(ಮುಂದುವರೆದ ಭಾಗ)
ಈ ಯುಗದಲ್ಲಿ ರಾರಾಜಿಸಲು ಆರಂಭಿಸಿದ ನರಸಿಂಹರಾಜು ೧೯೫೪ ರಲ್ಲಿ ತೆರೆ ಕಂಡ ಬೇಡರ ಕಣ್ಣಪ್ಪ ಚಿತ್ರದಿಂದ ೧೯೭೯ ರಲ್ಲಿ ತೆರೆ ಕಂಡ ಪ್ರೀತಿ ಮಾಡು ತಮಾಷೆ ನೋಡು ಚಿತ್ರದವರೆಗಿನ ೨೫ ವರ್ಷಗಳ ಸಿನಿಮಾ ಪಯಣದಲ್ಲಿ ೨೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ನಟರಾಗಿ ವಿಜ್ರಂಭಿಸಿದರು. ಶ್ರೇಷ್ಠ ಹಾಸ್ಯ ನಟ ಚಾರ್ಲಿನ್ ಚಾಪ್ಲಿನ್ ರಿಂದ ಪ್ರಭಾವಿತರಾಗಿದ್ದರು. ಇವರ ಪೀಚು ಶರೀರ, ವಿಶಿಷ್ಟ ರೀತಿಯ ಮ್ಯಾನರಿಸಂ ಗಳು ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತೆ ಇತ್ತು. ಅವರ ಚಿತ್ರಗಳನ್ನು ಟೆಂಟ್ ಗಳಲ್ಲಿ ನೋಡುತ್ತಿದ್ದ ಹಳ್ಳಿಯ ಜನರು ಉಬ್ಬು ಹಲ್ಲಿನ ತಮ್ಮ ಮಿತ್ರರನ್ನು ನರಸಿಂಹರಾಜು ಎಂದು ಕರೆಯುವಷ್ಟು ಗಾಡಿ ಪ್ರಭಾವವನ್ನು ಬೀರಿದ್ದರು. ಅಂದಿನ ದಿನಗಳಲ್ಲಿ ಇವರ ಜನಪ್ರಿಯತೆ ಯಾವ ರೀತಿ ಇತ್ತೆಂದರೆ ಕಥೆಯಲ್ಲಿ ಇವರಿಗಾಗಿ ಪಾತ್ರಗಳನ್ನು ರಚಿಸುತ್ತಿದ್ದರು. ನಿರ್ಮಾಪಕರು, ನಿರ್ದೇಶಕರು ತಮ್ಮ ಚಲನಚಿತ್ರಗಳಿಗೆ ಮೊದಲು ನರಸಿಂಹರಾಜುರವರ ಕಾಲ್ ಶೀಟ್ ಪಡೆದ ನಂತರ ಉಳಿದ ನಮ್ಮಂತಹ ಕಲಾವಿದರನ್ನು ಸಂಪರ್ಕಿಸುತ್ತಿದ್ದರು. ಈ ಮಾತನ್ನು ಹೇಳಿದವರು ಬೇರೆ ಯಾರು ಅಲ್ಲ. ನಮ್ಮ ಕನ್ನಡ ಚಿತ್ರರಸಿಕರ ಆರಾಧ್ಯ ದೈವ ಡಾ.ರಾಜಕುಮಾರ್. ಮೇರು ನಟರು ಹೇಳಿದ ಮಾತು ನರಸಿಂಹರಾಜು ಗಳಿಸಿದ ಶ್ರೇಷ್ಠತೆಯನ್ನು ಎತ್ತಿ ತೋರಿಸಿದೆ.
ಡಾ.ರಾಜಕುಮಾರ ಚಿತ್ರಗಳಲ್ಲಿ ನರಸಿಂಹರಾಜು ಇದ್ದೇ ಇರುತ್ತಿದ್ದರು. ಡಾ.ರಾಜಕುಮಾರ ಮತ್ತು ನರಸಿಂಹರಾಜು ಜೋಡಿ ಕನ್ನಡ ಚಿತ್ರರಂಗ ಕಂಡ ಅಪರೂಪದ ಶ್ರೇಷ್ಠ ಜೋಡಿ ಆಗಿದೆ. ಅದರಲ್ಲೂ ಹಾಸ್ಯದ ಜೋಡಿ ಎಂದರೆ ನರಸಿಂಹರಾಜು ಮತ್ತು ಬಾಲಕೃಷ್ಣ ಜೋಡಿ. ಈ ಜೋಡಿಯ ಹಾಸ್ಯಕ್ಕೆ ಮರುಳಾಗದ ಪ್ರೇಕ್ಷಕರಿಲ್ಲ. ಈ ಜೋಡಿ ತೆರೆಯ ಮೇಲೆ ಬಂದರೆ ಇವರ ಹಾಸ್ಯದ ಹೊಳೆಯಲ್ಲಿ ಪ್ರೇಕ್ಷಕರು ತಮ್ಮನ್ನು ತಾವೇ ಮರೆತುಬಿಡುತ್ತಿದ್ದರು ಎಂದರೆ ಇವರ ಹಾಸ್ಯಕ್ಕೆ ಎಷ್ಟು ಶಕ್ತಿಯಿತ್ತು ಎಂಬುದು ನಿಮಗೆ ತಿಳಿಯುತ್ತದೆ.
ನರಸಿಂಹರಾಜು ಅವರಿಗಿಂತ ಮುಂಚೆ ಮತ್ತು ನಂತರ ಬಂದ ಅನೇಕ ಕಲಾವಿದರು ಹಾಸ್ಯದ ಮೂಲಕ ರಂಜಿಸಿದ್ದು ಜನರಿಗೆ ಇಷ್ಟವಾಗಿದ್ದಾರೆ. ಆದರೆ ನರಸಿಂಹರಾಜುರಂತೆ ಆಳವಾದ ಆಪ್ತತೆ ಮೂಡಿಸಿದ ನಟರೆಂದರೆ ಅದು ಚಾರ್ಲಿನ್ ಚಾಪ್ಲಿನ್ ಮಾತ್ರ. ಬೇಡರ ಕಣ್ಣಪ್ಪ ಚಿತ್ರದಿಂದ ಆರಂಭಗೊಂಡು ಅವರು ನಟಿಸಿರುವ ಚಿತ್ರಗಳ ಪಾತ್ರಗಳಲ್ಲಿ ಅವರು ಹರಿಸಿರುವ ಹಾಸ್ಯದ ಹೊಳೆಯನ್ನು ಮರೆಯಲು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಅವರು ಕೆಲವು ಚಿತ್ರಗಳಲ್ಲಿ ನಟಿಸಿರುವ ಪಾತ್ರಗಳು ಇಂದಿಗೂ ಅವಿಸ್ಮರಣೀಯ ಪಾತ್ರಗಳಾಗಿ ಉಳಿದಿವೆ. ಡಾ.ರಾಜಕುಮಾರ ಅಭಿನಯದ ಶ್ರೀಕೃಷ್ಣ ದೇವರಾಯ ಚಿತ್ರದಲ್ಲಿನ ತೆನಾಲಿ ರಾಮನ ಪಾತ್ರವನ್ನು ಇವರಂತೆ ಯಾರು ನಿರ್ವಹಿಸಲು ಸಾಧ್ಯವಿಲ್ಲ. ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ಉದಯಕುಮಾರ್ ಅವರ ಶ್ರೇಷ್ಠ ಸಿಡುಕು ಮತ್ತು ರಾಜಕುಮಾರ್ ಅವರ ಶ್ರೇಷ್ಠ ಸೌಮ್ಯತೆಯ ನಡುವೆ ಕಪಿ ಚೇಷ್ಟೆ ಮಾಡಿ ಕಡೆಯಲ್ಲಿ ಗೌರವಯುತವಾಗಿ ಪರಿವರ್ತಿತನಾಗುವ ನಕ್ಷತ್ರಿಕನ ಪಾತ್ರದ ಅಭಿನಯವನ್ನು ವರ್ಣಿಸಲು ಸಾಧ್ಯವಿಲ್ಲ. ಅಲ್ಲದೆ ಈ ಪಾತ್ರ ಪೂರ್ಣ ಚಿತ್ರವನ್ನು ತನ್ನ ಹಿಡಿತದಲ್ಲಿ ನಡೆಸುವಷ್ಟು ಸಮರ್ಥವಾಗಿತ್ತು.
ಅವರ ಚಿತ್ರಗಳಲ್ಲಿ ಅವರನ್ನು ಅತೀವವಾಗಿ ಹಿಡಿದಿಟ್ಟುಕೊಂಡ ಪಾತ್ರ ಕೂಡ ಆಗಿದೆ. ಸಂಧ್ಯಾ ರಾಗ, ವೀರಕೇಸರಿ, ಕಠಾರಿವೀರ,ರತ್ನಮಂಜರಿ,ರಾಯರ ಸೊಸೆ, ಲಗ್ನಪತ್ರಿಕೆ ಹೀಗೆ ೨೫೦ ಚಿತ್ರಗಳಲ್ಲಿ ಅದ್ಭುತ ನಟನೆಯನ್ನು ಮಾಡಿದ್ದಾರೆ. ಇವರು ಸ್ವತಃ ನಿರ್ಮಿಸಿದ ಪ್ರೊಫೆಸರ್ ಹುಚ್ಚುರಾಯ ಚಿತ್ರದಲ್ಲಿ ಕೂಡ ತಮ್ಮನ್ನು ತಾವು ವಿಜ್ರಂಭಿಸಿಕೊಳ್ಳದೆ ಸಾಮಾಜಿಕ ನಿಲುವುಗಳನ್ನು ಹೊಂದಿರುವ ಸುಂದರವಾದ ಕಥೆಯಲ್ಲಿ ತಾವು ಉತ್ತಮ ಹೃದಯವಂತ ವ್ಯಕ್ತಿಯಾಗಿ ಮತ್ತು ತಮ್ಮ ಸಾಮರ್ಥ್ಯದ ಕುರುಹಾದ ಹಾಸ್ಯ ಲೇಪನವನ್ನು ಮಾಡಿದ್ದು ತಮ್ಮನ್ನು ಎಂದಿಗೂ ಅಗತ್ಯಕ್ಕಿಂತ ಹೆಚ್ಚು ತೋರಿಸಿಕೊಳ್ಳದೆ ತನ್ನೊಳಗಿನ ಕಲಾವಿದನನ್ನು ಮಾತ್ರ ಹೊರ ತಂದ ಶ್ರೇಷ್ಠತೆ ಎದ್ದು ಕಾಣುತ್ತಿದೆ. ನಗಬೇಕು,ಪಡಿಸಬೇಕು ಇದೇ ನನ್ನ ಧರ್ಮ ನಗಲಾರೆ ಎಂದರೆ ಅದುವೇ ನಿನ್ನ ಕರ್ಮ ಎಂಬುದು ನರಸಿಂಹರಾಜು ಅವರಿಗಾಗಿ ಚಿತ್ರಿತವಾದ ನಕ್ಕರೆ ಅದೇ ಸ್ವರ್ಗ ಚಿತ್ರದ ಗೀತೆಯಾಗಿದೆ. ಇದನ್ನು ಚಾಚು ತಪ್ಪದೆ ಅವರು ತಮ್ಮ ಬದುಕಿನಲ್ಲಿ ಪಾಲಿಸಿಕೊಂಡು ಬಂದರು. ನರಸಿಂಹರಾಜು ತಮ್ಮ ಬದುಕಿನಲ್ಲಿ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಲಿಲ್ಲ, ಇವರ ಬಗ್ಗೆ ಯಾರೂ ಹಗುರವಾಗಿ ಮಾತನಾಡಿದ್ದಾಗಲಿ ಇಲ್ಲ. ಕೆಲವು ವರ್ಷಗಳ ಕಾಲ ಮದ್ರಾಸ್ ನಲ್ಲಿ ನೆಲೆಸಿದ್ದ ನರಸಿಂಹರಾಜು ಕನ್ನಡ ಚಿತ್ರಗಳ ನಿರ್ಮಾಣ, ಚಟುವಟಿಕೆಗಳು ಬೆಂಗಳೂರಿನಲ್ಲಿ ಆರಂಭವಾದಾಗ ತಮ್ಮ ಕುಟುಂಬದ ಸಹಿತ ತಮ್ಮ ವಾಸ್ತವ್ಯವನ್ನು ಬೆಂಗಳೂರಿಗೆ ಬದಲಿಸಿದರು. ಆದರೆ ಅವರ ಕೊನೆಯ ದಿನಗಳ ಖಾಸಗಿ ಜೀವನ ಅಷ್ಟು ನೆಮ್ಮದಿಯಾಗಿರಲಿಲ್ಲ. ಇವರ ಮಗ ರಸ್ತೆ ಅಪಘಾತದಲ್ಲಿ ಮರಣ ಹೊಂದಿದಾಗ ಇವರಿಗೆ ಆದ ಆಘಾತ ಅಷ್ಟಿಷ್ಟಲ್ಲ. ಈ ಘಟನೆ ಅವರನ್ನು ಮಾನಸಿಕವಾಗಿ ಸಾಕಷ್ಟು ಕುಗ್ಗಿಸಿತ್ತು.
ತೆರೆಯ ಮೇಲೆ ನಗಿಸಿದ್ದ ಹಾಸ್ಯ ಚಕ್ರವರ್ತಿ ತಮ್ಮ ಖಾಸಗಿ ಜೀವನದಲ್ಲಿ ಕೊನೆಯ ದಿನಗಳನ್ನು ದುಃಖದಲ್ಲಿಯೇ ಕಳೆದಿದ್ದರು. ಮಕ್ಕಳು, ಮೊಮ್ಮಕ್ಕಳೊಂದಿಗೆ ನರಸಿಂಹರಾಜು ಎಂದಿನಂತೆ ರಾತ್ರಿ ಆಹಾರವನ್ನು ಸೇವಿಸಿ ಮಲಗಿದವರು ಮರುದಿನ ಬೆಳಿಗ್ಗೆ ಏಳಲೇ ಇಲ್ಲ. ಶಾಶ್ವತ ನಿದ್ದೆಗೆ ಶರಣಾಗಿದ್ದರು. ಬೆಳಿಗ್ಗೆ ೪.೩೦ ಗಂಟೆಗೆ ಆದ ಹೃದಯಾಘಾತದಿಂದ ತಮ್ಮ ೫೬ ನೇ ವಯಸ್ಸಿನಲ್ಲಿ ೧೯೭೯ ಜುಲೈ ೨೦ ರಂದು ಮರಣಹೊಂದಿದರು. ಇವರ ಸಾವಿನ ಸುದ್ದಿ ತಿಳಿದ ಚಿತ್ರ ರಂಗಕ್ಕೆ ಆದ ಆಘಾತ ಅಷ್ಟಿಷ್ಟಲ್ಲ. ಪೂರ್ತಿ ಕನ್ನಡ ಚಿತ್ರರಂಗವೇ ಶೋಕಸಾಗರದಲ್ಲಿ ಮುಳುಗಿತ್ತು.
ಕನ್ನಡ ಚಿತ್ರರಂಗದ ಸುವರ್ಣ ಕಾಲವಾದ ೬೦-೭೦ ರ ದಶಕದಲ್ಲಿ ಹಾಸ್ಯ ಚಕ್ರವರ್ತಿಯಾಗಿ ವಿಜ್ರಂಭಿಸಿ ಕನ್ನಡಿಗರನ್ನು ಹಾಸ್ಯದ ಅಲೆಯಲ್ಲಿ ರಂಜಿಸಿದ್ದ ನರಸಿಂಹರಾಜುವರಿಗೆ ಕರ್ನಾಟಕ ಸರ್ಕಾರದಿಂದ ಒಂದು ಸಾರಿ ಕೂಡ ರಾಜ್ಯ ಪ್ರಶಸ್ತಿ ಸಿಗಲಿಲ್ಲ. ಇವರ ಹೆಸರಿನಲ್ಲಿ ಯಾವ ಸ್ಮಾರಕವು ಇಲ್ಲ. ಆದರೆ ಇವರು ಕನ್ನಡ ಚಿತ್ರರಸಿಕರ ಹೃದಯದಲ್ಲಿ ನಿರ್ಮಿಸಿದ ಸಾಮ್ರಾಜ್ಯದ ಎದುರು ನಿಲ್ಲುವವರು ಯಾರು ಎಂದು ಊಹಿಸಲು ಸಾಧ್ಯವಿಲ್ಲ. ಇಂದಿಗೂ ಇವರ ಬೆಲೆ ಹೇಗಿದೆಯೆಂದರೆ ಹಾಸ್ಯವೆಂದರೆ ನರಸಿಂಹರಾಜು, ನರಸಿಂಹರಾಜು ಅಂದರೆ ಹಾಸ್ಯ. ಇದನ್ನು ಯಾರ ಕಡೆಯಿಂದಲೂ ಅಳಿಸಲು ಸಾಧ್ಯವಿಲ್ಲ. ಈ ಶತಮಾನದಲ್ಲಿಯು ಕನ್ನಡ ಚಿತ್ರರಸಿಕರ ಹೃದಯದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದಿರುವ ಹಾಸ್ಯದ ಮೊದಲ ರಾಯಭಾರಿ, ಹಾಸ್ಯ ಬ್ರಹ್ಮ, ಹಾಸ್ಯ ದಿಗ್ಗಜ, ಹಾಸ್ಯ ಚಕ್ರವರ್ತಿ ನರಸಿಂಹರಾಜುವರು ಪುನಃ ನಮ್ಮ ಕನ್ನಡ ನಾಡಿನಲ್ಲಿ ಜನಿಸಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಕಲಾ ಸೇವೆಯನ್ನು ಆರಂಭಿಸಲಿ ಎಂದು ಭಗವಂತನನ್ನು ಪ್ರಾರ್ಥಿಸುತ್ತ ನನ್ನ ಈ ಲೇಖನವನ್ನು ಮುಗಿಸುತ್ತೇನೆ.
ಲೇಖಕರು : ಶ್ರೀ ಸಂದೀಪ್ ಜೋಶಿ