ಸಿನೆಮಾ ವಿಮರ್ಶೆ : “cook up a storm” (ಚೈನೀಸ್)

ಇದನ್ನು ನಮ್ಮ ಕನ್ನಡದ್ದೇ ಆದ ಒಂದು ಕಥೆ ಎಂದುಕೊಳ್ಳಿ.‌ ಇಬ್ಬರು ನಾಯಕರ ಮಲ್ಟಿ ಸ್ಟಾರೆರ್ ಸಿನೆಮಾ…. ಒಬ್ಬ ಸುದೀಪ್, ಮತ್ತೊಬ್ಬ ದರ್ಶನ್. ಮೊದಲಿಗೆ ಇಬ್ಬರೂ ವಿರೋಧಿಗಳಾಗಿರುತ್ತಾರೆ. ಮಧ್ಯಂತರ ಕಳೆದ ನಂತರ ಆಪ್ತ ಸ್ನೇಹಿತರಾಗ್ತಾರೆ‌.

ಯಾರು ಈ ಸಿನೆಮಾವನ್ನು ಹೇಗೆ ನೋಡಿದರೋ ಗೊತ್ತಿಲ್ಲ. ನಾನಂತೂ ಅದು ಸುದೀಪ್-ದರ್ಶನ್ ಅಂತಲೇ ನೋಡಿದೆ. ಹಾಗಾಗಿ ಅವರಿಬ್ಬರೂ ಜಗಳವಾಡುತ್ತಿದ್ದಾಗ ‘ಬಿಡು, ನಾಳೆ ಒಂದಾಗ್ತಾರೆ’ ಅಂತ ನಿರಾಳವಾಗಿದ್ದೆ. ಅದು ಹಾಗೆಯೇ ಆದಾಗ ಜಗತ್ತಿನ ಸಿನೆಮಾ ಎಲ್ಲವೂ ಒಂದೇ ಆತ್ಮದಿಂದ ನಿರ್ಮಿತವಾದದ್ದು ಅಂತ ಅರಿತುಕೊಂಡೆ.

* ಅಡುಗೆ ಮಾಡುವುದು “ಹೇಗೆ” ಅಂತ ಅಮ್ಮ ಹೇಳಿಕೊಡುತ್ತಾಳೆ.

* ಅಡುಗೆಯನ್ನು “ಯಾರಿಗಾಗಿ” ಮಾಡಬೇಕು ಅಂತ ‘ಉಸ್ತಾದ್ ಹೋಟೆಲ್’ ಸಿನೆಮಾದಲ್ಲಿ ಕಲಿತುಕೊಂಡೆವು.

* ಆದರೆ ಇಲ್ಲಿ ಮಾಡಿದ ಅಡುಗೆಯನ್ನು ಹೇಗೆ “ಸಿಂಗರಿಸಬೇಕು” ಅಂತ ಕಲಿತುಕೊಳ್ಳಬಹುದು.

ಅಡುಗೆ ಎಂದರೆ ಏನೋ ಒಂದು ಮಾಡಿ ಬಡಿಯುವುದಲ್ಲ. ಅಥವಾ ಕೇವಲ ರುಚಿಯಾಗಿ ಮಾಡಿ ಬಡಿಸುವುದೂ ಅಲ್ಲ. ಮಾಡಿದ ಅಡುಗೆಯನ್ನು ತಿನ್ನುವವರ ಬಳಿ ಪ್ರೀತಿಯಿಂದ ಬಡಿಸಬೇಕು. ಆಗ ಮಾಡಿದ ಅಡುಗೆ ಸಾರ್ಥಕ. ಅಡುಗೆ ಚೆನ್ನಾಗಿದೆ ಎಂದರೆ ಅದಕ್ಕೆ ಯಾವುದೇ ಅವಾರ್ಡ್ ಬೇಕಿಲ್ಲ. ಅದನ್ನು ತಿನ್ನುತ್ತಿರುವವರ ಮುಖದಲ್ಲಿನ ಧನ್ಯತಾ ಭಾವವೇ ಬಹು ದೊಡ್ಡ ಬಹುಮಾನ ಆ ಅಡುಗೆ ಮಾಡಿದವರಿಗೆ. ಈ ಮಾತನ್ನು ನೆನಪಿಟ್ಟುಕೊಂಡಿರಿ.

ಈ ಸಿನೆಮಾದಲ್ಲಿ ಇಬ್ಬರು ನಾಯಕರು.

ಒಬ್ಬ ಸಾಧಾರಣ ರೆಸ್ಟೋರೆಂಟ್ ಚೆಫ್ ಸ್ಕೈ, ಮತ್ತೊಬ್ಬ ಸ್ಟಾರ್ ಹೋಟೆಲ್ಲಿನ ಚೆಫ್ ಪೌಲ್. ಇಬ್ಬರ ರೆಸ್ಟೋರೆಂಟುಗಳು ಎದುರಾ-ಬದುರಾ ಇರುವುದರಿಂದ ಗಿರಾಕಿಗಳನ್ನು ಕಳೆದುಕೊಳ್ಳುವ ಭಯದಿಂದ ಪ್ರತಿನಿತ್ಯ ಇಬ್ಬರ ನಡುವೆ ವಾದ-ವಿವಾದ ನಡೆಯುತ್ತಲೇ ಇರುತ್ತದೆ.

ಈ ವಾಗ್ವಾದ ಇಲ್ಲಿಗೇ ಮುಗಿಯುವುದಿಲ್ಲ.

ಇಬ್ಬರ ನಡುವೆ ಯಾರು ಬೆಟರ್ ಅಂತ ದೊಡ್ಡ ಮಟ್ಟದಲ್ಲಿ ಅಡುಗೆ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಆಗ ಪೌಲ್ ಮತ್ತು ಸ್ಕೈ ಇಬ್ಬರೂ ಮಾಡಿರುವ ಅಡುಗೆ ಚೆನ್ನಾಗಿದ್ದರೂ, ಈ ಸ್ಪರ್ಧೆಯಲ್ಲಿ ಪೌಲ್ ಗೆಲ್ಲುತ್ತಾನೆ, ಸ್ಕೈ ಸೋಲುತ್ತಾನೆ. ಅವನು ಸೋಲಬಹುದು ಅಂತ ನಾವು ಅಂದುಕೊಂಡೇ ಇರಲಿಲ್ಲವಾದ್ದರಿಂದ ನಮಗೂ ಸಹ ಆಘಾತವಾಗುತ್ತದೆ.

ಅವನು ಸೋಲುವುದಕ್ಕೆ ಕಾರಣ ಒಂದೇ….

ಸ್ಕೈ ಅಡುಗೆಯನ್ನು ರುಚಿಯಾಗಿ ಮಾಡಬಲ್ಲ. ಆದರೆ ಪೌಲ್ ಕೊಟ್ಟಷ್ಟು ಲಕ್ಷ್ಯ ಆತನಿಗೆ ತಾನು ಮಾಡುತ್ತಿರುವ ಅಡುಗೆಯ ಮೇಲಿರಲಿಲ್ಲ. ಬಹಳ ನಿರ್ಲಕ್ಷ್ಯದಿಂದ ಆತ ಮಾಡಿದ ಅಡುಗೆಯನ್ನು ತೀರ್ಪುಗಾರರು ತಿರಸ್ಕರಿಸಿಬಿಡುತ್ತಾರೆ. ಸೋತದ್ದು ಸ್ಕೈ… ಆದರೆ ಪಾಠ ನಮಗೆ!!!

ಹೌದು. ಬರೀ ಅಡುಗೆ ಮಾಡುವುದಷ್ಟೇ ನಮ್ಮ ಕೆಲಸವಲ್ಲ. ಮಾಡುವ ಕೆಲಸವನ್ನು ಪ್ರೀತಿಯಿಂದ-ಶ್ರದ್ಧೆಯಿಂದ ಮಾಡಬೇಕು. ಇನ್ನೊಬ್ಬರು ತಿನ್ನುವ ವಸ್ತುವನ್ನು ತಯಾರಿಸುವಾಗ ನಿರ್ಲಕ್ಷ್ಯತೆ ಸಲ್ಲದು. ಈ ವಿಷಯಗಳನ್ನು ನಾವೂ ಅರಿತುಕೊಳ್ಳುತ್ತೇವೆ. ಆಗ ನಮಗೆ ಸ್ಕೈ ಸೋತದ್ದು ಬೇಸರ ಎನಿಸುವುದಿಲ್ಲ.

