“AI” Artificial Intelligence

ಯಂತ್ರಗಳು ನಮ್ಮ ಕೆಲಸವನ್ನು ಹಗುರ ಮಾಡಿವೆ ಎನ್ನುವುದು ಎಲ್ಲರಿಗೂ ಗೊತ್ತು. ಮುಂದುವರೆದು ರೋಬೋಟುಗಳ ಆವಿಷ್ಕಾರ ನಮಗೆ ಮತ್ತಷ್ಟು ಸಹಾಯಕವಾಗಿದೆ. ಹಾಗೇ ಇನ್ನೂ ಸ್ವಲ್ಪ ಮುಂದುವರೆದು ರೋಬೋಟುಗಳಿಗೆ ಭಾವನೆಗಳನ್ನೂ ತುಂಬಿಬಿಟ್ಟರೆ….? 


ಈ ಯೋಚನೆ ಒಬ್ಬ ವಿಜ್ಞಾನಿಗೆ ಬರುತ್ತದೆ. 
ಬರುವುದೇ ತಡ ಆ ರೀತಿಯ ರೋಬಾಟನ್ನು ತಯಾರಿಸಿಯೇ ಬಿಡುತ್ತಾನೆ. ಅವುಗಳೇ Artificial Intelligence ಉಳ್ಳ ರೋಬಾಟುಗಳು. ಮನುಷ್ಯರಂತೆಯೇ ನಾಚಿಕೆ-ಭಯ-ಕೋಪ-ಪ್ರೀತಿ ಎಲ್ಲವೂ ಇರುವ ಮಾನವ ನಿರ್ಮಿತ ರೋಬಾಟುಗಳು. ಇಂತಹ ಒಂದು ರೋಬಾಟ್ ಆದ ಡೇವಿಡ್ಡನನ್ನು ಒಬ್ಬ ತಂದೆ-ತಾಯಿಗೆ ದತ್ತು ನೀಡಲಾಗುತ್ತದೆ.

ಆ ತಂದೆ-ತಾಯಿಯರ ಒಬ್ಬನೇ ಮಗನಾದ ಮಾರ್ಟಿನ್ ಗುಣಪಡಿಸಲಾಗದ ಒಂದು ಖಾಯಿಲೆಯಿಂದ ನರಳುತ್ತಿರುತ್ತಾನೆ. ಹಾಗಾಗಿ ಮಾರ್ಟಿನ್ ಸ್ಥಾನಕ್ಕೆ ಡೇವಿಡ್ ಬರುತ್ತಾನೆ. ದಿನಕಳೆದಂತೆ ಡೇವಿಡ್ ಮನೆಯವರ ವಿಶ್ವಾಸವನ್ನೂ ಗಳಿಸುತ್ತಾನೆ. ಆದರೆ ಮನೆಯವರಿಗೆ ಅವನು ರೋಬಾಟ್ ಅಂತ ನೆನಪಿರುತ್ತದೆ ಹೊರತೂ ಡೇವಿಡ್ಡನಿಗೆ ತಾನು ನಿಜವಾದ ಮನುಷ್ಯ ಅಂತಲೇ ಅಂದುಕೊಂಡಿರುತ್ತಾನೆ.‌ ಅವನಿಗೆ ತನ್ನ ತಾಯಿ ಮೋನಿಕಾ ಮೇಲೆ ಬಹಳ ಮೋಹ. ಸದಾ ಅವಳ ಜೊತೆ ಇರಬೇಕೆಂಬ ಆಸೆ.‌ 

ಆದರೆ ಅಚಾನಕ್ಕಾಗಿ ಮಾರ್ಟಿನ್ ಹುಷಾರಾಗಿ ಮನೆಗೆ ಬಂದು ಬಿಡುತ್ತಾನೆ. ಅವನಿಗೆ ಡೇವಿಡ್ ಕಂಡರೆ ಹೊಟ್ಟೆಯುರಿಯಲು ಪ್ರಾರಂಭವಾಗುತ್ತದೆ. ಅದಕ್ಕಾಗಿ ಮನೆಯವರು ಅವನಿಗೆ ಬೈಯ್ಯುವ ಹಾಗೆ ಡೇವಿಡ್ ಕೈಲಿ ಬಹಳ ಕೆಟ್ಟ ಕೆಲಸಗಳನ್ನು ಮಾಡಿಸುತ್ತಾನೆ. ಡೇವಿಡ್ ಕೈಲಿ ತನ್ನ ತಾಯಿಯ ಕೂದಲು ಸಹ ಕತ್ತರಿಸುತ್ತಾನೆ. ಇದರಿಂದ ಕೆರಳುವ ದಂಪತಿಗಳು ಡೇವಿಡ್ಡನನ್ನು ವಾಪಸ್ ವಿಜ್ಞಾನಿ ಬಳಿ ಬಿಟ್ಟು ಬರಲು ನಿರ್ಧರಿಸುತ್ತಾರೆ‌ 
ಆದರೆ ಅಷ್ಟರಲ್ಲಿ ಮಿತಿಮೀರಿದ ರೋಬಾಟುಗಳ ಹಾವಳಿಯಿಂದ ಕಂಗೆಟ್ಟ ಮನುಷ್ಯರು ರೋಬಾಟುಗಳನ್ನು ಹಿಡಿದಿಡಿದು ನಾಶ ಮಾಡುತ್ತಿರುತ್ತಾರೆ. ಹಾಗಾಗಿ ಡೇವಿಡ್ ಬಗ್ಗೆ ಕರುಣೆ ಇದ್ದ ತಾಯಿ ಮೋನಿಕಾ ಅವನನ್ನು ವಿಜ್ಞಾನಿ ಬಳಿ‌ಕೊಟ್ಟರೆ ನಾಶ ಮಾಡಬಹುದು ಎಂದು ಯೋಚಿಸಿ ಕಾಡಿನಲ್ಲಿ ಬಿಟ್ಟು ಬರುತ್ತಾಳೆ. ತನ್ನ ತಾಯಿ ತನ್ನನ್ನು ಬಿಟ್ಟು ಹೋಗಲು ತಾನು ರೋಬಾಟ್ ಆಗಿರುವುದೇ ಕಾರಣ, ಹಾಗಾಗಿ ಮರಳಿ ತನ್ನ ತಾಯಿಯನ್ನು ಸೇರಲು ತಾನು ಮನುಷ್ಯನಾಗಬೇಕು ಎನ್ನುವುದು ಡೇವಿಡ್ ಹಂಬಲವಾಗುತ್ತದೆ. ಈ ಮಧ್ಯೆ ರೋಬಾಟುಗಳನ್ನು ನಾಶ ಮಾಡುವವರು ಅವನನ್ನು ಹಿಡಿದರೂ ಸಹ ಅವನ ಭಾವನೆಗಳನ್ನು ಗಮನಿಸಿ ಮನುಷ್ಯ ಇರಬಹುದೆಂದು ನಿರ್ಧರಿಸಿ ಕೊಲ್ಲದೇ ಬಿಟ್ಟುಬಿಡುತ್ತಾರೆ.


ಡೇವಿಡ್ ತಾನು ಮನುಷ್ಯನಾಗಲು ಏನು ಮಾಡಬೇಕೆಂದು ಹುಡುಕಲು ತೊಡಗುತ್ತಾನೆ. ಕೊನೆಗೊಬ್ಬರಿಂದ ನೀಲಿ ದೇವತೆಗೆ (ಬ್ಲೂ ಫೆರಿ) ಈ ಶಕ್ತಿ ಇದೆ ಎಂದು ತಿಳಿಯುತ್ತದೆ.‌ ಆದರೆ ಈಗ ನೀಲಿ ದೇವತೆಯನ್ನು ಹುಡುಕುವುದು ಹೇಗೆ? ಅವನು ನೀಲಿ ದೇವತೆಯನ್ನು ಹುಡುಕಿದನೇ? ಕೊನೆಗೂ ಆತ ಮನುಷ್ಯನಾದನೇ? ಅವನಿಗೆ ಅಮ್ಮನ ಪ್ರೀತಿ ದೊರಕಿತೇ? ಎಂದು ತಿಳಿಯಲು ಸಿನೆಮಾ ನೋಡಬೇಕಾಗುತ್ತದೆ. 

ಮನುಷ್ಯರಲ್ಲಿಯೇ ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿರುವಾಗ ಒಂದು ರೋಬಾಟಿಗೆ ತಾಯಿ ಪ್ರೀತಿ ಬೇಕು ಎನ್ನಿಸುವುದು ಬಹಳ ಸೋಜಿಗ ಎನಿಸುತ್ತದೆ. ತಾಯಿಗಾಗಿ ತಾನು ಮನುಷ್ಯನಾಗಬೇಕು ಅಂತ ಡೇವಿಡ್ ಪರದಾಡೋದು ಮನ ಕರಗಿಸುತ್ತದೆ.‌ ಈ ಸೆಂಟಿಮೆಂಟ್ಸ್ ಗಾಗಿಯೇ ಈ ಸಿನೆಮಾವನ್ನು ಐದಾರು ಬಾರಿ ನೋಡಿದ್ದೇನೆ. ಎಷ್ಟೇ ಆಗಲಿ ಈ ಸಿನೆಮಾ‌ 2001 ರದ್ದು. ಆಗಿನ ಕಾಲಕ್ಕೆ ಈ ಯೋಚನೆಯೇ ದೊಡ್ಡದು. 


ಆಗಿನ ಕಾಲದಲ್ಲಿಯೇ ಕಣ್ಣು ಕಣ್ಣು ಬಿಟ್ಟು ನೋಡುವಂತೆ ಮಾಡಿದ ಸಿನೆಮಾ ಇದೆ. ಕೊನೆಯಲ್ಲಿ ಏಲಿಯನ್ಸ್ ಬೇರೆ ಬರುತ್ತವೆ… ಕುತೂಹಲದಿಂದ ಸಿನೆಮಾ ನೋಡಲು ಮತ್ತೇನು ಬೇಕು? ಆದರೂ ಭಾವನಾರಹಿತ ರೋಬಾಟುಗಳಂತೆ ಭಾವನೆ ಇರುವ ರೋಬಾಟುಗಳು ಚುರುಕಿಲ್ಲ. ಮನಸ್ಸಿನಲ್ಲಿ ನಾನಾ ತಾಕಲಾಟ ನಡೆಯುತ್ತಿರುವಾಗ ಖಡಕ್ಕಾದ ಒಂದು ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಭಾವನೆ ಇರಲಿ ಅಥವಾ ಬಿಡಲಿ.. ರೋಬಾಟುಗಳೆಂದೂ ಮನುಷ್ಯರಾಗಲು ಸಾಧ್ಯವಿಲ್ಲ. ಆದರೆ ಏನಾದರೂ ಪವಾಡ ನಡೆದು ಇದು ಸಾಧ್ಯವಾಗಿ ಬಿಟ್ಟರೆ ನಮ್ಮ ಗತಿಯೇನು?
ಯೋಚಿಸಿ

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

One thought on ““AI” Artificial Intelligence

Leave a Reply