ನೆಚ್ಚಿನ ಮಿತ್ರರೇ ಕನ್ನಡ ಚಿತ್ರರಂಗದಲ್ಲಿ ದಂತಕಥೆಯಾಗಿ ಮೆರೆದ “ಹಾಸ್ಯ ದಿಗ್ಗಜ ಹಾಸ್ಯ ಚಕ್ರವರ್ತಿ” ನರಸಿಂಹರಾಜು ರವರ ಜನುಮ ದಿನ ಇಂದು ಅವರಿಗೆ ಮೊದಲು ಶುಭಾಶಯಗಳು ಹೇಳೋಣ.
ಹುಟ್ಟಿದ್ದು ತಿಪಟೂರಿನಲ್ಲಿ ತಂದೆ ರಾಮರಾಜು ಮತ್ತು ತಾಯಿ ವೆಂಕಟಲಕ್ಷ್ಮಮ್ಮ. ಚಿಕ್ಕಂದಿನಿಂದಲೇ ನಾಟಕದ ಆಸಕ್ತಿ ಬೆಳೆಯಿತು, ಪ್ರಹ್ಲಾದ, ಲೋಹಿತಾಶ್ವ, ಕ್ರಿಷ್ಣ, ಗೋರ, ಕುಂಬಾರ, ಹರಿಶ್ಚಂದ್ರ, ವಿಶ್ವಾಮಿತ್ರ, ರಾಮ, ರಾವಣ ಮತ್ತು ಭರತ ಮುಂತಾದ ಪಾತ್ರಗಳು ಮಾಡಿದ್ದಾರೆ.ಇವರ ಮೂಲ ಹೆಸರು ತಿಪಟೂರು ರಾಮರಾಜು ನರಸಿಂಹ ರಾಜು ಇವರನ್ನು ನಾವು “ಕನ್ನಡದ ಚಾರ್ಲಿ ಚಾಪ್ಲಿನ್” ಅಂತ ಕೂಡ ಕರೀಬೋದು “ನಗಬೇಕು ನಗಿಸಬೇಕು ಅದೇ ನನ್ನ ಧಮ೯, ನಗಲಾರೆ ಎಂದರೆ ಅದು ನಿಮ್ಮ ಕಮ೯” ಅನ್ನೋದೇ ಇವರ ಮೂಲಮಂತ್ರ .
ಇವರನ್ನು ನೋಡಿದರೆ ಹಾಸ್ಯದ ಪಾತ್ರಗಳಿಗೆ ಹೇಳಿ ಮಾಡಿಸಿದ ಕಲಾವಿದರು ಅನ್ನಿಸುತ್ತದೆ ತಮಗೆಷ್ಟೇ ನೋವಿದ್ದರೂ ಇನ್ನೊಬ್ಬರ ಮುಂದೆ ತೋರಿಸಿಕೊಳ್ಳದೇ ಅಷ್ಟೇ ಅಮೋಘವಾಗಿ ಪಾತ್ರ ನಿವ೯ಹಿಸುತ್ತಿದ್ದರು ಇದುವರೆಗೂ 250 ಚಿತ್ರಗಳಲ್ಲಿ ಹಾಸ್ಯದ ರಸದೌತಣ ಪ್ರೇಕ್ಷಕರಿಗೆ ನೀಡುತ್ತಿದ್ದರು ತೆರೆಯ ಮೇಲೆ ಇವರು ಒಮ್ಮೆ ಬಂದರೆ ಪ್ರೇಕ್ಷಕರಿಂದ ಶಿಲ್ಲೆ ಚಪ್ಪಾಳೆ ತಪ್ಪುತ್ತಿರಲಿಲ್ಲ ಯಾವುದೇ ಒಂದು ದೃಶ್ಯವನ್ನು ನಟಿಸಿ ಅಭಿಮಾನಿಗಳ ಮನವನ್ನು ಗೆಲ್ಲುತ್ತಿದ್ದರು .
ನಮ್ಮ ಅಣ್ಣಾವ್ರ ಜೊತೆ ಹಾಸ್ಯ ದಿಗ್ಗಜರುಗಳ ಜೋಡಿಯೇ ಬಾಲಕೃಷ್ಣರವರು ಜಿ ವಿ ಅಯ್ಯರ್ ಇನ್ನೂ ಮುಂತಾದವರು ಇವರೆಲ್ಲ ನಮ್ಮ ಕನ್ನಡ ಚಿತ್ರರಂಗದ ಆಧಾರ ಸ್ಥಂಭಗಳು.ಗುಬ್ಬಿ ವೀರಣ್ಣ ನಾಟಕ ಮಂಡಳಿಯಲ್ಲಿ ಅಣ್ಣಾವೃ, ನರಸಿಂಹ ರಾಜು, ಜಿ ವಿ ಅಯ್ಯರ್ ಎಲ್ಲರೂ ಸೇರಿ “ಬೇಡರ ಕಣ್ಣಪ್ಪ ” ನಾಟಕವಾಡುತ್ತಿದ್ದರು.
ಅಣ್ಣಾವ್ರ ಜೊತೆ ಬಹಳ ಚಿತ್ರ ನಟಿಸಿದ್ದಾರೆ ಕೆಲವು ಚಿತ್ರಗಳನ್ನು ಹೆಸರಿಸುವುದಾದರೆ
ಬೇಡರ ಕಣ್ಣಪ್ಪ ,ಶ್ರೀ ಕೃಷ್ಣದೇವರಾಯ,ರಣಧೀರ ಕಂಠೀರವ , ದೇವರ ಗೆದ್ದ ಮಾನವ, ಕಸ್ತೂರಿ ನಿವಾಸ , ಸೋದರಿ, ಹರಿ ಭಕ್ತ ,ಭಕ್ತ ಪ್ರಹ್ಲಾದ ,ಧಮ೯ ವಿಜಯ ,ದಶಾವತಾರ ,ಸ್ವಣ೯ಗೌರಿ, ಸತಿಶಕ್ತಿ,ಸಾಕುಮಗಳು ,ದೇವರ ಗೆದ್ದ ಮಾನವ ,ಭಕ್ತ ಕನಕದಾಸ, ಲಘ್ನ ಪತ್ರಿಕೆ ,ರೌಡಿ ರಂಗಣ್ಣ, ಕುಲಗೌರವ ,ಗಂಧದ ಗುಡಿ, ದೇವರು ಕೊಟ್ಟ ತಂಗಿ ,ವೀರಕೇಸರಿ, ರಾಜಶೇಖರ ,ಭೂಪತಿರಂಗ ,ಹಸಿರು ತೋರಣ , ಬಂಗಾರದ ಹೂವು, ಚಂದ್ರಹಾಸ, ಸಾಕ್ಷಾತ್ಕಾರ, ಅಮ್ಮ ಇನ್ನೂ ಮುಂತಾದವು.
ಎಷ್ಟು ಬಿಝಿಯಾದ ನಟರೆಂದರೆ ಚಿತ್ರರಂಗದಲ್ಲಿ ಚಿತ್ರಗಳು ಒಂದಕ್ಕಿಂತ ಒಂದು ಸಮಯವಿಲ್ಲದೆ ನಟಿಸುತ್ತಿದ್ದುದು, ಅಣ್ಣಾವೃ ಇವರ ಕಾಲ್ ಶೀಟ್ ಗಾಗಿ ಕಾಯುತ್ತಿದ್ದರು. ಇವರಿಗಾಗಿ ತಮ್ಮ ಚಿತ್ರ ದಿನಾಂಕ ಹೊಂದಿಸಿಕೊಳ್ಳುತ್ತಿದ್ದರು.
ಅಣ್ಣಾವೃ ಇವರು ಒಟ್ಟಿಗೆ ತೆರೆಯ ಮೇಲೆ ಬಂದ್ರೆ ಅಭಿಮಾನಿಗಳಿಗೆ ಹಬ್ಬ ಹಾಸ್ಯ ದೃಶ್ಯಗಳು, ಅಣ್ಣಾವ್ರ ಯಾವುದೇ ಚಿತ್ರಗಳಿಗೆ ಇವರು ಇರಬೇಕಿತ್ತು, ಕಾಮಿಕ್ ಟೈಮಿಂಗ್ ಪಫೆ೯ಕ್ಟ್. ಅಣ್ಣಾವ್ರ ಜೊತೆ ಅಲ್ಲದೆ ಇತರೆ ಚಿತ್ರಗಳಲ್ಲಿ ನಟಿಸಿದ್ದಾರೆ : ಶರಪಂಜರ, ಒಂದೇ ರೂಪ ಎರಡು ಗುಣ, ಲಕ್ಷ್ಮಿ ನಿವಾಸ, ಕಿಟ್ಟು ಪುಟ್ಟು, ಮಾತು ತಪ್ಪದ ಮಗ, ಪ್ರೀತಿ ಮಾಡು ತಮಾಷೆ ನೋಡು, ಕಿಲಾಡಿ ಕಿಟ್ಟು, ಅಸಾಧ್ಯ ಅಳಿಯ ..
ಕಲ್ಪನ ರವರಂತ ಅಪ್ರತಿಮ ಕಲಾವಿದೆಗೆ ಆರಂಭದಲ್ಲಿ ಆಶ್ರಯ ನೀಡಿ ಅವರು ಚಿತ್ರರಂಗದಲ್ಲಿ “ಮಿನುಗುತಾರೆ ” ಯಾಗುವಂತಾಯಿತು. ಹಾಗೆ ರಾಜ್ ಕುಮಾರ್, ಬಾಲಕೃಷ್ಣ, ಜಿ ವಿ ಅಯ್ಯರ್ ಜೊತೆ ಸೇರಿ ಕನ್ನಡ ಕಲಾವಿದರ ಸಂಘ ಸ್ಥಾಪಿಸಿ ಊರೂರುಗಳಲ್ಲಿ ನಾಟಕ ಆಡಿ ಬಂದ ಹಣದಿಂದ “ರಣಧೀರ ಕಂಠೀರವ ” ಚಿತ್ರ ನಿಮಿ೯ಸಿದರು, ಈ ನಾಲ್ವರ ಪ್ರಯತ್ನವೆ ಇಂದು ಕನ್ನಡ ಚಿತ್ರರಂಗ ಕನಾ೯ಟಕದಲ್ಲಿ ನೆಲೆ ನಿಲ್ಲಲು ಕಾರಣವೆಂದರೆ ತಪ್ಪಾಗಲಾರದು. ಬಾಲಣ್ಣ ಮತ್ತು ನರಸಿಂಹರಾಜು ರವರ ಕೆಮಿಸ್ಟ್ರಿ ಬಹಳ ಚೆನ್ನಾಗಿ ಆಗಿರೋದರಿಂದ ತೆರೆಯ ಮೇಲೆ ಇವರನ್ನು ಜನ ನೋಡಲು ಇಷ್ಟ ಪಡುತ್ತಿದ್ದರು.ನರಸಿಂಹರಾಜು ನಟಿಸಿದ ಚಿತ್ರಗಳಲ್ಲಿ ಅವರಿಗೆ ಹಾಡು ಕಡ್ಡಾಯವಾಗಿರುತ್ತಿತ್ತು ಕಾರಣ ನಾಯಕ ನಟರಿಗಿಂತ ಹಾಸ್ಯ ನಟರಿಗಿದ್ದ ಬೇಡಿಕೆ ಹೆಚ್ಚು ಇರುತ್ತಿದ್ದದ್ದು.ರತ್ನ ಮಂಜರಿ ಚಿತ್ರದ “ಯಾರು ಯಾರು ನೀ ಯಾರು ಎಲ್ಲಿಂದ ಬಂದೆ ಯಾವೂರು ” ಹಾಡು ಬಹಳ ಜನಪ್ರಿಯವಾಗಿದೆ.
“ಗಿಡ್ಡ ಆಕೃತಿ, ಪೀಚಲು ದೇಹ, ತುಟಿ ಮೀರಿ ಹೊರಬಂದ ಹಲ್ಲುಗಳು ಪಾತ್ರ ಪೋಷಣೆಯಲ್ಲಿನ ಚಾಕಚಕ್ಯತೆ ಮತ್ತು ಸಭ್ಯತೆ, ಹಾಸ್ಯವೆಂದರೆ ನರಸಿಂಹರಾಜು ರವರೆ ಎಂದು ಹೇಳೋದು ಅತಿಶಯೋಕ್ತಿಯಲ್ಲ”.ಬೇಡರ ಕಣ್ಣಪ್ಪ ಚಿತ್ರದಲ್ಲಿ ಕಾಶಿ, ಸತ್ಯ ಹರಿಶ್ಚಂದ್ರ ದಲ್ಲಿ ನಕ್ಷತ್ರಿಕ, ಕೃಷ್ಣದೇವರಾಯ ದಲ್ಲಿನ ತೆನಾಲಿ ರಾಮಕೃಷ್ಣ ಇನ್ನೂ ಹಲವಾರು ವೈವಿಧ್ಯಮಯ ಪಾತ್ರಗಳನ್ನು ನಟಿಸಿರೋದು ಗಮನಿಸಬಹುದು.ಬೇಡರ ಕಣ್ಣಪ್ಪ ಚಿತ್ರದಲ್ಲಿ ಕಾಶಿ ಪಾತ್ರ ಕನ್ನಡ ಚಿತ್ರರಂಗಕ್ಕೆ ಹಾಸ್ಯ ದಿಗ್ಗಜರನ್ನು ಪರಿಚಯಿಸಲು ಸಾಧ್ಯವಾಯಿತು, ಎಲ್ಲದಕ್ಕೂ ಕಾರಣ ಇವರ ಚಿಕ್ಕಪ್ಪ ಲಕ್ಷ್ಮಿಪತಿರಾಜು ರವರು ಇವರಿಗೆ ಎಲ್ಲಾ ರೀತಿಯ ಮಾಗ೯ದಶ೯ನ ನೀಡಿದವರು ಮತ್ತು ಹೆಚ್ ಎಲ್ ಎನ್ ಸಿಂಹ ರವರು ಬೇಡರ ಕಣ್ಣಪ್ಪ ಚಿತ್ರದ ಪಾತ್ರಗಳಿಗೆ ಈ ತ್ರಿಮೂರ್ತಿಗಳನ್ನು ಆಯ್ಕೆ ಮಾಡಿದ್ದು ಮುಂದೆ ಇತಿಹಾಸ ಬರೆಯಿತು.
ಸಹಕಲಾವಿದರಾದ ಮೈನಾವತಿ, ಜಯಮ್ಮ, ಆದವಾನಿ ಲಕ್ಷ್ಮಿದೇವಿ , ಪಾಪಮ್ಮ ರವರು ಕೂಡ ಇವರ ಜೊತೆ ಅಷ್ಟೇ ಖುಷಿಯಾಗಿ ನಟಿಸುತ್ತಿದ್ದರು.
ಕೆಲವರು ಹುಬ್ಬಲ್ಲು ಇದ್ದರೆ ಒಂದು ರೀತಿಯ ಅಸಮಾಧಾನ, ಜೀವನ ಕುಗ್ಗಿಹೋಗುತ್ತೆ ಅನ್ನೋ ಭ್ರಮೆಲಿರೋರ ಮಧ್ಯದಲ್ಲಿ ಇದನ್ನೇ ಬಂಡವಾಳವಾಗಿ ಮಾಡಿಕೊಂಡು ಸಾಧನೆ ಮಾಡಿದ ಉದಾಹರಣೆ ಇವರೇ…ಕೆವಲ ಹಾಸ್ಯ ನಟರಾಗಲ್ಲದೆ ನಾಯಕ ನಟರಾಗಿ ಅಭಿನಯಿಸಿದ ಚಿತ್ರಗಳು :ನಕ್ಕರೆ ಅದೇ ಸ್ವರ್ಗ, ಜಾತಕರತ್ನ ಗುಂಡಾ ಜೋಯಿಸ, ಪ್ರೊಫೆಸರ್ ಹುಚ್ಚುರಾಯ.
ಇವರು ಇಷ್ಟು ಲೀಲಾಜಾಲವಾಗಿ ನಟಿಸಲು ಕಾರಣ 27 ವಷ೯ ನಾಟಕ ಕಂಪನಿಗಳಲ್ಲಿ ಅಭಿನಯಿಸಿದ್ದು ” ಶ್ರೀ ಚಂದ್ರಮೌಳೇಶ್ವರ ನಾಟಕ ಸಭ, ಹಿರಣಯ್ಯ ಮಿತ್ರ ಮಂಡಳಿ , ಭರತ ಲಲಿತ ಕಲಾ ಸಂಘ, ಗುಂಡ ಜೋಯಿಸರ ಕಂಪನಿ, ಬೇಲೂರು ಮತ್ತು ಗುಬ್ಬಿ ಚನ್ನಬಸವೇಶ್ವರ ನಾಟಕ ಕಂಪನಿ, ಚಿತ್ರರಂಗದಲ್ಲಿ ನಟರಾಗಿ ಹೆಚ್ಚು ತೊಡಗಿಸಿಕೊಂಡರೂ ಕೂಡ ನಾಟಕ ಮಾಡುವುದನ್ನು ಬಿಡಲಿಲ್ಲ.
ಇವರ ಮಡದಿ ಶಾರದಮ್ಮ ಮಗ ನರಹರಿ ರಾಜು, ಸುಧಾ ನರಸಿಂಹರಾಜು ಹಾಗೂ ಧಮ೯ವತಿ ನರಸಿಂಹರಾಜು.ಇವರಲ್ಲಿ ಸುಧಾ ನರಸಿಂಹರಾಜು ರವರು ಹಿರಿತೆರೆಯಲ್ಲಿ ಅರುಣರಾಗ, ಶಾಂತಿ ನಿವಾಸ, ಸಂಯುಕ್ತ, ಹೃದಯ ಬಂಧನ, ಬಹದ್ದೂರ್ ಹೆಣ್ಣು, ನ್ಯಾಯಕ್ಕಾಗಿ ಸವಾಲ್, ರಾಜಕೀಯ, ಕಲ್ಯಾಣೋತ್ಸವ ಚಿತ್ರಗಳಲ್ಲಿ ನಟಿಸಿದ್ದಾರೆ , ಕಿರುತೆರೆಯ “ಗಟ್ಟಿ ಮೇಳ ” ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ, ಇವರ ಕುಟುಂಬ ಕೂಡ ಕಲಾಸೇವೆಯಲ್ಲಿ ತೊಡಗಿದ್ದಾರೆ,ನರಸಿಂಹರಾಜು ಮತ್ತು ಅಣ್ಣಾವ್ರ ಗೆಳೆತನ ತುಂಬಾ ಚೆನ್ನಾಗಿರುತ್ತಿತ್ತು, ಯಾವುದೇ ವಿಷಯವಾದರೂ ಚಚಿ೯ಸುತ್ತಿದ್ದರು, ಕುಟುಂಬದಲ್ಲಿ ಒಬ್ಬರಾಗಿರುತ್ತಿದ್ದರು, ತನ್ನ ಮಗ ಅಪಘಾತದಲ್ಲಿ ತೀರಿಕೊಂಡಾಗ ಆ ನೋವನ್ನು ಅಣ್ಣಾವ್ರ ಹತ್ತಿರ ಹೇಳಿಕೊಂಡು ಗಳಗಳನೆ ಅತ್ತ ಸಂದಭ೯ ಅಣ್ಣಾವೃ ಅವರನ್ನು ತಬ್ಬಿಕೊಂಡು ಸಮಾಧಾನ ಮಾಡುತ್ತಿದ್ದರು.
ಮಗನ ಸಾವಿನ ಕೊರಗಿನಲ್ಲಿ ಕಾಲ ಕಳೆಯುತ್ತಿರುವಾಗ ಇದ್ದಕ್ಕಿದ್ದ ಹಾಗೆ ಹೃದಯಾಘಾತದಿಂದ ಅಸುನೀಗಿದರು. ಇವರ ಜ್ನಾಪಕಾಥ೯ವಾಗಿ “ನರಸಿಂಹರಾಜು ಪ್ರಶಸ್ತಿ ” ನೀಡುವುದು ಪ್ರಾರಂಭವಾಯಿತು.
ಒಂದು ಶೋಚನೀಯ ಸಂಗತಿ ಎಂದರೆ ಇಂಥ ಅಧ್ಭುತ ಕಲಾವಿದರನ್ನು ಗೌರವಿಸುವ ಯೋಚನೆ ಕನಾ೯ಟಕ ಮತ್ತು ಕೇಂದ್ರ ಸಕಾ೯ರ ಪ್ರಯತ್ನ ಮಾಡದಿರುವುದು.ಕಲೆಗೆ ಎಂದೂ ಸಾವಿಲ್ಲ ಪಾತ್ರಗಳು ಎಂದಿಗೂ ಜೀವಂತ, ಎಷ್ಟೇ ವರುಷಗಳು ಕಳೆದರೂ ಇಂಥ ಹಾಸ್ಯ ರತ್ನ ಅಭಿಮಾನಿಗಳ ಮನಸ್ಸಿನಲ್ಲಿ ಉಳಿಯುತ್ತಾರೆ.