ಸಿನೆಮಾ ಎಂದರೆ ಹೇಗಿರಬೇಕು?
ಕೈಯಲ್ಲಿ ಪಾಪ್ ಕಾರ್ನ್ ಹಿಡಿದು ಕೂತರೆ ತಿನ್ನುತ್ತಿರುವುದೂ ನಮ್ಮರಿವಿಗೆ ಬರಬಾರದು ಹಾಗಿರಬೇಕು. ಉಸಿರಾಡುತ್ತಿದ್ದೇವೆಯೋ ಇಲ್ಲವೋ ಎನಿಸುವಷ್ಟು ಸಿನೆಮಾದೊಳಗೆ ತಲ್ಲೀನರಾಗಬೇಕು. ಅಂತಹಾ ಒಂದು ಸಿನೆಮಾ ನೋಡಬೇಕೆನ್ನುವುದು ನಮ್ಮೆಲ್ಲರ ಆಸೆಯಾಗಿರುತ್ತದೆ.
13B ನೋಡುತ್ತಿದ್ದರೆ ನನಗೆ ಇದೇ ಅನುಭವವಾಯ್ತು.
ಹೊಸದಾಗಿ 13B ಫ್ಲಾಟಿಗೆ ಒಂದು ಕುಟುಂಬ ಬರುತ್ತದೆ. ಅಂದೇ ಒಂದು ಹೊಸಾ ಸೀರಿಯಲ್ ಸಹ ಶುರುವಾಗುತ್ತದೆ. ಆ ಸೀರಿಯಲ್ ಕಥೆ ಇವರ ಮನೆ ಕಥೆಯ ರೀತಿಯೇ ಇರುತ್ತದೆ. ಆದರೆ ಮೊದಲಿಗೆ ಯಾರೂ ಅದನ್ನು ಗಮನಿಸುವುದಿಲ್ಲ. ಆದರೆ ಸ್ವಲ್ಪ ಸಮಯದಲ್ಲಿಯೇ ನಾಯಕನಿಗೆ ಈ ವಿಷಯ ಗೊತ್ತಾಗುತ್ತದೆ. ಮನೆಯಲ್ಲಿ ನಡೆಯುವ ಘಟನೆ ಆ ದಿನದ ಎಪಿಸೋಡಿನಲ್ಲಿ ಮೊದಲೇ ಗೊತ್ತಾಗಲು ತೊಡಗುತ್ತದೆ. ಇದನ್ನರ್ಥ ಮಾಡಿಕೊಂಡ ನಾಯಕ ತಾನೂ ಸೀರಿಯಲ್ ನೋಡಲು ತೊಡಗುತ್ತಾನೆ.
ಅಂದಂದಿನ ಎಪಿಸೋಡ್ ಗಮನಿಸಿ ಅದರಂತೆ ತನ್ನ ಮನೆಯವರನ್ನು ಮುಂದಾಗಬಹುದಾದ ಪ್ರಮಾದಗಳಿಂದ ಕಾಪಾಡುತ್ತಿರುತ್ತಾನೆ. ತಾನು ಮನೆಗೆ ಬರದೇ ಇದ್ದಂತಹ ದಿನಗಳಲ್ಲಿ ಅಮ್ಮನಿಗೋ ಹೆಂಡತಿಗೋ ಫೋನ್ ಮಾಡಿ ಇವತ್ತು ಸೀರಿಯಲ್ಲಿನಲ್ಲಿ ಏನಾಯ್ತು ಅಂತ ವಿಚಾರಿಸುತ್ತಿರುತ್ತಾನೆ. ಇದನ್ನು ನೋಡಿ ಅವರು ಇವನೂ ಸೀರಿಯಲ್ಲಿಗೆ ಅಡಿಕ್ಟ್ ಆದ ಅಂತ ಅವನನ್ನು ಆಡಿಕೊಳ್ಳುತ್ತಾರೆ.
ಅತ್ಯಂತ ವೇಗದ ನಿರೂಪಣೆ, ನಮ್ಮ ಊಹೆಗೂ ಮೀರಿದ ಕಥಾವಸ್ತುಗಳಿಂದ ಸಿನೆಮಾ ಮುಂದೋಡುವುದೇ ಗೊತ್ತಾಗುವುದಿಲ್ಲ. ಹಾಗೆಯೇ ಆ 13B ಫ್ಲಾಟ್ ಇರುವ ಜಾಗದಲ್ಲಿ ಮೊದಲೊಂದು ಮನೆಯಿತ್ತು, ಆ ಮನೆಯ ಎಲ್ಲರನ್ನೂ ಒಬ್ಬ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದ ಎಂಬ ಸುದ್ದಿ ನಾಯಕನಿಗೆ ತಿಳಿದಾಗ ಆಘಾತವಾಗುತ್ತದೆ. ಅಲ್ಲದೇ ಅಂದಿನ ಎಪಿಸೋಡಿನಲ್ಲಿ ಅದೇ ದೃಶ್ಯ ಇರುವುದಾಗಿ ಹೆಂಡತಿ ಹೇಳಿದಾಗ ಮತ್ತಷ್ಟು ಭಯಭೀತನಾಗುತ್ತಾನೆ.
ಮನೆಯವರಿಗೆ ಯಾರಿಗೂ ತಿಳಿಸದೇ ತಾನೊಬ್ಬನೇ ಆ ಗುಟ್ಟನ್ನು ಅಡಗಿಸಿಕೊಂಡ ನಾಯಕ ಕಡೆಗೂ ಮನೆಯವರನ್ನು ಆ ಭಯಾನಕ ಸನ್ನಿವೇಶದಿಂದ ಕಾಪಾಡುತ್ತಾನಾ? ಹಿಂದೆ ಆ ಕೊಲೆ ಯಾಕಾಗಿ ನಡೆದಿತ್ತು? ಆ ಕೊಲೆಗಳನ್ನು ಮಾಡಿದ್ದವರು ಯಾರು? ಆ ಕೊಲೆಗಳಿಗೂ ಇಂದಿನ ಸನ್ನಿವೇಶಕ್ಕೂ ಇರುವ ಸಂಬಂಧವೇನು?
ತಿಳಿಯಲು ಸಿನೆಮಾ ವೀಕ್ಷಿಸಿ.
ಅತ್ಯುತ್ತಮವಾಗಿ ಮೂಡಿ ಬಂದಿರುವ ಸಿನೆಮಾ ಇದು. ಈ ವಿಷಯದಲ್ಲಿ ನಿರ್ದೇಶಕರು ಅಭಿನಂದನಾರ್ಹರು. ಯಾವುದೇ ಜನರೇಷನ್ನಿನವರೂ ತಲೆ ಕೆಡಿಸಿಕೊಳ್ಳದೇ ಸಮಾಧಾನವಾಗಿ ಸಿನೆಮಾ ನೋಡಬಹುದು. ಸಿನೆಮಾದಲ್ಲಿ ಯಾವುದೋ ಲಾಜಿಕ್ ಇಟ್ಟು ನಮ್ಮ ಮೆದುಳಿಗೆ ಕೈ ಹಾಕುವುದಿಲ್ಲ. ನಡೆಯುವ ಘಟನೆಗಳು ತಾವಾಗಿಯೇ ಘಟಿಸುತ್ತವೆ. ಸುಮ್ಮನೆ ಕುಳಿತು ನೋಡುವುದಷ್ಟೇ ನಮ್ಮ ಕೆಲಸ. ದೆವ್ವದ ಸಿನೆಮಾ ಅಂತ ಭಯವೇನೂ ಆಗೋಲ್ಲ. ಏಕೆಂದರೆ ದೆವ್ವಗಳು ಬೆಚ್ಚಿ ಬೀಳಿಸೋಲ್ಲ. ಬದಲಿಗೆ ಸನ್ನಿವೇಶಗಳು ಗಾಬರಿ ಪಡಿಸುತ್ತಿರುತ್ತವೆ ಅಷ್ಟೇ. ಆದರೆ ಹೇಳಬೇಕಾದ್ದನ್ನು ಸಿನೆಮಾ ಸ್ಪಷ್ಟವಾಗಿ ಹೇಳುತ್ತದೆ.
**********
ಕೆ ಎ ಸೌಮ್ಯ
ಮೈಸೂರು