“100 days” (ಹಿಂದಿ)

100 Days

1991 ರ ಹಿಂದಿಯ ಸೈಕಲಾಜಿಕಲ್ ಥ್ರಿಲ್ಲರ್ ಇದು. ಆ ಕಾಲದ ಬ್ಲಾಕ್ ಬಸ್ಟರ್ ಚಲನಚಿತ್ರವಾಗಿತ್ತು ಇದು. ಇಂದಿಗೂ ಅಷ್ಟೇ ಕ್ರೇಜ್ ಉಳಿಸಿಕೊಂಡು ಬಂದಿದೆ ಎಂದರೆ ಅದಕ್ಕೆ ಕಾರಣ ಚಿತ್ರದ ನಿರೂಪಣೆ. ಗುಟ್ಟುಗಳನ್ನು ಮುಚ್ಚಿಟ್ಟು, ಒಂದೊಂದೇ ಸಿಗುವಂತೆ ಮಾಡಿ, ರಹಸ್ಯ ಕಂಡುಹಿಡಿಯುವ ನಿರೂಪಣೆಗೆ ಯಾರೇ ಆಗಲಿ ಫಿದಾ ಆಗಲೇಬೇಕು.

ದೇವಿ ಅಂದರೆ ಮಾಧುರಿ ದೀಕ್ಷಿತಳಿಗೆ ಮುಂದಾಗುವುದನ್ನು ನೋಡುವ ಶಕ್ತಿ ಇರುತ್ತದೆ. ಅವಳಿಗೆ ತನ್ನ ಸಹೋದರಿ ರಮಾ ಕೊಲೆಯಾಗುತ್ತಿರುವ ದೃಶ್ಯ ಕಾಣಿಸಿರುತ್ತದೆ.‌ ಆದರೆ ಉಳಿದ ಎಲ್ಲರೂ ರಮಾ ಕಾಣುತ್ತಿಲ್ಲ ಎಂದಷ್ಟೇ ಭಾವಿಸಿರುತ್ತಾರೆ ಹೊರತೂ ದೇವಿಯ ಮಾತನ್ನು ನಂಬಿರುವುದಿಲ್ಲ. ಇಂದಲ್ಲ ನಾಳೆ ರಮಾ ಸಿಗುತ್ತಾಳೆ ಅಂತಲೇ ಅಂದುಕೊಂಡಿರುತ್ತಾರೆ. ಆದರೆ ದೇವಿಗೆ ಮಾತ್ರವೇ ಆಕೆ ಕೊಲೆಯಾಗಿರುವ ವಿಷಯ ಗೊತ್ತಿರುತ್ತದೆ.

ಕೊಲೆಗಾರ ರಮಾಳನ್ನು ಕೊಂದು ಒಂದು ದೊಡ್ಡ ಬಂಗಲೆಯ ಒಂದು ಮೂಲೆಯಲ್ಲಿ ಹೆಣವನ್ನಿಟ್ಟು, ಅದು ಕಾಣದಂತೆ ಗೋಡೆ ಕಟ್ಟಿಬಿಟ್ಟಿರುತ್ತಾನೆ. ಹಾಗಾಗಿ ಕೊಲೆಯಾದ ರಮಾಳ ಶವ ಸಿಗದ ಕಾರಣ ಆಕೆ ಬದುಕಿದ್ದಾಳೆ ಎಂದೇ ಎಲ್ಲರೂ ತಿಳಿದಿರುತ್ತಾರೆ. ಆದರೆ ದೇವಿಗೆ ಪ್ರತೀ ರಾತ್ರಿಯೂ ಕನಸಿನಲ್ಲಿ ಆ ಕೊಲೆಯಾದ ದೃಶ್ಯವೇ ಮೂಡಿಬರುತ್ತಿರುತ್ತದೆ.

100 Days

ಕಾಲ ಒಂದೇ ರೀತಿ ಇರುವುದಿಲ್ಲ.

ದೇವಿಗೆ ಮದುವೆಯಾಗುತ್ತದೆ.‌ ಆಕೆ ಗಂಡನೊಡನೆ ಹೊಸ ಬಂಗಲೆಗೆ ಶಿಫ್ಟ್ ಆಗುತ್ತಾಳೆ. ಆ ಬಂಗಲೆ ಯಾವುದೆಂದರೆ ಆಕೆಯ ಅಕ್ಕ ಕೊಲೆಯಾದ ಬಂಗಲೆಯೇ ಆಗಿರುತ್ತದೆ. ಅಲ್ಲಿಗೆ ಬಂದ ಮೇಲೆ ಆಕೆಗೆ ಬೀಳುವ ಕನಸುಗಳ ತೀವ್ರತೆ ಹೆಚ್ಚುತ್ತದೆ. ಆ ಕನಸುಗಳಲ್ಲಿ ಕಾಣುವ ಸುಳಿವುಗಳ ಆಧಾರದ ಮೇಲೆ ದೇವಿ ಆ ಗೋಡೆಯನ್ನು ಒಡೆದು ಒಳಗಿರುವ ಅಸ್ಥಿಪಂಜರ ಹೊರ ತೆಗೆಯುತ್ತಾಳೆ. ಆದರೆ ಅದು ಯಾರದ್ದು ಅಂತ ಹೇಗೆ ಪ್ರೂವ್ ಮಾಡುವುದು?

ಅಸ್ಥಿಪಂಜರದ ಕೊರಳಲ್ಲಿ ಒಂದು ಸರ ಇರುತ್ತದೆ. ಅದೇ ರೀತಿಯ ಸರ ದೇವಿಯ ಬಳಿಯೂ ಇರುತ್ತದೆ. ಹಾಗಾಗಿ ಅದು ತನ್ನಕ್ಕ ರಮಾ ಅಂತ ದೇವಿಗೆ ಗೊತ್ತಾಗುತ್ತದೆ. ಆದರೆ ಪೊಲೀಸರು ಕೇವಲ ಸರದ ಕಾರಣದಿಂದ ಅದು ರಮಾ ಎಂದು ಒಪ್ಪುವುದಿಲ್ಲ.

ಈ ಮಧ್ಯೆ ದೇವಿಗೆ ಮತ್ತೊಂದು ಹೆಂಗಸಿನ ಕೊಲೆಯಾಗುವುದು ಕನಸಿನಲ್ಲಿ ಕಾಣುತ್ತದೆ.‌ ಅದರ ಜೊತೆಗೆ “100 days” ಎಂಬ ಕ್ಯಾಸೆಟ್ ಮತ್ತು ಕುದುರೆಯ ಮುಖಪುಟ ಇರುವ ಪ್ರಿಯಾ ಎಂಬ ಮ್ಯಾಗಜೀನ್ ಸಹ ಕಾಣುತ್ತದೆ‌.

ಈ ವಿಷಯವನ್ನು ದೇವಿಯು ತನ್ನ ಗೆಳೆಯನಾದ ಸುನಿಲನಿಗೆ ಹೇಳುತ್ತಾನೆ. ಅವರಿಬ್ಬರೂ ಪ್ರಿಯಾ ಮ್ಯಾಗಜೀನ್ ಆಫೀಸ್ ಸಂಪರ್ಕಿಸಿದಾಗ ಇದುವರೆಗೂ ಯಾವುದೇ ಕುದುರೆ ಮುಖಪುಟದ ಸಂಚಿಕೆ ಅಚ್ಚಾಗಿಲ್ಲವೆಂದೂ ಮತ್ತು “100 days” ಎಂಬ ಸಿನೆಮಾ ಇದುವರೆಗೂ ರಿಲೀಸ್ ಸಹ ಆಗಿಲ್ಲವೆಂದೂ ತಿಳಿಯುತ್ತದೆ.

ಹಾಗಾದರೆ ದೇವಿಯ ಕನಸಿನಲ್ಲಿ ಕಂಡದ್ದೇನು? ಅಕ್ಕನ ಕೊಲೆಯನ್ನು ತಡೆಯುವಲ್ಲಿ ವಿಫಲಳಾದ ದೇವಿ ಈಗ ಮತ್ತೊಂದು ಕೊಲೆ ತಡೆಯುತ್ತಾಳಾ? “100 days” ಕ್ಯಾಸೆಟ್ಟಿನಲ್ಲಿ ಇರುವುದಾದರೂ ಏನು?

ರೋಚಕ ತಿರುವು ಮತ್ತು ಮಾಧುರಿಯ ಚೆಲುವಿನಿಂದ ಸಿನೆಮಾ ಬಹಳ ಇಷ್ಟವಾಗುತ್ತದೆ. ಅದ್ಭುತವಾದ ಒಂದು ಹಾಡು ಸಹ ಇದೆ. ಸಿನೆಮಾ ಯೂ ಟ್ಯೂಬಿನಲ್ಲಿದೆ. ಸಿನೆಮಾ ಪ್ರೇಮಿಗಳು ಮರೆಯದೇ ನೋಡಿ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply