30/01/2023

CHITRODYAMA.COM

SUPER MARKET OF CINEMA NEWS

ಮೊಟ್ಟಮೊದಲನೆಯ ವಿಶೇಷ ಈ ಸಿನಿಮಾದ್ದು – ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಖ್ಯಾತ ಲೇಖಕ ಶ್ರೀ ತರಾಸು ಅವರದ್ದು!

ಹುಲಿಗೊಂದಿ ಅನ್ನೋ ಹಿಂದುಳಿದ ಹಳ್ಳಿ. ರಸ್ತೆ, ಶಾಲೆ, ಅಂಚೆ ಕಛೇರಿ ಏನೂ ಇರುವುದಿಲ್ಲ. ನಾಯಕ ಶ್ರೀಕಂಠ (ರಾಜ್‍ಕುಮಾರ್) ತನ್ನ ಈ ಹಳ್ಳಿಗೆ ಬರುತ್ತಾನೆ. ಬರುವಾಗಲೇ ಅದರ ಬಗೆಗೆ ಅನೇಕ ಕೆಟ್ಟ ಕಥೆಗಳನ್ನು ಕೇಳುತ್ತಾನೆ. 

ಅವನ ತಾಯಿ ತಂದೆ ತೀರಿಕೊಂಡಿರುತ್ತಾರೆ. ಚಿಕ್ಕಪ್ಪ (ಬಾಲಕೃಷ್ಣ) ಮತ್ತು ಚಿಕ್ಕಮ್ಮ (ಜಯಶ್ರೀ) ಇರುತ್ತಾರೆ. ಇಬ್ಬರಿಗೂ ಇವನ ತಲೆ ಕಂಡರಾಗದು. ಅವನು ಹೋದ ಸಮಯಕ್ಕೆ ಎಡೆ ಹಬ್ಬ ಆಗಲಿದ್ದುದರಿಂದ ಜಯಶ್ರೀಯ ಅಣ್ಣ ತನ್ನ ಮಗಳು ಸುಲೋಚನಾ (ಚಂದ್ರಕಲಾ) ಜೊತೆಗೆ ಬರುತ್ತಾನೆ. ಎತ್ತಿನ ಗಾಡಿ ಉರುಳಿ ಹೋಗುವುದರಲ್ಲಿದ್ದಾಗ ತಂದೆ ಮಗಳನ್ನು ಕಾಪಾಡುತ್ತಾನೆ ಶ್ರೀಕಂಠ. ಪ್ರಥಮ ಭೇಟಿ ಪ್ರಣಯ ದೃಷ್ಟಿ ಆಗುತ್ತದೆ ಸುಲೋಚನಾಳಿಗೆ.

ಊರಿನ ಸುತ್ತಮುತ್ತ ನಡೆಯುವ ದರೋಡೆಗಳು, ಕೊಲೆಗಳು ಎಲ್ಲಕ್ಕೂ ಕಾರಣನಾಗಿರುತ್ತಾನೆ ಬಾಲಕೃಷ್ಣ. ಅವನ ಶಿಷ್ಯ ರಾಯಣ್ಣ(ಎಂ.ಪಿ.ಶಂಕರ್) ಎಲ್ಲ ರೀತಿಯ ಕೆಟ್ಟ ಕೆಲಸ ಮಾಡುತ್ತಿರುತ್ತಾನೆ. ಹೆಣ್ಣಿನ ಮಾನಭಂಗಕ್ಕೆ ಹಳ್ಳಿಯ ಜನರೆದುರಿಗೆ ಪ್ರಯತ್ನಿಸಿದಾಗ ಆ ಹೆಣ್ಣಿನ ತಂದೆ (ಸಂಪತ್) ಕೇಳಿಕೊಂಡಾಗ ಪಂಚಾಯಿತಿಯಲ್ಲಿ ಸಾಕ್ಷ್ಯ ಹೇಳುತ್ತಾನೆ ಶ್ರೀಕಂಠ.

ಮೊದಲು ಕೆಟ್ಟ ಹೆಣ್ಣಾಗಿದ್ದ ಚಿಕ್ಕಮ್ಮ ಶ್ರೀಕಂಠನ ಒಳ್ಳೆಯತನಕ್ಕೆ ಮಾರುಹೋಗುತ್ತಾಳೆ. ಬಾಲಕೃಷ್ಣನಿಗೆ ಚಂದ್ರಕಲಾಳ ಉಪದೇಶ ನಾಟುತ್ತದೆ. ಊರಿಗೆ ಬೇಕಾದ ರಸ್ತೆ ಮಾಡಲು ಹೋದಾಗ ದೊಡ್ಡ ಜಗಳವಾಗಿ ಅನಂತರ ಎಲ್ಲವೂ ಶುಭಂ.

ಐದು ಹಾಡುಗಳಲ್ಲಿ ಕುವೆಂಪು ಅವರ ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ… ಪಿಬಿಎಸ್ ಮತ್ತು ಪಿ.ಸುಶೀಲಾ ಹಾಡಿದ್ದಾರೆ.

ಆನೆ ಬಂದಾಗ ಹೆದರಿದ ಶ್ರೀಕಂಠನನ್ನು ರೇಗಿಸಿ ಚಂದ್ರಕಲಾ ‘ಓಹೋಹೋ ಎಂಥಾ ಗಂಡು, ನೋಡೋ ಫಿರಂಗಿ ಗುಂಡು, ಜೋರು ಏನಾಯ್ತೋ ಈ ಆನೆ ಕಂಡು’ ಎಂದು ಪಿ.ಸುಶೀಲಾ ಧ್ವನಿಯಲ್ಲಿ ಹಾಡುತ್ತಾಳೆ.

‘ನೆನೆದೇವು ನಿಮ್ಮ’ ಎನ್ನುವ ಎಡೆ ಹಬ್ಬದ ಹಾಡು ಎಸ್. ಜಾನಕಿ ಮತ್ತು ಪಿಬಿಎಸ್ ಸ್ವರಗಳಲ್ಲಿ.

ಮನ್ನಾಡೇ ಅವರು ರಾಜ್‍ಗೆ ಇದರಲ್ಲಿ ಧ್ವನಿ ನೀಡಿರುವುದೊಂದು ವಿಶೇಷ. ‘ಅಣು ಅಣುವಿನಲ್ಲಿ ವಿಷ ದ್ವೇಷ ಜ್ವಾಲೆ’ ಎನ್ನುವ ಗೀತೆ ಅದು.

ಮನ್ನಾಡೇ ಅವರ ಮತ್ತೊಂದು ಗೀತೆ ‘ ಕಣ್ಣಿಲ್ಲವೇನೋ ನಿಜ ಕಾಣದೇನೋ’ ಕೂಡ ಇದೆ.

ನರಸಿಂಹರಾಜು ಆರು ದೋಸೆಗೆ ಅತ್ತೆ ಕಡೆ, ಮೂರು ದೋಸೆಗೆ ಮಾವನ ಕಡೆ ಎನ್ನುವ ಕಾಳಿಂಗಯ್ಯನ ಪಾತ್ರದಲ್ಲಿದ್ದಾರೆ. ಪುಟ್ಟ ಪಾತ್ರದಲ್ಲಿ ರಂಗ ಇದ್ದಾರೆ. ಚೇತನ್ ರಾಮರಾವ್ ಒಂದು ಚಿಕ್ಕ ಪಾತ್ರದಲ್ಲಿದ್ದಾರೆ.

ಚಂದ್ರಕಲಾ ಅನೇಕ ಕೋನಗಳಲ್ಲಿ ಭಾರತಿಯಂತೆ ಕಾಣುವುದು ನನಗೆ ಮಾತ್ರವೇನಾ?

ದುಃಖ, ಕೋಪ, ಅಸಹಾಯಕತೆ, ನಿರ್ಧಾರ ಎಲ್ಲವನ್ನೂ ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ ರಾಜ್.

Leave a Reply

Copyright © All rights reserved. | Newsphere by AF themes.