Interstellar (English)

(ಮುಂದುವರೆದ ಭಾಗ)

ಈ ಬಾಹ್ಯಾಕಾಶ ಪಯಣದಲ್ಲಿ ನಾಲ್ವರು ಯಾನಿಗಳು ಮತ್ತು ಎರಡು ರೋಬಾಟ್ ಇರುತ್ತವೆ.

1. ಕೂಪರ್
2. ಎಮಿಲಿಯಾ ಬ್ರಾಂಡ್
3. ಡೊಯಿಲಿ
4. ರೊಮಿಲಿ
5. ರೋಬೋ ಟಾರ್ಸ್ ಮತ್ತು
6. ರೋಬೋ ಕೇಸ್

ಈಗ ದೂರದ ಮೂರು ಗ್ರಹಗಳಿಂದ ಬರುತ್ತಿರುವ ಪ್ರತಿಕ್ರಿಯೆಯನ್ನು ಆಧರಿಸಿ ಇವರು ಒಂದೊಂದೇ ಗ್ರಹವನ್ನು ಭೇಟಿ ಮಾಡಲು ಹೊರಡುತ್ತಾರೆ.

1. Miller’s Planet : ನಾಲ್ವರೂ ಮೊದಲು ಈ ಪ್ಲಾನೆಟ್ಟಿಗೆ ಹೋಗುತ್ತಾರೆ. ಆಗ ರೊಮಿಲಿ ಮಾತೃನೌಕೆಯಲ್ಲಿಯೇ ಉಳಿದುಕೊಂಡು ಉಳಿದ ಮೂವರು ಈ ಗ್ರಹದಲ್ಲಿ ಇಳಿಯುತ್ತಾರೆ. ಈ ಗ್ರಹ ಪೂರ್ತಿ ನೀರಿನಿಂದ ತುಂಬಿಕೊಂಡು ವಾಸಿಸಲು ಅಯೋಗ್ಯವಾಗಿರುತ್ತದೆ. ಅದನ್ನು ಗಮನಿಸಿ ಮೂವರೂ ಮಾತೃನೌಕೆಗೆ ಹೊರಡುವಷ್ಟರಲ್ಲಿ ದೊಡ್ಡದೊಂದು ಅಲೆ ಬಂದು ಇವರ ಸ್ಪೇಸ್ ಕ್ರಾಫ್ಟಿಗೆ ಹೊಡೆಯುತ್ತದೆ. ಆ ಹೊಡೆತದಲ್ಲಿ ಡೊಯಿಲಿ ಸಾಯುತ್ತಾನೆ. ನೀರು ತುಂಬಿಕೊಂಡ ಇವರ ಸ್ಪೇಸ್ ಕ್ರಾಫ್ಟ್ ಮೂರು ಗಂಟೆಗಳ ನಂತರ ಹೊರಡುತ್ತದೆ. ಮರಳಿ ಮಾತೃನೌಕೆ ಸೇರಿದವರಿಗೆ ಆಘಾತ ಎದುರಾಗುತ್ತದೆ.

ಏನೆಂದರೆ ಪ್ಲಾನೆಟ್ ಮಿಲ್ಲರಿನಲ್ಲಿ ಒಂದು ಗಂಟೆ ಎಂದರೆ ಭೂಮಿಯ ಏಳು ವರ್ಷಗಳಿದ್ದಂತೆ. ಇವರು ಮೂರು ಗಂಟೆ ಮಿಲ್ಲರಿನಲ್ಲಿ‌ ಕಳೆದುದರಿಂದ ಭೂಮಿ ಮೇಲೆ ಇಪ್ಪತ್ತೊಂದು ವರ್ಷ ದಾಟಿ ಹೋಗಿರುತ್ತದೆ. ಅಲ್ಲದೇ ಇವರಿಗಾಗಿ ಕಾಯುತ್ತಿದ್ದ ರೊಮಿಲಿಯ ಕೂದಲು ಬೆಳ್ಳಗಾಗಿ ಸ್ವಲ್ಪ ವಯಸ್ಸಾದಂತೆ ಕಾಣುತ್ತಾನೆ. ಕೂಪರನಿಗೆ ಮನೆಯವರ ನೆನಪಾಗುತ್ತದೆ. ಕೂಡಲೇ ಓಡಿ ಹೋಗಿ ಅವರು ಕಳಿಸಿರುವ ವಿಡಿಯೋ ನೋಡುತ್ತಾನೆ. ಈಗಾಗಲೇ ಇಪ್ಪತ್ತೊಂದು ವರ್ಷ ಕಳೆದು ಹೋಗಿರುತ್ತದೆಯಾದ್ದರಿಂದ ಎಲ್ಲರೂ ದೊಡ್ಡವರಾಗಿ ಬಿಟ್ಟಿರುತ್ತಾರೆ. ಆ ವಿಡಿಯೋದಲ್ಲಿ ತನ್ನ ಮಾವ ಸ್ವರ್ಗಸ್ಥರಾಗಿರುವುದು, ಮಗನ ಮದುವೆಯೂ ಆಗಿ ಮಗುವಾಗಿರುವುದು, ಮಗಳು‌ ಮುರ್ಫಿ ನಾಸಾದಲ್ಲಿಯೇ ಸೈಂಟಿಸ್ಟ್ ಆಗಿರುವುದೂ ತಿಳಿಯುತ್ತದೆ. ಅವರೆಲ್ಲರ ಖುಷಿಯ ಕ್ಷಣಗಳನ್ನು ಕಳೆದುಕೊಂಡೆ ಎಂಬ ಪಶ್ಚಾತ್ತಾಪದಲ್ಲಿ ಕೂಪರ್ ಪಾಪಪ್ರಜ್ಞೆಯಿಂದ ನರಳಿ ಕಣ್ಣೀರು ಹಾಕುತ್ತಾನೆ. ಆದರೇನು…..? ಆಗುವುದು ಆಗಿ ಹೋಗಿದೆ. ಈಗ ಕಳೆದುಕೊಂಡ ಕ್ಷಣಗಳನ್ನು ವಾಪಸ್ ತರಲು ಬರುವುದಿಲ್ಲವಲ್ಲ ಎಂದು ಸಮಾಧಾನ ಮಾಡಿಕೊಂಡು ಮುಂದಿನ ಗ್ರಹಕ್ಕೆ ಹೊರಡುತ್ತಾರೆ.

2. Mann’s planet : ಈ ಗ್ರಹಕ್ಕೆ ಹೋದಾಗ ತನ್ನ ಸ್ಪೇಸ್ ಕ್ರಾಫ್ಟ್ ಒಳಗೇ ಆಳದ ನಿದ್ರೆಯೊಳಗೆ ಜಾರಿ ಹೈಬರ್ನೇಷನ್ (ಈ ಕ್ರಿಯೆಯಿಂದ ದೇಹಕ್ಕೆ ವಯಸ್ಸಾಗುವುದಿಲ್ಲ) ಆಗಿದ್ದ ‘ಮ್ಯಾನ್’ ಅನ್ನು ಕೂಪರನ ಟೀಮ್ ಎಚ್ಚರಿಸುತ್ತದೆ. ಮ್ಯಾನ್ ಇದು ಮನುಷ್ಯರು ವಾಸಿಸಲು ಅತ್ಯುತ್ತಮವಾದ ಗ್ರಹ ಎಂದು ಹೇಳುತ್ತಾನೆ. ಹಾಗಾದರೆ ಭೂಮಿಯ ಮನುಷ್ಯರನ್ನು ಇಲ್ಲಿಗೆ ಸಾಗಿಸಬಹುದು ಎಂದು ಎಲ್ಲರೂ ನಿರಾಳರಾಗುತ್ತಾರೆ.‌ ನಾಯಕ ಕೂಪರನಿಗೋ ಆಗಲೇ ಭೂಮಿ ಸೆಳೆಯುತ್ತಿರುತ್ತದೆ.‌ ಈಗಾಗಲೇ ಅವನು ತನ್ನ ಜೀವನದಲ್ಲಿ ಬಹಳಷ್ಟು ಖುಷಿಯ ಕ್ಷಣಗಳನ್ನು ಕಳೆದುಕೊಂಡಿರುತ್ತಾನೆ. ಹಾಗಾಗಿ ಮುಂದಿನ ಅನುಭವಗಳನ್ನು ತನ್ನ ಮಕ್ಕಳೊಡನೆಯೇ ಕಳೆಯಬೇಕು ಎಂಬ ಬಯಕೆ ಅವನನ್ನು ತೀವ್ರತರವಾಗಿ ಕಾಡಲು ತೊಡಗುತ್ತದೆ. ಹಾಗಾಗಿ ಅತ್ಯುತ್ಸಾಹದಿಂದ ಈ ಗ್ರಹವನ್ನು ವಾಸಿಸಲು ಯೋಗ್ಯವೇ ಎಂದು ಪರಿಶೀಲಿಸಲು ಮ್ಯಾನ್ ಜೊತೆ ಸರ್ವೆಗೆ ಹೊರಡುತ್ತಾನೆ.

ಅದೇ ಸಮಯದಲ್ಲಿ ಭೂಮಿಯ ಮೇಲೆ ಪ್ರೊಫೆಸರ್ ಬ್ರಾಂಡ್ ತಮ್ಮ ಕೊನೆಯ ಉಸಿರನ್ನು ಎಳೆಯಲು ಸಿದ್ಧರಾಗಿರುತ್ತಾರೆ. ಸಾಯುವ ಮುಂಚೆ ಮುರ್ಫಿಯ ಬಳಿ ಪ್ಲಾನ್ ‘ಎ’ ಒಂದು ಫೇಲ್ಯೂರ್ ಪ್ರಾಜೆಕ್ಟ್ ಆಗಿತ್ತು, ಏಕೆಂದರೆ ಅದನ್ನು ಕಾರ್ಯಗತಗೊಳಿಸಲು ಬೇಕಾದ ಗ್ರಾವಿಟಿ ಈಕ್ವೇಷನ್ ತಮಗೆ ದೊರೆತಿಲ್ಲ ಎಂದು ಹೇಳಿ ಪ್ರಾಣ ಬಿಡುತ್ತಾರೆ. ಪ್ಲಾನ್ ‘ಎ’ ಫೇಲ್ಯೂರ್ ಆಗುವುದು ಎಂದರೆ??? ತನ್ನ ತಂದೆ ಮತ್ತೆಂದೂ ಬರಲಾರರು ಎಂದು ಮುರ್ಫಿಗೆ ಅರಿವಾಗುತ್ತದೆ. ತಂದೆಯ ಮೇಲಿನ ಆಕೆಯ ಕೋಪ ಮತ್ತಷ್ಟು ಹೆಚ್ಚುತ್ತದೆ.

ಇತ್ತ ಮ್ಯಾನ್ ಮತ್ತು ಕೂಪರ್ ಗ್ರಹವನ್ನು ಸರ್ವೇ ಮಾಡುತ್ತಿರುವಾಗ ಅದು ವಾಸಿಸಲು ಯೋಗ್ಯವಲ್ಲ, ಮ್ಯಾನ್ ತಮಗೆ ಸುಳ್ಳು ವರದಿ ಕಳಿಸುತ್ತಿದ್ದ ಎಂಬ ಅಂಶ ಕೂಪರನಿಗೆ ಗೊತ್ತಾಗುತ್ತದೆ. ಆಗ ಇದ್ದಕ್ಕಿದ್ದಂತೆ ಮ್ಯಾನ್ ಕೂಪರನ ಮೇಲೆ ಮಾರಣಾಂತಿಕ ದಾಳಿ ನಡೆಸುತ್ತಾನೆ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ, ಯಾರಾದರೂ ಬಂದು ತನ್ನನ್ನು ಕಾಪಾಡುತ್ತಾರೆ ಎನ್ನುವ ಭರವಸೆಯಲ್ಲಿ ಮ್ಯಾನ್ ಇದು ವಾಸಯೋಗ್ಯ ಎಂಬ ಸುಳ್ಳು ರಿಪೋರ್ಟ್ ಕಳಿಸಿರುತ್ತಾನೆ. ಇದು ವಾಸಯೋಗ್ಯವಲ್ಲ ಅಂತ ಮೊದಲೇ ಹೇಳಿದ್ದರೆ ಇವರುಗಳು ಬರುತ್ತಲೇ ಇರಲಿಲ್ಲವಲ್ಲ. ಹಾಗಾಗಿ ತನ್ನ ಪ್ರಾಣ ಉಳಿಸಿಕೊಳ್ಳಲು ಸುಳ್ಳು ಹೇಳಿರುತ್ತಾನೆ. ಈಗ ಇವರೆಲ್ಲರನ್ನೂ ಕೊಂದು, ಅವರ ನೌಕೆಯಲ್ಲಿ ಭೂಮಿಗೆ ಹೋಗಬೇಕು ಅಂತ ಪ್ಲಾನ್ ಸಹ ಮಾಡಿರುತ್ತಾನೆ. ಆದರೆ ಅಂದುಕೊಂಡಿದ್ದೆಲ್ಲ ಆಗಲು ಸಾಧ್ಯವೇ? ಇವನ ಷಡ್ಯಂತ್ರದಿಂದ ಕೂಪರ್ ತಪ್ಪಿಸಿಕೊಳ್ಳುತ್ತಾನೆ. ಆದರೆ ಮ್ಯಾನ್ ತನ್ನ ತಪ್ಪಿಗೆ ತಾನೇ ಪ್ರಾಣ ಕಳೆದುಕೊಳ್ಳುತ್ತಾನೆ. ಇದರ ಮಧ್ಯೆ ಮ್ಯಾನ್ ರೋಬಾಟ್ ಅನ್ನು ವೀಕ್ಷಿಸುತ್ತಿದ್ದ ರೊಮಿಲಿಯೂ ರೋಬಾಟ್ ಸ್ಫೋಟಗೊಂಡು ಸಾಯುತ್ತಾನೆ. ಉಳಿದವರು ಇಬ್ಬರೇ… ಕೂಪರ್ ಮತ್ತು ಎಮಿಲಿಯಾ!

ಈಗ ಅವರಿಬ್ಬರ ಮುಂದಿರುವ ಏಕೈಕ ಆಯ್ಕೆ….

3. Edmund’s Planet: ಆದರೆ ಈ ಗ್ರಹಕ್ಕೆ ಹೋಗುವಷ್ಟು ಇಂಧ‌‌ನ ಇವರ ಬಳಿ ಇರುವುದಿಲ್ಲ.‌ ಅದಕ್ಕಾಗಿ ಬ್ಲಾಕ್ ಹೋಲ್ ಬಳಿಯ ಗುರುತ್ವವನ್ನೇ ಇಂಧನವನ್ನಾಗಿ ಬಳಸಿಕೊಂಡು ಎಡ್ಮಂಡ್ ಗ್ರಹಕ್ಕೆ ಹೋಗುವುದಾಗಿ ಯೋಚಿಸುತ್ತಾರೆ. ಅದಕ್ಕಾಗಿ ಕೂಪರ್ ರೋಬೋ ಟಾರ್ಸ್ ನೊಂದಿಗೆ ಮಾತೃನೌಕೆಯಿಂದ ತನ್ನನ್ನು ತಾನು ಎಜೆಕ್ಟ್ ಮಾಡಿಕೊಳ್ಳುತ್ತಾನೆ. ಮಾತೃನೌಕೆ ಎಮಿಲಿಯಾಳೊಂದಿಗೆ ಎಡ್ಮಂಡ್ ಗ್ರಹದತ್ತ ಹಾರುತ್ತದೆ.

ಈಗ ನಡೆಯುವುದು ಅಸಲೀ ಪವಾಡ.

ಮಾತೃನೌಕೆಯಿಂದ ಹೊರಬಿದ್ದ ಕೂಪರ್ ಕಪ್ಪುಕುಳಿಯೊಳಗೆ ಸೆಳೆಯಲ್ಪಡುವ ಬದಲು ಮತ್ತೆಲ್ಲೋ ಸೆಳೆಯಲ್ಪಡುತ್ತಾನೆ. ಅದೊಂದು ಐದನೇ ಆಯಾಮದ ಜಗತ್ತಾಗಿದ್ದು, ಸುತ್ತಲೂ ವಿಚಿತ್ರವಾದ ಬಿಲ್ಡಿಂಗುಗಳ ರೀತಿಯ ರಚನೆ ಇದ್ದು ಕೂಪರ್ ಅದರೊಳಗೆ ವೇಗವಾಗಿ ಬೀಳುತ್ತಾ ಸಾಗುತ್ತಿರುತ್ತಾನೆ. ಹಾಗೆಯೇ ಅವನ ವೇಗ ನಿಧಾನವಾಗುತ್ತಾ ಬರುತ್ತದೆ. ಗಾಳಿಯಲ್ಲಿ ಹಾರುತ್ತಲೇ ಸುತ್ತಲೂ ನೋಡುತ್ತಾನೆ. ಆ ಪರಿಸರ ಚಿರಪರಿಚಿತ ಎನಿಸುತ್ತದೆ.

ಹೌದು… ಕೂಪರ್ ಮಗಳು ಮರ್ಫಿಯ ಪುಸ್ತಕದ ರ‌್ಯಾಕಿನ ಹಿಂಭಾಗದಲ್ಲಿರುತ್ತಾನೆ. ಆದರೆ ವಿಚಿತ್ರ ಎಂದರೆ ಅತ್ತ ಕಡೆಯಿರುವ ಮುರ್ಫಿ ಹತ್ತು ವರ್ಷದವಳು!!!!

ಆದರೆ ಮುರ್ಫಿ ಈಗಾಗಲೇ ಓದು ಮುಗಿಸಿ ನಾಸಾದಲ್ಲಿ ಕೆಲಸಕ್ಕೆ ಸೇರಿದ್ದಾಳಲ್ಲವಾ? ಹಾಗಾದರೆ ಇವಳು…?

ಕೂಪರನಿಗೆ ತಾನು ಟೈಮ್ ಟ್ರಾವೆಲ್ ಮಾಡುತ್ತಾ ಭೂತಕಾಲಕ್ಕೆ ಬಂದಿದ್ದೇನೆ ಎಂದು ಗೊತ್ತಾಗುತ್ತದೆ. ಮಗಳೊಡನೆ ಮಾತನಾಡಲು ಕೆಲವು ಪುಸ್ತಕಗಳನ್ನು ಬದಿಗೆ ಸರಿಸಲು ನೋಡಿದಾಗ ಅವು ಬೀಳುತ್ತವೆ. ಚಿಕ್ಕ ಮುರ್ಫಿ ಪುಸ್ತಕ ಬಿದ್ದದ್ದು ಕಂಡು ಆಶ್ಚರ್ಯ ಚಕಿತಳಾಗಿ ನೋಡುತ್ತಾಳೆ.

ಆಗ ಕೂಪರನಿಗೆ ಮಗಳ ರೂಮಿನಲ್ಲಿ ಪುಸ್ತಕ ಬೀಳಿಸುತ್ತಾ ಇದ್ದದ್ದು ಭೂತವಲ್ಲ, ಬದಲಾಗಿ ಭವಿಷ್ಯದಲ್ಲಿರುವ ತಾನೇ ಎಂದು ಗೊತ್ತಾಗುತ್ತದೆ. ಅಷ್ಟರಲ್ಲಿ ಭೂತದ ಕೂಪರ್ ನಾಸಾಗೆ ಹೊರಡಲು ಮಗಳಿಗೆ ಹೇಳಲು ಬರುತ್ತಾನೆ. ಅವನು ನಾಸಾಗೆ ಹೊರಟರೆ ಮಗಳ ಪ್ರೀತಿ, ಕುಟುಂಬದ ಸಂತೋಷದ ಕ್ಷಣ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಗಾಬರಿಯಾದ ಭವಿಷ್ಯದ ಕೂಪರ್ ತನ್ನ ಭೂತಕ್ಕೆ “ಹೋಗಬೇಡ.. ನಿಲ್ಲು…” ಅಂತ ಕಿರಿಚುತ್ತಾನೆ. ಅವನ ಕಿರಿಚುವಿಕೆ ಅವರಿಗೆ ಕೇಳುವುದಿಲ್ಲವಾದ್ದರಿಂದ morse ಕೋಡಿನಲ್ಲಿ ಪುಸ್ತಕ ಬೀಳಿಸಿ “ನಿಲ್ಲು” ಎಂಬ‌ ಸಂಕೇತ ಕಳಿಸುತ್ತಾನೆ.‌ ಅಲ್ಲದೇ ನೆಲದ ಮೇಲೆ ಬಿದ್ದಿದ್ದ ಮರಳಿನ ಮೇಲೆ ಗುರುತ್ವ ಬಳಸಿ ನಾಸಾದ ಕೋಆರ್ಡಿನೇಟ್ಸ್ ಅನ್ನು ರಚಿಸುತ್ತಾನೆ. ಆ ಕೋಆರ್ಡಿನೇಟ್ಸ್ ಬಳಸಿಯೇ ಭೂತದ ಕೂಪರ್ ನಾಸಾ ತಲುಪುವುದು, ನಂತರ ಇದೆಲ್ಲಾ ನಡೆಯುವುದು.

ನಾವು ಮನಸ್ಸಿನಲ್ಲಿ ಅಂದುಕೊಂಡಿದ್ದು ನಮ್ಮ ಕಣ್ಮುಂದೆ ಸಿಗುವಂತಾದಾಗ ದೇವರು ಸಹಾಯ ಮಾಡಿದ ಎಂದುಕೊಳ್ಳುತ್ತೇವೆ. ಆದರೆ ಅದು ನಿಜವಾಗಿ ಭವಿಷ್ಯದಲ್ಲಿರುವ ನಾವೇ ಭೂತಕಾಲದ ನಮಗೆ ಸಹಾಯ ಮಾಡಿಕೊಳ್ಳುವಂತಾದರೆ?? ಎಷ್ಟು ವಿಚಿತ್ರ ಎನಿಸುತ್ತದೆ ಅಲ್ಲವಾ?

ಅಷ್ಟರಲ್ಲಿ ಐದನೇ ಆಯಾಮದಲ್ಲಿ ತನ್ನೊಂದಿಗೆ ಬಂದರುವ ರೋಬೋ ಟಾರ್ಸ್ ಗ್ರಾವಿಟಿ ಈಕ್ವೇಷನ್ ತಂದಿರುತ್ತದೆ. ಈ ಈಕ್ವೇಷನ್ ಇಂದ ಭೂಮಿಯ ಜನರನ್ನು‌ ಕಾಪಾಡಬಹುದು. ಆದರೆ ಕೂಪರನೋ ಯಾವುದೋ ಆಯಾಮದಲ್ಲಿ ಸಿಕ್ಕಿಬಿದ್ದಿದ್ದಾನೆ.‌ ಈಗ ಕೂಡಲೇ ಆ ಈಕ್ವೇಷನ್ ಅನ್ನು ಮಗಳಿಗೆ ಕಳಿಸಬೇಕು. ತಡ ಮಾಡಿದರೆ ಮತ್ತೆ ಇಂತಹಾ ಅವಕಾಶ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ? ಆದರೆ ಕಳಿಸುವುದು ಹೇಗೆ…..?

ಮೊದಲೇ ಹೇಳಿದಂತೆ ಎಲ್ಲಾ ಆಯಾಮಗಳಲ್ಲಿಯೂ ಕಾಮನ್ ಎಂದರೆ “ಗುರುತ್ವ”. ಹಿಂದೆ ಅವನು ಮಗಳಿಗೊಂದು ವಾಚ್ ಕೊಟ್ಟಿರುತ್ತಾನಲ್ಲ, ಅದು ಆ ಪುಸ್ತಕದ ಕಪಾಟಿನಲ್ಲಿಯೇ ಇರುತ್ತದೆ. ಅದಕ್ಕೆ ಗುರುತ್ವದ ಬಲದಿಂದ ಗ್ರಾವಿಟಿ ಈಕ್ವೇಷನ್ ಅನ್ನು ಬೈನರಿಯಲ್ಲಿ ಫೀಡ್ ಮಾಡುತ್ತಾನೆ ಕೂಪರ್.‌

ಅದು ಪ್ರಸ್ತುತ ಕಾಲದಲ್ಲಿ ಭೂಮಿಯಲ್ಲಿರುವ ವಿಜ್ಞಾನಿ ಮುರ್ಫಿಗೆ ಅಕಸ್ಮಾತ್ತಾಗಿ ಆ ರೂಮಿಗೆ ಬಂದಾಗ ಸಿಗುತ್ತದೆ. ಆಕೆಗೂ ಸಹ ತಾನು ಚಿಕ್ಕವಳಿದ್ದಾಗ ಕೋಣೆಯಲ್ಲಿ ಪುಸ್ತಕ ಬೀಳಿಸುತ್ತಿದ್ದುದು ತನ್ನ ತಂದೆಯೇ ಎಂದು ಗೊತ್ತಾಗುತ್ತದೆ. ಇದರ ಮೂಲಕ ತಂದೆ ತಮ್ಮಿಂದ ಹಲವಾರು ವರ್ಷ ದೂರವಿದ್ದರೂ ಸಹ ತಮ್ಮೊಡನೆ ಸಂವಹನ ನಡೆಸುತ್ತಲೇ ಬಂದಿದ್ದರು ಅಂತ ಅರ್ಥವಾಗಿ ಅವಳ ಮುನಿಸು ಕಳೆಯುತ್ತದೆ.

ಮುರ್ಫಿ ವಾಚಿನ ಮೂಲಕ ತಂದೆ ಕಳಿಸಿದ ಕ್ವಾಂಟಮ್ ಈಕ್ವೇಷನ್ ಡಿಕೋಡ್ ಮಾಡಿ, ಭೂಮಿಯ ಜನರನ್ನು ಒಂದು ಸ್ಪೇಸ್ ಸ್ಟೇಷನ್ ನಲ್ಲಿ ಸಾಗಿಸಿ ಕಾಪಾಡುತ್ತಾಳೆ. ಆ ಸ್ಪೇಸ್ ಸ್ಟೇಷನ್ನಿಗೆ ಅವಳದ್ದೇ ಹೆಸರಿಡಲಾಗುತ್ತದೆ.‌ ಕೂಪರ್ ಸ್ಟೇಷನ್!!!

ಅಷ್ಟರಲ್ಲಿ ಭವಿಷ್ಯದ ಕೂಪರನಿಗೆ ಐದನೇ ಆಯಾಮ ನಿಧಾನಕ್ಕೆ ಕರಗುತ್ತಾ ಬಂದು ಎಲ್ಲವೂ ಅಯೋಮಯವಾಗುತ್ತದೆ. ಪ್ರಜ್ಞೆ ತಪ್ಪುತ್ತದೆ. ಎಚ್ಚರವಾದಾಗ ಆತ ಮಗಳು ತಯಾರಿಸಿದ್ದ ಸ್ಪೇಸ್ ಸ್ಟೇಷನ್ನಿನಲ್ಲಿ ಇರುತ್ತಾನೆ. ಆತ ಐದನೇ ಆಯಾಮದಿಂದ ಹೊರ ಬಂದು ಕಪ್ಪು ರಂಧ್ರದೆಡೆ ಸೆಳೆಯಲ್ಪಡುತ್ತಿದ್ದಾಗ ಶನಿಗ್ರಹದ ಬಳಿ ಹೊಸದಾಗಿ ರಚಿತವಾಗಿದ್ದ ಸ್ಪೇಸ್ ಸ್ಟೇಷನ್ನಿನ ಕಣ್ಣಿಗೆ ಬಿದ್ದು ಬಚಾವಾಗಿರುತ್ತಾನೆ.‌ ಅರೆ!! ಹಾಗಾದರೆ ಮಗಳು ತಾನು ಕೊಟ್ಟ ಈಕ್ವೇಷನ್ ಬಳಸಿ ಜನರನ್ನು ಕಾಪಾಡಿದಳೇ… ಜೊತೆಗೆ ತನ್ನನ್ನೂ ಕಾಪಾಡಿದಳೇ… ಅವಳನ್ನು ನೋಡಬೇಕಲ್ಲ.. ಅಂತ ಅತ್ಯುತ್ಸಾಹದಿಂದ ಓಡುತ್ತಾನೆ‌.

ನೋಡಿದರೆ ಮರ್ಫಿಗೆ ಎಂಭತ್ತಾರು ವರ್ಷ ವಯಸ್ಸಾಗಿರುತ್ತದೆ!!!!

ಕೂಪರ್ ಮಾತ್ರ ಭೂಮಿ ಬಿಡುವಾಗ ಹೇಗಿರುತ್ತಾನೆಯೋ ಈಗಲೂ ಹಾಗೆಯೇ ಇರುತ್ತಾನೆ. ಅಲ್ಲಿ ಮುರ್ಫಿ ತನ್ನ ಕೊನೆಯ ಕ್ಷಣಗಳನ್ನು ಎಣಿಸುತ್ತಿರುತ್ತಾಳೆ.‌ ಕೂಪರ್ ಅವಳಿಗೆ ಮಾತು ಕೊಟ್ಟಂತೆ ಬಂದಿದ್ದೇನೆ ನೋಡು ಎನ್ನುತ್ತಾನೆ. ಈಗ ಮುರ್ಫಿಗೆ ತಂದೆಯ ಬಗ್ಗೆ ಯಾವ ಕೋಪವೂ ಇರುವುದಿಲ್ಲ. ಹಾಗಾಗಿ ನಗುತ್ತಲೇ ತನ್ನ ಸಾವನ್ನು ಎದುರು ನೋಡುತ್ತಿರುತ್ತಾಳೆ. ತಂದೆಯಿಂದಲೇ ಭೂಮಿಯ ಜನರು ಬದುಕಿದ್ದಾರೆ ಎಂಬ ಸಂತೃಪ್ತಿ ಅವಳಿಗಿರುತ್ತದೆ. ಹಾಗಾಗಿ ತಂದೆಗೆ ತನ್ನ ಬಗ್ಗೆ ಚಿಂತಿಸದೇ ಎಡ್ಮಂಡ್ ಗ್ರಹಕ್ಕೆ ಹೋಗಿರುವ ಎಮಿಲಿಯಾಳ ಬಳಿ ಹೋಗುವಂತೆ ಸಲಹೆ ನೀಡುತ್ತಾಳೆ. ಕೂಪರ್ ಮುರ್ಫಿಯನ್ನು ಅವಳ ಕುಟುಂಬದವರೊಡನೆ ಇರಲು ಬಿಟ್ಟು ಎಡ್ಮಂಡ್ ಗ್ರಹದತ್ತ ಹಾರುತ್ತಾನೆ.

ಅತ್ತ…

ಎಡ್ಮಂಡ್ ಗ್ರಹದಲ್ಲಿ ಎಮಿಲಿಯಾ ಯಾರಿಗಾಗಿಯೋ ಕಾಯುತ್ತಾ ಕುಳಿತಿರುವಂತೆ ತೋರಿಸಲಾಗಿದೆ. ಮುಖ್ಯವಾದ ವಿಷಯ ಎಂದರೆ ಅಲ್ಲಿ ಮನುಷ್ಯ ಜೀವಿಸುವ ವಾತಾವರಣ ಇರುತ್ತದೆ. ಇಲ್ಲಿಗೆ ಸಿನೆಮಾ ಮುಗಿಯುತ್ತದೆ. ಆದರೆ ಬಹಳಷ್ಟು ಪ್ರಶ್ನೆಗಳನ್ನು ನಮ್ಮಲ್ಲಿ ಈಗಾಗಲೇ ಹುಟ್ಟು ಹಾಕುವಲ್ಲಿ ಯಶಸ್ವಿಯಾಗುತ್ತದೆ.

ಕೊನೆಗೂ ಇದನ್ನೆಲ್ಲ ಮಾಡಿದವರು ಯಾರು ಅಂತ ನಮಗೆ ಗೊತ್ತಾಗುವುದಿಲ್ಲ…

ಕಪ್ಪುಕುಳಿಯ ಪಕ್ಕ ವರ್ಮ್ ಹೋಲ್ ಸೃಷ್ಟಿಸಿದವರು ಯಾರು…..?ಬ್ಲಾಕ್ ಹೋಲಿಗೆ ಬೀಳುತ್ತಿದ್ದ ಕೂಪರನ್ನು ಕಾಪಾಡಿದವರು ಯಾರು….?ಕೂಪರನ ಗತಜೀವನದ ಪುಟಗಳನ್ನು ಐದನೇ ಆಯಾಮದ ಮೂಲಕ ಆತನಿಗೆ ಜೋಡಿಸಿ ತೋರಿಸಿದವರಾರು……?ಇದೆಲ್ಲವನ್ನೂ ಮಾಡುವುದರ ಮೂಲಕ ಭೂಮಿಯ ಜನರನ್ನು ಬಚಾವು ಮಾಡಿದವರು ಯಾರು…..?ನಾವು ಪೂಜಿಸುವ ದೇವರೇ ಇರಬಹುದಲ್ಲವೇ…??

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply