ಮಹಿಳಾ ಅಸಮಾನತೆಯೇ ಇದರ ಮುಖ್ಯವಿಷಯ.
ಒಬ್ಬ ಹೆಂಗಸಿಗೆ ಕೆಲಸ ಸಿಕ್ಕಾಗ ಎಲ್ಲರೂ ಹೇಳುವುದೇನೆಂದರೆ, ಮಹಿಳೆಯಾದ ಕಾರಣಕ್ಕೆ ಅವಕಾಶ ಗಿಟ್ಟಿಸಿದಳು ಅಂತ. ಅದು ಕೇವಲ ಅಸೂಯೆಯ ಹೇಳಿಕೆಯಷ್ಟೇ. ಏಕೆಂದರೆ ನಿಜವಾಗಿ ನೋಡಿದರೆ ಮಹಿಳೆಯಾದ ಕಾರಣಕ್ಕೆ ಆಕೆ ಅವಕಾಶ ಕಳೆದುಕೊಳ್ಳುತ್ತಿದ್ದಾಳೆ. ಹೆಣ್ಣು-ಗಂಡು ಸಮಾನರು ಎನ್ನುವವರು ಸಹ ಆಕೆ ಮಹಿಳೆ ಎಂಬ ಕಾರಣಕ್ಕೆ ಕೆಲಸ ನೀಡಲು ಹಿಂಜರಿಯುತ್ತಿದ್ದಾರೆ. ಅದರಲ್ಲಿಯೂ ಆಕೆ ಆ ಕೆಲಸಕ್ಕೆ ಎಲ್ಲಾ ರೀತಿಯಲ್ಲಿಯೂ ಅರ್ಹಳಿದ್ದರೂ ಸಹ……
ಇದರ ನಾಯಕಿ ಒಬ್ಬ ಸಿಂಗಲ್ ಪೇರೆಂಟ್.
ಇರುವ ತನ್ನೊಬ್ಬ ಮಗಳಿಗಾಗಿ, ಆ ಮಗುವಿನ ಭವಿಷ್ಯಕ್ಕಾಗಿ ಏನು ಮಾಡಲೂ ತಯಾರಿದ್ದಾಳೆ ಆಕೆ. ಆಕೆಯ ವೃದ್ಧ ತಂದೆಯೊಬ್ಬರೇ ಅವಳ ಎಲ್ಲಾ ಕೆಲಸಗಳಿಗೆ ಸಹಾಯ ಮಾಡುತ್ತಿರುವುದು. ಆ ಮೂವರೂ ಒಂದು ಮನೆಯಲ್ಲಿ ಒಟ್ಟಾಗಿ ಬದುಕುತ್ತಿರುತ್ತಾರೆ.
ಆಕೆಯ ಆಸೆಗಳೇನು ಬಹಳ ದೊಡ್ಡವಲ್ಲ.
ಇರಲು ಬಂಗಲೆ ಬೇಕು, ಕಾರಿನಲ್ಲಿ ಓಡಾಡಬೇಕು ಅಂತೆಲ್ಲಾ ಏನಿಲ್ಲ. ಕೇವಲ ತನ್ನ ಮತ್ತು ತನ್ನ ಮಗಳ ದೈನಂದಿನ ಅವಶ್ಯಕತೆ ಪೂರೈಕೆಯಾದರೆ ಸಾಕು. ಅದಕ್ಕಾಗಿ ರಸ್ತೆಯಲ್ಲಿ ಹಣ್ಣು ಮಾರುತ್ತಾಳೆ, ಜಿಮ್ ಕೆಲಸ ಮಾಡುತ್ತಾಳೆ, ಕಾರು ತೊಳೆಯುತ್ತಾಳೆ. ಒಟ್ಟಿನಲ್ಲಿ ಏನಾದರೂ ಸರಿ… ಕೆಲಸ ಅಂತ ಒಂದಿರಬೇಕು ಆಕೆಗೆ.
ಅಷ್ಟರಲ್ಲಿ ಆಕೆಗೊಂದು ಜಾಹೀರಾತು ಕಾಣುತ್ತದೆ.
ಜಪಾನೀಸ್ ರೆಸ್ಟೋರೆಂಟ್ ಒಂದಕ್ಕೆ ಹೆಲ್ಪರ್ ಬೇಕಾಗಿರುತ್ತದೆ. ಅಡುಗೆ ಸಹಾಯಕಿಯ ಕೆಲಸ. ಆ ಕೆಲಸ ಆಕೆಗೆ ಅನಾಯಾಸವಾಗಿ ಸಿಗುತ್ತದೆ. ಪಾತ್ರೆಗಳನ್ನು ವಾಶ್ ಮಾಡಿ ಇಡಬೇಕಷ್ಟೇ. ಅಷ್ಟೇನೂ ಕೌಶಲ್ಯ ಬೇಡದ, ನೀರಸವಾದ ಒಂದು ಕೆಲಸ ಅದು. ನಾಯಕಿಯ ಮನಸ್ಥಿತಿಗೆ ಹೊಂದುವಂಥದ್ದಲ್ಲ. ಆದರೂ ಮೂರು ತಿಂಗಳ ನಂತರ ಮೆಡಿಕಲ್ ಇನ್‌ಶ್ಯೂರೆನ್ಸ್ ಸಿಗುತ್ತದೆ ಎಂಬ ಕಾರಣಕ್ಕೆ ಆಕೆ ಈ ಕೆಲಸ ಮಾಡುತ್ತಿರುತ್ತಾಳೆ.
ಆ ರೆಸ್ಟೋರೆಂಟಿನಲ್ಲಿ ಒಂದು ವಿಶೇಷವಾದ ಖಾದ್ಯ ತಯಾರಿಸುತ್ತಿರುತ್ತಾರೆ.. “ಸುಶಿ” !!
ಅದನ್ನು ಜಪಾನೀಯರೇ ಮಾಡಬೇಕು ಎನ್ನುವುದು ನಿಯಮ. ಆದರೆ ಮೆಕ್ಸಿಕನ್ ಆಗಿರುವ ನಾಯಕಿ ಆ ಖಾದ್ಯ ತಯಾರಿಸಲು ಕಲಿತು ಬಿಡುತ್ತಾಳೆ ಮತ್ತು ತನ್ನನ್ನು ಆ ರೆಸ್ಟೋರೆಂಟಿನಲ್ಲಿ ಶೆಫ್ ಆಗಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಾಳೆ. ಏಕೆಂದರೆ ಯಾವುದೇ ಸುಶಿ ಶೆಫ್ ಗೂ ಕಡಿಮೆ ಇಲ್ಲದಂತೆ ಆಕೆ ಆ ಖಾದ್ಯ ತಯಾರಿಕೆಯಲ್ಲಿ ಪಳಗಿರುತ್ತಾಳೆ. ರೆಸ್ಟೋರೆಂಟಿನಲ್ಲಿ ಬೇರೆಯವರು ಆ ಖಾದ್ಯ ತಯಾರಿಸುವುದನ್ನು ನೋಡುತ್ತಾ ಮತ್ತು ಮನೆಯಲ್ಲಿ ಪ್ರತೀದಿನ ಪ್ರಯತ್ನಿಸುತ್ತಾ ಆಕೆ ಸುಶಿ ತಯಾರಿಯಲ್ಲಿ ಎಕ್ಸಪರ್ಟ್ ಆಗಿಬಿಟ್ಟಿರುತ್ತಾಳೆ.
ಆದರೆ ಮಾಲೀಕ ಹೇಳುವ ಮಾತುಗಳನ್ನು ಕೇಳಿದರೆ ಷಾಕ್ ಆಗುವುದು ಖಂಡಿತಾ…. !!!
ಆತ ಆಕೆಯನ್ನು ಶೆಫ್ ಆಗಿ ತೆಗೆದುಕೊಳ್ಳದೇ ಇರಲು ಹತ್ತಾರು ಕಾರಣ ಕೊಡುತ್ತಾನೆ. ಆದರೆ ಅದರಲ್ಲಿ ಮುಖ್ಯ ಕಾರಣ ಆಕೆ ಒಬ್ಬ ಹೆಣ್ಣಾಗಿರುವುದು. ಯೆಸ್!! ಆಕೆಗೆ ಕೋಪ ಬಂದು ಕೆಲಸ ಬಿಟ್ಟು ಹೊರನಡೆಯುತ್ತಾಳೆ.
ಅಷ್ಟರಲ್ಲಿ “ಚಾಂಪಿಯನ್ ಆಫ್ ಸುಶಿ” ಎಂಬ ಕಾಂಟೆಸ್ಟ್ ಇರುವುದು ಗೊತ್ತಾಗಿ ಅರ್ಜಿ ಗುಜರಾಯಿಸುತ್ತಾಳೆ. ಅದಕ್ಕೆ ಆಯ್ಕೆಯೂ ಆಗಿಬಿಡುತ್ತಾಳೆ. ಗೆದ್ದರೆ ಇಪ್ಪತ್ತು ಸಾವಿರ ಡಾಲರ್ ಬಹುಮಾನ. ಮಹಾನ್ ಶ್ರದ್ಧೆಯಿಂದ ಕಾಂಪಿಟೇಷನ್ನಿಗೆ ಹೋಗಲು ತಯಾರು ಮಾಡಿಕೊಳ್ಳುತ್ತಾಳೆ. ಅವಳೊಂದಿಗೆ ನಾವೂ ಸಹ ಖುಷಿಯಲ್ಲಿರುತ್ತೇವೆ.
ಆದರೆ ಕಾಂಪಿಟೇಷನ್ ದಿನ ಆ ಸ್ಥಳಕ್ಕೆ ಹೋಗಿ ತನ್ನ ಪರಿಚಯ ಹೇಳಿಕೊಂಡಾಗ ಅಲ್ಲಿರುವವರೆಲ್ಲ ಷಾಕ್ ಆಗುತ್ತಾರೆ. ಏಕೆಂದರೆ ಒಬ್ಬ ಮಹಿಳೆಯನ್ನು ಈ ಕಾಂಪಿಟೇಷನ್ನಿಗೆ ಯಾರು ಆಯ್ಕೆ ಮಾಡಿದ್ದು? ಅಂತ ಅವರಲ್ಲಿಯೇ ವಾದ-ವಿವಾದ ನಡೆಯುತ್ತದೆ. ನಾಯಕಿಗೆ ಈ ವಿಷಯ ಅರ್ಥವಾಗುತ್ತದೆಯೋ ಇಲ್ಲವೋ… ನಮಗಂತೂ ಉತ್ಸಾಹವೆಲ್ಲ ಟುಸ್ ಎಂದು ಬಿಡುತ್ತದೆ.
ಅಲ್ಲಿಂದ ಮುಂದೆ ಕಾಂಪಿಟೇಷನ್ ಏನಾಗುತ್ತದೆ? ಆ ಬಹುಮಾನ ಅವಳಿಗೆ ಬಂದಿತಾ? ನಂತರ ಜೀವನಕ್ಕೇನು ಮಾಡಿದಳು? ಯಾವ ಕೆಲಸದಲ್ಲಿ ಮುಂದುವರೆದಳು ಅಂತ ನೀವೇ ನೋಡುವುದು ಉತ್ತಮ. ಕಾಂಪಿಟೇಷನ್ನಿನ ದೃಶ್ಯಗಳು ಬಹಳ ರೋಚಕವಾಗಿ ಮೂಡಿಬಂದಿವೆ.
ಈ ಸಿನೆಮಾ ನೋಡಿದ ನಂತರ ನೀವು ಖಂಡಿತಾ ಸುಶಿ ಎಂಬ ಖಾದ್ಯದ ಬಗ್ಗೆ ಹುಡುಕಾಡುತ್ತೀರಿ. ಅನ್ನದಿಂದ ಮಾಡುವ ಖಾದ್ಯ ಅದಾದರೂ, ಅದನ್ನು ಎರಡೇ ಎರಡು ಚಾಪ್ ಸ್ಟಿಕ್ಕಿನಿಂದ ಜೋಪಾನವಾಗಿ ಎತ್ತಿಕೊಂಡು ನೈಪುಣ್ಯತೆಯಿಂದ ತಿನ್ನುವುದನ್ನು ಕಲಿಯಲು ವರ್ಷಗಳೇ ಬೇಕು ಎಂದೆನಿಸುತ್ತದೆ.
ಒಟ್ಟಿನಲ್ಲಿ ನಮ್ಮ ಊಟದ ಅಭಿರುಚಿಯನ್ನು ಹೆಚ್ಚಿಸುವ ಸಿನೆಮಾ.