ಈಗ ಪೌಲ್ ಸ್ಪರ್ಧೆ ಗೆದ್ದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಾನೆ. ಅಲ್ಲಿಯೂ ಗೆದ್ದರೆ ಆತ ನೇರವಾಗಿ ‘ಗಾಡ್ ಆಫ್ ಕುಕರಿ‘ ಎನಿಸಿಕೊಂಡಿರುವ ಮೌಂಟೆನ್ ಕೋ ಅನ್ನು ಎದುರಿಸಬೇಕಾಗಿರುತ್ತದೆ. ಅಷ್ಟರಲ್ಲಿ ತಮ್ಮ ಭಿನ್ನಾಭಿಪ್ರಾಯ ಮರೆತು ಒಂದಾಗಿರುವ ನಾಯಕರು ಇಬ್ಬರೂ ಒಟ್ಟಿಗೆ ಈ ಸ್ಪರ್ಧೆಯನ್ನು ಎದುರಿಸಲು ತಯಾರಾಗುತ್ತಾರೆ.

ಇಲ್ಲೊಂದು ಭಾವನಾತ್ಮಕ ಸಂಗತಿ ಇದೆ.

ಅದು ಸಿನೆಮಾದ ಮೊದಲಿನಲ್ಲಿಯೇ ಬರುತ್ತದೆ. ಏನೆಂದರೆ ಈ ‘ಗಾಡ್ ಆಫ್ ಕುಕರಿ’ ಮೌಂಟೇನ್ ಅಸಲಿಗೆ ಸ್ಕೈ ಅಪ್ಪನೇ. ಸ್ಕೈ ಹತ್ತು ವರ್ಷದವನಾಗಿದ್ದಾಗ ಆತ ಅಡುಗೆ ಕಲಿಯುವುದಿಲ್ಲ ಎಂದು ತೀರ್ಮಾನಿಸಿ ಆತನ ತಂದೆ ಆತನನ್ನು ಬಿಟ್ಟು ಹೊರಟು ಹೋಗಿರುತ್ತಾರೆ. ತಂದೆ ಅಡುಗೆಯಲ್ಲಿ ದೇವರು ಎನಿಸಿಕೊಂಡಿದ್ದರೆ, ಸ್ಕೈ ಸಾಧಾರಣ ರೆಸ್ಟೋರೆಂಟಿನಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅವನ ಗುರಿ ಒಂದೇ…. ತಾನು ಮಾಡಿದ ಅಡುಗೆಯನ್ನು ಅಪ್ಪ ಒಪ್ಪಬೇಕು!!

ಹಾಗಾಗಿ ಕೊನೆಯ ಸ್ಪರ್ಧೆ ಅಪ್ಪ-ಮಕ್ಕಳಿಗೇ ಬೀಳುತ್ತದೆ.

ತನಗೆ ರುಚಿಯ ಅರಿವು ಆಗುತ್ತಿಲ್ಲ ಎಂಬ ಕಾರಣ ಕೊಟ್ಟು ಪೌಲ್ ಸ್ಪರ್ಧೆಯಿಂದ ಹಿಂದೆ ಸರಿದು, ಸ್ಕೈಗೆ ಅವಕಾಶ ಮಾಡಿ ಕೊಡುತ್ತಾನೆ. ಇತ್ತ ಅಪ್ಪ ಮೌಂಟೇನ್… ಅತ್ತ ಮಗ ಸ್ಕೈ… ಸ್ಪರ್ಧೆ ಶುರುವಾಗುತ್ತದೆ. ಮೌಂಟೇನ್ ತಾನು ಮಾಡಬೇಕು‌ ಅಂದುಕೊಂಡಿರುವ ಪದಾರ್ಥವನ್ನು ಬೇಗಬೇಗನೇ ತಯಾರಿಸುತ್ತಿದ್ದರೆ, ಇತ್ತ ಸ್ಕೈ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ನಿಂತಿರುತ್ತಾನೆ.

ಸ್ಪರ್ಧೆ ಇನ್ನೇನು ಮುಗಿಯಿತು ಅಂದಾಗ ಸ್ಕೈ ತಾನು ಚಿಕ್ಕವನಿದ್ದಾಗ ತನ್ನಪ್ಪ ತಯಾರಿಸುತ್ತಿದ್ದ ಸಾಧಾರಣ ನೂಡಲ್ಸ್ ತಯಾರಿಸಿ ಎದುರಿಗಿದ್ದ ಅಪ್ಪನಿಗೇ ಕೊಡುತ್ತಾನೆ. ತೀರ್ಪುಗಾರರಿಗೆ ಕೊಡುವ ಬದಲು ಅಪ್ಪನಿಗೆ ಕೊಟ್ಟನಲ್ಲ ಅಂತ ನಮಗೂ ಸ್ವಲ್ಪ ಅಯೋಮಯವಾಗುತ್ತದೆ.

ಆದರೆ ಅಪ್ಪ ಅದನ್ನು ಸ್ವೀಕರಿಸಿ ಒಂದು ಚೂರು ರುಚಿ ನೋಡುತ್ತಾನೆ. ಮ್…. ಅವನಿಗೆ ಅದು ತಿಂದಾಗ ಹಳೆಯ ನೆನಪುಗಳೆಲ್ಲ ಮರುಕಳಿಸುತ್ತವೆ. ತಾನು ‘ಗಾಡ್ ಆಫ್ ಕುಕರಿ’ ಆಗಿದ್ದರೂ ಈ ಸರ್ವೇಸಾಧಾರಣ ನೂಡಲ್ಸ್‌ನಲ್ಲಿ ಆತನಿಗೆ ಅದ್ಬುತ ರುಚಿಯಿರುವಂತೆ ಅನಿಸುತ್ತದೆ. ಅದನ್ನು ತಿನ್ನುತ್ತಿರುವಾಗ ಅತ್ಯಂತ ನೆಮ್ಮದಿ-ಶಾಂತಿ ಅನುಭವಿಸುತ್ತಿರುವ ಹಾಗೆ ಆತನ ಮುಖ ಪ್ರಸನ್ನತೆಯಿಂದ ಕೂಡಿರುತ್ತದೆ. ಯಾರಿಗೂ ಕೊಡದಂತೆ ತಾನೊಬ್ಬನೇ ಅಷ್ಟೂ ತಿಂದು ಮುಗಿಸುತ್ತಾನೆ ಅಪ್ಪ. ಮಗ ಖುಷಿಯಿಂದ ತಲೆತಗ್ಗಿಸಿ ಸ್ಪರ್ಧೆ ಬಿಟ್ಟು ಹೊರನಡೆಯುತ್ತಾನೆ.

ಏಕೆಂದರೆ ಆತನಿ್ಗೆಗೆ ಸ್ಪರ್ಧೆ ಗೆಲ್ಲುವುದಕ್ಕಿಂತಲೂ ತನ್ನಪ್ಪನ ದೃಷ್ಟಿಯಲ್ಲಿ ಗೆಲ್ಲಬೇಕಿತ್ತು. ಹಾಗೆಯೇ ಗೆದ್ದೂ ಬಿಟ್ಟ…!!! ಏಕೆಂದರೆ ಆತ ತಾನೇನು ಮಾಡಿದ್ದನೋ ಅದನ್ನು ಅತ್ಯಂತ ಶ್ರದ್ಧೆ ಮತ್ತು ಪ್ರೀತಿಯಿಂದ ಮಾಡಿರುತ್ತಾನೆ. ಹಾಗಾಗಿ ಅದು ಅಪ್ಪನ ಮನಸ್ಸನ್ನು ಗೆದ್ದಿರುತ್ತದೆ. ಮೊದಲೇ ಹೇಳಿದಂತೆ ಅಡುಗೆ ಚೆನ್ನಾಗಿದ್ದರೆ ಅದಕ್ಕೆ ಯಾವುದೇ ಅವಾರ್ಡ್ ಬೇಕಿಲ್ಲ. ತಿಂದವರ ಮುಖದಲ್ಲಿನ ಸಂತೃಪ್ತಿಯೇ ಬಹು ದೊಡ್ಡ ಅವಾರ್ಡ್!! ಅಲ್ಲವೇ?

ಅಡುಗೆ ಇಷ್ಟಪಡುವವರು ನೋಡಲೇಬೇಕಾದ ಸಿನೆಮಾ ಇದು. ಯೂ ಟ್ಯೂಬಿನಲ್ಲಿದೆ‌. ಭಾಷೆ ಚೈನೀಸ್ ಆಗಿದ್ದರೂ ಇಂಗ್ಲಿಷ್ ಸಬ್ ಟೈಟಲ್ ಇವೆ. ಸತ್ಯವಾಗಿ ಈ ಸಿನೆಮಾ ನೋಡಿದ ನಂತರ ನಾನು ಅಡುಗೆ ತಯಾರಿಸುವಾಗ ಮತ್ತಷ್ಟು ಪ್ರೀತಿ ಮತ್ತು ಶ್ರದ್ಧೆಯಿಂದ ತಯಾರಿಸುತ್ತಿದ್ದೇನೆ. ಈ ಸಿನೆಮಾ ಕಲಿಸಿದ ಪಾಠ ಇದು.

**************
ಕೆ.ಸೌಮ್ಯ
ಮೈಸೂರು

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply