Not a love story ಎನ್ನುವುದು ಇದರ ಟ್ಯಾಗ್ ಲೈನ್. ಆದರೆ ಸಿನೆಮಾ ಶುರುವಾಗುವುದು ಪ್ರೇಮಿಗಳಿಂದಲೇ. ಸಚ್ಚಿದಾನಂದ ಮತ್ತು ವಸುಧಾ ಇವರೇ ಪ್ರೇಮಿಗಳು. ವಯಸ್ಸಿನ ಆಕರ್ಷಣೆಯಂತೆ ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಬಿದ್ದಿರುತ್ತಾರೆ.
ಪ್ರೀತಿಸುವ ಎಲ್ಲರದ್ದೂ ಇದೇ ಕಥೆ ಅಲ್ಲವೇ?
‘ಪ್ರೀತಿಸಲು ಕಾರಣ ಬೇಕಿಲ್ಲ, ಪ್ರೀತಿ ಹೇಗೆ ಹುಟ್ಟುತ್ತದೆಯೋ ಗೊತ್ತಾಗಲ್ಲ’ ಅಂತೆಲ್ಲ ಹೇಳುತ್ತಾ ಪ್ರೇಮಿಗಳು ಪ್ರೀತಿಸುತ್ತಿರುತ್ತಾರೆ. ಆದರೆ ಅವರ ಪ್ರೀತಿಗೆ ಪರೀಕ್ಷೆ ಎದುರಾದಾಗಲೇ ತಾನೇ ಆ ಪ್ರೀತಿಯ ಗುಣಮಟ್ಟ ಗೊತ್ತಾಗುವುದು. ಆಗ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾರೆಯೋ ಅಥವಾ ತಪ್ಪನ್ನು ಮತ್ತೊಬ್ಬರ ಮೇಲೆ ಎತ್ತಿ ಹಾಕಿ ಆ ಪರಿಸ್ಥಿತಿಯಿಂದ ಪಾರಾಗಲು ನೋಡುತ್ತಾರೆಯೋ ಎನ್ನುವುದರ ಮೇಲೆ ಪ್ರೀತಿಯ ಪ್ರಾಮಾಣಿಕತೆ ನಿಂತಿದೆ. ಆದರೆ ಬಹಳಷ್ಟು ಪ್ರೇಮಿಗಳಿಗೆ ಇಂತಹ ಪರೀಕ್ಷೆಯ ಕಾಲ ಎದುರಾಗುವುದೇ ಇಲ್ಲ….
ನಮ್ಮ ಪ್ರೇಮಿಗಳ ವಿಷಯಕ್ಕೆ ಬಂದರೆ, ಸಚ್ಚಿ ಮತ್ತು ವಸುಧಾರಿಗೆ ಏಕಾಂತವಾಗಿ ಕಾಲ ಕಳೆಯಬೇಕಿದೆ. ಸಚ್ಚಿ ಕಾರು ತಂದು ಕರೆದಾಗ ಅವನು ಯಾವುದಕ್ಕೆ ಕರೆಯುತ್ತಿದ್ದಾನೆ ಅಂತ ಗೊತ್ತಿದ್ದೂ ಆಕೆ ಹೊರಡುತ್ತಾಳೆ. ‘ಬರುವುದಿಲ್ಲ’ ಎಂದರೆ ಪ್ರೀತಿಸುವುದನ್ನೇ ಬಿಟ್ಟುಬಿಟ್ಟಾನು ಎಂಬ ಭಯ ಇರಬಹುದು ಅಥವಾ ಏನಾಗುತ್ತೋ ನೋಡಿಯೇ ಬಿಡೋಣ ಎಂಬ ಹುಂಬ ಧೈರ್ಯವೂ ಇರಬಹುದು.
ಮಧ್ಯರಾತ್ರಿಯಲ್ಲಿ ಕಾರು ಒಂದು ಆಸ್ಪತ್ರೆಯ ಪಾರ್ಕಿಂಗ್ ಜಾಗದಲ್ಲಿ ನಿಲ್ಲುತ್ತದೆ. ಈಗ ಇಬ್ಬರ ನಡುವೆ ಬೇಕಾದಷ್ಟು ಏಕಾಂತ……..
ಸ್ವಲ್ಪ ಹೊತ್ತು ಇಬ್ಬರೂ ಮೌನವಾಗಿ ಕುಳಿತಿರುತ್ತಾರೆ. ನಂತರ ಆಕೆ ಹೊರಡೋಣ ಅಂತಾಳೆ. ‘ಮುತ್ತು ಕೊಟ್ಟರೆ ಹೋಗೋಣ’ ಅಂತಾನೆ ಅವನು. ಆಕೆ ನಾಚಿಕೊಳ್ಳುತ್ತಾ, ಹಿಂಜರಿಯುತ್ತಲೇ ಮುತ್ತು ಕೊಡುತ್ತಿದ್ದಂತೆ ಪೊಲೀಸರಿಗೆ ಸಿಕ್ಕಿ ಬೀಳುತ್ತಾರೆ.
ಒಂದೇ ಒಂದು ಕ್ಷಣದ ಹಿಂದಿದ್ದ ಪರಿಸ್ಥಿತಿ, ಈಗ ಸಂಪೂರ್ಣ ಬಿಗಡಾಯಿಸಿರುತ್ತೆ. Its not a love story ಎಂಬ ಟ್ಯಾಗ್ ಲೈನಿನ ಅರ್ಥ ಈಗ ಗೊತ್ತಾಗುತ್ತೆ. ಪೊಲೀಸಿನವನು ಇವರು ಕೇವಲ ಮುತ್ತು ಕೊಟ್ಟುಕೊಳ್ಳಲು ಕಾರು ನಿಲ್ಲಿಸಿದರು ಅಂತ ನಂಬಲು ರೆಡಿ ಇಲ್ಲ. ಮನೆಯವರನ್ನೆಲ್ಲಾ ಕರೆಸ್ತೀನಿ, ನಂಬರ್ ಕೊಡಿ ಅಂತ ಕಿರಿಚಲು ಶುರು ಮಾಡುತ್ತಾನೆ.
ಅವಳಿಗೆ ಮಾನ-ಮರ್ಯಾದೆ ಎಲ್ಲ ಕಳೆದುಕೊಂಡ ಫೀಲ್!! ನಾಳೆಯಿಂದ ತಲೆ ಎತ್ತಿ ಓಡಾಡಲು ಸಾಧ್ಯವೇ? ಈ ವಿಷಯ ಹೊರಗೆ ಗೊತ್ತಾದರೆ ನಾನು ಆತ್ಮಹತ್ಯೆ ಮಾಡಿಕೊಳ್ತೀನಿ ಅಂತಾಳೆ ಆಕೆ. ಆಕೆಯಷ್ಟೇ ಅಲ್ಲ, ಆ ಜಾಗದಲ್ಲಿ ಯಾರಿದ್ದರೂ ಹಾಗೇ ಯೋಚಿಸುತ್ತಿದ್ದುದು. ಏಕೆಂದರೆ ಅವರು ಸಾಮಾನ್ಯರು. ಪ್ಲಾನ್ ಹಾಕಿಕೊಂಡು ಬರುವ ಕ್ರಿಮಿನಲ್‌ಗಳಲ್ಲ.
ಈ ವಿಷಯ ಪೊಲೀಸನಿಗೆ ಗೊತ್ತಿಲ್ಲವೇ?
ಇವರು ಅಮಾಯಕರೆಂದು ಗೊತ್ತಿದ್ದೂ ಸಿಕ್ಕಾಪಟ್ಟೆ ಕಾಡಿಸುತ್ತಾನೆ. ‘ದುಡ್ಡು ಕೊಟ್ಟರೆ ಬಿಡುವೆ’ ಅಂತಾನೆ. ಸಚ್ಚಿ ತನ್ನ ಬಳಿ ‘ದುಡ್ಡಿಲ್ಲ’ ಅಂದಾಗ ‘ಎ.ಟಿ.ಎಂ ಇಂದ ಡ್ರಾ ಮಾಡಿಕೊಡು’ ಅಂತಾನೆ. ಹಾಗೆ ಡ್ರಾ ಮಾಡಲು ಅವನೂ, ಅವನ ಜೊತೆಯ ಮತ್ತೊಬ್ಬ ಪೊಲೀಸ್ ಇಬ್ಬರೂ ಕಾರು ಏರುತ್ತಾರೆ.
ಈಗ ಅವರವರ ಯೋಚನೆ ಅವರವರಿಗೆ. ಈ ವಿಷಯ ಹೊರಗೆ ಗೊತ್ತಾದರೆ ತನ್ನ ಗತಿ ಏನೆಂದು ವಸುಧಾ ಯೋಚಿಸುತ್ತಿದ್ದರೆ, ತನ್ನ ಕೆಲಸಕ್ಕೇ ಕುತ್ತು ಬರಬಹುದು ಅಥವಾ ತನ್ನ ಅಕ್ಕನ ಮದುವೆಗೆ ಅಡ್ಡಿ ಆಗಬಹುದು ಅಂತ ಸಚ್ಚಿ ಯೋಚಿಸುತ್ತಿರುತ್ತಾನೆ. ಅವರಿಬ್ಬರಿಗೂ ಈ ಪೊಲೀಸರಿಂದ ಮುಕ್ತಿ ದೊರೆತರೆ ಸಾಕಿರುತ್ತದೆ.
ಸಿನೆಮಾದ ಈ ಭಾಗ ಬಹಳ ನಿಧಾನವಾಗಿ ಚಲಿಸುತ್ತದೆ. ನಮ್ಮ ತಾಳ್ಮೆ ಪರೀಕ್ಷಿಸುತ್ತದೆ. ಆ ಪೊಲೀಸಿನವನ ಕಿರಿಕಿರಿಯ ಪ್ರಶ್ನೆಗಳನ್ನು ಕೇಳಿ ನಮ್ಮ ಮೈ ಉರಿಯುವುದಲ್ಲದೇ, ನಾವೇ ಆತನಿಗೆ ಎರಡು ಬಾರಿಸಿಬಿಡೋಣ ಅಂತನ್ನಿಸುತ್ತದೆ. ಹೇಳಿದರೆ ಚಂದವಲ್ಲ, ಅವನ ತಲೆಕೆಟ್ಟಪ್ರಶ್ನೆಗಳನ್ನು ನೋಡಿದರೆ ಚಂದ. ಅಮಾಯಕರನ್ನು ಪೊಲೀಸರು ಹೇಗೆ ಕಾಡಬಹುದು ಅಂತ ಗೊತ್ತಾಗುತ್ತದೆ.
ಕಡೆಗೊಮ್ಮೆ ಸಚ್ಚಿ ಕಾರಿನಿಂದ ಹೊರಗಿದ್ದಾಗ ಪೊಲೀಸಿನವ ದಿಢೀರನೆ ಬಾಗಿಲು ಲಾಕ್ ಮಾಡಿಕೊಳ್ಳುತ್ತಾನೆ. ಕಾರಿನೊಳಗೆ ಪೊಲೀಸಿನವ ಮತ್ತು ವಸುಧಾ ಇಬ್ಬರೇ….!!!
ಸಚ್ಚಿ ಗಾಬರಿಯಿಂದ ಓಡಿ ಬಂದು ಆತುರವಾಗಿ ಬಾಗಿಲು ಬಡಿಯುತ್ತಾನೆ. ಕೆಲ ಕ್ಷಣ ಆಟವಾಡಿಸಿ ನಂತರ ಬಾಗಿಲು ತೆರೆಯುತ್ತಾನೆ ಪೊಲೀಸಿನವ. ವಸುಧಾ ಮೂಲೆಯಲ್ಲಿ ಮುದುರಿ ಕುಳಿತಿರುತ್ತಾಳೆ. ಆ ಪೊಲೀಸಿನವ “ಇಷ್ಟೊತ್ತೂ ನಗುತ್ತಿದ್ದಳು, ನೀನು ಬಂದ ಮೇಲೆ ಅಳುತ್ತಿದ್ದಾಳೆ ನೋಡು” ಅಂತ ನಮ್ಮೊಳಗೂ ಒಂದು ಅನುಮಾನದ ಬೀಜ ಬಿತ್ತುತ್ತಾನೆ. ಏಕೆಂದರೆ ಮುಚ್ಚಿದ ಕಾರಿನೊಳಗೆ ಏನು ನಡೆದಿದೆ ಅಂತ ನಮಗೂ ಗೊತ್ತಿಲ್ಲವಲ್ಲ.
ಸಚ್ಚಿಯ ಮನದೊಳಗೂ ಅನುಮಾನ ಹುಟ್ಟುತ್ತದೆ. ಈವರೆಗೂ ವಸುಧಾ ಅನುಭವಿಸಿದ ಯಾತನೆ ಅವನ ಮನಸ್ಸಿನಿಂದ ಮರೆಯಾಗುತ್ತದೆ. ಗೌರವ-ಘನತೆದಿಂದ ಬದುಕಿ ಬಾಳಿರುವ ಆಕೆ ಕೇವಲ ತನ್ನ ಕಾರಣದಿಂದ ಇಂದು ಈ ಹೀನಾಯ ಪರಿಸ್ಥಿತಿಗೆ ತಲುಪಿದ್ದಾಳೆ ಅಂತಲೂ ಮರೆಯುತ್ತಾನೆ. ಅವನಿಗೆ ಬೇಕಾಗಿದ್ದು ಒಂದೇ… ಮುಚ್ಚಿದ ಕಾರಿನೊಳಗೆ ಏನು ನಡೆಯಿತು??
ಕಡೆಗೆ ಪೊಲೀಸಿನವನು ದುಡ್ಡು ಪಡೆದು ಇವರಿಬ್ಬರನ್ನೂ ಬಿಟ್ಟು ಬಿಡುತ್ತಾನೆ. ಸಚ್ಚಿ ವಸುಧಾಳನ್ನು ಹಾಸ್ಟೆಲ್‌ವರೆಗೆ ಡ್ರಾಪ್ ಮಾಡಿದವನು ಕೇಳುವುದು ತನ್ನ ಅನುಮಾನವನ್ನೇ!!! “ಮುಚ್ಚಿದ ಕಾರಿನೊಳಗೆ ಏನು ನಡೆಯಿತು?” ಅಂತ. ವಸುಧಾ ಅಸಮಧಾನದಿಂದ ಅದಕ್ಕೆ ಉತ್ತರಿಸದೇ ಕಾರಿನಿಂದ ಇಳಿಯುತ್ತಾಳೆ.
ಸಚ್ಚಿಗೆ ಭೂತ ಬಡಿದಂತಾಗಿರುತ್ತದೆ.
ಹೆಣ್ಣಿಗೆ ಮಾತ್ರ ಪಾವಿತ್ರ್ಯ ಇರುವ ನಾಡಿನಲ್ಲಿ ಹೆಣ್ಣು ತನ್ನ ತಪ್ಪಿಲ್ಲದಿದ್ದರೂ ಶಿಕ್ಷೆ ಅನುಭವಿಸಲೇಬೇಕು. ಇದೇ ಲೋಕದ ನಿಯಮ. ಮಧ್ಯರಾತ್ರಿ ಆಕೆಯನ್ನು ಎಲ್ಲೋ ಕರೆದುಕೊಂಡು ಹೋದದ್ದು ತನ್ನದೇ ತಪ್ಪು. ಅಕಸ್ಮಾತ್ ಆಕೆ ಹಾಳಾಗಿದ್ದರೆ ಅದಕ್ಕೆ ಇವನೇ ಕಾರಣನಲ್ಲವೇ? ಅಲ್ಲದೇ…. ಒಪ್ಪಿ ಮಾಡುವುದಕ್ಕೂ, ಬಲವಂತಕ್ಕೂ ವ್ಯತ್ಯಾಸವಿಲ್ಲವೇ?
ಸಚ್ಚಿಗೆ ಇಷ್ಟೆಲ್ಲಾ ಯೋಚಿಸುವ ಮನಸ್ಸಿಲ್ಲ.
ಅವನಿಗೆ ಅಂದಿನ ರಾತ್ರಿಯ ಸತ್ಯ ಬೇಕಷ್ಟೇ. ಅದನ್ನು ಹುಡುಕಿಕೊಂಡು ಮತ್ತದೇ ಪಾರ್ಕಿಂಗ್ ಜಾಗಕ್ಕೆ ಹೋಗುತ್ತಾನೆ. ಅಲ್ಲಿ ಅಂದು ರಾತ್ರಿ ಪೊಲೀಸರೆಂದು ಹೆದರಿಸಿದ ವ್ಯಕ್ತಿಗಳ ನಿಜವಾದ ಪರಿಚಯ ಸಿಗುತ್ತದೆ. ಸಚ್ಚಿ ರಿವೆಂಜ್ ಪ್ಲಾನ್ ಮಾಡುತ್ತಾನೆ. ಈ ರಿವೆಂಜ್ ಅವರಿಗೆ ಬುದ್ಧಿ ಕಲಿಸುವುದಕ್ಕಲ್ಲ. ಬದಲಿಗೆ ಅಂದು ಏನು ನಡೆದಿತ್ತು ಅಂತ ತಿಳಿದುಕೊಳ್ಳುವುದಕ್ಕೆ.
ಈ ಇಪ್ಪತ್ತೊಂದನೇ ಶತಮಾನದಲ್ಲಿಯೂ ಈತ ಈ ವಿಷಯ ತಿಳಿದುಕೊಳ್ಳಲು ಪರದಾಡುತ್ತಿರುವುದನ್ನು ನೋಡಿದರೆ, ಅಂದಿನ ತೇತ್ರಾಯುಗದಲ್ಲಿ ಶ್ರೀರಾಮ ಏಕೆ ಸೀತಾಮಾತೆಗೆ ಅಗ್ನಿಪ್ರವೇಶ ಮಾಡಲು ಹೇಳಿದ ಅಂತ ಅರ್ಥವಾಗುತ್ತದೆ. ಹೆಣ್ಣಿಗೆ ಪಾವಿತ್ರ್ಯತೆ ಅಷ್ಟೊಂದು ಮುಖ್ಯವಾ? ಅದರ ಬಗ್ಗೆ ಅಷ್ಟೊಂದು ಆತಂಕವಾ? ಯಾಕೋ ಜಾಸ್ತಿಯಾಯ್ತು ಎನಿಸದಿರೋಲ್ಲ.
ಸಚ್ಚಿ ಹೇಗೆ ರಿವೆಂಜ್ ತೀರಿಸಿಕೊಂಡ??
ಇದನ್ನು ನೋಡಿಯೇ ತಿಳಿಯಬೇಕು. ಇದೇ ಎರಡನೇ ಭಾಗ. ಅತಿಯಾದ ನಿಧಾನಗತಿಯಿಂದ ಸಾಗುತ್ತಿದ್ದ ಮೊದಲನೇ ಭಾಗವು, ಎರಡನೇ ಭಾಗದಲ್ಲಿ ಚುರುಕಾಗುತ್ತದೆ. ಆ ಪೊಲೀಸ್ ಯಾರು? ನಿಜಕ್ಕೂ ಅಂದೇನು ನಡೆಯಿತು? ಎಲ್ಲಾ ಸಚ್ಚಿಗೆ ಗೊತ್ತಾಗುತ್ತದೆ.
ಆದರೆ ಮುಖ್ಯವಾದ ಪ್ರಶ್ನೆ ಎಂದರೆ ಪ್ರೇಮಿಗಳ ನಡುವೆ ಇಂತಹ ಒಂದು ಅನುಮಾನ ಬರಬಹುದಾ? ಇದನ್ನು ವಸುಧಾ ಹೇಗೆ ಸ್ವೀಕರಿಸಬಹುದು?
ಕ್ಲೈಮಾಕ್ಸ್ ಮಸ್ತ್ ಇದೆ. ನನಗಂತೂ ಬಹಳ ಇಷ್ಟವಾಯ್ತು. ಮಲಯಾಳದ ನಿರ್ದೇಶಕರು ತುಂಬಾ ಮುಕ್ತವಾಗಿ ಆಗಿ ಯೋಚಿಸುತ್ತಾರೆ. ಯಾರೋ ಯಾಕೆ? ನೀವೇ ಯೋಚಿಸಿ… ನೀವು ವಸುಧಾ ಆಗಿದ್ದರೆ ಅಂದಿನ ತನ್ನ ಪರಿಸ್ಥಿತಿ್ಗೆ ಕಾರಣನಾದವನೇ ನಿಮ್ಮ ಮೇಲೆ ಸಂಶಯ ಪಟ್ಟಾಗ ನಿಮ್ಮ ನಡೆ ಹೇಗಿರುತ್ತಿತ್ತು??
ವಸುಧಾಳ ನಿಜ ನಡೆಯನ್ನು ತಿಳಿಯಲು ಸಿನೆಮಾ ನೋಡಿ… ಮಿಸ್ ಮಾಡಬೇಡಿ. ಅಮೆಜಾನ್ ಪ್ರೈಮಿನಲ್ಲಿದೆ. ಮಲಯಾಳಂ ಚಿತ್ರಗಳನ್ನು ನೋಡಿಯೇ ಸವಿಯಬೇಕು. ಅವರ ಕ್ಯಾಮೆರಾ ವರ್ಕ್, ಎಡಿಟಿಂಗ್, ಬಿಜಿಎಂ ಎಲ್ಲವನ್ನೂ ಸವಿಯುತ್ತಾ ಸಿನೆಮಾ ನೋಡಿದಾಗಲೇ ತೃಪ್ತಿಯಾಗುವುದು.
************
ಕೆ.ಎ.ಸೌಮ್ಯ
ಮೈಸೂರು