ಕಣ್ಣು ಮಿಟುಕಿಸದೇ ಈ ಸಿನೆಮಾ ನೋಡಿ!
ಹೌದು.. ಸಿನೆಮಾದ ಕಥೆಯೇ ಹಾಗಿದೆ. ಒಂದಲ್ಲ ಎರಡಲ್ಲ…. ಸಿನೆಮಾ ಪೂರ್ತಿ ಟ್ವಿಸ್ಟೋ ಟ್ವಿಸ್ಟು. ಅವನು ವಿಲನ್… ಅಲ್ಲಲ್ಲ ಇವನು.. ಅಯ್ಯೋ ಇವನಲ್ಲ ಅವನೇ ವಿಲನ್ ಅಂತ ಕೊನೆವರೆಗೂ ಈ ‘ವಿಲನ್’ ಯಾರು ಅನ್ನೋ ನಿರ್ಧಾರಕ್ಕೆ ಬರಲಾಗದೇ ಉಗುರು ಕಚ್ಚುತ್ತಾ ಮುಂದೇನು ಅಂತ ನೋಡುವಂತಾಗುತ್ತದೆ.
ಕಥೆ ಏನು ಅಂದ್ರಾ? ಇದು ಸಹ ಮಾಮೂಲಿ ಸೀರಿಯಲ್ ಕಿಲ್ಲರ್ ಕೇಸ್. ಕಥೆ ನಡೆಯುವುದು ಬೆಂಗಳೂರಿನಲ್ಲಿ.
ಖಳನಾಯಕನ ಹೆಸರು “ರುದ್ರ”.
ದೊಡ್ಡ ಮನುಷ್ಯರ ಮಕ್ಕಳನ್ನ ಕಿಡ್ನಾಪ್ ಮಾಡುವುದು, ಅವರ ಬಿಡುಗಡೆಗೆ ಹಣ ಕೇಳುವುದು, ಹಣ ಪಡೆಯುವುದು ಮಾಡುತ್ತಿರುತ್ತಾನೆ. ಆದರೆ ಹಣ ಪಡೆದ ಮೇಲೆ ಕಿಡ್ನಾಪ್ ಮಾಡಿದವರನ್ನು ಬಿಡುಗಡೆ ಮಾಡದೇ ಸಾಯಿಸುತ್ತಿರುತ್ತಾನೆ. ಇದು ರುದ್ರನ ಸ್ಪೆಷಾಲಿಟಿ.
ಆದರೆ ಇದೇ ರೀತಿಯ ಸೀರಿಯಲ್ ಕಿಲ್ಲರ್ ಆಗಿದ್ದ ರುದ್ರ ಎಂಬ ವ್ಯಕ್ತಿಯನ್ನು ನಾಯಕಿ ಕಂ ಸಿಬಿಐ ಅಧಿಕಾರಿ ಆಗಿರುವ ಅಂಜಲಿ ನಾಲ್ಕು ವರ್ಷದ ಕೆಳಗೇ ಎನ್ಕೌಂಟರ್ ಮಾಡಿ ಸಾಯಿಸಿರುತ್ತಾಳೆ. ಅಂದ್ಮೇಲೆ “ರುದ್ರ” ಮತ್ತೆ ಹೇಗೆ ಬದುಕಿ ಬರಲು ಸಾಧ್ಯ?
ಇಲ್ಲಿ ಬೇರೇನೋ ಇದೆ ಅಂತ ಯೋಚಿಸುವಷ್ಟರಲ್ಲಿ ಆ ರುದ್ರನಿಂದ ಮತ್ತೊಂದು ಕಿಡ್ನಾಪಿಂಗ್ ಮತ್ತು ಕೊಲೆ ನಡೆಯುತ್ತದೆ. ಈ ಬಾರಿ ರುದ್ರ ಅಂಜಲಿಗೇ ನೇರ ಚಾಲೆಂಜ್ ಹಾಕಿ ತಾಕತ್ತಿದ್ದರೆ ಅದನ್ನು ತಡೆಯಲು ಹೇಳಿರುತ್ತಾನೆ. ಆದರೂ ಅಂಜಲಿ ವಿಫಲಳಾಗುತ್ತಾಳೆ.
ಮತ್ತೊಂದೆಡೆ ಅಂಜಲಿಯ ತಮ್ಮ ಮತ್ತು ಆತನ ಗರ್ಲ್ ಫ್ರೆಂಡ್ ಇಬ್ಬರ ನಡುವೆ ಬ್ರೇಕಪ್ ಆಗಿರುತ್ತದೆ. ಅಂಜಲಿಯ ತಮ್ಮ ಅರ್ಜುನ್ ಈ ವಿಷಯವಾಗಿ ಖಿನ್ನತೆಯಲ್ಲಿರುತ್ತಾನೆ. ಆತ ಕಡೆಯ ಬಾರಿ ತನ್ನ ಪ್ರಿಯತಮೆಯನ್ನು ನೋಡಿ ಹೋಗಲು ಬೆಂಗಳೂರಿಗೆ ಬಂದಿರುತ್ತಾನೆ.
ನಿಮ್ಮ ಊಹೆ ನಿಜ.
ಈ ಬಾರಿ “ರುದ್ರ” ಅರ್ಜುನನ ಪ್ರೇಯಸಿಯನ್ನು ಕಿಡ್ನಾಪ್ ಮಾಡುತ್ತಾನೆ ಮತ್ತು ಅವಳಿಗಾಗಿ ಹಣದ ಬೇಡಿಕೆ ಇಡುತ್ತಾನೆ. ಇತ್ತ ಅಂಜಲಿ “ರುದ್ರ”ನನ್ನು ಸಾಯಿಸಲು ಶೂಟ್ ಅಟ್ ಸೈಟ್ ಆರ್ಡರ್ ಪಡೆದಿರುತ್ತಾಳೆ. ಹಣ ಪಡೆಯಲು ಬಂದಾಗ ರುದ್ರನನ್ನು ಸಾಯಿಸಬೇಕು ಎನ್ನುವುದು ಅಂಜಲಿಯ ಪ್ಲಾನ್ ಆಗಿರುತ್ತದೆ. ಆದರೆ ಹಣ ಪಡೆಯುವ ಕಡೆ ರುದ್ರನ ಜಾಗದಲ್ಲಿ ಅವಳ ತಮ್ಮನೇ ನಿಂತಿರುತ್ತಾನೆ..
ಈಗ ಅವಳ ಜೊತೆಗೆ ನಮಗೂ ತಲೆ ತಿರುಗಲು ತೊಡಗುತ್ತದೆ. ಸಾಕ್ಷಿಗಳೆಲ್ಲಾ ಅರ್ಜುನನೇ ರುದ್ರ ಅಂತ ಪ್ರೂವ್ ಮಾಡುತ್ತಿವೆ. ರುದ್ರನ ಮೇಲೆ ಶೂಟ್ ಅಟ್ ಸೈಟ್ ಆರ್ಡರ್ ಸಹ ಇದೆ. ಈಗ ಅಂಜಲಿ ತನ್ನ ತಮ್ಮನನ್ನು ಕಾಪಾಡಿಕೊಂಡು ನಿಜವಾದ ರುದ್ರನನ್ನು ಸಹ ಹಿಡಿಯಬೇಕು.

ಸಾಧ್ಯವಾ….?
ಇದನ್ನು ಸಿನೆಮಾ ನೋಡಿಯೇ ತಿಳಿಯಬೇಕು.
ಏಕೆಂದರೆ ಇಲ್ಲಿಂದ ನಿಜವಾದ ಸಿನೆಮಾ ಶುರುವಾಗುತ್ತದೆ. ಇಷ್ಟು ಹೊತ್ತು ನೋಡಿರುವ ಸಿನೆಮಾಗೆ ಬೇರೆಯೇ ಒಂದು ಆಯಾಮ ಇದೆ ಅಂತ ಗೊತ್ತಾಗುತ್ತದೆ. ಪ್ರತಿಯೊಂದು ಪಾತ್ರವೂ ತನ್ನ ಬೇರೆಯದೇ ಮುಖವನ್ನು ತೋರಿಸಲು ತೊಡಗುತ್ತದೆ. ಕ್ಷಣವಾದರೂ ಬೇರೆಡೆ ಕಣ್ಣು ಹೊರಳಿಸಲಾಗದೇ ಸಿನೆಮಾದೊಳಗೆ ಮುಳುಗುವಂತೆ ಮಾಡುತ್ತದೆ.
ಇದೇ ಸಿನೆಮಾದ ಆಶಯ ಅಲ್ಲವೇ?
ಅಂಜಲಿ ಸಿನೆಮಾದ ಹೀರೋ ಎಂದುಕೊಂಡಿದ್ದಾಗ ಅರ್ಜುನ್ ಎಂಟ್ರಿ ಕೊಟ್ಟ. ಆಗ ಅವನೇ ಹೀರೋ ಅಂದುಕೊಂಡಿದ್ದಾಗ ಆತನಿಗೆ ಖಳನಾಯಕನ ಮುಖವಾಡ ಹಾಕಲಾಯ್ತು. ಹಾಗಾದರೆ ಸಿನೆಮಾದ ಹೀರೋ ಯಾರು?
ನಿಜವಾದ ಹೀರೋ “ರುದ್ರ”ನೇ…
The dark hero. ಕೆಲವೊಮ್ಮೆ ತನ್ನ ಅಭಿನಯದಿಂದ ಖಳನಾಯಕನೇ ನಮಗೆ ಇಷ್ಟವಾಗಲು ತೊಡಗುತ್ತಾನೆ. ರುದ್ರನೂ ಸಹ. ಅವನ ಭಯವಿಲ್ಲದ ಸಹಜ ನಟನೆ, ಅವನ ಚಾತುರ್ಯವೇ ನಮ್ಮನ್ನು ಆಕರ್ಷಿಸುತ್ತದೆ. ಅದೇ ಸಿಬಿಐ ಅಧಿಕಾರಿಯಾದ ಅಂಜಲಿಯ ನಿಸ್ಸಹಾಯಕತೆ ನಮಗೆ ಹಿಡಿಸೋಲ್ಲ. ಆಕೆಗೇನೂ ಕೆಲಸವಿಲ್ಲ. ಅಲ್ಲಿಂದಿಲ್ಲಿಗೆ ಹೋಗೋದು, ಇಲ್ಲಿಂದಲ್ಲಿಗೆ ಹೋಗೋದು. ಅಷ್ಟೇ. ಆಕೆಯ ಶೌರ್ಯವನ್ನು ಬಾಯಿಯಲ್ಲಿ ಹೇಳಲಾಗಿದೆ ಹೊರತೂ ಕೃತಿಯಲ್ಲಿ ತೋರಿಸಿಲ್ಲ.
ಸಿನೆಮಾದಲ್ಲಿ ಟ್ವಿಸ್ಟ್ ಇರಬೇಕು ನಿಜ. ಆದರೆ ಟ್ವಿಸ್ಟುಗಳೇ ಸಿನೆಮಾ ಆಗಬಾರದಲ್ವಾ? ವಿಪರೀತ ಟ್ವಿಸ್ಟುಗಳಿಂದಾಗಿ ಸಿನೆಮಾ ಸ್ವಾರಸ್ಯವನ್ನೇ ಕಳೆದುಕೊಂಡಿದೆ. ಅದರಿಂದ ಹೀರೋಯಿನ್ ಪಾತ್ರ ಕೇವಲ ಡಮ್ಮಿ ಆಗಿ ಹೋಗಿದೆ. ವಿಜೃಂಭಿಸಿರುವ ಪಾತ್ರ ಎಂದರೆ ಒಂದೇ…
ಖಳನಾಯಕ ರುದ್ರ!!