27/09/2023

CHITRODYAMA.COM

SUPER MARKET OF CINEMA NEWS

ಕನ್ನಡ ಚಿತ್ರರಂಗದ ಮೂಕಿ ಚಿತ್ರಗಳ ಸ್ಟಾರ್ ನಾಯಕಿ ಲಕ್ಷ್ಮಿ ಬಾಯಿ

R Nagesh

R Nagesh

ರಾಜಾ ಹೃದಯ ಎಂಬ ಕನ್ನಡ ಮೂಕಿ ಚಿತ್ರದ ಮೂಲಕ ತಮ್ಮ ಚಿತ್ರ ರಂಗದ ಜೀವನವನ್ನು ಆರಂಭಿಸಿದ ಇವರು ತಮ್ಮ ಮೊದಲ ಚಿತ್ರದಲ್ಲಿ ಉತ್ತಮ ಅಭಿನಯದಿಂದ ಗೆಲುವು ಕಾಣುವುದರೊಂದಿಗೆ ಭರವಸೆಯ ಹೊಸ ಯುವ ನಾಯಕಿ ಎಂಬ ಹಿರಿಮೆಗೆ ಪಾತ್ರವಾಗಿದ್ದರು. ನಂತರ ತೆರೆ ಕಂಡ ಚಾಯ್ಸ್ ಆಫ್ ಬರ್ಡ್, ದೇವೀ ಖಡ್ಗ,ರಾಧೇ ಶ್ಯಾಮ್,ರಾಜ್ ಪ್ರಪಂಚ್, ಧೂಮಕೇತು,ಕಿಶೋರಿ ಮತ್ತು ರಣವೀರ್ ಸೇರಿ ಸುಮಾರು ಹದಿನೆಂಟು ಚಿತ್ರಗಳಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸುವುದರ ಮೂಲಕ ಮೂಕಿ ಚಿತ್ರಗಳ ಸ್ಟಾರ್ ನಾಯಕಿಯಾಗಿ ಪ್ರಸಿದ್ಧಿ ಪಡೆದಿದ್ದರು.

ನಾಯಕಿ ಪಾತ್ರಗಳಿಂದ ಪ್ರಸಿದ್ಧರಾಗಿದ್ದರೂ ಇವರಿಗೆ ಮೊದಲಿನಿಂದಲೂ ನಾಟಕಗಳೆಂದರೆ ಬಹಳ ಇಷ್ಟ. ಹೀಗಾಗಿ ಇವರಿಗೆ ಪ್ರತಿ ನಾಟಕದಲ್ಲಿಯು ಒಂದು ಪಾತ್ರವಿರುತ್ತಿತ್ತು. ಆ ಸಮಯದಲ್ಲಿ ಇವರು ಗುಬ್ಬಿ ಕಂಪನಿಯ ನಾಟಕಗಳಲ್ಲಿ ಪಾತ್ರವನ್ನು ನಿರ್ವಹಿಸುತ್ತಿದ್ದರು. ಒಂದು ದಿನ ಇವರ ನಾಟಕವನ್ನು ಶಿವಾನಂದ ಥಿಯೇಟರ್ ನಲ್ಲಿ ಆಯೋಜಿಸಲಾಗಿತ್ತು. ಈ ನಾಟಕವನ್ನು ವೀಕ್ಷಿಸಲು ಅಂದಿನ ಸುಪ್ರಸಿದ್ಧ ರಂಗಭೂಮಿ ತಜ್ಞ ಕಲಾವಿದ ಸುಬ್ಬಯ್ಯ ನಾಯ್ಡು ಆಗಮಿಸಿದ್ದರು.

ನಾಟಕದಲ್ಲಿ ಇವರ ಅಭಿನಯವನ್ನು ಮೆಚ್ಚಿದ ಸುಬ್ಬಯ್ಯ ನಾಯ್ಡು ಆ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ತಯಾರಾಗುತ್ತಿದ್ದ ಕನ್ನಡದ ಮೊದಲ ವಾಕ್ಚಿತ್ರ ಸತಿ ಸುಲೋಚನಾ ಚಿತ್ರದಲ್ಲಿ ಪಾತ್ರವನ್ನು ಕೊಡಲು ನಿರ್ಧರಿಸಿದ್ದರು. ಆದರೆ ಇವರು ಈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸುವ ಅಭಿಲಾಷೆಯನ್ನು ಹೊಂದಿದ್ದರು. ಆದರೆ ಕಾರಣಾಂತರಗಳಿಂದ ಈ ಚಿತ್ರದ ನಾಯಕಿ ಪಾತ್ರ ಸಿಗಲಿಲ್ಲವಾದ್ದರಿಂದ ಇವರು ತುಂಬಾ ನಿರಾಶಗೊಂಡಿದ್ದರು.

ಆದರೆ ಇವರ ನಿರಾಶೆಯನ್ನು ಶಮನಗೊಳಿಸಿದ ಸುಬ್ಬಯ್ಯ ನಾಯ್ಡು ಅದೇ ಚಿತ್ರದಲ್ಲಿ ಮಂಡೋದರಿ ಎಂಬ ಪ್ರಮುಖ ಪಾತ್ರವನ್ನು ನಿರ್ವಹಿಸಲು ಒಪ್ಪಿಸಿದ್ದರು. ಈ ಮುಂದುವರೆದ  ಒಡನಾಟವೇ ಇವರ ದಾಂಪತ್ಯಕ್ಕೆ ಕಾರಣವಾಯಿತು. ನಂತರ ಇವರ ಪತಿ ಸುಬ್ಬಯ್ಯ ನಾಯ್ಡು ಶ್ರೀ ಸಾಹಿತ್ಯ ಸಾಮ್ರಾಜ್ಯ ಎಂಬ ನಾಟಕ ಮಂಡಳಿಯನ್ನು ಕಟ್ಟಿದಾಗ ಇವರೇ ಪತಿಗೆ ಬೆನ್ನೆಲುಬಾಗಿ ನಿಂತು ನಾಟಕ ಮಂಡಳಿಯ ಅಭಿವೃದ್ಧಿಗೆ  ಅವಿರತವಾಗಿ ಶ್ರಮಿಸಿದ್ದರು.

೧೯೪೧ ರಲ್ಲಿ ನಾಗೇಂದ್ರ ರಾಯರು ವಸಂತ ಸೇನಾ ಎಂಬ ಚಿತ್ರವನ್ನು ನಿರ್ಮಿಸಿದ್ದರು. ಈ ಚಿತ್ರದಲ್ಲಿನ ವಸಂತ ಸೇನಾ ಪಾತ್ರದ ನಿರ್ವಹಣೆ ಎಲ್ಲ ಚಿತ್ರ ಪ್ರೇಮಿಗಳ ಮನಸ್ಸನ್ನು ಸೆಳೆದಿತ್ತು. ಆದರೆ ವಾಕ್ಚಿತ್ರ ಯುಗ ಆರಂಭವಾದಿಗಿನಿಂದ ಆಗುತ್ತಿದ್ದ ಬದಲಾವಣೆ ಇವರಿಗೆ ಇಷ್ಟವಾಗದಿದ್ದರಿಂದ ಪುನಃ ಚಿತ್ರಗಳಲ್ಲಿ ಅಷ್ಟಾಗಿ ನಟಿಸಲಿಲ್ಲ. ಬದಲಾಗಿ ರಂಗಭೂಮಿಯಲ್ಲಿ ಹೆಚ್ಚು ತಮ್ಮನ್ನು  ತೊಡಗಿಸಿಕೊಂಡಿದ್ದರು.

೧೯೫೮ ರಲ್ಲಿ ಇವರ ಪತಿ ಸುಬ್ಬಯ್ಯ ನಾಯ್ಡು ಭಕ್ತಿ ಪ್ರಹ್ಲಾದ ಚಿತ್ರವನ್ನು ನಿರ್ಮಿಸಿದ್ದರು. ಈ ಚಿತ್ರದಲ್ಲಿ ಕಾಯಾಮ ಎಂಬ ಪಾತ್ರವನ್ನು ಇವರೇ ಮಾಡಿದ್ದರು. ರಂಗಭೂಮಿಯಲ್ಲಿ ವೈಭವದ ಯುಗವನ್ನು ಸೃಷ್ಟಿಸಿದ್ದ ಇವರು ತಮ್ಮ ಪತಿ ಸುಬ್ಬಯ್ಯ ನಾಯ್ಡು ಮರಣದ ನಂತರ ಪುನಃ ಬಣ್ಣದ ಬದುಕಿಗೆ ಮರಳಲಿಲ್ಲ.

ತಮ್ಮ ಉಳಿದ ಬದುಕನ್ನು ತೆರೆ ಮರೆಯಲ್ಲಿ ಕಳೆದ ಇವರು ಅಕ್ಟೋಬರ್ ೧೮,೧೯೮೧ ರಂದು ತಮ್ಮ ೬೭ ನೇ ವಯಸ್ಸಿನಲ್ಲಿ ನಿಧನರಾದರು.

 ತಮ್ಮ ಚಿತ್ರ ರಂಗದ ಜೀವನದಲ್ಲಿ ಶ್ರೇಷ್ಠ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಲ್ಲದೆ ಸುಮಧುರ ಕಂಠದ ಗಾಯಕಿಯು ಆಗಿದ್ದ ಇವರು ಪ್ರತಿಯೊಬ್ಬ ಕನ್ನಡಿಗನು ನೆನಪಿನಲ್ಲಿಟ್ಟುಕೊಳ್ಳಬೇಕಾದ ನಟಿ ಎಂದರೆ ತಪ್ಪಾಗಲಾರದು. ಮತ್ತು ಈ ನಟಿಗೆ ಸಮಸ್ತ ಕನ್ನಡಿಗರ ಪರವಾಗಿ ನನ್ನ ನಮನವನ್ನು ಸಲ್ಲಿಸುತ್ತ ಈ ಲೇಖನದ ರಚನೆಯನ್ನು  ಮುಗಿಸುತ್ತೇನೆ.   

Leave a Reply

Copyright © All rights reserved. | Newsphere by AF themes.