A.V. ವರದಾಚಾರ್

ಕನ್ನಡ ರಂಗಭೂಮಿಯನ್ನು ದಕ್ಷಿಣ ಭಾರತದಲ್ಲಿ ವಿಜ್ರಂಭಿಸುವಂತೆ ಮಾಡಿದ ಮಹಾನ್ ರಂಗ ಕಲಾವಿದ ಎ.ವಿ.ವರದಾಚಾರ


A.V. ವರದಾಚಾರ್ ಸ್ವಾತಂತ್ರ್ಯ ಪೂರ್ವದಲ್ಲಿಯೇ ಕನ್ನಡ ರಂಗಭೂಮಿ ಕಂಡ ಶ್ರೇಷ್ಠ ರಂಗ ಕಲಾವಿದರಾಗಿದ್ದು ನಾಟಕಗಳಲ್ಲಿ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿ ರಂಗ ಭೂಮಿಗೆ ನಿರ್ದಿಷ್ಟ ರೂಪವನ್ನು ನೀಡಿದ ಮಹಾನ್ ಸಾಧಕರು. ಇವರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಎಂತಹ ಅಮೂಲ್ಯವಾದುದು ಎಂದು ತಿಳಿಸುವ ಉದ್ದೇಶದಿಂದ ಈ ಲೇಖನವನ್ನು ರಚಿಸಿದ್ದೇನೆ. ಮತ್ತು ವಿಶೇಷವೇನೆಂದರೆ ಇದು ನನ್ನ ೨೫ ನೇ ಲೇಖನ ಕೂಡ ಆಗಿದೆ.


  ಎ.ವಿ.ವರದಾಚಾರ್ ಫೆಬ್ರುವರಿ ೨, ೧೮೬೯ ರಂದು ಕೋಟೆಯ ನಾಡು ಎಂದೇ ಪ್ರಸಿದ್ಧವಾಗಿರುವ ಚಿತ್ರದುರ್ಗದಲ್ಲಿ  ಜನಿಸಿದರು. ಇವರ ಪೂರ್ಣ ಹೆಸರು ಅನಮಲ ಪಲ್ಲಿ ವೆಂಕಟ್ ವರದಾಚಾರ್. ಇವರ ತಂದೆ ಹೆಸರು ರಂಗಸ್ವಾಮಿ ಅಯ್ಯಂಗಾರರು ಶಿರಸ್ತೇದಾರ್ ವೃತ್ತಿ ಮಾಡುವುದರ ಜೊತೆಗೆ ಸಂಗೀತ ಪ್ರಿಯರಾಗಿದ್ದರು. ಅಯ್ಯಂಗಾರರು ಚಿಕ್ಕ ವಯಸ್ಸಿನಲ್ಲಿ ಸಂಗೀತ ಮತ್ತು ಅಭಿನಯ ಕಲೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದರಿಂದ ಮಗನಿಗೆ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ  ಸಂಗೀತ ಶಿಕ್ಷಣವನ್ನು ಕೊಡಿಸಿದರು. ಶಾಲೆಯಲ್ಲಿ ಕಲಿಕೆ ಮತ್ತು ಇನ್ನೊಂದು ಕಡೆ ಭಜನಾ ಮಂದಿರದಲ್ಲಿ  ಸಂಗೀತ ಕಲಿಕೆಯಿಂದ ಇವರ ಕಂಠ ಸಿರಿ ಉತ್ತಮ ಗೊಂಡಿತ್ತು. ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದ ವರದಾಚಾರ್ ಶಿಕ್ಷಣದ ಜೊತೆಗೆ ನಾಟಕಗಳಲ್ಲಿ ಕೂಡ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಸೆಂಟ್ರಲ್ ಕಾಲೇಜಿನಲ್ಲಿ ಎಫ್.ಎ.ಪಾಸ್ ಆದ ನಂತರ ತಮ್ಮ ದೇಹದಾರ್ಢ್ಯ ಮತ್ತು ಸುಮಧುರ ಕಂಠದಿಂದ ಕಲಾವಿಲಾಸಿಗಳನ್ನು ನಿಬ್ಬರಗೊಳಿಸಿದ್ದರು.

ಆ ಕಾಲದಲ್ಲಿ ಬೆಂಗಳೂರಿನಲ್ಲಿ  ನಾಟಕಗಳು ಅಷ್ಟೆಲ್ಲ ನಾಟಕಗಳು ನಡೆಯುತ್ತಿರಲಿಲ್ಲ. ರೆಸಿಡೆನ್ಸಿ ಕಛೇರಿಯಲ್ಲಿ ಕೆಲಸವಿದ್ದರೂ ವರದಾಚಾರರು ನಾಟಕ ರಂಗದಲ್ಲಿ ಮುಂದುವರೆಯುವ ಇಚ್ಚೆಯನ್ನು ಹೊಂದಿದ್ದರು. ಅಷ್ಟರಲ್ಲಿ ರಂಗದ ಗೀಳು ಹತ್ತಿ ಬೆಂಗಳೂರಿನ ಯುನಿಯನ್ ಕ್ಲಬ್ ಸೇರಿದ್ದರು. ಬೆಂಗಳೂರಿನ ಯುನಿಯನ್ ಹವ್ಯಾಸ ನಾಟಕ ಸಂಸ್ಥೆ ಅಭಿನಯಿಸುತ್ತಿದ್ದ ನಾಟಕಗಳಲ್ಲಿ ಇವರ ಪ್ರತಿಭೆ ಸಮಾಜಕ್ಕೆ ಪರಿಚಯವಾಯಿತು. ಅದೇ ಸಮಯದಲ್ಲಿ ಮಿಲಿಟರಿ ಕಾಂಟ್ರ್ಯಾಕ್ಟರ್ ಬುಳ್ಳಪ್ಪ ಎಂಬ ಶ್ರೀಮಂತ ವ್ಯಕ್ತಿ ಪ್ರಾರಂಭಿಸಿದ ವೃತ್ತಿ ಸಂಸ್ಥೆಯ ನಾಟಕಗಳಲ್ಲಿ ಅಭಿನಯಿಸಿದರು. ಕೆಲವು ವರ್ಷಗಳ ನಂತರ ಅಹಿತಕರ ಕಾರಣಗಳಿಂದ ವರದಾಚಾರರು ರಂಗಭೂಮಿಯಿಂದ ದೂರವಾಗಲು ಯೋಚಿಸುತ್ತಿದ್ದರು.

ರಂಗಭೂಮಿಯಿಂದ ದೂರವಾಗಲು ನಿರ್ಧರಿಸಿದ್ದ ಸಮಯದಲ್ಲಿ ಮೈಸೂರಿನಿಂದ ಶ್ರೀ ಸರಸ್ವತಿ ವಿಲಾಸ ರತ್ನಾವಳಿ ನಾಟಕ ಮಂಡಳಿ ನಾಟಕ ವಿದ್ವಾಂಸರು ಶ್ರೀ ಗೌರಿ ನರಸಿಂಹಯ್ಯನವರಿಂದ ಆಹ್ವಾನ ಬಂದಿತು. ಕ್ರಿ.ಶ.೧೮೯೨ ರಲ್ಲಿ ಶ್ರೀ ಗೌರಿ ನರಸಿಂಹಯ್ಯನವರ ನಾಟಕ ಮಂಡಳಿಯನ್ನು ಸೇರಿ  ನಾಟಕಗಳಲ್ಲಿ ನಾಯಕನ ಪಾತ್ರ ನಿರ್ವಹಿಸಿದರು. ಆಗಿನ ಕಾಲದ ಮೈಸೂರು ಸಾಂಸ್ಕೃತಿಕ ಚಟುವಟಿಕೆಗಳಿಗೆ, ನೃತ್ಯ ಸಂಗೀತ ಕಲಾ ಪ್ರದರ್ಶನಕ್ಕೆ ಪ್ರಶಸ್ತ ಸ್ಥಳ ಎಂದು ಖ್ಯಾತಿ ಪಡೆದಿದ್ದು ಅರಮನೆಯಲ್ಲಿ ನಾಟಕ ಸಂಘವು ಇತ್ತು. ಅರಮನೆಯಲ್ಲಿ  ನಾಟಕಗಳಲ್ಲಿ ಪಾತ್ರವನ್ನು ನಿರ್ವಹಿಸುತ್ತಿದ್ದ ಗಮಕಿ ಸಂಗೀತ ವಿದ್ವಾಂಸ ಗೌರಿ ನರಸಿಂಹಯ್ಯನವರು (ಊರ್ವಶಿ ಪಾತ್ರಧಾರಿ) ಅವರ ನಾಟಕದಲ್ಲಿ ಬರುವ ಪುರೂರವನ ಎಂಬ ಮುಖ್ಯವಾದ ಪಾತ್ರಕ್ಕೆ ವರದಾಚಾರರು ಸೂಕ್ತ ವ್ಯಕ್ತಿ ಎಂದು ನಿರ್ಧರಿಸಿ ಕೇಳಿದಾಗ ಆರಂಭದಲ್ಲಿ ಕಾರಣಾಂತರಗಳಿಂದ ಒಪ್ಪಿಗೆಯನ್ನು ಸೂಚಿಸಲಿಲ್ಲ. ಆದರೂ ಗೌರಿ ನರಸಿಂಹಯ್ಯನವರ ಮೇಲಿನ ಗೌರವದಿಂದ ಅವರ ಮಾತಿಗೆ ಒಪ್ಪಿಗೆ ಸೂಚಿಸಿ ತಾವು ನಿರ್ವಹಿಸುತ್ತಿದ್ದ ಸರ್ಕಾರಿ ಉದ್ಯೋಗಕ್ಕೆ ರಾಜಿನಾಮೆ ನೀಡಿದರು. ಊರ್ವಶಿ ಪಾತ್ರಧಾರಿಯಾದ ಗೌರಿ ನರಸಿಂಹಯ್ಯನವರು ಆರಂಭಿಸಿದ ನಾಟಕದಲ್ಲಿ ಊರ್ವಶಿಗಾಗಿ ಪರಿತಪಿಸುತ್ತ ಶಾಪಕ್ಕೆ ಗುರಿಯಾಗಿ ಬಳ್ಳಿಯಾಗುವ ಊರ್ವಶಿಯನ್ನು ಹುಡುಕುವ ಪಾತ್ರದಲ್ಲಿ ಮಿಂಚಿದ ವರದಾಚಾರರು ನಾಟಕ ವಲಯದಲ್ಲಿ, ಸಾರ್ವಜನಿಕ ವಲಯದಲ್ಲಿ ಭರ್ಜರಿ ಜನಪ್ರಿಯತೆಯನ್ನು ಪಡೆದು ರಂಗಭೂಮಿಯನ್ನು ತಮ್ಮ ಜೀವನದ ಕಾರ್ಯಕ್ಷೇತ್ರವನ್ನಾಗಿ ಆರಿಸಿಕೊಂಡರು. ವಾರಕ್ಕೊಂದು ಬಾರಿ ನಾಟಕ ಪ್ರದರ್ಶನವಿದ್ದರೂ ನಾಟಕದ ಮುಖ್ಯ ಆಕರ್ಷಣೆಯೇ ವರದಾಚಾರ್ ಆಗಿದ್ದು ಅವರಿಗೆ ಬರುತ್ತಿದ್ದ ವರಮಾನವು ಚೆನ್ನಾಗಿಯೇ ಇತ್ತು. ಅಲ್ಲದೆ ಅವರ ಚಂದ್ರಾವಳಿ,ಮೃಚ್ಛಕಟಿಕ ನಾಟಕಗಳು ಜನಪ್ರಿಯವಾಗಿದ್ದವು. ವರದಾಚಾರರ ಮತ್ತು ಗೌರಿ ನರಸಿಂಹಯ್ಯನವರ ಒಡನಾಟ ಇತರರಿಗೆ ಆದರ್ಶವಾಗಿತ್ತು.

ಅದೇ ಸಮಯದಲ್ಲಿ ಮೈಸೂರಿನಲ್ಲಿ ಶ್ರೀ ಗೌರಿ ನರಸಿಂಹಯ್ಯನವರ ಅಕಾಲಿಕ ಮರಣ ವರದಾಚಾರರ ಮನಸ್ಸನ್ನು ಘಾಸಿಗೊಳಿಸಿತ್ತು. ಎಂತಹ ವಿಪರ್ಯಾಸದ ವಿಷಯವೇನೆಂದರೆ ಅದೇ ಸಮಯದಲ್ಲಿ ಬೆಂಗಳೂರಿನಲ್ಲಿ ವ್ಯಾಪಿಸಿದ್ದ ಪ್ಲೇಗ್ ಎಂಬ ಮಾರಣಾಂತಿಕ ಕಾಯಿಲೆಯಿಂದ ಹೆಂಡತಿ ಮತ್ತು ಮಗ ಇಬ್ಬರೂ ಬಲಿಯಾದಾಗ ಪೆಟ್ಟಿನ ಮೇಲೆ ಪೆಟ್ಟು  ತಿಂದ  ವರದಾಚಾರರು ಮಾನಸಿಕವಾಗಿ ಸಾಕಷ್ಟು ಕುಗ್ಗಿ ಹೋದರು. ಆದರೂ ಈ ಪರಿಸ್ಥಿತಿಯಲ್ಲಿ ಒಂಟಿಯಾಗಿ ಬಿಡಬಾರದೆಂದು ನಿರ್ಧರಿಸಿದ ಇವರ ಗೆಳೆಯರ ಬಳಗ ಶ್ರೀ ಗೌರಿ ನರಸಿಂಹಯ್ಯನವರು ಆರಂಭಿಸಿದ್ದ ಸರಸ್ವತಿ ವಿಲಾಸ ನಾಟಕ ಮಂಡಳಿಯ ಜವಾಬ್ದಾರಿಯನ್ನು ವರದಾಚಾರರಿಗೆ ವಹಿಸಿತು.೧೯೦೦ ನೇ ಇಸ್ವಿ ಆಗಷ್ಟೇ ವೃತ್ತಿ ನಾಟಕ ಕಂಪನಿಗಳು ಆರಂಭವಾದ ಸಮಯ. ವೈಯಕ್ತಿಕವಾಗಿ ಆಗಲೇ ಆಘಾತ ಅನುಭವಿಸಿ ಚಿಂತೆಗೀಡಾಗಿದ್ದ ವರದಾಚಾರರು ತಮ್ಮ ಮುಂದಿನ ಜೀವನ ಮತ್ತು ದಿನಗಳನ್ನು ರಂಗಭೂಮಿಯಲ್ಲಿ ಕಳೆಯಲು ನಿರ್ಧರಿಸಿ ತಮ್ಮ ವೃತ್ತಿ ಜೀವನದಲ್ಲಿ ಪ್ರಸಿದ್ಧಿ ತಂದುಕೊಟ್ಪಿದ್ದ ರತ್ನಾವಳಿ ನಾಟಕದಿಂದ ಶ್ರೀ ಗೌರಿ ನರಸಿಂಹಯ್ಯನವರು ಆರಂಭಿಸಿದ್ದ ಶ್ರೀ ಸರಸ್ವತಿ ವಿಲಾಸ ರತ್ನಾವಳಿ ನಾಟಕ ಮಂಡಳಿಯ ಹೆಸರನ್ನು ಶ್ರೀ ರತ್ನಾಕರ ನಾಟಕ ಮಂಡಳಿ ಎಂದು ಮರು ನಾಮಕರಣ ಮಾಡಿದರು. ೧೯೦೦ ನೇ ಇಸ್ವಿಯ ಆರಂಭದಲ್ಲಿ ನಾಟಕಗಳು ಅಷ್ಟಾಗಿ ಜನಪ್ರಿಯತೆಯನ್ನು ಪಡೆದಿರಲಿಲ್ಲ. ಆದರೆ ಈ ಸಮಯದಲ್ಲಿ ವರದಾಚಾರರ ಆಗಮನದಿಂದ ಕನ್ನಡ ರಂಗ ಭೂಮಿಯ ಸುವರ್ಣ ಕಾಲಕ್ಕೆ ನಾಂದಿಯಾಯಿತು. ಕನ್ನಡ ರಂಗಭೂಮಿಯೇ ನನ್ನ ಉಸಿರು ಎಂದು ಬದುಕಿದ್ದ ವರದಾಚಾರರ ಅವಿರತ ಶ್ರಮದಿಂದ  ಕನ್ನಡ ರಂಗಭೂಮಿ ಕನ್ನಡ ನಾಡಿನಲ್ಲದೇ ದಕ್ಷಿಣ ಭಾರತದಲ್ಲಿ ಕೂಡ ವಿಜ್ರಂಭಿಸಿತು.

ಇಲ್ಲಿಂದ ಆರಂಭವಾದ ೨೫ ವರ್ಷಗಳ ಸುವರ್ಣ ಕಾಲದ ಅವಧಿಯಲ್ಲಿ ವರದಾಚಾರರು ಸುಮಾರು ೨೦ ನಾಟಕಗಳನ್ನು ಮಾಡಿದ್ದರು. ಇವರು ಆರಂಭಿಸಿದಾಗ ನಾಟಕಗಳಲ್ಲಿ ಸಂಗೀತ,ಸಾಹಿತ್ಯವೇ ಹೆಚ್ಚಿತ್ತು. ಇದೇ ಸಂದರ್ಭದಲ್ಲಿ ರಂಗಭೂಮಿಯಲ್ಲಿ ಅಭಿನಯಕ್ಕೆ ಮಾನ್ಯತೆ, ಪಾತ್ರ ನಿರ್ವಹಣೆಯಲ್ಲಿ ಹೊಸತನ, ಬೆಳಕಿನಿಂದಲೇ ಪರಿಣಾಮಕಾರಿಯಾಗಿ ಕಾಣುವ ಸನ್ನಿವೇಶ ಈ ರೀತಿಯಾಗಿ ವಿವಿಧ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿ ರಾಜರನ್ನು, ಪಂಡಿತರನ್ನು ಮೆಚ್ಚಿಸಿದರಲ್ಲದೆ ಸಂಸ್ಕೃತಿ ಪ್ರಸಾರಕ್ಕೆ ನಾಟಕಗಳನ್ನು ಒಗ್ಗಿಸಿದರು. ಈ  ರೀತಿ ಆಚಾರ್ಯರು ಕೈ ಗೊಂಡ  ಸುಧಾರಣೆಯ ಕ್ರಮಗಳಿಂದ ಸಾಮಾನ್ಯ ಪ್ರೇಕ್ಷಕರು ಕೂಡ ರಂಗ ಭೂಮಿಯ ಕಡೆ ಆಕರ್ಷಿತರಾಗಿ ಬರಲು ಸಾಧ್ಯವಾಯಿತು.

ಗಾಯಕ ಮತ್ತು ನಾಯಕರಾಗಿದ್ದ ವರದಾಚಾರ ರತ್ನಾವಳಿ ನಾಟಕದಲ್ಲಿ ವಸಂತ ಸೇನಾ, ಭಕ್ತ ಪ್ರಹ್ಲಾದದಲ್ಲಿ ಹಿರಣ್ಯ ಕಶಿಪು, ಶಾಕುಂತಲದಲ್ಲಿ ದುಷ್ಯಂತ ಮತ್ತು ರಾಮವರ್ಮ- ಲೀಲಾವತಿ ನಾಟಕದಲ್ಲಿ ಸಂತಾಪನಾಶಿನಿ ಪಾತ್ರಗಳು ನೋಡುಗರ ಮನಸ್ಸಿನಲ್ಲಿ ಬಹಳ ಕಾಲ ಉಳಿದಿದ್ದವು. ಇವರೇ ರಚಿಸಿದ ಇಂದಿರಾನಂದ ಮತ್ತು ವಿಮಲಾ ವಿಜಯ ನಾಟಕಗಳಲ್ಲಿ ಇವರ ಪಾತ್ರಗಳು ತುಂಬ ಪರಿಣಾಮಕಾರಿಯಾಗಿದ್ದವು. ಶಕುಂತಲಾ, ರತ್ನಾವಳಿ, ಪ್ರಹ್ಲಾದ,ಮನ್ಮಥ,ವಿಜಯ, ಧ್ರುವ ಚರಿತ್ರೆ, ಇಂದಿರಾನಂದ, ನಿರುಪಮ, ಸದಾರಮೆ, ಗುಲಾಬಿ ಕಾವಾಲಿ ಹೀಗೆ ಹಲವು ನಾಟಕಗಳನ್ನು ದಿಗ್ವಿಜಯದ ನಾಟಕಗಳನ್ನು ಆಗಿ ಪರಿವರ್ತಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ನಾಟಕ ಪ್ರದರ್ಶನದ ವೈಭವವನ್ನು ಹೆಚ್ಚಿಸಿ ಕರ್ನಾಟಕ ಸಂಗೀತಕ್ಕೆ ಗಮಕದ ಸ್ಪರ್ಶ ನೀಡಲು ಆರಂಭಿಸಿ ಹಾಸ್ಯದ ಪಾತ್ರಗಳಿಗೂ ಪ್ರಾಮುಖ್ಯತೆ ನೀಡುವುದು, ರಂಗಮಂಚದ ಮೇಲೆ ಎಲ್ಲ ನಟರು ಪಾತ್ರಗಳಿಗೆ ತಕ್ಕಂತೆ ಅನುಗುಣವಾದ ವೇಷ ಭೂಷಣ,ದೇಹ ಭಾಷೆಯನ್ನು ಬಳಸುವ ಪದ್ಧತಿಯನ್ನು ಜಾರಿಗೆ ತಂದರು. ಇವರ ಜೀವನದಲ್ಲಿ ಸ್ವಾರಸ್ಯಕರ ಘಟನೆಗಳು ನಡೆದಿದ್ದು ತಮ್ಮ ನಾಟಕದ ವೀಕ್ಷಣೆಗೆ ಖ್ಯಾತ ರಾಷ್ಟ್ರ ಕವಿ ರವೀಂದ್ರನಾಥ ಠಾಗೋರ್ ರನ್ನು ಆಹ್ವಾನಿಸಲು ಹೋದಾಗ ಕಾರ್ಯಕ್ರಮಗಳ ಒತ್ತಡ ಮತ್ತು ಸಮಯದ ಕೊರತೆಯಿಂದ ನಿಮ್ಮ ನಾಟಕವನ್ನು ಕೇವಲ ೪೫ ನಿಮಿಷಗಳ ಕಾಲ  ನೋಡುವುದಾಗಿ ಹೇಳಿದ್ದ ಠಾಗೋರ್ ವರದಾಚಾರರು ಪ್ರದರ್ಶಿಸಿದ ಪ್ರಹ್ಲಾದನ ಚರಿತ್ರೆಗೆ ಆಕರ್ಷಿತರಾಗಿ ತಮಗಿದ್ದ ಸಮಯದ ಕೊರತೆಯನ್ನು ಮರೆತು ನಾಟಕವನ್ನು ಪೂರ್ತಿಯಾಗಿ ನೋಡಿದ್ದರು. ಇನ್ನೊಂದು ತಿರುಚನಾಪಲ್ಲಿ ಮೊಕ್ಕಾಂನಲ್ಲಿ ನಾಟಕ ವೀಕ್ಷಣೆಗೆ ಡಾ.ಅನಿಬೆಸೆಂಟ್ ಅವರನ್ನು ಆಹ್ವಾನಿಸಿದಾಗ ಪ್ರದರ್ಶನಕ್ಕೆ ಕಾಳಿದಾಸನ ಸಂಸ್ಕೃತ ನಾಟಕದ ಕನ್ನಡ ಅವತರಣಿಕೆ.

ಸಂಸ್ಕೃತದಲ್ಲಿ ಶಾಕುಂತಲ ನಾಟಕವನ್ನು ಓದಿ ಅರ್ಥೈಸಿಕೊಂಡಿದ್ದ ಡಾ.ಅನಿಬೆಸೆಂಟ್ ನಾಟಕ ವೀಕ್ಷಿಸಿ ದುಷ್ಯಂತನ ಪಾತ್ರ ನಿರ್ವಹಿಸಿದ್ದ  ವರದಾಚಾರರಿಗೆ ನಾಟಕ ಶಿರೋಮಣಿ ಎಂಬ ಬಿರುದನ್ನು ನೀಡಿ ಗೌರವಿಸಿದ್ದರು. ಇದೇ ಸಂದರ್ಭದಲ್ಲಿ ಇಂಗ್ಲಿಷ್ ನಾಟಕಗಳ ಅನುವಾದಗಳು ಕನ್ನಡ ರಂಗಭೂಮಿಯಲ್ಲಿ ಕಾಣಿಸಿಕೊಳ್ಳಲು ಆರಂಭವಾದಾಗ ಆಗಲೇ ಜನಪ್ರಿಯವಾಗಿದ್ದ ಶೇಕ್ಸ್ ಪಿಯರ್ ನ ಇಂಗ್ಲೀಷ್ ನಾಟಕ ರೋಮಿಯೋ ಮತ್ತು ಜ್ಯೂಲಿಯಟ್ ನಾಟಕವನ್ನು ಕನ್ನಡದಲ್ಲಿ ಅನುವಾದಿಸಿ ರಾಮಮರ್ಮ – ಲೀಲಾವತಿ ಹೆಸರಿನಲ್ಲಿ  ಪ್ರದರ್ಶಿಸಲು ನಿರ್ಧರಿಸಿ ವೀಕ್ಷಣೆಗೆ ಚಿಕ್ಕ ಮಂಗಳೂರು ಮೊಕ್ಕಾಂ ಕಾಫಿ ಪ್ಲ್ಯಾಂಟೇಷನ್ ಗಳಲ್ಲಿ ವಾಸವಿದ್ದ ಬ್ರಿಟಿಷ್ ಕುಟುಂಬಗಳನ್ನು ಆಹ್ವಾನಿಸಿ ರಾಮಮೂರ್ತಿ – ಲೀಲಾವತಿ ನಾಟಕವನ್ನು ಪ್ರದರ್ಶಿಸಿದಾಗ  ಅಚ್ಚರಿಯಾಗದೇ ಇರುವ ಬ್ರಿಟಿಷ್ ಕುಟುಂಬಗಳೇ ಇಲ್ಲ. ಈ ನಾಟಕ ವೀಕ್ಷಿಸಿದ ಬ್ರಿಟಿಷ್ ಮಹಿಳೆಯೊಬ್ಬರು ಭಾವಪರವಶರಾಗಿ ರಂಗ ಮಂಚವೇರಿ ವರದಾಚಾರವರಿಗೆ ತಮ್ಮ ಕುತ್ತಿಗೆಯಲ್ಲಿದ್ದ ಸರವನ್ನು ಹಾಕಿದ್ದರು. ಇಂದಿಗೂ ಈ ಘಟನೆಗಳು ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿವೆ. ಎಪ್ರಿಲ್ ೪, ೧೯೨೬ ವರದಾಚಾರ ನಿಧನದ ನಂತರ ಟಿ.ಪಿ.ಕೈಲಾಸಂ ಅವರ ಸಾರಥ್ಯದ ಪ್ರಯತ್ನದಿಂದ ಎರಡು ವರ್ಷಗಳ ಕಾಲ ರತ್ನಾಕರ ನಾಟಕ ಮಂಡಳಿಯು ಮುಂದುವರೆಯಿತು. ಕನ್ನಡ ರಂಗಭೂಮಿಗೆ ನಿರ್ದಿಷ್ಟ ರೂಪವನ್ನು ನೀಡಿದ ಅವರ ಸ್ಮರಣಾರ್ಥವಾಗಿ ವರದಾಚಾರ ಬಂಧುಗಳೇ ನಿರ್ಮಿಸಿದ ಕನ್ನಡದ ವಾಕ್ಚಿತ್ರ ಭಕ್ತ  ಧ್ರುವ.

ಕನ್ನಡ ಚಿತ್ರರಂಗದ ಪರಂಪರೆಯಲ್ಲಿ ಮೊದಲು ನಿರ್ಮಾಣ ಆರಂಭಿಸಿದರೂ  ಸತಿ ಸುಲೋಚನ ಎಂಬ ವಾಕ್ಚಿತ್ರ ಮೊದಲು ತೆರೆ ಕಂಡಿದ್ದರಿಂದ ಭಕ್ತಿ ಧ್ರುವ ಎರಡನೇ ವಾಕ್ಚಿತ್ರ ಎನ್ನುವ ಖ್ಯಾತಿಗೆ ಪಾತ್ರವಾಯಿತು. ಇಷ್ಟು ಅಗಾಧ ಇತಿಹಾಸ ಹೊಂದಿರುವ ರಂಗಭೂಮಿಯನ್ನು ಪ್ರತಿ ವರ್ಷ ಮಾರ್ಚ್ ೨೭ ವಿಶ್ವ ರಂಗಭೂಮಿ ದಿನ ಎಂದು ಆಚರಿಸಲಾಗುತ್ತಿದೆ. ತಮ್ಮ ನಾಟಕ ಮಂಡಳಿ ಮತ್ತು ನಟನಾ ಕೌಶಲ್ಯದ ಮೂಲಕ ಮೈಸೂರು ಸಂಸ್ಥಾನದ ರಂಗಭೂಮಿಯು ದಕ್ಷಿಣ ಭಾರತದಲ್ಲಿಯೂ ವಿಜ್ರಂಭಿಸುವಂತೆ ಮಾಡಿ ಕೀರ್ತಿ ಪಡೆದ ಎ.ವಿ.ವರದಾಚಾರ ಅವರಲ್ಲದೆ ಬೇರೆ ಯಾರು ಮೊದಲ ನಮನಕ್ಕೆ ಅರ್ಹರಿರಲು ಸಾಧ್ಯವಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯವಾಗಿದೆ.

ಲೇಖಕರು : ಶ್ರೀ ಸಂದೀಪ್ ಜೋಶಿ

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply