ಸಿಂಪಲ್ ಆಗಿ ಹೇಳಬೇಕೆಂದರೆ ಇದು “ಪರಕಾಯ ಪ್ರವೇಶ”ಕ್ಕೆ ಸಂಬಂಧಿಸಿದ್ದು.
ಸಿನೆಮಾ ಶುರು ಆದಾಗ ಅಲ್ಲೇನು ನಡೆಯುತ್ತಿದೆ ಅಂತಲೇ ಅರ್ಥವಾಗದೇ ಕನ್ಫ್ಯೂಸ್ ಆಗಿಬಿಡ್ತೀವಿ. ಚೆನ್ನಾಗಿಯೇ ಇರುವ ಮನುಷ್ಯರೆಲ್ಲರೂ ದಿಢೀರ್ ಅಂತ ವಿಚಿತ್ರವಾಗಿ ವರ್ತಿಸಲು ಶುರು ಮಾಡುವುದು ನಮಗೂ ಸಹ ವಿಚಿತ್ರ ಎನಿಸುತ್ತದೆ. ಅಷ್ಟರಲ್ಲೇ ಗೊತ್ತಾಗುತ್ತದೆ ಇದಕ್ಕೆ ಕಾರಣ ಖಳನಾಯಕನ “ಪರಕಾಯ ಪ್ರವೇಶ” ಅಂತ.
ಒಂದು “ಸಿದ್ಧಿ” ಇದೆ. ಆ ಸಿದ್ಧಿ ಇರುವ ಮನುಷ್ಯನು ತನ್ನ ಆತ್ಮವನ್ನು ಬೇರೊಬ್ಬ ಮನುಷ್ಯನೊಳಗೆ ಕಳಿಸಿ, ಆ ಮನುಷ್ಯನ ಆತ್ಮವನ್ನು ತನ್ನ ದೇಹಕ್ಕೆ ಕಳಿಸುವಂತಹಾ ಶಕ್ತಿ ಇರುತ್ತದೆ. ಸರಳವಾಗಿ ಹೇಳಬೇಕೆಂದರೆ ‘ಆತ್ಮಗಳ ಎಕ್ಸ್ ಚೇಂಜ್’ ಎನ್ನಬಹುದು. ಇದಕ್ಕೆ ಸೈಂಟಿಫಿಕ್ ಲೇಪನವಿಲ್ಲ. ಇದು ಒಂದು ಆಧ್ಯಾತ್ಮಿಕವಾದಂತಹ ಸಿದ್ಧಿ. ಈ ಸಿದ್ಧಿ ಬೇಕೆಂದರೆ ತಾನೇ ಕಷ್ಟಪಟ್ಟು ತಪಸ್ಸು ಮಾಡಿ ಪಡೆಯಬೇಕಾದಂಥದ್ದು.
“ಆದಿತ್ಯ” ಎಂಬಾತ ಈ ಸಿದ್ಧಿಯನ್ನು ಸ್ವಸಾಮರ್ಥ್ಯದಿಂದ ಪಡೆದಿರುತ್ತಾನೆ. ಒಂದು ಸಲ ಆ ಸಿದ್ಧಿ ತನಗೆ ಸಿಕ್ಕಿತು ಅಂದ ಕೂಡಲೇ ಅದರಿಂದ ತನಗೆ ಬೇಕಾದ ಎಲ್ಲವನ್ನೂ ಪಡೆಯತೊಡಗುತ್ತಾನೆ. ಹೇಗೆಂದರೆ ತನಗೆ ಬೇಕೆನಿಸಿದವರ ದೇಹದೊಳಗೆ ಪ್ರವೇಶಿಸಿ ತನಗೆ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಿರುತ್ತಾನೆ. ಉದಾಹರಣೆಗೆ ಜ್ಯುವೆಲ್ಲರಿ ಅಂಗಡಿಯ ಸಹಾಯಕ, ಬ್ಯಾಂಕ್ ಮ್ಯಾನೇಜರ್ ಹೀಗೆ ಎಲ್ಲರ ದೇಹದೊಳಗೆ ಹೋಗಿ, ಅವರ ದೇಹದ ಮೂಲಕ ದುಡ್ಡು ಕದ್ದು ತೆಗೆದುಕೊಂಡು ಹೋಗುತ್ತಿರುತ್ತಾನೆ. ದುಡ್ಡು ಕದ್ದ ಅಪವಾದ ಮಾತ್ರ ಏನೂ ಅರಿಯದ ಆ ಬಡಪಾಯಿಗಳ ಮೇಲೆ ಬರುತ್ತಿರುತ್ತದೆ.
ಒಮ್ಮೆ ಪೊಲೀಸಾಗಿರುವ ನಾಯಕ ಕಷ್ಟಪಟ್ಟು ಆದಿತ್ಯನನ್ನು ಸಾಕ್ಷಿ ಸಮೇತ ಹಿಡಿದು ಅರೆಸ್ಟ್ ಮಾಡುತ್ತಾನೆ. ಅಲ್ಲಿಂದ ಅಸಲಿ ಸಿನೆಮಾ ಶುರುವಾಗುತ್ತದೆ. ಏನೆಂದರೆ ಜೈಲಿಗೆ ಹೋಗುವ “ಆದಿತ್ಯ” ತಾನು ನಾಯಕನ ಶರೀರ ಪ್ರವೇಶಿಸಿ, ನಾಯಕನಾದ ವಿಕ್ರಂ ಆತ್ಮವನ್ನು ತನ್ನ ದೇಹದೊಳಗೆ ಬಂಧಿಸುತ್ತಾನೆ.
ಅಂದರೆ ಆದಿತ್ಯ “ಪೊಲೀಸ್” ಆಗುತ್ತಾನೆ….ವಿಕ್ರಂ “ಕಳ್ಳ”ನಾಗುತ್ತಾನೆ…..
ಈಗ ಆದಿತ್ಯನ ದೇಹ ಹೊತ್ತುಕೊಂಡಿರುವ ವಿಕ್ರಂ ತಾನೇ ವಿಕ್ರಂ ಅಂತ ಹೇಗೆ ಸಾಧಿಸಿ ತೋರಿಸುತ್ತಾನೆ?
ವಿಕ್ರಮನನ್ನು ಮದುವೆಯಾಗಬೇಕಾದ ಹೆಣ್ಣೂ ಸಹ ವಿಕ್ರಮನ ಮೇಲೆ ಅನುಮಾನ ಪಡದೇ ಆದಿತ್ಯನ ಮೇಲೆಯೇ ಅನುಮಾನ ಪಡುತ್ತಾಳೆ. ಸಹಜ ತಾನೇ…? ಆದಿತ್ಯನ ದೇಹ ಹೊತ್ತುಕೊಂಡು ತಾನು ಆದಿತ್ಯ ಅಲ್ಲ ಎಂದರೆ ಯಾರು ತಾನೇ ನಂಬುತ್ತಾರೆ?
ಇಷ್ಟೆಲ್ಲಾ ಆದರೂ ಆದಿತ್ಯನಿಗೆ ತನ್ನ ದೇಹ ಬೇಕಿರುತ್ತದೆ. ಏಕೆಂದರೆ ಅವನು ಈ ಕಳ್ಳತನದ ಆಪಾದನೆ ಕಳೆದುಕೊಂಡು ಮರಳಿ ತನ್ನ ದೇಹ ಸೇರಿಕೊಂಡು ಜೀವನ ಮಾಡಬೇಕಿರುತ್ತದೆ. ಈ ಮಧ್ಯೆ ತನ್ನ ನಿಜ ವಿಷಯ ತಿಳಿದ ಅನೇಕರನ್ನು ವಿಕ್ರಮನ ರೂಪದಲ್ಲಿರುವ ಆದಿತ್ಯ ಪರಲೋಕಕ್ಕೆ ರವಾನಿಸುತ್ತಾನೆ.
ನಾಯಕ ತನ್ನ ದೇಹ ಮರಳಿ ಪಡೆದನೇ…???ನಾಯಕಿ ಆತನ ಮಾತನ್ನು ನಂಬಿದಳೇ…???ಆದಿತ್ಯನಿಗೆ ಸರಿಯಾದ ಶಿಕ್ಷೆಯಾಯಿತೇ…???
ತಿಳಿಯಲು ಸಿನೆಮಾ ನೋಡಿ.