Interstellar (English)

(ಮುಂದುವರೆದ ಭಾಗ)

ಗುರುತ್ವದ ಮೂಲಕ… ಹಾಗೆಂದರೆ ಏನೆಂದು ಅರ್ಥವಾಯ್ತಾ?

ಉಹುಂ ಆಗೋಲ್ಲ. ಏಕೆಂದರೆ ನಾವು ಈಗ ಇರುವುದು ಮೂರನೇ ಆಯಾಮದಲ್ಲಿ. ಇದೇ ರೀತಿ ನಾಲ್ಕನೇ, ಐದನೇ, ಆರನೇ ಆಯಾಮಗಳೂ ಸಹ ಇವೆ. ಒಂದೊಂದು ಆಯಾಮಗಳಲ್ಲಿಯೂ ಒಂದೊಂದು ಹೊಸ ವಿಷಯ ಸೇರುತ್ತದೆ. ಆದರೆ ಎಲ್ಲಾ ಆಯಾಮಗಳಲ್ಲಿಯೂ ಕಾಮನ್ ಆಗಿ ಇರುವುದು ಎಂದರೆ “ಗುರುತ್ವ”. ಹಾಗಾಗಿ ಯಾರೋ ಬೇರೆ ಆಯಾಮದವರು ಈ ಆಯಾಮದವರಿಗೆ ಗುರುತ್ವದ ಮೂಲಕ ಏನೋ ಕಳಿಸುತ್ತಿದ್ದಾರೆ ಅಂತ ನಮಗೆ ಗೊತ್ತಾಗುತ್ತದೆ.

ಕೂಪರ್ ಅದನ್ನು ಡಿಕೋಡ್ ಮಾಡುತ್ತಾನೆ. ಅದು ಅಕ್ಷಾಂಶ ಮತ್ತು ರೇಖಾಂಶವಾಗಿರುತ್ತದೆ. ಅದನ್ನು ಹುಡುಕಿಕೊಂಡು ಹೊರಟ ತಂದೆ-ಮಗಳಿಗೆ ನಾಸಾದ ಸೀಕ್ರೆಟ್ ಪ್ರಾಜೆಕ್ಟ್ ನಡೆಯುತ್ತಿದ್ದ ಸ್ಥಳ ಸಿಗುತ್ತದೆ. ಕೂಪರ್ ಹಿಂದೊಮ್ಮೆ ನಾಸಾದ ಪೈಲಟ್ ಮತ್ತು ಇಂಜನಿಯರ್ ಆಗಿದ್ದವನೇ. ಆದರೀಗ ಎಲ್ಲ ಬಿಟ್ಟು ತನ್ನ ಪಾಡಿಗೆ ವ್ಯವಸಾಯ ಮಾಡಿಕೊಂಡಿರುತ್ತಾನೆ. ಆದರೆ ಅರಿಯದ ಯಾವುದೋ ಶಕ್ತಿ ಅವನನ್ನು ಅಲ್ಲಿಗೇ ಪುನಃ ಕರೆಸಿಕೊಂಡಿರುತ್ತದೆ. ಆ ಅದೃಶ್ಯ ಶಕ್ತಿ ಯಾವುದಿರಬಹುದು? ಅದು ಕೂಪರನಿಂದ ಏನು ಮಾಡಿಸಿಕೊಳ್ಳಲು ಬಯಸಿರಬಹುದು? ಭೂಮಿಯ ಮೇಲಿನ ಜನರನ್ನು ಮುಂದೆ ಎದುರಾಗಲಿರುವ ಆಪತ್ತಿನಿಂದ ಕಾಪಾಡಲು ಕೂಪರನೇ ಸೂಕ್ತ ವ್ಯಕ್ತಿ ಅಂತ ಆ ಅದೃಶ್ಯ ಶಕ್ತಿಗಳು ತಿಳಿದಿರಬಹುದೇ?

ಅರೆ…..!!! ಭೂಮಿಗೇನಾಯ್ತು?? ಯಾವ ವಿಪತ್ತು?? ಅಂತ ಕಂಗಾಲಾದಿರಾ?

ಇರಿ. ಈಗ ಭೂಮಿಯ ವಾತಾವರಣವನ್ನು ಸ್ವಲ್ಪ ಗಮನಿಸೋಣ. ಇದು ಈಗ ನಾವಿರುವ ಕಾಲಮಾನದಿಂದ ಒಂದೈವತ್ತು ವರ್ಷಗಳ ನಂತರ ನಡೆಯುವ ಕಥೆ. ಅಂದಿಗೆ ಭೂಮಿಯ ಮೇಲಿನ ಪರಿಸ್ಥಿತಿ ಬಹಳ ದಾರುಣ ಮತ್ತು ಕಲುಷಿತವಾಗಿತ್ತು. ಆಗಾಗ ಪರ್ವತದಷ್ಟು ಎತ್ತರದ ಧೂಳಿನ ಸಮುದ್ರ ಉಕ್ಕಿ ಬಂದು ಇಡೀ ಊರನ್ನು ಮುಚ್ಚಿ ಹಾಕುತ್ತಿತ್ತು. ಬೆಳೆದಿರುವ ಬೆಳೆಯನ್ನೆಲ್ಲಾ ನಾಶ ಮಾಡುತ್ತಿತ್ತು. ಇದರ ಧಾಳಿ ಎಷ್ಟಿತ್ತೆಂದರೆ ಜನರು ಪಾತ್ರೆ-ಲೋಟಗಳನ್ನು ಮಗುಚಿ ಇಡುತ್ತಿದ್ದರು. ಉಪಯೋಗಿಸಲು ತೆಗೆದಾಗ ಆ ಜಾಗ ಬಿಟ್ಟು ಬೇರೆಲ್ಲಾ ಧೂಳಿನಿಂದಾವೃತವಾಗಿರುತ್ತಿತ್ತು. ವಾತಾವರಣ ಇನ್ನು ಬದುಕಲು ಸಾಧ್ಯವೇ ಇಲ್ಲ ಎನ್ನುವಷ್ಟು ಕುಲಗೆಟ್ಟು ಹೋಗಿತ್ತು. ಇನ್ನು ಕೆಲವೇ ವರ್ಷಗಳಲ್ಲಿ ಭೂಮಿಯ ಗಾಳಿಯಲ್ಲಿ 80% ನೈಟ್ರೋಜನ್ ತುಂಬಿಕೊಂಡು ಉಸಿರಾಡಲೂ ಕಷ್ಟವಾಗುವ ವಾತಾವರಣ ನಿರ್ಮಾಣವಾಗುವ ಅಪಾಯ ಇತ್ತು.

ಅದಕ್ಕಾಗಿ ನಾಸಾದ ಪ್ರೊಫೆಸರ್ ಮಿ. ಬ್ರಾಂಡ್ ಒಂದು ಯೋಜನೆ ತಯಾರಿಸಿರುತ್ತಾರೆ. ಆದರೆ ಅದನ್ನು ಕಾರ್ಯಗತಗೊಳಿಸುವವರು ಬೇಕಾಗಿರುತ್ತಾರೆ. ಈಗ ಅದನ್ನು ತಾನೇ ತಾನಾಗಿ ಬಂದ ಕೂಪರ್ ಬಳಿ ಹಂಚಿಕೊಳ್ಳುತ್ತಾರೆ.‌ ಏನೆಂದರೆ ಈಗಾಗಲೇ ಮುಕ್ಕಾಲು ಭಾಗ ನಾಶವಾಗಿರುವ ಭೂಮಿಯನ್ನಂತೂ ಕಾಪಾಡಲು ಸಾಧ್ಯವಿಲ್ಲ. ಆದರೆ ಭೂಮಿಯ ಮೇಲಿನ ಜನರನ್ನಾದರೂ ಕಾಪಾಡಲೇಬೇಕು ಎಂಬುದು ಅವರಾಸೆಯಾಗಿರುತ್ತದೆ. ಅದಕ್ಕಾಗಿ ಸ್ವತಃ ಕಷ್ಟಪಟ್ಟು ಎರಡು ಯೋಜನೆ ತಯಾರಿಸಿರುತ್ತಾರೆ.

ಅವರ ಯೋಜನೆ ಕೆಳಕಂಡಂತಿದೆ.

PLAN “A” : ಭೂಮಿಯ ಜನರನ್ನು ವಾಸಿಸಲು ಯೋಗ್ಯವಿರುವ ಮತ್ತೊಂದು ಗ್ರಹಕ್ಕೆ ಶಿಫ್ಟ್ ಮಾಡುವುದು.‌

PLAN “B” : ಗಗನಯಾತ್ರಿಗಳನ್ನು ಕೆಲವು ಭ್ರೂಣಗಳೊಂದಿಗೆ ಸ್ಪೇಸ್ ಶಿಪ್ಪಿನಲ್ಲಿ ವಾಸಯೋಗ್ಯ ಗ್ರಹಗಳನ್ನು ಹುಡುಕಲು ಕಳಿಸುವುದು. ಮತ್ತು ವಾತಾವರಣ ಇರಬಹುದಾದ ವಾಸಯೋಗ್ಯ ಗ್ರಹದಲ್ಲಿ ಗಗನಯಾತ್ರಿಗಳು ತಮ್ಮೊಡನೆ ಕೊಂಡೊಯ್ಯುವ ಮಾನವ ಭ್ರೂಣಗಳನ್ನೇ ಬೆಳೆಸಿ ಹೊಸ ಮಾನವ ಪೀಳಿಗೆಯನ್ನು ಸೃಷ್ಟಿಸುವುದು.

ಆದರೆ ಇವೆರೆಡೂ ಕಾರ್ಯಕ್ಕಾಗಿ ನಾವು ನಮ್ಮ ಸೌರವ್ಯೂಹದಿಂದಾಚೆ ಹೋಗುವುದು ಅನಿವಾರ್ಯವಾಗಿರುತ್ತದೆ. ಪಕ್ಕದೂರಿಗೆ ಹೋಗಲು ನೂರೆಂಟು ಸಲ ಯೋಚಿಸುವ ನಾವು ಪಕ್ಕದ ಗೆಲಾಕ್ಸಿಗೆ ಅಂದುಕೊಂಡ ತಕ್ಷಣ ಹೋಗಲು ಸಾಧ್ಯವೇ? ಹೋಗಲಿ… ಅಲ್ಲಿಗೆ ಹೋಗಿ ತಲುಪುವವರೆಗೂ ನಮ್ಮ ಆಯುಸ್ಸು ಉಳಿದಿರುತ್ತದೆಯೇ?

ಆದರೆ ನಮ್ಮ ಬದುಕಿನಲ್ಲಿ ಕೆಲವೊಮ್ಮೆ ಪವಾಡಗಳು ನಡೆಯುತ್ತವೆ….!!!

ಸೌರವ್ಯೂಹದ ಶನಿಗ್ರಹದ ಬಳಿ‌ಯ ಕಪ್ಪುರಂಧ್ರದ ಪಕ್ಕದಲ್ಲಿ ಒಂದು “ವರ್ಮ್ ಹೋಲ್” ಸೃಷ್ಟಿಯಾಗಿರುವುದು ಇವರಿಗೆ ಗೊತ್ತಾಗುತ್ತದೆ. ‘ವರ್ಮ್ ಹೋಲ್’ ಎಂದರೆ ಅತಿ ಕಡಿಮೆ ಸಮಯದಲ್ಲಿ ಮತ್ತೊಂದು ಗೆಲಾಕ್ಸಿಗೆ ಪಯಣಿಸಲು ಇರುವ ಅಡ್ಡದಾರಿಯ ಹಾಗೆ‌. ಇದನ್ನು ಪವಾಡ ಎಂದು ಯಾಕೆ ಹೇಳಿದೆ ಎಂದರೆ, ಆ ವರ್ಮ್ ಹೋಲ್ ಅನ್ನು ಸೃಷ್ಟಿಸುವಷ್ಟು ತಂತ್ರಜ್ಞಾನದಲ್ಲಿ ನಾವಿನ್ನೂ ಮುಂದುವರೆದಿರುವುದಿಲ್ಲ. ಹಾಗಾಗಿ ಈಗಾಗಲೇ ಸೃಷ್ಟಿಯಾಗಿರುವ ವರ್ಮ್ ಹೋಲಿನ ಮೂಲಕ ನಾವು ಬೇರೆ ಗೆಲಾಕ್ಸಿಗಳಿಗೆ ಅತಿ ಕಡಿಮೆ ಸಮಯದಲ್ಲಿ ಪಯಣಿಸಿ, ಅಲ್ಲಿ ಮನುಷ್ಯ ವಾಸ ಮಾಡಬಹುದಾದ ಪರಿಸರ ಇರುವ ಗ್ರಹಗಳನ್ನು ಕಂಡುಹಿಡಿಯಬಹುದಾಗಿರುತ್ತದೆ.

ಅದಕ್ಕಾಗಿ ಈಗಾಗಲೇ ಪ್ರೊಫೆಸರ್ ಬ್ರಾಂಡ್ 12 ಜನರನ್ನು 12 ದಿಕ್ಕಿನಲ್ಲಿ ಈ ಕಾರ್ಯಕ್ಕಾಗಿ ಕಳಿಸಿರುತ್ತಾರೆ. ಅವರಲ್ಲಿ ಮೂವರು ಮಾತ್ರ ಇದುವರೆಗೂ ಧನಾತ್ಮಕವಾಗಿ ಪ್ರತಿಕ್ರಿಯಿಸಿರುತ್ತಾರೆ. ಹಾಗಾಗಿ ಈ ಮೂರು ಗ್ರಹಗಳಲ್ಲಿ ಮಾನವ ವಾಸ ಮಾಡಬಹುದಾದ ವಾತಾವರಣ ಇರಬಹುದು ಎಂಬುದು ಪ್ರೊಫೆಸರ್ ಅವರ ದೂರದ ಆಸೆಯಾಗಿರುತ್ತದೆ. ಈಗ ಕೂಪರನ ನಾಯಕತ್ವದಲ್ಲಿ ಮತ್ತೊಂದು ತಂಡ ‘ವರ್ಮ್ ಹೋಲಿ’ನ ಮೂಲಕ ಹೋಗಿ, ಆ ಮೂರು ಗ್ರಹಗಳನ್ನು ಪರಿಶೀಲಿಸಿದರೆ, ಆದಷ್ಟು ಬೇಗ ಭೂಮಿಯ ಜನರನ್ನು ಆ ಗ್ರಹಕ್ಕೆ ಶಿಫ್ಟ್ ಮಾಡಬಹುದಾಗಿರುತ್ತದೆ. ಕೂಪರ್ ಈ ಕೆಲಸಕ್ಕೆ ಹೊಸಬನೇನಲ್ಲವಾದ್ದರಿಂದ ಒಪ್ಪುತ್ತಾನೆ.

ಆದರೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಆತನ ಮಗಳು ಮುರ್ಫಿಗೆ ಇದು ಇಷ್ಟವಾಗುವುದಿಲ್ಲ. ಹೋಗಬೇಡವೆಂದು ಬಹಳಷ್ಟು ಹಠ ಮಾಡುತ್ತಾಳೆ. ಅಷ್ಟರಲ್ಲಿ ಅವಳು ತನ್ನ ಕೊಠಡಿಯಲ್ಲಿ ಬೀಳುತ್ತಿದ್ದ ಪುಸ್ತಕಗಳಿಂದ ದೊರೆತಿದ್ದ ಮಾರ್ಸ್ ಕೋಡುಗಳನ್ನು ಡಿಕೋಡ್ ಸಹ ಮಾಡಿರುತ್ತಾಳೆ. ಅದರಲ್ಲಿಯೂ ಅದೇ ಸಂಕೇತ ಕಂಡಿರುತ್ತದೆ.

“ನಿಲ್ಲು…”

ಅಪ್ಪ ಹೋಗದಿರಲಿ ಅಂತ ಮುರ್ಫಿ ಸುಮ್ಮನೆ ಹಾಗೆ ಹೇಳುತ್ತಿರಬೇಕು ಅಂತ ನಾವಂದುಕೊಳ್ಳುತ್ತೇವೆ. ಮಗಳ ಒತ್ತಡಕ್ಕೆ ಮಣಿಯದ ಕೂಪರ್ ಹೊರಟೇ ಬಿಡುತ್ತಾನೆ. ಹೊರಡುವ ಮುಂಚೆ ಮಗಳಿಗೆ ಒಂದು ವಾಚ್ ಕೊಡುತ್ತಾನೆ. ಅದೇ ರೀತಿಯ ವಾಚ್ ಅವನ ಬಳಿಯೂ ಇರುತ್ತದೆ. ಅದರ ವಿಶೇಷತೆಯೇನೆಂದರೆ, ಬಾಹ್ಯಾಕಾಶದಲ್ಲಿ ಕೂಪರನಿಗೆ ವಯಸ್ಸಾಗುವುದಿಲ್ಲ. ಆದರೆ ಗುರುತ್ವದ ಕಾರಣ ಭೂಮಿಯ ಮೇಲಿರುವ ಮುರ್ಫಿಗೆ ವಯಸ್ಸಾಗುತ್ತಿರುತ್ತದೆ. ಹಾಗಾಗಿ ಕೂಪರ್ ತನ್ನ ಪ್ರಾಜೆಕ್ಟ್ ಮುಗಿಸಿ ವಾಪಸ್ ಭೂಮಿಗೆ ಬಂದಾಗ ಅವನೂ ಮತ್ತು ಮುರ್ಫಿ ಇಬ್ಬರೂ ಒಂದೇ ವಯಸ್ಸಿನವಾರಾಗಿರುತ್ತಾರೆ ಎಂದು ಕೂಪರ್ ಮಗಳಿಗೆ ಹೇಳಿ ಹೊರಡುತ್ತಾನೆ.

ಅವರ ಮುಂದಿನ ಯೋಜನೆ ಮುಂದಿನ ಭಾಗದಲ್ಲಿ ಓದಿ ……….

(ಮುಂದುವರೆಯುವುದು)

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply