“ನಾನೇ ರಾಜಕುಮಾರ”
ಪ್ರೇಮಿಗಳ ದಿನಾಚರಣೆಯಂದು ನಿಮಗಾಗಿ ಅಣ್ಣಾವ್ರ ಒಂದು ರೋಮ್ಯಾಂಟಿಕ್ ಚಿತ್ರದ ಕಥೆ
ಬೇಡ ಬೇಡ ಎಂದುಕೊಳ್ಳುತ್ತಲೇ ಈ ಚಿತ್ರವನ್ನು ನೋಡಿದೆ. ಚಿತ್ರ ಚೆನ್ನಾಗಿಲ್ಲ ಎಂದಲ್ಲ. ಅಳಲು ನನಗೆ ಇಷ್ಟ ಇಲ್ಲ. ಇಡೀ ಚಿತ್ರವು ಹಾಸ್ಯಪೂರ್ವಕವಾಗಿಯೇ ನಡೆದರೂ ಆ ದುಃಖದ ಪರೋಕ್ಷ ಎಳೆಯು ಕರುಳನ್ನು ಕುಯ್ಯುತ್ತದೆ, ಮನಸ್ಸನ್ನು ದುಃಖದ ಮಡುವಿನಲ್ಲಿ ಮುಳುಗಿಸಿಬಿಡುತ್ತದೆ.
ರಾಜ್ ಅವರ ಪತ್ನಿ ಪಾರ್ವತಮ್ಮ ಒಂದು ಪತ್ರಿಕೆಯ ಭೇಟಿಯಲ್ಲಿ ಅವರಿಷ್ಟದ ಅವರ ಪತಿಯ ಚಿತ್ರಗಳಲ್ಲಿ ‘ಹಾಲು ಜೇನು’ ಒಂದು ಎಂದಿದ್ದರು.
೧೯೮೨ರ ಈ ಸಿಂಗೀತಂ ಶ್ರೀನಿವಾಸರಾವ್ ಚಿತ್ರ ರಾಜ್ ಅವರ ಅಭಿನಯದ ಮತ್ತೊಂದು ಆಯಾಮವನ್ನು ತೋರಿತ್ತು.
ನಗುತ್ತಾ ಅಳುವುದು, ಅಳುತ್ತಾ ನಗುವುದು, ನಗೆಮೊಗದಲ್ಲಿ ಅಳು ನುಂಗುವುದು… ಅಬ್ಬಾ… ಎಂತಹ ಅದ್ಭುತ ಅಭಿನಯ ಅಣ್ಣಾವ್ರದ್ದು!
ಪತ್ನಿ ಕಮಲುವಿಗೆ (ಮಾಧವಿ – ಅವರ ಅತ್ಯುತ್ತಮ ಪಾತ್ರಗಳಲ್ಲೊಂದು. ಇದಕ್ಕೆ ಬಿ. ಜಯಶ್ರೀ ಅವರ ಧ್ವನಿಯೂ ಸುಂದರವಾಗಿ ಸಾಥ್ ಕೊಟ್ಟಿದೆ) ಕ್ಯಾನ್ಸರ್ ಎಂದು ಬಹುಶಃ ಚಿತ್ರದಲ್ಲಿ ಬಹಳ ಬೇಗ ವೀಕ್ಷಕರಿಗೆ ತಿಳಿಸಿ, ನಂತರ ಚಿತ್ರವನ್ನು ಇಷ್ಟು ಸುಂದರವಾಗಿ ಸಾಗಿಸಿರುವ ಮತ್ತೊಂದು ಉದಾಹರಣೆ ಎಂದರೆ ರಾಜೇಶ್‌ಖನ್ನ ನಟನೆಯ ಹೃಷೀಕೇಷ್ ಮುಖರ್ಜಿಯವರ ಹಿಂದಿ ಚಿತ್ರ ಆನಂದ್ ಮಾತ್ರವೇ ಎಂದೆನಿಸುತ್ತದೆ ನನಗೆ.
ಚಿ. ಉದಯಶಂಕರ್, ಶಿವರಾಂ, ಎಂ. ಎಸ್, ಉಮೇಶ್, ಡಬ್ಬಿಂಗ್ ಜಾನಕಿ, ಶನಿ ಮಹದೇವಪ್ಪ, ಶಕ್ತಿಪ್ರಸಾದ್, ರೂಪಾದೇವಿ (ಆದವಾನಿ ಲಕ್ಷ್ಮೀದೇವಿಯವರ ಮಗಳು), ಮುಸುರಿ ಕೃಷ್ಣಮೂರ್ತಿ, ಚಂದ್ರಶೇಖರ್ (ಎಡಕಲ್ಲು ಗುಡ್ಡದ ಮೇಲೆ), ಸುಧಾ ಸಿಂಧೂರ್, ಪಾಪಮ್ಮ, ತೂಗುದೀಪ ಶ್ರೀನಿವಾಸ್, ಸುದರ್ಶನ್ ನಾನು ಗುರುತಿಸಿದ ನಟ ನಟಿಯರು.
ರೂಪಾದೇವಿ ಕೂಡ ಚಿತ್ರದ ಲೈಟರ್ ಮೂಡ್ ಹೈಲೈಟ್ ಆಗಲು ಸಹಾಯ ಮಾಡಿದ್ದಾರೆ.
ಅವರಿಗೊಂದು ಹಾಡು ಕೂಡ ಇದೆ – ಪುರಂದರದಾಸರ ʼಪೋಗದಿರೆಲೋ ರಂಗʼ ಜಾನಕಿಯಮ್ಮನವರ ಶಾಸ್ತ್ರೀಯ ಗಾಯನ.
ಅಂದ ಹಾಗೆ ಅಣ್ಣಾವ್ರ ಹೆಸರು ರಂಗ.
ಬಾಳು ಬೆಳಕಾಯಿತು, ಹಾಲು ಜೇನು ಒಂದಾದ ಹಾಗೆ, ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ (ಇದರಲ್ಲಿ ಮಾಧವಿಯ ಆಡುಮಾತಿಗೆ ಡಬ್ ಮಾಡಿರೋರು ನಟಿ ಸರಿತಾ), ಆನೆಯ ಮೇಲೆ ಅಂಬಾರಿ ಕಂಡೆ (ಸುಲೋಚನಾ ಜೊತೆಗೆ)… ವೈವಿಧ್ಯಮಯ ಗಾಯನ ಅಣ್ಣಾವ್ರದ್ದು. ಸಂಗೀತ ಸಾರ್ವಭೌಮ ಜಿ. ಕೆ. ವೆಂಕಟೇಶ್ ಹಾಡುಗಳಲ್ಲೂ, ನೇಪಥ್ಯ ಸಂಗೀತದಲ್ಲೂ ಸಾರ್ವಭೌಮರೇ.
ಪತಿಗೆ ತನ್ನ ನೋವು ಕಾಣದಂತೆ, ಆತನ ಮುಖ ಮರೆಯಾದಾಗ ಮುಖದಲ್ಲಿ ನೋವು ತೋರಿಸಿಕೊಳ್ಳುವ ಮಾಧವಿ. ಪತ್ನಿಯ ಎದುರಿಗೆ ಅಳಲಾಗದೇ ನಗುತ್ತಾ ಅವಳಿಗೆ ತನ್ನ ಮುಖ ಕಾಣದಂತಿದ್ದಾದಗ ಅಳುವ ರಂಗನಾಗಿ ರಾಜ್ ಅಮೋಘ. ಹಣವಿಲ್ಲ. ಆದರೆ ಆಸ್ಪತ್ರೆ ಖರ್ಚಿಗೆ ಹಣಕ್ಕಾಗಿ ತನಗೆ ತಿಳಿದಂತೆ ಒಬ್ಬೊಬ್ಬರಿಗೇ ಮೋಸ ಮಾಡುತ್ತ ಇರುವ ದೃಶ್ಯಗಳು ಚೆನ್ನ. ಆದರೆ ದುಷ್ಟರಿಗೆ ಮಾತ್ರವೇ ಅವರ ಮೋಸದಿಂದ ತೊಂದರೆ ಆಗಿದ್ದರೂ, ಅವರಿಗೆ ಸಮಯಕ್ಕೆ ಬೇಕಾದಾಗ ಹಣ ಒದಗದೇ ಮೋಸಗಾರನೆಂಬ ಪಟ್ಟ ಬಂದಾಗ ನಮಗೇ ಅಯ್ಯೋ ಎನಿಸುತ್ತದೆ.
ರೂಪಾದೇವಿ ರಂಗನನ್ನು ಮನಸಾರೆ ಪ್ರೀತಿಸಿ, ಕೊನೆಗೆ ರಂಗನ ಪತ್ನಿಯನ್ನು ರುಗ್ಣಶಯ್ಯೆಯಲ್ಲಿ ನೋಡುವ ದೃಶ್ಯ ಚಂದ, ಪತ್ನಿಗಾಗಿ ಹಾಡುತ್ತಾ ಇದ್ದಂತೆ ಆಕೆ ಸಾವಿನ ಮನೆಯ ಬಾಗಿಲು ತಟ್ಟುವ ದೃಶ್ಯ…
ಓಹ್… ಮತ್ತೆ ಹಾಲು ಜೇನು ನೋಡಬಾರದಿತ್ತು. ಕಣ್ಣಾಲಿಗಳು ತುಂಬಿ ಬಂದವು. ಒಳಗಿನಿಂದ ದುಃಖ ಉಕ್ಕಿ ಬಂದಿತ್ತು ಚಿತ್ರದ ಕೊನೆಯ ದೃಶ್ಯ ನೋಡಿದಾಗ.
ಅಣ್ಣಾವ್ರೇ … ನೀವು ಇನ್ನೂ ಇರಬೇಕಾಗಿತ್ತು…
ಲೇಖಕರು: ಯತಿರಾಜ್ ವೀರಾಂಬುಧಿ