ಸಿನೆಮಾ ವಿಮರ್ಶೆ : “Lights out” (2016-ಇಂಗ್ಲಿಷ್)

lights out

ಹೆಸರೇ ಹೇಳುವಂತೆ ಲೈಟ್ ಆಫ್ ಆದಾಗಲಷ್ಟೇ ಬರುವ “ದೆವ್ವ” ಇದು.

ಅಮೆಜಾನ್ ಪ್ರೈಮಿನಲ್ಲಿ ಈ ಸಿನೆಮಾ ನೋಡುತ್ತಿದ್ದೆ. ಲೈಟ್ ಹಾಕಿದಾಗ ಮಾಯವಾಗುವ, ಲೈಟ್ ಆರಿಸಿದಾಗ ಅಸ್ಪಷ್ಟವಾಗಿ ಪ್ರತ್ಯಕ್ಷವಾಗುವ ಈ ದೆವ್ವಕ್ಕೆ ಹೆದರಿ ಕೈ ನಡುಗಿ, ಎರಡು ಮೂರು ಬಾರಿ ಮೊಬೈಲ್ ಫೋನ್ ಕೈ ಜಾರಿ ಬಿದ್ದೇ ಹೋಯ್ತು. ಏಕೆಂದರೆ ಎಡಿಟಿಂಗ್ ಮತ್ತು ಸೌಂಡ್ ಎಫೆಕ್ಟ್ ಅಷ್ಟು ಪರಿಣಾಮಕಾರಿಯಾಗಿದೆ. ಒಬ್ಬರೇ ಇದ್ದಾಗಲಂತೂ ನೋಡುವ ಸಾಹಸವನ್ನೇ ಮಾಡದಿರುವುದು ಒಳಿತು.

ಇದೊಂದು ಸರ್ವೇ ಸಾಧಾರಣ ದೆವ್ವದ ಸಿನೆಮಾ.

ಅಂತಹಾ ವಿಶೇಷತೆ ಏನೂ ಇಲ್ಲ ಇದರಲ್ಲಿ. ಅಷ್ಟೇ ಅಲ್ಲದೇ ಬಹಳಷ್ಟು ಪ್ರಶ್ನೆಗಳನ್ನು ಕೊನೆಯಲ್ಲಿ ಉಳಿಸಿಕೊಂಡೇ ಮುಗಿಯುತ್ತದೆ. ಆದರೆ ಸಿನೆಮಾ ಮುಗಿದ ನಂತರ ನಾವು ಲಾಜಿಕ್ ಪ್ರಶ್ನೆಗಳನ್ನು ಹಾಕಬಹುದೇ ಹೊರತೂ, ಸಿನೆಮಾ ನೋಡುವಷ್ಟು ಹೊತ್ತೂ ಜೀವ ಬಾಯಿಗೆ ಬರೆಸಿಕೊಂಡಿರುತ್ತೇವೆ ಅನ್ನೋದಂತೂ ಸತ್ಯ.

ಈ ದೆವ್ವ ಯಾವ ಕಾಲದ್ದೋ ಗೊತ್ತಿಲ್ಲ. ಆದರೆ ಬಹಳ‌ ಇಂಟೆಲಿಜೆಂಟ್ ಫೆಲೋ. ರಾತ್ರಿ ಹೊತ್ತಿನಲ್ಲಿ ಮನೆಯ ಲೈಟಿನ ಸ್ವಿಚ್ ಆರಿಸಲು ಗೊತ್ತು ದೆವ್ವಕ್ಕೆ. ಒಂದು ಪಕ್ಷ ಸ್ವಿಚ್ ಆರಿಸದ ಹಾಗೆ ಗಮ್ ಟೇಪ್ ಅಂಟಿಸಲ್ಪಟ್ಟಿದ್ದರೆ, ಮನೆಯ ಮೇನ್ ಸ್ವಿಚ್ ಅನ್ನೇ ಆರಿಸಿಬಿಡುತ್ತದೆ ಈ ಸ್ಮಾರ್ಟ್ ದೆವ್ವ. ಎಲ್ಲೆಲ್ಲಿ ಕತ್ತಲೆ ಇದೆಯೋ ಅಲ್ಲೆಲ್ಲಾ ನುಸುಳಿಕೊಂಡು, ಮಂದ ಬೆಳಕಿನಲ್ಲಿ ತಾನಿರುವ ಸಾಕ್ಷಿ ತೋರಿಸಿ, ನಂತರ ಮಾಯವಾಗಿ ಧೀರಂಗ ಅಂತ ಕುಳಿತುಬಿಡುತ್ತದೆ. ನಾವು ಹೆದರಿ ಸಾಯಬೇಕಷ್ಟೇ.

ಇಲ್ಲೊಂದು ಕುಟುಂಬವಿದೆ. ತಾಯಿ ಮತ್ತು ಇಬ್ಬರು ಮಕ್ಕಳು. ಇವರ ಮನೆಯಲ್ಲಿದೆ ಆ ದೆವ್ವ. ಅದು ಯಾಕೆ ಆ ಮನೆಯಲ್ಲಿದೆ ಅಂತ ಸಿನೆಮಾ ನೋಡಿಯೇ ತಿಳಿದುಕೊಳ್ಳಿ. ಆದರೆ ಪ್ರತೀರಾತ್ರಿಯೂ ಆ ದೆವ್ವ ಕೊಡಬಾರದ ಕಾಟ ಕೊಟ್ಟರೂ ಅವರು ಯಾರೂ ಮನೆ ಬಿಟ್ಟು ಓಡಿ ಹೋಗೋಲ್ಲ. ತಾವು ಹೆದರೋದಲ್ಲದೇ ನಮ್ಮನ್ನೂ ಹೆದರಿಸ್ತಾರೆ.

ಇಲ್ಲೊಂದು ಒಂದು ಚಿಕ್ಕ ಮಗು ಇದೆ. ಮಾರ್ಟಿನ್ ಅಂತ. ಆ ಮಗುವಿಗೆ ಗೊತ್ತಾಗಿದೆ, ಬೆಳಕಿದ್ದರೆ ದೆವ್ವ ಬರೋಲ್ಲ ಅಂತ. ಅದಕ್ಕೆ ಮಲಗುವಾಗ ಟಾರ್ಚ್ ಹಿಡಿದು ಮಲಗುತ್ತದೆ ಪಾಪ. ಆದರೂ ಅರೆ ನಿದ್ದೆ ಆ ಮಗುವಿಗೆ. ಹಾಗಾಗಿ ಮಾರನೇ ದಿನ ಸ್ಕೂಲಿನಲ್ಲಿ ನಿದ್ದೆ ಹೊಡೆಯುತ್ತದೆ. ಹೀಗ್ಯಾಕೆ ಅಂತ ಹುಡುಕಲು ಹೊರಟಾಗಿನಿಂದ ಸಿನೆಮಾದ ಕಥೆ ಶುರುವಾಗುತ್ತದೆ.

ಯಾವ ಲೇಖನಿಯಿಂದಲೂ ಈ “ಭಯ”ವನ್ನು ವರ್ಣಿಸಲಾಗದು.. ಸ್ವತಃ ಅನುಭವಿಸಬೇಕು. ದೆವ್ವವೂ ಕಿರಿಚಿ, ಉಳಿದವರೂ ಕಿರಿಚುವಾಗ ನಮಗರಿವಿಲ್ಲದೇ ನಾವೂ ಸಹ ಕಿರಿಚಿರುತ್ತೇವೆ. ನಿಜ ಜೀವನದಲ್ಲಿ ‘ದೆವ್ವ-ಭೂತ ಅನ್ನೋದೆಲ್ಲಾ ಸುಳ್ಳು’ ಅಂತೀವಿ. ಸಿನೆಮಾ ನೋಡುವಾಗ ಹೆದರಿ ನಡುಗ್ತೀವಿ.

ಇದೇ ದೃಶ್ಯ ಮಾಧ್ಯಮದ ಪವರ್!!

ಉಳಿದ ಕಥೆ ಸಿನೆಮಾ ನೋಡಿ ಸ್ವತಃ ತಿಳಿದುಕೊಳ್ಳಿ. ಸಿನೆಮಾ ಅಮೆಜಾನ್ ಪ್ರೈಮಿನಲ್ಲಿದೆ. ಒಂದು ಬಾರಿ ನೋಡಿ ಆಗಿದೆ. ಆದರೂ ‘ಇನ್ನೊಮ್ಮೆ ನೋಡುವ ಧೈರ್ಯ ಇದೆಯಾ ಅಮ್ಮ?’ ಅಂತ ಕೇಳಿದಳು ಮಗಳು. ಏನು ಹೇಳಲಿ??

*************
ಕೆ.ಎ.ಸೌಮ್ಯ
ಮೈಸೂರು

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply