ಅವನು ಜಾರ್ಜ್ ಕುಟ್ಟಿ….
ಅಲ್ಲಲ್ಲ ಅದಕ್ಕಿಂತ ಮುಂಚೆ ಅವನೊಬ್ಬ ಅಪ್ಪ. ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಡುವ ಧೀರ. ಏನೇ ಸಂಕಟ ಎದುರಾದರೂ ಧೈರ್ಯಗೆಡದೇ ಆತ ನಿಂತು ಮಾಡುವ ಹೋರಾಟ ಎಲ್ಲರಿಗೂ ಸ್ಫೂರ್ತಿ ತುಂಬುವಂಥಹದ್ದು. ಏಕೆಂದರೆ…. ನಮಗೆಲ್ಲರಿಗೂ ಸಹ ನಮ್ಮ ಕುಟುಂಬವೇ ಮುಖ್ಯವಲ್ಲವೇ?
ದೃಶ್ಯಂ-1 ಸಿನೆಮಾ ಎಲ್ಲರಿಗೂ ಗೊತ್ತು. ಇದರ ಬಗ್ಗೆ ಗೊತ್ತಿಲ್ಲದೇ ಇರುವವರೇ ಇಲ್ಲ ಎನ್ನುವಷ್ಟು ಫೇಮಸ್ ಆದ ಕಥೆ ಇದು. ಈ ಸಿನೆಮಾ ಅಂದರೆ ದೃಶ್ಯಂ-2 ಅದರ ಮುಂದುವರೆದ ಭಾಗ. ಆದರೆ ಇದರಲ್ಲಿ ಆಫ್ಟರ್ ಎಫೆಕ್ಟ್ಸ್ ತೋರಿಸಿದ್ದಾರೆ.
ಆತುರದಲ್ಲಿ ಕ್ರೈಮ್ ಮಾಡುವುದು, ನಂತರ ಚತುರತೆಯಿಂದ ತಪ್ಪಿಸಿಕೊಳ್ಳುವುದು ಸುಲಭ. ಆದರೆ ನಂತರ ವರ್ಷಾನುಗಟ್ಟಲೆ ಆ ನೆನಪು ಮತ್ತು ಅದರ ಹ್ಯಾಂಗೋವರ್ ನಿಂದ ಹೊರ ಬರುವುದು ಬಹಳವೇ ಕಷ್ಟ. ಜಾರ್ಜ್ ಕುಟ್ಟಿಯು ತನ್ನ ಸಮಯಸ್ಫೂರ್ತಿಯಿಂದ ಕೊಲೆಯ ಆಪಾದನೆಯಿಂದ ತನ್ನ ಕುಟುಂಬದವರನ್ನು ಕಾಪಾಡಿಕೊಳ್ಳುತ್ತಾನೆ. ಆದರೆ ನಂತರ ಕುಟುಂಬದ ಸದಸ್ಯರು ಅಂದಿನ ನೆನಪಿನಿಂದ ಹೊರಬರಲಾಗದೇ ಒಳಗೊಳಗೇ ನರಳುತ್ತಿರುತ್ತಾರೆ. ಅವನ ಮೊದಲ ಮಗಳಂತೂ ಮನಸ್ಸಿಗೆ ಸಂಪೂರ್ಣ ಹಚ್ಚಿಕೊಂಡು ಕೊರಗುತ್ತಿರುತ್ತಾಳೆ.
ಹೇಗಾದರೂ ಮಾಡಿ ಜಾರ್ಜ್ ಕುಟ್ಟಿಯು ತನ್ನ ಮಗಳನ್ನು ಆ ನೆನಪುಗಳಿಂದ ಮುಕ್ತಗೊಳಿಸಬೇಕೆಂದು ಕಷ್ಟ ಪಡುತ್ತಿರುವಾಗ, ಅಕಸ್ಮಾತ್ತಾಗಿ ಆತ ಕೊಲೆ ಮಾಡಿ ಶವವನ್ನು ಹೂತಿಟ್ಟಿದ್ದ ಜಾಗ ಪೊಲೀಸರಿಗೆ ಗೊತ್ತಾಗಿಬಿಡುತ್ತದೆ. ಕೇಸ್ ಮತ್ತೆ ರೀ-ಓಪನ್ ಆಗುತ್ತದೆ. ಮತ್ತದೇ ಪೊಲೀಸ್ ಎನ್ಕ್ವೈರಿ ಎಂಬ ರಣಹಿಂಸೆ ಶುರುವಾಗುತ್ತದೆ. ಈ ಬಾರಿ ಪೂರ್ತಿ ಕುಟುಂಬವನ್ನೇ ಜೈಲಿಗೆ ಹಾಕಬೇಕೆಂದು ಪೊಲೀಸರು ಟೊಂಕ ಕಟ್ಟಿ ನಿಂತು ಬಿಡುತ್ತಾರೆ.
ಅಸಹಾಯಕ ಜಾರ್ಜ್ ಕುಟ್ಟಿ…..
ಪೊಲೀಸರು ಹೆಣೆದಿರುವ ಪ್ಲಾನಿನಿಂದ ಆತ ಮತ್ತು ಆತನ ಕುಟುಂಬ ಪಾರಾಗಲು ಅವಕಾಶವೇ ಇಲ್ಲ. ಆತ ನಿಸ್ಸಹಾಯಕನಾಗಿ ನೋಡುವಾಗ ನಮಗೆ ಮನಸ್ಸಿನಲ್ಲಿ ಏನೋ ಚುಚ್ಚಿದಂತಾಗುತ್ತದೆ. ಏಕೆ…? ಅವನು ಕೊಲೆಗಾರ ಅಂತ ಮನಸ್ಸಿಗೆ ಗೊತ್ತಿಲ್ಲವೇ? ಆದರೂ ಅವನ ಬಗ್ಗೆ ಮರುಕ ಯಾಕೆ?
ಯಾಕೆಂದರೆ… ನಮಗೆ ಈ ಭಾವನೆ ಮೂಡಿ ಬರಲು ಕಾರಣ ಆ ಸತ್ತ ಹುಡುಗನ ತಾಯಿ. ಹೌದು… ತನ್ನ ಮಗನ ಅವಗುಣಗಳೆಲ್ಲಾ ಗೊತ್ತಿದ್ದೂ, ಆ ಹುಡುಗಿ ತನ್ನ ಮಾನ ಕಾಪಾಡಿಕೊಳ್ಳಲು ಸಾಯಿಸಿದಳು ಎಂಬ ವಿಷಯ ಗೊತ್ತಿದ್ದರೂ, ತನ್ನ ಮಗನ ಕೃತ್ಯ ಖಂಡಿಸದೇ ಕೇವಲ ಇವರುಗಳನ್ನು ವಿಚಾರಣೆ ನೆಪದಲ್ಲಿ ಕ್ರೂರವಾಗಿ ಹಿಂಸಿಸುತ್ತಾಳೆ. ತಪ್ಪು ಮಾಡಿರುವ ಇವಳಿಗೆ ಇಷ್ಟಿರಬೇಕಾದರೆ ಯಾವ ತಪ್ಪೂ ಮಾಡದ ಜಾರ್ಜ್ ಗೆ ಮಾತ್ರ ಯಾಕೆ ಶಿಕ್ಷೆ?? ಅಂತ ನಮ್ಮ ಮನಸ್ಸು ಜಾರ್ಜ್ ಕುಟ್ಟಿಯಡೆಗೆ ವಾಲುತ್ತದೆ. ಆತ ಕೊಲೆಗಾರನಾದರೂ ಇದರಿಂದ ತಪ್ಪಿಸಿಕೊಳ್ಳಲಿ ಅಂತ ಮನಸ್ಸು ಬಯಸುತ್ತದೆ.
ಮನಸ್ಸು ಬಯಸುವುದೇನೋ ಸರಿ.
ಆದರೆ ಬಚಾವಾಗುವುದಾದರೂ ಹೇಗೆ? ಆತ ಅಂದು ಮಾಡಿದ ಅಪರಾಧ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ… ಅದರಿಂದ ಆತ ಪಾರಾಗುವುದು ಹೇಗೆ? ಆತ ಅಂದು ಹೇಳಿದ ಕಥೆಗಳನ್ನು ಮತ್ತೆ ಹೇಳಿದರೆ ಈಗ ನಂಬುವವರು ಯಾರಿಲ್ಲ… ಅವನ ಅಸಹಾಯಕ ಕಣ್ಣುಗಳನ್ನು ನೋಡಿ ನಮ್ಮ ಧೈರ್ಯವೂ ಕುಸಿಯುತ್ತದೆ. ಅನ್ಯಾಯವಾಗಿ ಒಂದು ಕುಟುಂಬ ಬೀದಿಪಾಲಾಗುತ್ತದೆ ಎಂಬ ಆತಂಕ ನಮಗೂ ಕಾಡುತ್ತದೆ.. ಮುಂದೇನು?
ಸಿನೆಮಾ ಅಮೆಜಾನ್ ಪ್ರೈಮಿನಲ್ಲಿದೆ.
Chitrodyama rating : 7/10
Nice