಲಿ, ಜನಪ್ರಿಯ ನಾಯಕನೇ ಇರಲಿ… ಸಿನೆಮಾದ ಮೊದಲ ಅರ್ಧಗಂಟೆಯೇ ಸಿನೆಮಾದ ನಿರ್ಣಾಯಕ. ಒಂದು “ಸಿನೆಮಾ” ಶುರು ಆಗುತ್ತಿದ್ದಂತೆಯೇ ಎಂತಹಾ ಕುತೂಹಲ ಮೂಡಿಸಬೇಕೆಂದರೆ ಅದಕ್ಕಾಗಿ ಪ್ರೇಕ್ಷಕ ಪೂರ್ತಿ ಸಿನೆಮಾ ನೋಡಬೇಕು.

ಕೆಲವು ಸಿನೆಮಾಗಳು ಬಹಳ ಚಂದ ಇರುತ್ತವೆ. ಆದರೆ ಮೊದಲರ್ಧ ಗಂಟೆಯಲ್ಲಿ ಕುತೂಹಲ ಮೂಡಿಸುವಲ್ಲಿ ವಿಫಲವಾಗುತ್ತವೆ. ನನಗೇ ಎಷ್ಟೋ ಜನ ತಾಳ್ಮೆಯಿಂದ ನೋಡಿದ್ದರೆ ಸಿನೆಮಾ ಅರ್ಥವಾಗುತ್ತದೆ ಎಂದಿದ್ದಾರೆ. ಆದರೆ ನನ್ನ ಪ್ರಕಾರ ಮೊದಲಿಗೇ ಕುತೂಹಲ ಹುಟ್ಟಿಸದ ಸಿನೆಮಾವು ಪ್ರೇಕ್ಷಕರನ್ನು ಸೆಳೆಯುವುದಿಲ್ಲ.

“ಧೂಮ್”- 2004 ರಲ್ಲಿ ಬಂದ ಈ ಸಿನೆಮಾ ಯಶಸ್ಸಿನ ಧೂಳೆಬ್ಬಿಸಿಬಿಟ್ಟಿತು. ಅದಕ್ಕೆ ಕಾರಣವೇ ಸಿನೆಮಾದ ವೇಗದ ನಿರೂಪಣೆ ಮತ್ತು ಸಿನೆಮಾದ ಇಂಟ್ರಡಕ್ಷನ್. ಒಂದು ಸಿನೆಮಾ ಹೇಗಿರಬೇಕು ಅಥವಾ ಹೇಗೆ ತೆಗೆಯಬೇಕು ಅಂತ ಇದರಿಂದ ಕಲಿಯಬಹುದು. ಇದು ಬೈಕಿನಲ್ಲಿ ಬಂದು ಹಣದೋಚುವ ದರೋಡೆಕೋರರ ಕಥೆ ಅಷ್ಟೇ. ಆದರೆ ಅದನ್ನು ತೆರೆಯ ಮೇಲೆ ಹೇಗೆ ತಂದಿದ್ದಾರೆ ನೋಡೋಣ.

ಸಿನೆಮಾದ ಮೊದಲಿಗೇ ಒಂದು ರಾಬರಿ ನಡೆಯುತ್ತದೆ. ನೋಡುನೋಡುತ್ತಿದ್ದಂತೆಯೇ ಹೆಲ್ಮೆಟ್ ಧಾರಿಗಳಾದ ನಾಲ್ವರು ದುಡ್ಡು ಕದ್ದು ಬೈಕಿನಲ್ಲಿ ವೇಗವಾಗಿ ಪರಾರಿಯಾಗುತ್ತಾರೆ. ಇದನ್ನು ನೋಡಿದ ನಮ್ಮ ಮನಸ್ಸು ಆ ದರೋಡೆಕೋರರು ಯಾರಿರಬಹುದು ಅಂತ ತಿಳಿಯಲು ಸಜ್ಜಾಗುತ್ತದೆ.

ನಂತರ ಪೊಲೀಸ್ ಅಧಿಕಾರಿಯಾದ ನಾಯಕನ ಪ್ರವೇಶವಾಗುತ್ತದೆ.

ದರೋಡೆ ಬೈಕ್‌ಧಾರಿಗಳಿಂದ ನಡೆಯಿತು ಎಂದು ತಿಳಿದ ನಾಯಕ ಆ ನಾಲ್ವರಲ್ಲಿ ಒಬ್ಬನನ್ನು ಹಿಡಿದರೂ ಉಳಿದ ಮೂವರು ಸಿಗ್ತಾರೆ ಅಂತಾನೆ. ಆಗ ಆ ನಗರದಲ್ಲಿ ವೇಗವಾಗಿ ಬೈಕ್ ಓಡಿಸುವವರು ಯಾರು ಅಂತ ಪೊಲೀಸರು ಹುಡುಕಲು ಶುರು ಮಾಡ್ತಾರೆ.

ಮುಂದಿನ ದೃಶ್ಯದಲ್ಲಿ ಬೈಕ್ ರೇಸಿನಲ್ಲಿ ಗೆಲ್ಲುವ “ಅಲಿ” ಪಾತ್ರಧಾರಿಯನ್ನು ತೋರಿಸಲಾಗುತ್ತದೆ. ಇವನು ವೇಗವಾಗಿ ಬೈಕ್ ಓಡಿಸುವುದರಿಂದ ಇವನು ಆ ದರೋಡೆಕೋರರಲ್ಲಿ ಒಬ್ಬ ಅಂತ ನಾವು ಅಂದುಕೊಳ್ಳುತ್ತೇವೆ.

ಆದರೆ ನಂತರದ ದೃಶ್ಯಗಳಲ್ಲಿ ಅಲಿಯ ಮುಗ್ಧತೆ ನೋಡುವ ನಾವು ‘ಇವನೇ ಆ ದರೋಡೆಕೋರನಾ, ಅಲ್ವಾ’ ಅಂತ ಕನ್ಫ್ಯೂಸ್ ಆಗುತ್ತೇವೆ. ಹೀಗೆ ಮೊದಲರ್ಧ ಗಂಟೆಯಲ್ಲಿ ಹೇಳಬೇಕಾದ್ದನ್ನು ಅರ್ಧದಷ್ಟು ಹೇಳಿ, ಉಳಿದರ್ಧವನ್ನು ಮುಚ್ಚಿಟ್ಟು ಕುತೂಹಲ ಮೂಡಿಸಿ ನಮ್ಮನ್ನು ಪೂರ್ತಿ ಸಿನೆಮಾಗಾಗಿ ಕಾಯುವಂತೆ ಮಾಡುತ್ತಾರೆ ನಿರ್ದೇಶಕರು.

ಸಿನೆಮಾ ಕಥೆ ಏನು ಅಂತ ನಾನಿಲ್ಲಿ ಹೇಳಬಹುದು.

ಆದರೆ ಅದರಿಂದ ಏನುಪಯೋಗ? ಇಡೀ ಸಿನೆಮಾ ನಿಂತಿರುವುದೇ ತನ್ನ ನಿರೂಪಣೆ, ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಮೇಲೆ ಮತ್ತು ಆಗಾಗ ಸ್ವಲ್ಪಸ್ವಲ್ಪವಾಗಿ ತೆರೆದುಕೊಳ್ಳುವ ರಹಸ್ಯದ ಮೇಲೆ. ನಾನು ಡೋಲು ಬಾರಿಸುತ್ತಾ ಕಥೆ ಹೇಳಲಾಗೋಲ್ಲ ಅಥವಾ ಕಥೆ ಹೇಳುವಾಗ ಅದರ ನಿರೂಪಣೆಯ ರೋಚಕತೆ ಕಥೆ ಕೇಳುವವರಲ್ಲಿ ಹುಟ್ಟಲು ಸಾಧ್ಯವಿಲ್ಲ. ಹಾಗಾಗಿ ಕುತೂಹಲ‌ ಇರುವವರು ಆ ದರೋಡೆಕೋರರು ಯಾರು ಅಂತ ತಿಳಿಯಲು ಸಿನೆಮಾ ನೋಡಲೇಬೇಕು. ಹಾಗೆ ನೋಡಿಸಿಕೊಳ್ಳುವುದು ಸಿನೆಮಾದ ತಾಕತ್ತು‌.

ಕೆಲವೊಮ್ಮೆ ಸಿದ್ಧ ಸೂತ್ರಗಳನ್ನು ಮೀರಬೇಕೆನ್ನುವುದು ನಿಜವಾದರೂ, ಕೆಲವು ಸೂತ್ರಗಳನ್ನು ಅಳವಡಿಸಿಕೊಳ್ಳುವುದು ಸಹ ಒಳ್ಳೆಯದೇ‌. ಈ ಸಿನೆಮಾದ ಹಾಡುಗಳೆಲ್ಲವೂ ಅತ್ಯುತ್ತಮವಾಗಿವೆ. ಹಿನ್ನೆಲೆ ಸಂಗೀತ ಅಂತೂ ಮೈಂಡ್ ಬ್ಲೋಯಿಂಗ್.‌ ಥಿಯೇಟರಿನಲ್ಲಿ ಕುಳಿತ ಪ್ರೇಕ್ಷಕನಿಗೆ ಏನು ಬೇಕು ಅಂತ ಪರ್ಫೆಕ್ಟ್ ಆಗಿ ತಿಳಿದುಕೊಂಡು ಮಾಡಿರುವ ಸಿನೆಮಾ ಇದು. ಅದಕ್ಕೆ ಎಲ್ಲಾ ವರ್ಗದವರಿಗೂ ಅಚ್ಚುಮೆಚ್ಚಾಯಿತು.

ಒಂದು ಸಿನೆಮಾ ಯಶಸ್ವಿಯಾಯಿತು ಎಂದರೆ ಅದರಿಂದ ತಿಳಿದುಕೊಳ್ಳುವ ಅಂಶ ಬಹಳಷ್ಟು ಇರುತ್ತವೆ. ಏಕೆಂದರೆ ಸಿನೆಮಾ ನಿರ್ಮಿಸುವವರು ಕೆಲವೇ ಮಂದಿ, ಆದರೆ ಸಿನೆಮಾ ನೋಡುವವರು ಕೋಟ್ಯಾಂತರ ಜನ. ಜನ ಮೆಚ್ಚಿದ ಸಿನೆಮಾಗಳನ್ನು ಅಧ್ಯಯನ ಮಾಡಿ, ಅದರಂತಹ ಅಂಶಗಳನ್ನು ಅಳವಡಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ.

ಜನತೆಯೇ ಜನಾರ್ಧನ ಅಲ್ಲವೇ??

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply