“ಹೊಸಬೆಳಕು“….ವಾಣಿಯವರ ಇದೇ ಹೆಸರಿನ ಕಾದಂಬರಿಯಾಧರಿಸಿದ ಈ ಚಿತ್ರ ‘ದೊರೈ- ಭಗವಾನ್‘ ಅವರ ನಿರ್ದೇಶನದಲ್ಲಿ 1982ರಲ್ಲಿ ತೆರೆಕಂಡಿತು. ರಾಜಕುಮಾರ್, ಸರಿತಾ, ಕೆ.ಎಸ್.ಅಶ್ವತ್ಥ್, ಶಿವರಾಮ್, ಶ್ರೀನಿವಾಸ ಮೂರ್ತಿ ಮತ್ತು ಮಮತಾ ರಾವ್ ಅವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚೂಟಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲನಟ ಪುನಿತ್ ಅವರ ಅಭಿನಯ ಅತ್ಯಂತ ಆಕರ್ಷಣೀಯವಾಗಿದೆ. ರಾಷ್ಟ್ರಕವಿ ಕುವೆಂಪು ಅವರ “ತೆರೆದಿದೆ ಮನೆ ಓ ಬಾ ಅತಿಥಿ” ಗೀತೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಸಂಗೀತ ನಿರ್ದೇಶಕರಾದ ಎಂ.ರಂಗರಾವ್ ಅವರು ಸಂಯೋಜಿಸಿದ ಹಾಡುಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡು, ಈ ಚಿತ್ರಕ್ಕಾಗಿ ಅವರಿಗೆ ಆ ಸಾಲಿನ ರಾಜ್ಯ ಪ್ರಶಸ್ತಿಯೂ ದೊರೆತಿತ್ತು.
ಈ ಚಿತ್ರದಲ್ಲಿ ಎಲ್ಲಾ ಹಾಡುಗಳು ಬಹಳ ಚೆನ್ನಾಗಿದೆ, ಅಣ್ಣಾವೃ ದೆಹಲಿಯ ದೂರದಶ೯ನದಲ್ಲಿ ಹಾಡಿರುವ “ಹೊಸ ಬೆಳಕೂ ಮೂಡುತಿದೆ “, ಕಛೇರಿಯ ಮಾಲೀಕರ ಮಗಳ ಹುಟ್ಟು ಹಬ್ಬದ ಗೀತೆ “ಚೆಲುವೆಯೇ ನಿನ್ನ ನೋಡಲು “, ರವಿ ನೀನು ಆಗಸದಿಂದ ಮರೆಯಾಗಿ ಜಾನಕಿ ರವರ ಧ್ವನಿಯಲ್ಲಿ ಕೇಳಬಹುದು.
ಪ್ರೀತಿ, ವಿರಹ, ಸಂತೋಷ, ಶೋಕ, ವಾತ್ಸಲ್ಯ, ಮಾತ್ಸರ್ಯ….ಮನುಷ್ಯನ ಈ ಎಲ್ಲ ಬಗೆಯ ಮನಸ್ಥಿತಿಗಳೂ ಚಿತ್ರದ ಕತೆಯಲ್ಲಿ ಕಾಣಸಿಗುತ್ತವೆ. ಅಕ್ಕ, ಭಾವನ ಸಹಾಯದಿಂದ ಬೆಳೆದ ರವಿ ವೃತ್ತಿಯಲ್ಲಿ ಕಛೇರಿ ನೌಕರನಾದರೂ, ಪ್ರವೃತ್ತಿಯಲ್ಲಿ ಓರ್ವ ಗಾಯಕ! ರವಿಯ ಭಾವನ ಮೊದಲ ಪತ್ನಿಯ ಮಗಳು ‘ವತ್ಸಲ’…ತಾಯಿಯಲ್ಲದ ವತ್ಸಲ ಮಲತಾಯಿಯ ಶೋಷಣೆಗೆ ಬಲಿಪಶುವಾದವಳು!
ನಿತ್ಯವೂ ಕಣ್ಣೀರಲ್ಲೇ ಕೈತೊಳೆಯುವ ವತ್ಸಲಳ ಬದುಕಿಗೆ ರವಿಯ ಆಗಮನ ಹೊಸಬೆಳಕನ್ನು ಹೊತ್ತು ತರುತ್ತದೆಯೇ?
ಹಟಮಾರಿ ಅಕ್ಕ, ಅಸಹಾಯಕ ಭಾವ, ಇಬ್ಬರ ನಡುವೆ ತಾನು ಮೆಚ್ಚಿದ ಹುಡುಗಿ! ಅಕ್ಕನ ಮಗಳನ್ನು ಮದುವೆಯಾಗಬೇಕಿದ್ದ ರವಿ, ಆಕೆಯ ಸವತಿಯ ಮಗಳನ್ನು ಇಷ್ಟಪಟ್ಟಾಗ ಹೇಗೆ ಕುಟುಂಬದ ಮನವೊಲಿಸುತ್ತಾನೆ? ಇದುವೇ ಚಿತ್ರದ ಮುಂದಿನ ಕತೆ.
ಸ್ವಾರ್ಥಿಯಾದ ಮನುಷ್ಯನ ಮನಸ್ಸು ಆಯಾ ಕಾಲಕ್ಕೆ ತಕ್ಕಂತೆ ಹೇಗೆ ತನ್ನ ಬಣ್ಣವನ್ನು ಬದಲಿಸುತ್ತದೆ ಎಂದು ಈ ಚಿತ್ರದ ಕತೆ ಸೊಗಸಾಗಿ ತಿಳಿಸುತ್ತದೆ.ಇಲ್ಲಿ ಅಕ್ಕ ಮತ್ತು ತಮ್ಮನ ಪಾತ್ರಗಳನ್ನು ತದ್ವಿರುದ್ಧವಾಗಿ ಚಿತ್ರಿಸಲಾಗಿದೆ. ಅಕ್ಕನಿಗೆ ಸಂಬಂಧಗಳಿಗಿಂತಲೂ ಸ್ವಾರ್ಥವೇ ಮುಖ್ಯವಾದರೆ, ತಮ್ಮನಿಗೆ ಸ್ವಾರ್ಥಕ್ಕಿಂತ ಸಂಬಂಧಗಳೇ ಮುಖ್ಯವಾಗುತ್ತವೆ. ತನ್ನ ಮ್ಯಾನೇಜರ್ ಮಗಳನ್ನು ಮದುವೆಯಾಗಿ ದೊಡ್ಡ ಶ್ರೀಮಂತನಾಗುವ ಅವಕಾಶ ಬಂದರೂ ತನ್ನ ಪ್ರೀತಿಗಾಗಿ ಅದನ್ನು ತಮ್ಮ ತಿರಸ್ಕರಿಸುತ್ತಾನೆ.
ಬಂಗಾರದ ಕಿರೀಟದಂತೆ ತಮ್ಮನನ್ನು ತಲೆಯ ಮೇಲೆ ಹೊತ್ತು ಮೆರೆಸುತ್ತಿದ್ದ ಅಕ್ಕನಿಗೆ, ಕುರುಡ ಎಂದು ತಿಳಿಯುತ್ತಿದ್ದಂತೆ ಅದೇ ತಮ್ಮ ಬಂಗಾರದ ಸೂಜಿಯಂತೆ ಕಾಣುತ್ತಾನೆ. ವಾಸ್ತವದ ಬದುಕು ಸಹ ಇಷ್ಟೇ ಅಲ್ಲವೇ…?! ಆರೋಗ್ಯಯುತವಾಗಿದ್ದು ಹೇರಳವಾಗಿ ಹಾಲು ಕೊಡುವವರೆಗೆ ಮಾತ್ರವೇ ಹಸುವಿಗೆ ಬೆಲೆ..ಒಮ್ಮೆ ಅದು ಮುಪ್ಪಾದ ಮೇಲೆ ಹಸುವಿಗೆ ಒಂದು ಕಟ್ಟು ಹುಲ್ಲು ಹಾಕುವುದೂ ಸಹ ಅನಗತ್ಯ ಖರ್ಚು ಎಂದು ಪ್ರಪಂಚ ಯೋಚಿಸುತ್ತದೆ.
ಎಲ್ಲಿಯವರೆಗೂ ಇತರರಿಗೆ ಬೇಕಾಗುವಂತೆ ನಾವಿರುತ್ತೇವೋ ಅಲ್ಲಿಯವರೆಗೂ ಮಾತ್ರವೇ ನಮಗೆ ಬೆಲೆ. ಆದ್ದರಿಂದಲೇ ದಾಸರ ಪದವೊಂದು ಹೇಳುವುದು “ಯಾರಿಗೆ ಯಾರುಂಟು ಎರವಿನ ಸಂಸಾರನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ”