“Hichki” (ಹಿಂದಿ)

hicki

“ಹಿಚಕ್… ಹಿಚಕ್…” ಯಾರಾದರೂ ಹೀಗೆ ಬಿಟ್ಟೂ ಬಿಡದೇ ಬಿಕ್ಕಳಿಸುತ್ತಿದ್ದರೆ ನಾವೇನು ಮಾಡುತ್ತೇವೆ? ನೀರು ಕುಡಿ ಅನ್ನುತ್ತೇವೆ.. ಸಕ್ರೆ ತಿನ್ನು ಅನ್ನುತ್ತೇವೆ.. ನೆತ್ತಿ ತಟ್ಟುತ್ತೇವೆ.. ಮೇಲೆ ನೋಡು ಬೆಕ್ಕು ಕೂತಿದೆ ಎನ್ನುತ್ತೇವೆ..

ಆದರೆ ಯಾವುದೋ ಖಾಯಿಲೆಯ ಪರಿಣಾಮದಿಂದಾಗಿ ಆ ಬಿಕ್ಕಳಿಕೆ ನಿಲ್ಲದೇ ಹೋದರೆ….??

ಆ ಬಿಕ್ಕಳಿಸುತ್ತಿರುವವರನ್ನು ಸಮಾಜ ಹೇಗೆ ನೋಡಬಹುದು..? ಎಷ್ಟು ಅಪಹಾಸ್ಯ ಮಾಡಬಹುದು..? ತನ್ನದಲ್ಲದ ತಪ್ಪಿಗೆ ಆ ವ್ಯಕ್ತಿ ಎಷ್ಟು ಅಪಮಾನ ಎದುರಿಸಬಹುದು..? ಆ ವ್ಯಕ್ತಿಯ ಶಿಕ್ಷಣ, ಸಾರ್ವಜನಿಕ ಜೀವನ, ಔದ್ಯೋಗಿಕ ಭವಿಷ್ಯ ಎಲ್ಲವೂ ಮೂರಾಬಟ್ಟೆಯಾಗಿಬಿಡುತ್ತದೆ. ಅಲ್ಲವೇ..??

ಆ ವ್ಯಕ್ತಿಯ ಜೀವನ ಹಾಳಾಗುವುದು ಬಿಕ್ಕಳಿಕೆಯಿಂದಲ್ಲ….

ಸಮಾಜ ಆ ವ್ಯಕ್ತಿಯನ್ನು ನೋಡುವ ದೃಷ್ಟಿಯಿಂದ….!!! ಹಾಗಾದರೆ ಸಮಾಜ ತಾನು ನೋಡುವ ದೃಷ್ಟಿ ಬದಲಿಸಿಕೊಂಡರೆ ಸಾಕು ಅಂತೀರ? ಅದಷ್ಟು ಸುಲಭವಲ್ಲ. ಸಮಾಜ ಮತ್ತು ಜನರು ಯಾವಾಗಲೂ ಅಬ್ನಾರ್ಮಲ್ ವಿಷಯಗಳತ್ತಲೇ ಆಕರ್ಷಿತರು. ನಾವೇ ಸಮಾಜದ ಈ ದೃಷ್ಟಿಯನ್ನು ನಿರ್ಲಕ್ಷಿಸಬೇಕು ಹೊರತೂ ಸಮಾಜದಿಂದ ಏನನ್ನೂ ಬಯಸುವಂತಿಲ್ಲ. ಈ ಸಿನೆಮಾ ನೋಡಿದ ನಂತರವಾದರೂ ನಾವುಗಳು ಇಂತಹಾ ನತದೃಷ್ಟರನ್ನು ನೋಡುವ “ದೃಷ್ಟಿ” ಬದಲಿಸಿಕೊಂಡರೆ ಸಿನೆಮಾ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ.

ಇಂತಿಪ್ಪ ಖಾಯಿಲೆಯಿಂದ ಬಳಲುವ ಮತ್ತು ಸಹಿಸಲಾಗದಷ್ಟು ಹಿಚ್ಕಿ ಸದ್ದನ್ನು ಹೊರಡಿಸುವ ನಮ್ಮ ನಾಯಕಿ (ಹಾಂ ಹೌದು.. ಇಲ್ಲಿ ನಾಯಕನಿಲ್ಲ) ಟೌರೆಟ್ ಸಿಂಡ್ರೋಮಿನಿಂದಾಗಿ ಬಳಲುತ್ತಿರುತ್ತಾಳೆ. ಈ ಕಾರಣದಿಂದಾಗಿ ಆಕೆ ಸಣ್ಣವಳಿದ್ದಾಗ ಆಕೆಗೆ ಪ್ರತೀ ಶಾಲೆಯಿಂದಲೂ ಗೇಟ್ ಪಾಸ್ ಸಿಗುತ್ತಿರುತ್ತದೆ. ಶಾಲೆಯ ಆಡಳಿತ ಮಂಡಳಿ ಆಕೆಯ ದೈಹಿಕ ನೂನ್ಯತೆಯನ್ನು ಮಾನಸಿಕ ನೂನ್ಯತೆ ಅಂತ ತಪ್ಪು ತಿಳಿಯುತ್ತಿರುತ್ತದೆ. ತನ್ನದಲ್ಲದ ತಪ್ಪಿಗೆ ಆ ಮಗು ಶಾಲೆಗಳನ್ನು ಬದಲಿಸುತ್ತಲೇ ಇರುತ್ತದೆ.

ಅದರಲ್ಲಿ ಒಂದು ಶಾಲೆಯ ಪ್ರಿನ್ಸಿಪಲ್ ಮಾತ್ರವೇ ಆಕೆಗೆ ಗೌರವ ಕೊಟ್ಟು ತನ್ನ ಶಾಲೆಯಲ್ಲಿ ಸೀಟ್ ಕೊಡುವುದಲ್ಲದೇ, ಆಕೆಯನ್ನು ನಾರ್ಮಲ್ ಮಕ್ಕಳ ಹಾಗೆ ನೋಡುತ್ತಾರೆ. ಬೇರೆಯವರಿಗೂ ಹಾಗೆಯೇ ನೋಡಲು ಹೇಳುತ್ತರೆ. ಆತನ ಕಾರಣದಿಂದಲೇ ಇಂದು ಆ ಬಿಕ್ಕಳಿಕೆಯ ಮಗು ದೊಡ್ಡವಳಾಗಿ, ಡಬಲ್ ಗ್ರಾಜ್ಯುಯೇಟ್ ಆಗಿದ್ದಾಳೆ.

ಈಗ ಆಕೆಗೆ ತಾನು ಟೀಚರ್ ಆಗಬೇಕೆಂಬಾಸೆ.

ಆದರೆ ನಿರಂತರ ಹಿಚ್ಕಿಯ ಮಧ್ಯೆ ಪಾಠ ಮಾಡುವುದಾದರೂ ಹೇಗೆ?? ಬಹಳಷ್ಟು ಶಾಲೆಗಳು ಆಕೆಯ ಹಿಚ್ಕಿ ಕಂಡು ಹೆದರಿ‌ ಕಂಗಾಲಾಗಿಬಿಡುತ್ತಾರೆ. ಕೆಲವರು ಆಕೆಯ ಆತ್ಮಸ್ಥೈರ್ಯ ಮೆಚ್ಚುತ್ತಾರೆ. ಆದರೆ ಯಾರೂ ಆಕೆಗೆ ಕೆಲಸ ಕೊಡುವ ಧೈರ್ಯ ಮಾತ್ರ ಮಾಡುವುದಿಲ್ಲ.

ಅಷ್ಟರಲ್ಲಿ ಆಕೆಗೆ ತಾನು ಓದಿದ ಶಾಲೆಯಲ್ಲಿಯೇ ಟೀಚರ್ ಕೆಲಸ ಸಿಕ್ಕುಬಿಡುತ್ತದೆ. ಆದರೆ ಆಕೆಗೆ ಸಿಕ್ಕಿರುವ 9F ಕ್ಲಾಸಿನ ಮಕ್ಕಳು Right to Education (RTE) ಅಡಿಯಲ್ಲಿ ದಾಖಲಾಗಿರುವ ಸರ್ಕಾರಿ ಶಾಲೆಯ ಮಕ್ಕಳು. ಅವರ ಪುಂಡಾಟಕ್ಕೆ ಮಿತಿಯೇ ಇಲ್ಲ. ಈಗಾಗಲೇ ಎಂಟು ಕ್ಲಾಸ್ ಟೀಚರುಗಳನ್ನು ಆ ಮಕ್ಕಳು ಓಡಿಸಿರುತ್ತಾರೆ. ಈಗ ನಮ್ಮ ನಾಯಕಿ ಒಂಭತ್ತನೆಯವಳು.

ನಾಯಕಿಗೆ ತನ್ನ ಮೇಲೆ ಇರುವ ಆತ್ಮವಿಶ್ವಾಸ ನಮಗೆ ದಂಗು ಬಡಿಸುತ್ತದೆ. ಮಕ್ಕಳು ತನ್ನನ್ನು ಸ್ವಾಗತಿಸದೇ ನಿರ್ಲಕ್ಷಿಸಿದಾಗ ನಗುನಗುತ್ತಲೇ ಅದನ್ನು ಒಪ್ಪಿಕೊಳ್ಳುವ ನಾಯಕಿ, ಅವರು ಆಕೆಯ ಹಿಚ್ಕಿ (ಬಿಕ್ಕಳಿಕೆ) ಬಗ್ಗೆ ಆಡಿಕೊಂಡು ನಕ್ಕಾಗ, ತಾನೂ ಅವರ ಜೊತೆ ಸೇರಿ ನಗುತ್ತಾಳೆ. ಏಕೆಂದರೆ ಅವಳಿಗೆ ಅವಮಾನ ಹೊಸದಲ್ಲ. ಜೀವನದ ಪ್ರತೀ ಹಂತದಲ್ಲಿಯೂ ಈ ಅವಮಾನಗಳನ್ನು ಆಕೆ ದಾಟುತ್ತಲೇ ಬಂದಿರುವುದರಿಂದ ಅದರ ಬಗ್ಗೆ ಆಕೆ ತಲೆಕೆಡಿಸಿಕೊಳ್ಳುವುದಿಲ್ಲ. ಸ್ವಲ್ಪ ದಿನಗಳಲ್ಲಿಯೇ ಅವಳಿಗೆ ಆ ಮಕ್ಕಳ ಮನಸ್ಥಿತಿ ಅರ್ಥವಾಗುತ್ತದೆ.

9F ಮಕ್ಕಳಲ್ಲಿ ಇದ್ದದ್ದು ಕೀಳರಿಮೆ.

ಏಕೆಂದರೆ ತಾವು ಸರ್ಕಾರಿ ಶಾಲೆಯ ಮಕ್ಕಳು. ಆದರೆ ಉಳಿದ ವಿದ್ಯಾರ್ಥಿಗಳು ಪ್ರತಿಭಾವಂತರು ಮತ್ತು ಪ್ರತಿಷ್ಠಿತ ಮನೆತನದವರು. ಬಡತನ ಮತ್ತು ಸಿರಿತನ ಸೇರಲಾಗದೇ ಪರಸ್ಪರ ವೈರಿಗಳಾಗಿರುತ್ತಾರೆ. ಉಳಿದ ಮಕ್ಕಳು ಓದಿನಲ್ಲಿ ಮುಂದಿರುತ್ತಾರೆ. ಆದರೆ ಈ ಸರ್ಕಾರಿ ಶಾಲೆಯ ಮಕ್ಕಳು ಅವರನ್ನು ವಿರೋಧಿಸಿಕೊಂಡು, ಸರಿಯಾಗಿ ಓದದೇ, ತಮ್ಮ ಜೀವನ-ಭವಿಷ್ಯ ಎಲ್ಲವನ್ನೂ ತಾವೇ ಹಾಳು ಮಾಡಿಕೊಂಡಿರುತ್ತಾರೆ.

ಈಗ ಅವರ ಭವಿಷ್ಯ ನೇರವಾಗಿಸುವ ಹೊಣೆ ನಮ್ಮ ನಾಯಕಿಯದ್ದು.

ಆದರೆ ತನ್ನನ್ನು ಒಪ್ಪದ ಮಕ್ಕಳಿಗೆ ಆಕೆ ಏನು ಕಲಿಸಲು ಸಾಧ್ಯ?? ಆ ಮುಗ್ಧ ಮಕ್ಕಳ ಮನಃಪರಿವರ್ತನೆ ಮಾಡುವುದಾದರೂ ಹೇಗೆ? ಅವರನ್ನು ಉಳಿದೆಲ್ಲ ತರಗತಿಯ ಮಕ್ಕಳಂತೆ ಪ್ರತಿಭಾನ್ವಿತರನ್ನಾಗಿಸುವುದು ಹೇಗೆ? ನಾಯಕಿ ಸೋಲುತ್ತಾಳೋ ಗೆಲ್ಲುತ್ತಾಳೋ?

ಒಂದದ್ಭುತ ಸಿನೆಮಾ ಇದು. ಪ್ರೈಮಿನಲ್ಲಿದೆ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

One thought on ““Hichki” (ಹಿಂದಿ)

Leave a Reply