ಪ್ರೈಮ್ ವಿಡಿಯೋ
ಬೇಬಿ, ನಾಮ್ ಶಬಾನಾ, ಅಯ್ಯಾರಿ ಮುಂತಾದ ಇತ್ತೀಚಿನ ಹೊಸಬಗೆಯ “ರಾ” ಗೂಢಚಾರಿ ಎಜೆಂಟ್ ಚಿತ್ರಗಳನ್ನು ನೀವು ನೋಡಿ ಆನಂದಿಸಿದ್ದರೆ, ಅಕ್ಷಯ್ ಕುಮಾರ್ ನಟಿಸಿರುವ ಬೆಲ್ ಬಾಟಮ್ (2021) ಚಿತ್ರ ನಿಮಗೆ ಪ್ರಿಯವಾಗಬಹುದು. ಈ ಸಲ ಕೆಲವು ಪಾಕ್ ಬೆಂಬಲಿತ ಉಗ್ರವಾದಿಗಳು ಮತ್ತು ಭಾರತೀಯ ವಿಮಾನ ಅಪಹರಣ ಅದಕ್ಕೆ ಸಂಬಂಧಿಸಿದಂತೆ ನಾಯಕ (ಕೋಡ್ ನೇಮ್ ಬೆಲ್ ಬಾಟಂ) ದುಬೈ ವಿಮಾನ ನಿಲ್ದಾಣದಲ್ಲಿ ನಡೆಸುವ ಸಾಹಸಮಯ ಆಪರೇಶನ್, ಒತ್ತೆಯಾಳುಗಳ ಬಿಡುಗಡೆ ಕಥಾವಸ್ತುವಿರುವ ಹೊಸ ಹಿಂದಿ ಥ್ರಿಲ್ಲರ್ ಚಿತ್ರ ಇದಾಗಿದೆ.ಸಾಕಷ್ಟು ಅಧ್ಯಯನ ಮಾಡಿ ನೈಜತೆ ತರಲು ಅದೇ ಬಗೆಯ ಪ್ರಕರಣದ ವಾಸ್ತವಿಕ ವರದಿ ಇಟ್ಟುಕೊಂಡು ಕಥೆಯನ್ನು ಬೆಳೆಸುತ್ತಾ ಹೋಗಿದ್ದಾರೆ.
ನಾಯಕನ ಕುಟುಂಬದಲ್ಲಿ ನಡೆದ ಕಹಿ ಘಟನೆ, ತದನಂತರ ಅವನ ಬೇಹುಗಾರಿಕೆ ತರಬೇತಿ, ಮತ್ತು ಆಗಿನ 1983 ಕಾಲದ ರಾಜಕೀಯ ನಾಯಕರಾದ ಪ್ರಧಾನಿ ಇಂದಿರಾ ಗಾಂಧಿ (ನಟಿ ಲಾರಾ ದತ್ತ ಅದ್ಭುತ ಮೇಕಪ್ ಮತು ನೈಜ ಅಭಿನಯ), ಸರಳ ಸುಂದರಿ ನಾಯಕಿ ( ಪತ್ನಿ- ಆಕೆಯದೊಂದು ಕೊನೆಯ ಟ್ವಿಸ್ಟ್ ಇದೆ!) ವಾಣಿ ಕಪೂರ್…
ಇವರೊಂದಿಗೆ ಚಿಕ್ಕ ತಂಡ ಎಲ್ಲ ರೀತಿಯ ಅಡೆತಡೆ ಒಡ್ಡುವ ಬಾಸ್ ಗಳು , ಮತ್ತು ಮೂಗು ಮುರಿಯುವ ರಾಜಕಾರಣಿಗಳ ಜತೆ ಮಾನಸಿಕ ಸಂಘರ್ಷ ಮಾಡಿ ತನ್ನ ಚಲದಿಂದ ಗೆಲ್ಲುವ ಭಾರತೀಯ ಸ್ಪೈ ನಾಯಕನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಮತ್ತೆ ಮಿಂಚಿದ್ದಾರೆ.
ಇತ್ತೀಚೆಗೆ ಇವರ ಸರಣಿ ಚಿತ್ರಗಳೇ ಈ ದಾಟಿಯಲ್ಲಿ ಬರುತ್ತಿದ್ದರೂ ನಟ ಗಮನ ಸೆಳೆಯುತ್ತಾರೆ. ಎಲ್ಲೋ ನಾವು ಇದನ್ನೆಲ್ಲಾ ಆಗಲೇ ನೋಡಿಯಾಗಿದೆಯೆಲ್ಲಾ, ಹೀಗೆಯೇ ಕೊನೆಯಾಗುತ್ತದೆ – ಎಂಬ ಒಂದು ಡೆಜಾವೂ ಭಾವನೆ ಬಂದರೂ ಸಹಾ, ನಿರ್ದೇಶಕ ಎಲ್ಲೂ ಎಡವಿಲ್ಲ.
ಇನ್ನೂ ಹೆಚ್ಚಿನ ಕಥೆ ಹೇಳಿದರೆ ಸ್ವಾರಸ್ಯ ಹೋಗಿಬಿಡುತ್ತದೆ.
ಎಲ್ಲರೂ ಪ್ರೈಮ್ ವಿಡಿಯೋದಲ್ಲಿ ನೋಡಿ ಆನಂದಿಸಬಹುದು.
ಯಾವುದೇ ಅತಿ ಹಿಂಸೆ ಅಥವಾ ಕಸಿವಿಸಿಯಾಗುವ ಶೃಂಗಾರದ ದೃಶ್ಯಗಳಿಲ್ಲ. ಮನೆಯವರೊಂದಿಗೆ ನೋಡಬಹುದು.ನನ್ನ ರೇಟಿಂಗ್: 3.5/5