“Freedom @ midnight” (ಶಾರ್ಟ್ ಮೂವಿ)

ಸುಂದರವಾದ ಹೆಂಡತಿ ಪಕ್ಕದಲ್ಲಿದ್ದಾಳೆ. ತನ್ನನ್ನು ತಾನು ಎಷ್ಟು ಚೆನ್ನಾಗಿ ಸಿಂಗರಿಸಿಕೊಂಡಿದ್ದಾಳೆ. ಸುತ್ತಲೂ ತಂಪಾದ ವಾತಾವರಣವಿದೆ. ಹೊರಗೆ ಜಿಟಿಜಿಟಿ ಅಂತ ಮಳೆ ಬೀಳುತ್ತಿದೆ. ಆದರೆ ಗಂಡನಿಗೆ ಇಂತಹಾ ಸಮಯದಲ್ಲಿ ಶ್ಯಾವಿಗೆ ತಿನ್ನಬೇಕು ಅಂತನ್ನಿಸುತ್ತದೆ.

ಅರಸಿಕ ಮಹಾಶಯ ಅಂತ ಬೈದುಕೊಳ್ತೀವಿ ನಾವು.

ಅಂಥವನನ್ನು ಪ್ರೇಮಿಸಿ ಮದುವೆಯಾದವಳು ಅವಳು‌. ಪ್ರೇಮಿಸುವಾಗ ಅವಳ ಬಗ್ಗೆ ಇದ್ದ ಕಾಳಜಿ ಈಗವನಿಗೆ ಇಲ್ಲ. ಆ ವ್ಯತ್ಯಾಸ ಅವನಿಗೆ ಗೊತ್ತಾಗುತ್ತಿಲ್ಲ. ಆದರೆ ಅವಳಿಗೆ ಸ್ಪಷ್ಟವಾಗಿ ಅರ್ಥವಾಗುತ್ತಿದೆ. ಹಾಗಾಗಿಯೇ ಪ್ರತೀದಿನವೂ ಏನೋ ಒಂದು ನಿರ್ಧಾರ ಮಾಡಿಕೊಳ್ಳುತ್ತಾಳೆ. ಅವಳು ತನ್ನ ಗಂಡನ ಬಳಿ “ಏನೋ” ಕೇಳಬೇಕು. ಅದನ್ನು ಪ್ರತೀದಿನ ಮನದಲ್ಲಿಯೇ ಉರು ಹೊಡೆಯುತ್ತಾ, ಅಭ್ಯಾಸ ಮಾಡಿಕೊಳ್ಳುತ್ತಾಳೆ. ಕೊನೆಗೆ ಯಾವುದೋ ಧೈರ್ಯ ಮಾಡಿಕೊಂಡು ಗಂಡನ ಬಳಿ ಹೋಗಿ ನಿಲ್ಲುತ್ತಾಳೆ.

ಆದರೆ ಗಂಡ….????

ಅವನು ತನ್ನ ಪೂರ್ವಾಗ್ರಹಗಳಲ್ಲಿಯೇ ಇದ್ದಾನೆ ಹೊರತೂ ಹೆಂಡತಿಯ ಮನದ ಮಾತು ಆತನಿಗೆ ಬೇಕಿಲ್ಲ. ಆಕೆ ‘ಏನೋ ಹೇಳಬೇಕು’ ಅಂದಾಗ ‘ಪ್ಲಂಬರ್ ವಿಷಯ ತಾನೇ? ಕರೆಸ್ತೀನಿ ಬಿಡು’ ಅನ್ನುವಷ್ಟು ನಿರ್ಲಕ್ಷ್ಯ ಆತನಿಗೆ. ಹಾಗಾಗಿ ಅವನಿಗೆ ನೇರವಾಗಿ ಇರುವ ವಿಷಯ ಹೇಳದೇ ಸುತ್ತಿ-ಬಳಸಿ ಹೇಳಿ ಷಾಕ್ ಕೊಡಬೇಕೆಂದು ಆಕೆ ತೀರ್ಮಾನಿಸುತ್ತಾಳೆ.

“ನೀವು ಹೆಂಗಸರು ಯಾಕೆ ನೇರವಾಗಿ ಮಾತನಾಡೋಲ್ಲ… ಯಾಕೆ ಎಲ್ಲವನ್ನೂ ಸುತ್ತಿ ಬಳಸಿ ಮಾತನಾಡುತ್ತೀರ?” ಎನ್ನುವವರಿಗೆ ಇದೇ ಉತ್ತರ. ಅವಳ ಮಾತಿನ ಮೇಲೆಯೂ, ಅದನ್ನು ಹೇಳುವಾಗ ಅವಳ ಭಾವದ ಮೇಲೆಯೂ ಕೊಂಚ ಗಮನ ಹರಿಸಿದ್ದರೆ ಅವನು ಈ ಷಾಕಿಗೆ ಒಳಗಾಗಬೇಕಿರಲಿಲ್ಲ.

ಸಕತ್ತಾಗಿಯೇ ಷಾಕ್ ಕೊಡುತ್ತಾಳೆ ಅವಳು‌..

ತಾನಾಡಬೇಕು ಅಂದುಕೊಂಡಿರುವ ಮಾತುಗಳನ್ನು ಬಿಡುಬೀಸಾಗಿ ಯಾವುದೇ ಹಿಂಜರಿಕೆ ಇಲ್ಲದೇ ಹೇಳುತ್ತಾಳೆ. ಗಂಡನ ಮುಂದೆ ನಾಚಿಕೆ ಪಡಬಾರದಂತೆ. ಹಾಗಾಗಿ ಎಲ್ಲವನ್ನೂ ನೇರವಾಗಿಯೇ ಹೇಳುತ್ತಾಳೆ. ಆದರೆ ಆಕೆಯ ಗಂಡನಿಗೆ ಅದನ್ನು ಅರಗಿಸಿಕೊಳ್ಳಲು ಆಗುವುದಿಲ್ಲ.

ಇಲ್ಲಿಯವರೆಗೂ ಶಾರ್ಟ್ ಮೂವಿ ನೋಡುತ್ತಿರುವ ನಮಗೆ ನಿರ್ದೇಶಕರು ಪುರುಷನ ಕಡೆ ಇದ್ದು, ಹೆಣ್ಮಕ್ಕಳೇ ಸುಮ್ಮಸುಮ್ಮನೆ ಜಗಳ ತೆಗೆದು ಮನಸ್ಸು ಕೆಡಿಸುತ್ತಾರೆ ಅಂತ ತೋರಿಸುತ್ತಿದ್ದಾರೇನೋ ಅಂತ ಸ್ವಲ್ಪ ಅನುಮಾನ ಬಂದಿತ್ತು. ಆದರೆ ಮುಕ್ಕಾಲು ಸಿನೆಮಾ ಮುಗಿಯುತ್ತಿದ್ದಂತೆಯೇ ಯಾರು ಸಂತ್ರಸ್ತರು, ಯಾರು ಆರೋಪಿಗಳು ಅಂತ ಗೊತ್ತಾಗಿಬಿಟ್ಟಿತು.

ಆದರೆ ಮೇಲೆ ನಡೆದದ್ದೆಲ್ಲಾ ನಾಯಕಿಯ ಕಲ್ಪನೆಗಳಷ್ಟೇ… ಪ್ರತಿನಿತ್ಯ ಕೇಳಿಯೇ ಬಿಡುತ್ತೇನೆ ಅಂತ ಕಲ್ಪಿಸಿಕೊಳ್ಳುತ್ತಾ ಇರುತ್ತಾಳೆ ಅವಳು. ಆದರೆ ಅವಳಿಂದ ಕೇಳಲಾಗೋಲ್ಲ. ಮೇಲೆ ಹೇಳಿದ ಭಾಗಗಳಲ್ಲಿ ಅವಳು ಗಂಡನ ಜೊತೆ ಸೆಕ್ಸ್ ಬಗ್ಗೆ ಮಾತನಾಡುವುದನ್ನು ನೋಡಿ ‘ಅಬ್ಬ! ಧೈರ್ಯವೇ’ ಅಂತ ಮೆಚ್ಚಿದ್ದ ನಾವೇ, ನಂತರ ಇದು ಅವಳ ಕಲ್ಪನೆ ಅಂತ ಗೊತ್ತಾದಾಗ ‘ಅಯ್ಯೋ ವಿಧಿಯೇ’ ಅಂತ ಸುಮ್ಮನಾಗುತ್ತೇವೆ.

ಹೌದು… ನಾವು ಹೆಣ್ಣುಮಕ್ಕಳು ಹೇಳುವುದೊಂದು ಬಿಟ್ಟು ಉಳಿದ ಎಲ್ಲವನ್ನೂ ಮಾತನಾಡಿರುತ್ತೇವೆ. ಏಕೆಂದರೆ ನಮ್ಮ ನೋವನ್ನು ನಾವು ಹೇಳದೇ ಅವರಾಗಿಯೇ ಅರ್ಥ ಮಾಡಿಕೊಳ್ಳಲಿ ಅಂತಾಸೆ ಇರುತ್ತದೆ ನಮಗೆ. ಆದರೆ ಯಾಕೋ ಏನೋ ಹೇಳಬೇಕೆನ್ನುವ ವಿಷಯವನ್ನು ಮಾತ್ರ ನಮ್ಮಿಂದ ಹೇಳಲಾಗುವುದೇ ಇಲ್ಲ.

ಅದೇ ರೀತಿ ಆಕೆಗೂ ಒಂದು ಹೊಸ ಸಮಸ್ಯೆ ಎದುರಾಗಿರುತ್ತದೆ‌. ಏನೆಂದರೆ….ಇಷ್ಟು ಚಂದದ ಸಂಸಾರ, ಮುದ್ದಾದ ಮಗಳಿರುವ ಆಕೆಯ ಗಂಡ ಸಂಸಾರದಾಚೆ ಮತ್ತೊಬ್ಬಳೊಂದಿಗೆ ವರ್ಚುವಲ್ ಅಫೇರ್ ಇಟ್ಟುಕೊಂಡಿರುತ್ತಾನೆ. ಆತನಿಗೆ ದೈಹಿಕ ಸಂಗಾತಿ ಹೆಂಡತಿಯಾಗಿದ್ದರೆ, ಕಾಲ್ಪನಿಕ ಸಂಗಾತಿ ಅದ್ಯಾರೋ ಅಪರಿಚಿತ ವ್ಯಕ್ತಿಯಾಗಿರುತ್ತಾಳೆ.

ಅವಳ್ಯಾರೋ ಅಪರಿಚಿತಳು ತಾನೇ? ಇಟ್ಟುಕೊಳ್ಳಲಿ ಬಿಡಿ. ಇಬ್ಬರೂ ಭೇಟಿ ಏನೂ ಆಗೋಲ್ವಲ್ಲ. ಮತ್ತೇನು ಪ್ರಾಬ್ಲಂ? ಅಂತೀರ. ಪ್ರಾಬ್ಲಂ ಅಲ್ಲೇ ಇರೋದು ಸ್ವಾಮಿ.

ಸಮಾಜದಲ್ಲಿ ನೈತಿಕತೆ ಅಂತ ಒಂದು ಚೌಕಟ್ಟು ಇದೆ. ಅದನ್ನು ಹೆಣ್ಣು ಮೀರಿದರೆ ಅಪರಾಧವಾಗುತ್ತದೆ. ಗಂಡು ಮಾತ್ರ ಮೀರಬಹುದಾ? ಅವನ ಈ ಸಂಬಂಧ ಕೇವಲ ವರ್ಚುವಲ್ ಇರಬಹುದು. ಆದರೆ ಹೆಂಡತಿ ಸಹ ಅವನಿಂದ ಅದೇ ಕೇರ್, ಅಷ್ಟೇ ಪ್ರೀತಿ, ಆತನಿಂದ ತನಗಾಗಿ ಸಮಯ ಬಯಸುತ್ತಾಳಲ್ವಾ? ನ್ಯಾಯವಾಗಿ ಆಕೆಗೆ ಕೊಡಬೇಕಾಗಿರುವುದನ್ನು ಮತ್ಯಾರಿಗೋ ಕೊಡುತ್ತಿರುವುದು ಆತನ ತಪ್ಪಲ್ವಾ?

ಉಹುಂ ಸಮಾಜ ಹಾಗೆ ಯೋಚಿಸುವುದಿಲ್ಲ.

ಅದು ಯೋಚಿಸುವುದು ಹೀಗೆ. ಗಂಡ ಕುಡಿಯುತ್ತಾನಾ? ಹೊಡೆಯುತ್ತಾನಾ? ಉಪವಾಸ ಕೆಡವುತ್ತಾನಾ? ಏನೂ ಇಲ್ಲವಲ್ಲ… ಹೆಂಡತಿಗೆ ಅವಳಿಗಿಷ್ಟ ಬಂದ ಹಾಗೆ ಮಾಡಲು ಸ್ವಾತಂತ್ರ್ಯ ಕೊಟ್ಟಿದ್ದಾನಲ್ಲ. ಇರಲು ಆಶ್ರಯ ಕಲ್ಪಿಸಿದ್ದಾನೆ. ಈಗ ಯಾರೋ ಮತ್ತೊಬ್ಬಳೊಂದಿಗೆ ಕೇವಲ ಕಾಲ್ಪನಿಕ ಸಂಬಂಧ ಇಟ್ಟುಕೊಂಡರೆ ಏನು ತಪ್ಪು ಅನ್ನುತ್ತದೆ ಸಮಾಜ.

ಆದರೆ ಯಾವ ಹೆಣ್ಣೂ ಇದನ್ನು ಒಪ್ಪುವುದಿಲ್ಲ.

ಆಕೆಗೆ ತನ್ನ ಗಂಡ ತನಗೆ ಪೂರ್ತಿಯಾಗಿ ಬೇಕು. ಆತನ ತನು-ಮನಗಳೆರೆಡೂ ಆಕೆಗೆ ಸಂಪೂರ್ಣವಾಗಿ ಬೇಕು. ಆತ ನೆನೆಸಿಕೊಂಡಾಗಲೆಲ್ಲಾ ಅವನ ಮನದಲ್ಲಿ ಇವಳದ್ದೇ ಚಿತ್ರ ಮೂಡಿ ಬರಬೇಕು. ಯಾವುದೋ ಅಪರಿಚಿತ ಹೆಂಗಸು ತನ್ನ ಸ್ಥಾನವನ್ನು ಆಕ್ರಮಿಸಿರುವುದು ಅವಳಿಗೆ ಸಹಿಸಲಾಗುತ್ತಿಲ್ಲ.

ಆದರೆ ಅದನ್ನು ಗಂಡನಿಗೆ ಹೇಳಲೂ ಆಗುತ್ತಿಲ್ಲ.

ಏಕೆಂದರೆ ಅವಳಿಗೆ ಆ ರೀತಿ ಮಾತನಾಡಿ ಅಭ್ಯಾಸ ಇಲ್ಲವಲ್ಲ… ಹಾಗಾಗಿ ದಿನಾ ಪ್ರಾಕ್ಟೀಸ್ ಮಾಡಿಕೊಳ್ಳುತ್ತಲೇ ಇದ್ದಾಳೆ. ಎಂದಾದರೊಮ್ಮೆ ಗಂಡನಿಗೆ ಇದನ್ನು ಹೇಳಿಯೇ ಹೇಳ್ತೀನಿ ಎಂಬ ನಂಬಿಕೆ ಇದೆ ಆಕೆಗೆ‌‌…

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply