ಒಂದು ಕತ್ತಲ ರಾತ್ರಿ.
ಒಬ್ಬಳು ಹುಡುಗಿ ಒಂಟಿಯಾಗಿ ಕಾರ್ ಡ್ರೈವ್ ಮಾಡುತ್ತಾ ಬರುತ್ತಿದ್ದಾಳೆ. ಇದ್ದಕ್ಕಿದ್ದಂತೆ ಕಾರಿನಲ್ಲಿದ್ದ ರೇಡಿಯೋದಲ್ಲಿ ಈಗ ನಾವಿರುವ ಭೂಮಿಯ ಪಕ್ಕದಲ್ಲೇ ಮತ್ತೊಂದು ಭೂಮಿ ಕಾಣಿಸಿಕೊಂಡಿರುವ ಬಗ್ಗೆ ಸುದ್ದಿ ಪ್ರಸಾರವಾಗುತ್ತೆ. ‘”ಹೌದಾ?” ಅಂತ ದಿಗ್ಭ್ರಮೆಯಿಂದ ಕಾರ್ ನಿಲ್ಲಿಸದೇ ಕಾರಿನ ಕಿಟಕಿಯಿಂದಾಚೆ ನೋಡ್ತಾಳೆ.
ನಿಜ…..!!!!
ಆಕಾಶದಲ್ಲಿ ನಮ್ಮ ಭೂಮಿಯದ್ದೇ ಪ್ರತಿರೂಪದ ಮತ್ತೊಂದು ಆಕಾಶಕಾಯ (ಭೂಮಿ) ಇರುತ್ತದೆ. ಅದನ್ನೇ ನೋಡುತ್ತಾ ನೋಡುತ್ತಾ ಅರಿಯದೇ ಎದುರಿನಲ್ಲಿ ನಿಂತಿದ್ದ ಕಾರಿಗೆ ಗುದ್ದಿ ಬಿಡುತ್ತಾಳೆ.
ಆ ಒಂದೇ ನಿಮಿಷದಲ್ಲಿ ಎದುರಿನ ಕಾರಿನಲ್ಲಿದ್ದ ಸುಂದರ ಸಂಸಾರ ನುಚ್ಚು ನೂರಾಗಿ ಬಿಡುತ್ತೆ.
ಕಾರಿನಲ್ಲಿದ್ದ ಗರ್ಭಿಣಿ ಯುವತಿ ಮತ್ತು ಆಕೆಯ ಮಗು ಪ್ರಾಣ ಕಳೆದುಕೊಳ್ಳುತ್ತಾರೆ. ಆ ಯುವತಿಯ ಗಂಡ ಬಚಾವಾದರೂ ಈ ಅಪಘಾತದ ಕಾರಣದಿಂದ ಅನಾಥನಾಗಿ ಆಸ್ಪತ್ರೆ ಸೇರುತ್ತಾನೆ.
ಈ ಹುಡುಗಿಗೆ ಜೈಲು ಶಿಕ್ಷೆ ಆಗುತ್ತದೆ.
ಜೈಲಿನಿಂದ ಬಿಡುಗಡೆಯಾದ ಮೇಲೆ ಅಪಘಾತ ಮಾಡಿದ ಹುಡುಗಿ ಅಪಘಾತದಲ್ಲಿ ಬದುಕುಳಿದ ಆ ವ್ಯಕ್ತಿಯನ್ನು ಹುಡುಕಿ ಹೇಗೋ ಮಾಡಿ ಅವನ ವಿಶ್ವಾಸ ಸಂಪಾದಿಸುತ್ತಾಳೆ. ಅವನಿಗೆ ಈ ಹುಡುಗಿಯೇ ತನ್ನ ಎಲ್ಲಾ ನೋವಿಗೂ ಕಾರಣ ಅಂತ ಗೊತ್ತಿರುವುದಿಲ್ಲ. ಹಾಗಾಗಿ ಇವಳನ್ನು ತನ್ನ ಜೀವನದೊಳಗೆ ಬಿಟ್ಟುಕೊಳ್ಳುತ್ತಾನೆ.
ಇವಳ ಉದ್ದೇಶ ಇಷ್ಟೇ…
ತನ್ನಿಂದ ನೋವು ತಿನ್ನುತ್ತಿರುವ ಜೀವಕ್ಕೆ ಸಾಧ್ಯವಾದಷ್ಟೂ ಸಾಂತ್ವನಗೈಯ್ಯಬೇಕು ಎನ್ನುವುದು. ಅದಕ್ಕಾಗಿ ತನ್ನ ತನು-ಮನಗಳನ್ನು ಆತನಿಗಾಗಿ ಮೀಸಲಿಡುತ್ತಾಳೆ.
ಅಷ್ಟರಲ್ಲಿ ಆ ಹೊಸದಾಗಿ ಪತ್ತೆಯಾಗಿರುವ ಭೂಮಿಯನ್ನು ಹೋಲುವ “ಆ ಗ್ರಹ”ಕ್ಕೆ ಹೋಗಲು ಒಂದು ಖಾಸಗಿ ಕಂಪೆನಿಯವರು ಪ್ರಬಂಧ ಸ್ಪರ್ಧೆಯನ್ನು ಇಡುತ್ತಾರೆ. ಅದರಲ್ಲಿ ಆಕೆ ಭಾಗವಹಿಸಿ ಗೆದ್ದು ಹೊಸ ಗ್ರಹಕ್ಕೆ ಹೋಗಲು ಟಿಕೆಟ್ ಪಡೆಯುತ್ತಾಳೆ.
ಆಗ ಇನ್ನೊಂದು ಹೊಸ ವಿಷಯ ಗೊತ್ತಾಗುತ್ತದೆ.
ಏನೆಂದರೆ….. ಆ ಹೊಸ ಗ್ರಹದಲ್ಲಿಯೂ ನಮ್ಮ ಭೂಮಿಯ ರೀತಿ ವಾತಾವರಣ ಇರುವುದಷ್ಟೇ ಅಲ್ಲದೇ, ಭೂಮಿಯ ಮೇಲಿನ ವ್ಯಕ್ತಿಗಳ ರೀತಿಯೇ ಅಲ್ಲಿಯೂ ವ್ಯಕ್ತಿಗಳಿದ್ದಾರೆ….
ಅದೇ ಹೆಸರುಗಳು…..
ಅದೇ ವ್ಯಕ್ತಿತ್ವಗಳು……
ಒಂದು ರೀತಿಯಲ್ಲಿ ಹೊಸ ಭೂಮಿಯು ನಮ್ಮ ಭೂಮಿಯ ಕನ್ನಡಿಯ ಹಾಗಿನ ಪ್ರತಿರೂಪ ಎಂದು ತಿಳಿಯುತ್ತದೆ.
ಆದರೆ ಅಲ್ಲಿನ ಜೀವನಕ್ಕೂ ಇಲ್ಲಿನ ಜೀವನಕ್ಕೂ ಸ್ವಲ್ಪ ಮಟ್ಟಿಗೆ ಬದಲಾವಣೆ ಇರುತ್ತದೆ. ಇಲ್ಲಿ ನಡೆದಿರುವ ಘಟನೆಗಳು ಎಲ್ಲವೂ ಅಲ್ಲಿ ನಡೆಯದೇ ಇರಬಹುದು ಅಥವಾ ಇಲ್ಲಿ ನಡೆಯದೇ ಇರುವ ಘಟನೆಗಳು ಅಲ್ಲಿ ನಡೆದಿರಬಹುದು.
ಆದರೆ ಒಂದಂತೂ ಸತ್ಯ.
‘ತಾನು’ ಈ ಭೂಮಿಯ ಮೇಲೆ ಅಪಘಾತ ಮಾಡಿದ ಹಾಗೆ, ಇನ್ನೊಂದು ಹೊಸ ಭೂಮಿಯಲ್ಲಿರುವ ‘ತಾನು’ ಬಹುಶಃ ಅಪಘಾತ ಮಾಡಿರುವುದಿಲ್ಲ. ಹಾಗಿದ್ದರೆ ಆ ವ್ಯಕ್ತಿಯ ಹೆಂಡತಿ ಮತ್ತು ಮಕ್ಕಳು ಇನ್ನೊಂದು ಭೂಮಿಯಲ್ಲಿ ಜೀವಂತವಾಗಿರಬಹುದು ಎಂಬ ಆಶಯ ಅವಳಲ್ಲಿ ಮೊಳಕೆಯೊಡೆಯುತ್ತದೆ. ತನ್ನಿಂದ ನಾಶವಾದ ಆ ಕುಟುಂಬವನ್ನು ಹೇಗಾದರೂ ಮಾಡಿ ಸೇರಿಸಬೇಕೆಂಬ ಹಂಬಲ ಮೂಡುತ್ತದೆ.
ಅದಕ್ಕಾಗಿ ಆತನನ್ನೇ ಆ ಹೊಸ ಗ್ರಹಕ್ಕೆ ಕಳಿಸುವ ನಿರ್ಧಾರ ಮಾಡುತ್ತಾಳೆ. ಆ ವ್ಯಕ್ತಿಗೆ ತನ್ನ ಬಗ್ಗೆ ನಿಜ ವಿಷಯ ತಿಳಿಸಿ, ತಾನು ಗೆದ್ದ ಟಿಕೆಟ್ ಅನ್ನು ಅವನಿಗೆ ಕೊಟ್ಟು, ಅವನನ್ನು ಹೊಸ ಭೂಮಿಗೆ ಕಳಿಸುತ್ತಾಳೆ. ನಂತರ ತನ್ನಿಂದ ಹಾಳಾದ ಸಂಸಾರ ತನ್ನಿಂದಲೇ ಒಂದಾಯ್ತು ಎನ್ನುವ ಖುಷಿಯಲ್ಲಿ ಕಾಲ ಕಳೆಯುತ್ತಿರುತ್ತಾಳೆ.
ಮೂರು ತಿಂಗಳ ನಂತರ ಏನೋ ಕೆಲಸ ಮಾಡುತ್ತಿದ್ದ ಅವಳನ್ನು ಯಾರೋ ಕರೆದಂತಾಗುತ್ತದೆ. ತಿರುಗಿ ನೋಡಿದರೆ ಅವಳದ್ದೇ ಪ್ರತಿರೂಪಿ ಅಲ್ಲಿ ಅವಳ ಹಿಂದೆ ನಿಂತಿರುತ್ತಾಳೆ…..
ಉಳಿದದ್ದನ್ನು ಊಹಿಸುವ ಸರದಿ ಪ್ರೇಕ್ಷಕರದ್ದು.
***********
ಕೆ.ಎ.ಸೌಮ್ಯ
ಮೈಸೂರು