ಸಿನೆಮಾದ ಆರಂಭ ಹೀಗಿದೆ.
ಒಂದು ಪುಟ್ಟ ಮಗುವನ್ನು ನೀನು ದೊಡ್ಡವನಾದ ಮೇಲೆ ಏನಾಗಬೇಕು ಅಂತಿದ್ದೀಯ ಅಂತ ಕೇಳಿದರೆ ಸೈನಿಕನಾಗಿ ದೇಶಸೇವೆ ಮಾಡಬೇಕು, ಡಾಕ್ಟರಾಗಿ ಜನಸೇವೆ ಮಾಡಬೇಕು ಅಂತ ಉತ್ತರ ಸಿಗುತ್ತದೆ. ಅದೇ ಮಗು ದೊಡ್ಡದಾದ ನಂತರ ಇದೇ ಪ್ರಶ್ನೆ ಕೇಳಿದರೆ ಉತ್ತಮ ಸಂಬಳವಿರುವ ಕೆಲಸ, ಇರಲು ಮನೆ, ಓಡಾಡಲು ಕಾರು ಬೇಕು ಅಂತ ಉತ್ತರ ಬರುತ್ತದೆ. ಒಂದು ಉದಾತ್ತ ಧ್ಯೇಯವುಳ್ಳ ಮಗುವಿನ ಮನಸ್ಸನ್ನು ಸ್ವಾರ್ಥಿಯನ್ನಾಗಿಸಿದ್ದು ಯಾರು? ಅದು ಮತ್ಯಾರೂ ಅಲ್ಲ….
ನಮ್ಮ ಶಿಕ್ಷಣ ವ್ಯವಸ್ಥೆ !!!
ಮತ್ತೊಂದೆಡೆ ಒಂದು ಕಾರ್ಪೋರೇಟ್ ಕಂಪನಿಯಿದೆ. ಅದಕ್ಕೊಬ್ಬ ಅನಭಿಷಿಕ್ತ ದೊರೆಯಿದ್ದಾನೆ. ಅವನಿಗೆ ಜನರು ಯೋಚಿಸುವುದು ಬೇಕಿಲ್ಲ. ಕೇವಲ ತಾನು ಹೇಳಿದಂತೆ ಕೇಳಿಕೊಂಡು ಬಿದ್ದಿರುವುದು ಬೇಕು. ಅಂದರೆ ಜನ ತಮ್ಮ ಸ್ವಂತ ಆಲೋಚನಾ ಶಕ್ತಿ ಉಪಯೋಗಿಸದೇ, ಆತ ನೀಡುವ ಸಂಬಳ ಪಡೆದುಕೊಂಡು, ಆತನ ಕಂಪನಿಯಲ್ಲಿ ಆತ ಹೇಳುವ ಕೆಲಸ ಮಾಡಿಕೊಂಡು, ವೀಕೆಂಡಲ್ಲಿ ಸಿನೆಮಾ ನೋಡಿಕೊಂಡು, ಸೋಮವಾರ ಮತ್ತೆ ಎದ್ದು ಕೆಲಸಕ್ಕೆ ಬರಬೇಕು. ಇದನ್ನು ಮೀರಿ ಯಾರಾದರೂ ಹೊಸತೇನಾದರೂ ಯೋಚಿಸಿದರೆ ಆತ ಅವರಿಗೆ ಲೋಬೋಟಮಿ ಮಾಡಿಬಿಡುತ್ತಾನೆ.
ಲೋಬೋಟಮಿ ಒಂದು ರೀತಿಯ ಶಸ್ತ್ರಚಿಕಿತ್ಸೆ ಆಗಿದ್ದು, ಇದರಿಂದ ಮೆದುಳು ಯೋಚಿಸುವ ಶಕ್ತಿ ಕಳೆದುಕೊಳ್ಳುತ್ತದೆ. ಇದನ್ನು ಕಣ್ಣಿನ ಮೂಲಕ ನೇರ ಮೆದುಳಿಗೆ ಸರ್ಜರಿ ಮಾಡಲಾಗುತ್ತದೆ. ಆಗ ಆ ಶಸ್ತ್ರಚಿಕಿತ್ಸೆಗೆ ಒಳಗಾದವರು ತಾವಾಗಿಯೇ ಏನನ್ನು ಯೋಚಿಸಲು ಹೋಗುವುದಿಲ್ಲ. ಕೇವಲ ಹೇಳಿದಂತೆ ಕೇಳಿಕೊಂಡು ಬಿದ್ದಿರುತ್ತಾರೆ.
ಯೆಸ್… ಹೇಳಿದಂತೆ ಕೇಳಿಕೊಂಡು!!
ಇದನ್ನೇ ನಮ್ಮ ಶಿಕ್ಷಣ ವ್ಯವಸ್ಥೆಯೂ ಕಲಿಸುತ್ತಿರುವುದು. ಏನನ್ನೂ ಪ್ರಶ್ನೆಸದೇ ಶಾಲೆಯಲ್ಲಿ ಕಲಿಸಿದ್ದಷ್ಟನ್ನು ಮಾತ್ರವೇ ಕಲಿತು, ರಾಂಕ್ ತೆಗೆದು, ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಪಡೆಯಬೇಕು. ಚಿಕ್ಕಂದಿನಿಂದ ಸಿಕ್ಕಿರುವ ಟ್ರೈನಿಂಗಿನಂತೆ ಅಲ್ಲಿಯೂ ಏನೂ ಪ್ರಶ್ನಿಸದೇ ಸುಮ್ಮನೆ ಕೆಲಸ ಮಾಡಿಕೊಂಡು ಹೋಗಬೇಕು. ಆಗ ನಮ್ಮ ಅನಭಿಷಿಕ್ತ ದೊರೆಗೆ ಖುಷಿ.
ಇಲ್ಲದಿದ್ದರೆ…..
ಅಕಸ್ಮಾತ್ ಯಾರಾದರೂ ಮಣ್ಣುರಹಿತ ಬೇಸಾಯ ಪದ್ಧತಿ ಕಂಡುಹಿಡಿದರೆ ಗೊಬ್ಬರದ ಕಂಪನಿ ಮಾಲೀಕರ ಕಥೆಯೇನು? ಅಥವಾ ನೀರಿನಿಂದ ಓಡುವ ವಾಹನ ಕಂಡುಹಿಡಿದರೆ ಆಯಿಲ್ ಕಂಪನಿ ಮಾಲೀಕರ ಕಥೆಯೇನು? ಅದಕ್ಕಾಗಿ ಹೊಸದಾಗಿ ಯೋಚಿಸುವವರನ್ನು ಹುಡುಕಿ ಹುಡುಕಿ ಲೋಬೋಟಮಿ ಮಾಡಲಾಗುತ್ತಿರುತ್ತದೆ.
ಆದರೆ ಅವನೊಬ್ಬನಿದ್ದಾನೆ ಮೂರ್ತಿ.
ಆತ ಒಂದು ಸ್ಕೂಲ್ ನಡೆಸುತ್ತಾನೆ. ಅದರಲ್ಲಿ ಚೆನ್ನಾಗಿ ಓದುವವರಿಗೆ ಪ್ರವೇಶವಿಲ್ಲ. ಕೇವಲ ಫೇಲ್ ಆದವರಿಗೆ ಅಷ್ಟೇ ಪ್ರವೇಶ. ಪರೀಕ್ಷೆಯಲ್ಲಿ ಫೇಲ್ ಆದವರನ್ನು ಜೀವನದಲ್ಲಿ ಪಾಸ್ ಮಾಡಿಸುವ ಧ್ಯೇಯ ಮೂರ್ತಿಯದ್ದು. ಅವನ ಸ್ಟೂಡೆಂಟ್ಸ್ ಅಸಾಧಾರಣ ಪ್ರತಿಭಾವಂತರಾಗಿದ್ದು ಹಲವಾರು ಪ್ರಯೋಗಗಳನ್ನು ಮಾಡಿ ಲೆಕ್ಕವಿಲ್ಲದಷ್ಟು ಸಂಶೋಧನೆಗಳನ್ನು ಕೈಗೊಂಡಿರುತ್ತಾರೆ.
ಅದರಲ್ಲೊಬ್ಬಳು ಮಥಿ….
ಆಕೆ ಸಮುದ್ರದ ಉಪ್ಪುನೀರಿನಿಂದ ಓಡುವ ಇಂಜಿನ್ ತಯಾರಿಸಿರುತ್ತಾಳೆ. ಪ್ರಾಯೋಗಿಕವಾಗಿ ಅದನ್ನು ಒಂದು ಆಟೋಗೆ ಅಳವಡಿಸಿ, ಓಡಿಸಿ ಯಶಸ್ವಿಯೂ ಆಗಿರುತ್ತಾರೆ. ನಾಯಕ ಆಕೆಯ ಈ ಪ್ರಯೋಗವನ್ನು ಸೈನ್ಸ್ ಎಕ್ಸಿಬಿಷನ್ ಮುಂದಿಡುತ್ತಾನೆ. ಯಾವಾಗ ಆಕೆ ಹೊಸದಾಗಿ (ಪೆಟ್ರೋಲ್/ ಡೀಸೆಲ್ ಗೆ ಪರ್ಯಾಯವಾಗಿ) ಯೋಚಿಸಿರುವುದು ಗೊತ್ತಾಗುತ್ತದೆಯೋ ಕಾರ್ಪೊರೇಟ್ ಸಂಸ್ಥೆಯ ಟಾರ್ಗೆಟ್ ಆಗುತ್ತಾಳೆ.
ಆಕೆಯನ್ನು ಆ ಅನಭಿಷಿಕ್ತ ದೊರೆ ಮಹಾದೇವ್ ಸಂಪೂರ್ಣವಾಗಿ ಮುಗಿಸುವ ಸಂಚು ಮಾಡುತ್ತಾನೆ. ಆಕೆಯನ್ನು ಪೇಟೆಂಟ್ ಉಲ್ಲಂಘನೆಯ ಮೇರೆಗೆ ಅರೆಸ್ಟ್ ಮಾಡಲಾಗುತ್ತದೆ. ಓದಿನಲ್ಲಿ ತೀರಾ ಹಿಂದುಳಿದಿರುವ ಈಕೆ ಇಂತಹಾ ಸಾಧನೆ ಮಾಡಲಾಗುವುದಿಲ್ಲ, ಈ ಫಾರ್ಮುಲ ಯಾರಿಂದಲೋ ಕದ್ದಿದ್ದಾಳೆ ಅಂತ ಕೋರ್ಟಿನಲ್ಲಿ ಪ್ರೂವ್ ಮಾಡುತ್ತಾರೆ. ಕಡಿಮೆ ಅಂಕ ತೆಗೆದವರಿಂದ ಇಷ್ಟೆಲ್ಲಾ ಯೋಚಿಸಲು ಸಾಧ್ಯವಿಲ್ಲ ಅಂತ ಅವಮಾನ ಮಾಡಲಾಗುತ್ತದೆ.
ಆಕೆ ಈ ಅವಮಾನ ಸಹಿಸದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
ಹಾಗಾದರೆ ಓದಿನಲ್ಲಿ ಹೆಚ್ಚು ಅಂಕ ತೆಗೆದವರು ಮಾತ್ರ ಬುದ್ಧಿವಂತರೇ? ಕಡಿಮೆ ಅಂಕ ತೆಗೆದ ಮಾತ್ರಕ್ಕೆ ಅವರಿಗೆ ಜ್ಞಾನವಿಲ್ಲ ಅಂತರ್ಥವೇ? ಎಲ್ಲಾ ಬೆರಳೂ ಒಂದೇ ಸಮ ಇರುವುದಿಲ್ಲ. ಹಾಗೆಯೇ ಎಲ್ಲಾ ಮಕ್ಕಳೂ ಒಂದೇ ರೀತಿ ಇರುವುದಿಲ್ಲ. ನಮ್ಮ ಶಿಕ್ಷಣ ನೀತಿ ಹೇಗಿದೆ ಎಂದರೆ ಮೀನಿಗೆ ಮರ ಹತ್ತಲು ಬರದಿದ್ದರೆ ಅದು ಫೇಲ್ ಆದಂತೆ!!
ಇದನ್ನು ಸರಿಪಡಿಸಲು ನಾಯಕ ಬರುತ್ತಾನೆ.
ಅವನೇ “ಹೀರೋ“. ಒಂದುಕಾಲದ ಶಕ್ತಿಮಾನ್ ಧಾರಾವಾಹಿಯ ಅಭಿಮಾನಿ ಆತ. ಮಾಸ್ಕ್ ಧರಿಸಿ, ತನ್ನ ಗುರುತು ಮುಚ್ಚಿಟ್ಟು, ಲೋಬೋಟಮಿಗೆ ಒಳಗಾಗಬೇಕಾಗಿದ್ದ ನಾಲ್ವರು ಮಕ್ಕಳನ್ನು ರಕ್ಷಿಸಿ ಕರೆತರುತ್ತಾನೆ. ಅಲ್ಲದೇ ಕಾರ್ಪೊರೇಟ್ ಮಹಾದೇವನಿಗೆ ಬ್ಯುಸಿನೆಸ್ಸಿನಲ್ಲಿ ಸಕತ್ತಾಗಿ ಹೊಡೆತ ಕೊಡುತ್ತಾನೆ.
ಆದರೆ ಕಡೆಗೂ “ಹೀರೋ” ಆ ಪ್ರತಿಭಾವಂತ ಮಕ್ಕಳ ಜೊತೆಗೆ ಮಹಾದೇವನಿಗೆ ಸಿಕ್ಕುಬಿದ್ದೇ ಬಿಡುತ್ತಾನೆ. ಮಹಾದೇವ ಎಲ್ಲರಿಗೂ ಲೋಬೋಟಮಿ ಮಾಡಿ ಎಲ್ಲರನ್ನೂ ತನ್ನ ಅಧೀನ ಮಾಡಿಕೊಳ್ಳಲು ಹೊರಡುತ್ತಾನೆ.
ಆಗೇನು ಮಾಡುತ್ತಾನೆ ಹೀರೋ….?
ಆ ಮಕ್ಕಳನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ….?
ಈ ನಡುವೆ ಹೀರೋ ಟಿವಿ ಮೂಲಕ ಜನರಿಗೆ ಒಂದು ಮಾತು ಹೇಳುತ್ತಾನೆ. ಏನೆಂದರೆ…. “ಮಕ್ಕಳು ಹೇಗೆ ಓದುತ್ತಿದ್ದಾರೆ ಅಂತ ಅವರ ಸ್ಕೂಲ್ ಬುಕ್ ಚೆಕ್ ಮಾಡಿ… ಆದರೆ ಅವರಿಗೇನು ಇಷ್ಟ ಅಂತ ತಿಳಿಯಲು ಅವರ ರಫ್ ನೋಟ್ ಚೆಕ್ ಮಾಡಿ” ಅಂತಾನೆ. ಟಿವಿ ನೋಡಿದ ಪೋಷಕರೆಲ್ಲರೂ ತಮ್ಮ ತಮ್ಮ ಮಕ್ಕಳ ರಫ್ ನೋಟ್ ಚೆಕ್ ಮಾಡಿ, ಮಕ್ಕಳ ಆಸೆಗಳನ್ನು ಅರಿತು ಪಶ್ಚಾತ್ತಾಪ ಪಡುತ್ತಾರೆ. ಪೋಷಕರೆಲ್ಲರೂ ತನ್ಮನ್ನು ತಾವು ತಿದ್ದಿಕೊಂಡು ಮಕ್ಕಳಿಗೆ ಇಷ್ಟವಿರುವ ಕ್ಷೇತ್ರದಲ್ಲಿ ಮುಂದುವರೆಯುವಂತೆ ಪ್ರೋತ್ಸಾಹ ನೀಡುತ್ತಾರೆ .
ಇದು ನಮ್ಮ ಕಣ್ಣಲ್ಲಿಯೂ ನೀರು ತರಿಸುತ್ತದೆ.
ಏಕೆಂದರೆ… ಈ ಶಿಕ್ಷಣ ವ್ಯವಸ್ಥೆಯಿಂದಾಗಿ ನಾವೂ ಸಹ ನಮ್ಮ ಆಸೆ-ಕನಸುಗಳನ್ನು ಕೊಂದುಕೊಂಡವರೇ ಅಲ್ಲವೇ? ಓದು ಮುಗಿದ ಕೂಡಲೇ ಸಿಕ್ಕ ಕೆಲಸ ಮಾಡುತ್ತಾ, ಒಂದು ರೀತಿಯ ಅತೃಪ್ತಿಯಿಂದ ಬಳಲುತ್ತಿದ್ದೇವೆ. ಯಾರಿಗೆ ಏನಿಷ್ಟವೋ ಅದನ್ನು ಮಾಡಲು ಈ ಶಿಕ್ಷಣ ವ್ಯವಸ್ಥೆ ಬಿಡುತ್ತಿಲ್ಲ. ಹೊಸದಾಗಿ ಯೋಚಿಸಲು ಕಾರ್ಪೊರೇಟ್ ಕಂಪನಿಗಳು ಬಿಡುತ್ತಿಲ್ಲ. ಎಲ್ಲರಲ್ಲಿಯೂ ಒಂದು ರೀತಿಯ ಅತೃಪ್ತಿ ತಾಂಡವವಾಡುತ್ತಿದೆ. ಇದು ಸರಿ ಹೋಗುವುದು ಯಾವಾಗ??
ಸಿನೆಮಾ ಮುಗಿದಾಗ ಒಂದಷ್ಟು ನೈಜ ಜೀವನದ ಸಾಧಕರ ಪರಿಚಯವಾಗುತ್ತದೆ. ಪರೀಕ್ಷೆಯಲ್ಲಿ ಸೋತವರು ಮತ್ತು ಅನ್ವೇಷಣೆಯಲ್ಲಿ ಗೆದ್ದವರು ತಾವು ಕಂಡುಹಿಡಿದಿರುವುದನ್ನು ತೋರಿಸುತ್ತಾರೆ. ಎಲ್ಲರ ಸಾಧನೆಯ ಸ್ಫೂರ್ತಿ ಒಂದೇ… ಅದು ಅವಶ್ಯಕತೆ!!
ತಂದೆಯು ಗಾಡಿಯಲ್ಲಿ ತನ್ನನ್ನು ಸ್ಕೂಲಿಗೆ ಬಿಡುವಾಗ ಮತ್ತು ಕರೆದುಕೊಂಡು ಹೋಗುವಾಗ ಆಗುವ ಪೆಟ್ರೋಲ್ ಖರ್ಚು ಉಳಿಸಲು ಮಥಿಯು ಸಮುದ್ರದ ಉಪ್ಪು ನೀರಿನಿಂದ ಓಡುವ ಇಂಜಿನ್ ಕಂಡುಹಿಡಿಯುತ್ತಾಳೆ. ಇದೇ ರೀತಿ ಎಲ್ಲಾ ಆವಿಷ್ಕಾರದ ಹಿಂದೆ ಇಂತಹುದೇ ಕಾರಣಗಳಿರುತ್ತವೆ.
ಪರೀಕ್ಷೆಯಲ್ಲಿ ಸೋತೆನೆಂದು ಕೊರಗುವವರಿಗೆ ಈ ಸಿನೆಮಾ ಟಾನಿಕ್ಕಿನಂತಿದೆ. ನನಗಂತೂ ಬಹಳ ಇಷ್ಟವಾಯ್ತು. ಏಕೆಂದರೆ ನಾನೂ ಸಹ ಸೋತವಳೇ!!