ಸ್ವರ ಸಾರ್ವಭೌಮ – ಡಾ.ಪಿ.ಬಿ.ಶ್ರೀನಿವಾಸ್ ನೆನಪು

ನನ್ನ ಪ್ರಕಾರ ಡಾ.ಪಿ.ಬಿ.ಶ್ರೀನಿವಾಸ್ ಎಂದರೆ ” ಶುದ್ಧ ಸ್ವರದ ಉಗಮ ಸ್ಥಾನ “…..ಮಾಧುರ್ಯತೆಗೆ ಇರುವ ಪರ್ಯಾಯ ಪದ….ರಸಿಕ ರಂಜಕ ಸ್ವರ ಯೋಗಿ….ಶೃಂಗಾರಾದಿ ನವರಸಗಳಿಂದ ಕೂಡಿದ್ದ ಸಪ್ತಸ್ವರಗಳನ್ನು ತಮ್ಮ ದೈವಿಕ ಕಂಠದಿಂದ ಸಂಗೀತದ ಗಂಧಗಾಳಿಯೂ ಗೊತ್ತಿಲ್ಲದ ನನ್ನಂಥ ಅಸಂಖ್ಯ ಕೇಳುಗರ ಎದೆಯಾಳಕ್ಕೆ ಇಳಿದು , ಅವಿರತ ಕಾಲ ಗುನುಗುನಿಸುವಂತೆ ಮಾಡಿದ ಮಹಾನ್ ಗಾಯಕ….ಅವರ ಹಾಡುಗಳನ್ನು ಕೇಳುತ್ತಿದ್ದರೆ ನಮ್ಮ ಪಂಚೇಂದ್ರಿಯಗಳು ನಮಗರಿವಿಲ್ಲದಂತೆಯೇ ಆ ದೈವಿಕ ಕಂಠಕ್ಕೆ ಶರಣಾಗಿಬಿಡುತ್ತವೆ.

ಸಂಗೀತ ಜ್ಞಾನವಿಲ್ಲದವರಿಗೂ ಸಂಗೀತದ ಮೇಲೆ ಅಪಾರ ಆಸಕ್ತಿ ಹುಟ್ಟಿಸುವ ” ರಾಗ ಡಾ.ಪಿ.ಬಿ.ಶ್ರೀನಿವಾಸ್ “….ಮಂದ್ರ , ತಾರಕ, ಮಧ್ಯಮ ಎಲ್ಲದರಲ್ಲೂ ಲೀಲಾಜಾಲವಾಗಿ ಅವರ ದನಿಯಲ್ಲಿ ಸಂಚರಿಸುತ್ತಿದ್ದವು…ಸಂಗೀತ ಅದೊಂದು ಮಹಾ ತಪಸ್ಸು…. ಡಾ.ಪಿ.ಬಿ. ಶ್ರೀನಿವಾಸ್ ಮಹಾ ತಪಸ್ವಿಯಾಗಿದ್ದರು….ಬಹುಮುಖ ಪ್ರತಿಭೆಯ ಪಿಬಿಎಸ್ ಗಾಯನದ ಜೊತೆಗೆ ಬರಹವನ್ನು ನೆಚ್ಚಿಕೊಂಡವರು….ತಮಗೆ ಹೊಳೆದ ಹೊಸ ಧಾಟಿಯ ಆಲೋಚನೆಗಳನ್ನು ಲಿಖಿತ ರೂಪದಲ್ಲಿ ಪ್ರಕಟಿಸುತ್ತಿದ್ದರು….ಸುಮಾರು ಹತ್ತು ಭಾಷೆಗಳಲ್ಲಿ ವ್ಯವಹರಿಸುವ ಪಾಂಡಿತ್ಯ ಹೊಂದಿದ್ದರು.

ಮಿರ್ಜಾ ಗಾಲೀಬನ ಗಜಲ್ ಗಳನ್ನು ಕೇಳುತ್ತಾ ಅತೀ ಕಡಿಮೆ ಅವಧಿಯಲ್ಲೇ ಉರ್ದು ಭಾಷೆಯನ್ನು ಸಹ ಕಲಿತರು….ಮುಂದೆ ಅನೇಕ ಗಜಲ್ ಗಳಿಗೆ ಸೃಷ್ಟಿಕರ್ತರಾದರು….೧೯೬೯ರಲ್ಲಿ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿರಿಸಿದಾಗ , ಆ ಸುದ್ದಿ ಓದಿ ಪುಳಕಿತರಾದ ಪಿಬಿಎಸ್ ” ಮ್ಯಾನ್ ಆನ್ ಮೂನ್ ” ಎಂಬ ಕವಿತೆ ಬರೆದು , ಅದಕ್ಕೆ ಸ್ವತಃ ತಾವೇ ರಾಗ ಸಂಯೋಜಿಸಿ, ತಮ್ಮ ನೆಚ್ಚಿನ ಗಾಯಕಿ ಎಸ್. ಜಾನಕಿ ಅವರೊಂದಿಗೆ ಹಾಡಿ, ಆ ಹಾಡಿನ ಧ್ವನಿ ಮುದ್ರಣದ ಒಂದು ಪ್ರತಿಯನ್ನು ” ನಾಸಾ” ಗೆ , ಇನ್ನೊಂದನ್ನು ಅಮೇರಿಕಾದ ಆಗಿನ ಅಧ್ಯಕ್ಷ ನಿಕ್ಸನ್ ಅವರಿಗೆ ಕಳುಹಿಸಿದರಂತೆ….ಆ ಹಾಡು ಕೇಳಿ ಮೈಮರೆತ ನಿಕ್ಸನ್ ಪಿಬಿಎಸ್ ಅವರಿಗೆ ಪ್ರಶಂಸಾರ್ಹ ಪತ್ರವನ್ನೇ ಬರೆದಿದ್ದರಂತೆ.

” ಪ್ರಣವಮ್ ” ಎಂಬ ಕವನ ಸಂಕಲನವನ್ನು ಎಂಟು ಭಾಷೆಗಳಲ್ಲಿ ರಚಿಸಿದ್ದಾರೆ…. ಇನ್ನು ಅಣ್ಣಾವ್ರು ಮತ್ತು ಪಿಬಿಎಸ್ ಅವರದು ಏಳು ಜನ್ಮದ ಮೈತ್ರಿ…. ಶರೀರ ಮತ್ತು ಶಾರೀರ ಎರಡೂ ಸೇರಿದಾಗ ಅಲ್ಲೊಂದು ಸ್ವರ್ಗ ಸೃಷ್ಟಿಯಾಗುತ್ತಿತ್ತು….ಅಣ್ಣಾವ್ರು ಹಿಮಾಲಯದ ಎತ್ತರಕ್ಕೆ ಬೆಳೆದಿದ್ದರಲ್ಲಿ ಪಿಬಿಎಸ್ ಅವರೂ ಪ್ರಮುಖ ಕಾರಣರಾಗಿದ್ದಾರೆ….ನವನೀತ ಸುಮಸುಧಾ ಎಂಬ ಹೊಸ ರಾಗವನ್ನು ಅವರು ಸಂಶೋಧಿಸಿದ್ದರಂತೆ….ಡಾ.ಪಿ.ಬಿ.ಶ್ರೀನಿವಾಸ್ ಅವರ ದನಿಯ ಮಾಧುರ್ಯ ಅಂದಿಗೂ, ಇಂದಿಗೂ, ಎಂದೆಂದಿಗೂ ಅನಂತ….ಅವರ ಸ್ವರ ಮಾಧುರ್ಯವನ್ನು ಬಣ್ಣಿಸಲು ಯಾವ ಉಪಮೆಯನ್ನು ಬಳಸಿದರೂ ಮನ ತಣಿಯದು….ಡಾ.ಪಿ.ಬಿ.ಶ್ರೀನಿವಾಸ್ ಅಜರಾಮರ….

ಅರುಣ್ ಕುಮಾರ್

ವೃತ್ತಿ- ಪ್ರೌಢಶಾಲಾ ಗಣಿತ ಶಿಕ್ಷಕ
ಪ್ರವೃತ್ತಿ – ಹವ್ಯಾಸಿ ಬರಹಗಾರ
ಹವ್ಯಾಸಗಳು – ಪುಸ್ತಕಗಳನ್ನು ಓದುವುದು , ಸಂಗೀತ ಆಲಿಸುವುದು, ಪ್ರಕೃತಿಯ ಆರಾಧಕ… ‌

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply