Boomerang” (ತಮಿಳು)

ಈ ಸಾಫ್ಟ್‌ವೇರ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವವರ ಪ್ರಪಂಚವೇ ಬೇರೆ. ಅವರ ದಿನನಿತ್ಯದ ರೊಟೀನಿನಲ್ಲಿ ಅವರು ಈ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವ ಅವಕಾಶವೇ ಇರುವುದಿಲ್ಲ. ಆಫೀಸ್ ಇರಲಿ ಅಥವಾ ರಜಾದಿನದ ಪಾರ್ಟಿ ಇರಲಿ.. ಅವರು ಎಲ್ಲ ಕಡೆ ಸ್ವಂತ ವಾಹನ ಬಳಸುವುದರಿಂದ ಈ ದೇಶದ ಸಾಮಾನ್ಯ ಪ್ರಜೆಯ ಕಷ್ಟ ಅವರಿಗೆ ಅರ್ಥ ಆಗಿರುವುದಿಲ್ಲ.

ಈ ಕಷ್ಟ ಅರ್ಥ ಆಗಬೇಕೆಂದರೆ ಅವರು ಒಂದು ಸರ್ಕಾರಿ ಕಛೇರಿಗೆ ಹೋಗಬೇಕು.

ಈ ಸಿನೆಮಾದ ಮೂವರು ಸಾಫ್ಟ್‌ವೇರ್ ಇಂಜನಿಯರ್ಸ್ ತಮ್ಮ ಕೆಲಸ ಬಿಟ್ಟು ಹಳ್ಳಿಗೆ ವಾಪಸ್ಸಾಗುತ್ತಾರೆ. ತಮ್ಮ ಹಳ್ಳಿಯಲ್ಲಿಯೇ ಮಹತ್ತರವಾದುದೇನೋ ಸಾಧಿಸಿಬಿಡುತ್ತೇವೆ ಅಂತ ಅಮಿತವಾದ ಆತ್ಮವಿಶ್ವಾಸದಿಂದ ಇರುತ್ತಾರೆ. ಅವರಲ್ಲಿ ಒಬ್ಬನೇ ‘ಶಕ್ತಿ’… ನಮ್ಮ ಸಿನೆಮಾದ ನಾಯಕ!

ಆದರೆ ಪ್ರತೀದಿನವೂ ಅಪ್ಡೇಟ್ ಆಗುತ್ತಾ, ಹೊಸತನ್ನು ಒಪ್ಪಿಕೊಳ್ಳುತ್ತಾ ಬದುಕುತ್ತಿರುವುದು ಸಾಫ್ಟ್‌ವೇರ್ ಜಗತ್ತು ಮಾತ್ರ ಅಂತ ಇವರುಗಳು ಮರೆತು ಬಿಡುತ್ತಾರೆ. ಜಗತ್ತು ಬದಲಾಗಿದೆ. ಗುಡಿಸಲು ಇದ್ದ ಜಾಗಕ್ಕೆ ಬಿಲ್ಡಿಂಗ್ ಬಂದಿದೆ. ರೇಡಿಯೋ ಇದ್ದ ಜಾಗಕ್ಕೆ ಟಿವಿ ಬಂದಿದೆ. ಸ್ಥಿರ ದೂರವಾಣಿಯ ಜಾಗಕ್ಕೆ ಮೊಬೈಲ್ ಫೋನ್….

ಟೋಟಲ್ಲಾಗಿ ಜಗತ್ತೇ ಬದಲಾಗಿದೆ.

ಆದರೆ ಮನುಷ್ಯ ಹಾಗೆಯೇ ಇದ್ದಾನೆ. ಅವನ ಆಸೆ-ದುರಾಸೆ, ಅಧಿಕಾರದ ಲಾಲಸೆ, ಮತ್ತೊಬ್ಬರನ್ನು ತುಳಿದು ತಾನು ಮೇಲೇರುವ ಹಪಾಹಪಿ ಎಲ್ಲವೂ ಚೂರೂ ಸಹ ಬದಲಾಗದೇ ಪೀಳಿಗೆಯಿಂದ ಪೀಳಿಗೆಗೆ ವರ್ಗವಾಗುತ್ತಾ ಬಂದಿದೆ.

ಸರ್ಕಾರಿ ಕಛೇರಿಯ ಅವ್ಯವಸ್ಥೆಯ ಬಗ್ಗೆ ಚೂರೂ ಅರಿವಿರದ ಶಕ್ತಿ, ಮತ್ತು ಗೆಳೆಯರು ತಾವು ಜನರಿಗಾಗಿ ತಯಾರಿಸಿದ ಪ್ರಾಜೆಕ್ಟ್ ಅನ್ನು ಅಧಿಕಾರಿಗಳು ಉದಾರ ಮನಸ್ಸಿನಿಂದ ಒಪ್ಪಿಕೊಂಡುಬಿಡುತ್ತಾರೆ ಅಂತಲೇ ತಿಳಿದಿರುತ್ತಾರೆ. ಆದರೆ ತಮ್ಮ ಪ್ರಾಜೆಕ್ಟಿಗೆ “ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ NOC” ತರುವಷ್ಟರಲ್ಲಿ ಮೂವರಿಗೂ ಮೂರು ಲೋಕ ಕಾಣುತ್ತದೆ.

ಸರ್ಕಾರಿ ವ್ಯವಸ್ಥೆಯ ಅವ್ಯವಸ್ಥೆಯನ್ನು ತೋರಿಸುತ್ತಲೇ ಎಲ್ಲರ ಕಣ್ತೆರೆಸುವ ಪ್ರಯತ್ನ ಮಾಡುತ್ತಾರೆ ನಿರ್ದೇಶಕರು. ಅಂತೂ ನಾಯಕ ಕಡೆಗೊಮ್ಮೆ ವ್ಯವಸ್ಥೆಯ ವಿರುದ್ಧ ಸಿಡಿದು ಬೀಳುತ್ತಾನೆ. ಇದರಲ್ಲಿ ನಾಯಕ ಜಯಶಾಲಿಯಾದನೇ? ಅವರು ಅಂದುಕೊಂಡ ಪ್ರಾಜೆಕ್ಟ್ ಮಾಡಿ ಮುಗಿಸಿದರೇ? ಇವನ್ನೆಲ್ಲಾ ತಿಳಿಯಲು ಸಿನೆಮಾ ನೋಡಿ.

ಹಿಂದಿ ಡಬ್ ವರ್ಷನ್ ಯೂಟ್ಯೂಬಿನಲ್ಲಿದೆ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply