[Direction: Christopher Nolan]
ಮನೆಯಲ್ಲಿ ಒಂಟಿಯಾಗಿರುತ್ತೀರಿ. ಒಂದು ಸಣ್ಣ ಪುಸ್ತಕದ ಪುಟ ತೆರೆಯುವ ಶಬ್ದವೂ ರೋಡ್ ರೋಲರಿನಂತೆ ಕೇಳಿಸುವಷ್ಟು ನಿಶ್ಯಬ್ದ ಆವರಿಸಿರುತ್ತದೆ. ಆಗ ದಿಢೀರನೆ ಮೇಜಿನ ಮೇಲಿಂದ ಯಾವುದೋ ವಸ್ತು ಅಥವಾ ಪುಸ್ತಕದ ರ‌್ಯಾಕಿನಿಂದ ಒಂದು ಪುಸ್ತಕ ದಭಾಲನೆ ಬಿದ್ದರೆ ಹೇಗಾಗಬಹುದು??
ಆಗೋದೇನು?
ಹೃದಯ ಒಡೆದು ಹೋಗುವುದೊಂದು ಬಾಕಿ. ಕಣ್ಣಿಗೆ ಕಾಣದ ಯಾವುದೇ ಶಕ್ತಿಯನ್ನು ನಾವು ಭೂತ ಎಂದೇ ತಿಳಿಯುತ್ತೇವೆ. ಉದಾಹರಣೆಗೆ ಬಾಹ್ಯ ಒತ್ತಡ ಇಲ್ಲದೇ ಯಾವ ವಸ್ತುವೂ ಚಲಿಸೋಲ್ಲ ಎನ್ನುವುದು ಸೈನ್ಸ್. ಅದೇ ರೀತಿ ಯಾವ ಒತ್ತಡವೂ ಇಲ್ಲದೇ ಪುಸ್ತಕಗಳು ತಾನೇ ತಾನಾಗಿ ಬೀಳತೊಡಗಿದಾಗ ಇದು ಭೂತದ ಚೇಷ್ಟೆಯೇ ಎಂಬ ತೀರ್ಮಾನಕ್ಕೆ ಬರುತ್ತೇವೆ.
ನಾಯಕ ಕೂಪರ್‌ನ ಮುದ್ದು ಮಗಳಾದ ಮರ್ಫ್ ಸಹ ಇದನ್ನು ಮಾಡುತ್ತಿರುವುದು ಭೂತ ಅಂತಲೇ ತಿಳಿದಿರುತ್ತಾಳೆ. ಆದರೆ ಅವಳು ತನ್ನ ಕೊಠಡಿಯಲ್ಲಿ ಭೂತವಿದೆ, ಅದು ಪುಸ್ತಕ ಬೀಳಿಸುತ್ತಿದೆ ಅಂತ ಹೇಳಿದಾಗ ಯಾರೂ ಸಹ ನಂಬದೇ ಆಕೆಯ ಮಾತುಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ.
ಆದರೆ ಮುರ್ಫ್ ಹೆದರದೇ ಇದನ್ನು ಪ್ರತಿನಿತ್ಯವೂ ಗಮನಿಸುತ್ತಿರುತ್ತಾಳೆ. ಅದರ ಪ್ರಕಾರ ರ‌್ಯಾಕಿನ ಪುಸ್ತಕಗಳು ಪ್ರತಿದಿನ ಒಂದು ವ್ಯವಸ್ಥಿತ ರೂಪದಲ್ಲಿ ಬೀಳುತ್ತಿರುತ್ತದೆ. ಅಂದರೆ ಪುಸ್ತಕಗಳು ಯಾವುದೋ ಸಂಕೇತ ಕೊಡುತ್ತಿರುವ ಹಾಗೆ. ಇದರರ್ಥ ಭೂತ ಮಾತನಾಡಲು ಪ್ರಯತ್ನ ಪಡುತ್ತಿದೆ. ಏನೋ ಹೇಳಲು ಯತ್ನಿಸುತ್ತದೆ. ಅದೇನಿರಬಹುದು? ಭೂತದ ಭಾಷೆ ಯಾವುದು?
ಕೊನೆಗೆ ಅದು morse code ನಲ್ಲಿ ಸಂವಹನ ನಡೆಸುತ್ತಿದೆ ಅಂತ ಮುರ್ಫಿಗೆ ಗೊತ್ತಾಗುತ್ತದೆ. ಎಲ್ಲಿಯ ಭೂತ…? ಎಲ್ಲಿಯ ಮಾರ್ಸ್ ಕೋಡ್…? ಅಂತ ನಮಗೆ ಕನ್ಫ್ಯೂಸ್ ಆಗುತ್ತದೆ. ಬಹುಶಃ ಇದು ಹೈಲಿ ಎಜ್ಯುಕೇಟೆಡ್ ಭೂತ ಇರಬೇಕು ಇದು ಅಂದ್ಕೊಳ್ತೀವಿ ನಾವು (Morse code ಎಂದರೆ dots and dashes). ಕೂಡಲೇ ಮುರ್ಫ್ ಆ ಕೋಡ್ ಅನ್ನು ಡಿಕೋಡ್ ಮಾಡಲು ಶುರು ಮಾಡುತ್ತಾಳೆ.
ಇದಾಗಿ ಸ್ವಲ್ಪ ದಿನಕ್ಕೆ ಒಮ್ಮೆ ಕೂಪರ್ ಇಬ್ಬರು ಮಕ್ಕಳ ಜೊತೆ ಬೇಸ್ ಬಾಲ್ ನೋಡಲು ಹೋಗಿದ್ದಾಗ ಧೂಳಿನ ತ್ಸುನಾಮಿ ಏರ್ಪಟ್ಟು ಎಲ್ಲರೂ ಪಂದ್ಯವನ್ನು ಬಿಟ್ಟು ಮನೆಗೆ ಓಡಿ ಬಂದುಬಿಡುತ್ತಾರೆ. ಮನೆಯ ಎಲ್ಲಾ ಕಿಟಕಿ-ಬಾಗಿಲು ಹಾಕುತ್ತಿದ್ದವರಿಗೆ ಮುರ್ಫಳ ಪುಸ್ತಕಗಳಿದ್ದ ಕೋಣೆಯ ಕಿಟಕಿ ಹಾಕದೇ ಇದ್ದದ್ದು ನೆನಪಾಗಿ ಅಲ್ಲಿಗೆ ಓಡುತ್ತಾರೆ. ಆ ತೆರೆದಿದ್ದ ಕಿಟಕಿಯ ಮೂಲಕ ಧೂಳು ಆಗಲೇ ಒಳನುಗ್ಗಿರುತ್ತದೆ. ಆದರೆ ನೆಲದ ಮೇಲೆ ಮುಚ್ಚಿಕೊಂಡಿದ್ದ ಆ ಧೂಳಿನಲ್ಲಿ ಒಂದು ಚಿತ್ತಾರ ಅಡಗಿರುತ್ತದೆ. ಕೂಪರನಿಗೆ ಅದು ಬೈನರಿ ಭಾಷೆಯಲ್ಲಿ ಏನನ್ನೋ ಹೇಳಲಾಗಿದೆ ಅಂತ ಗೊತ್ತಾಗುತ್ತದೆ. ಅಂದರೆ ಈ ಕೋಣೆಯಿಂದ ಯಾರೋ ತಮಗೆ ಏನೋ ಸಂದೇಶ ಕೊಡಲು ಪ್ರಯತ್ನಿಸುತ್ತಿದ್ದಾರೆ ಅಂತ ಅವನಿಗೂ ನಂಬಿಕೆ ಬರುತ್ತದೆ. ಆ ಸಂದೇಶವನ್ನು ಗುರುತ್ವದ ಮೂಲಕ ಈ ಕೋಣೆಗೆ ಕಳಿಸಲಾಗಿರುತ್ತದೆ.
ಗುರುತ್ವದ ಮೂಲಕ… ಹಾಗೆಂದರೆ ಏನೆಂದು ಅರ್ಥವಾಯ್ತಾ?
ಉಹುಂ ಆಗೋಲ್ಲ. ಏಕೆಂದರೆ ನಾವು ಈಗ ಇರುವುದು ಮೂರನೇ ಆಯಾಮದಲ್ಲಿ. ಇದೇ ರೀತಿ ನಾಲ್ಕನೇ, ಐದನೇ, ಆರನೇ ಆಯಾಮಗಳೂ ಸಹ ಇವೆ. ಒಂದೊಂದು ಆಯಾಮಗಳಲ್ಲಿಯೂ ಒಂದೊಂದು ಹೊಸ ವಿಷಯ ಸೇರುತ್ತದೆ. ಆದರೆ ಎಲ್ಲಾ ಆಯಾಮಗಳಲ್ಲಿಯೂ ಕಾಮನ್ ಆಗಿ ಇರುವುದು ಎಂದರೆ “ಗುರುತ್ವ”. ಹಾಗಾಗಿ ಯಾರೋ ಬೇರೆ ಆಯಾಮದವರು ಈ ಆಯಾಮದವರಿಗೆ ಗುರುತ್ವದ ಮೂಲಕ ಏನೋ ಕಳಿಸುತ್ತಿದ್ದಾರೆ ಅಂತ ನಮಗೆ ಗೊತ್ತಾಗುತ್ತದೆ.
ಕೂಪರ್ ಅದನ್ನು ಡಿಕೋಡ್ ಮಾಡುತ್ತಾನೆ. ಅದು ಅಕ್ಷಾಂಶ ಮತ್ತು ರೇಖಾಂಶವಾಗಿರುತ್ತದೆ. ಅದನ್ನು ಹುಡುಕಿಕೊಂಡು ಹೊರಟ ತಂದೆ-ಮಗಳಿಗೆ ನಾಸಾದ ಸೀಕ್ರೆಟ್ ಪ್ರಾಜೆಕ್ಟ್ ನಡೆಯುತ್ತಿದ್ದ ಸ್ಥಳ ಸಿಗುತ್ತದೆ. ಕೂಪರ್ ಹಿಂದೊಮ್ಮೆ ನಾಸಾದ ಪೈಲಟ್ ಮತ್ತು ಇಂಜನಿಯರ್ ಆಗಿದ್ದವನೇ. ಆದರೀಗ ಎಲ್ಲ ಬಿಟ್ಟು ತನ್ನ ಪಾಡಿಗೆ ವ್ಯವಸಾಯ ಮಾಡಿಕೊಂಡಿರುತ್ತಾನೆ. ಆದರೆ ಅರಿಯದ ಯಾವುದೋ ಶಕ್ತಿ ಅವನನ್ನು ಅಲ್ಲಿಗೇ ಪುನಃ ಕರೆಸಿಕೊಂಡಿರುತ್ತದೆ. ಆ ಅದೃಶ್ಯ ಶಕ್ತಿ ಯಾವುದಿರಬಹುದು? ಅದು ಕೂಪರನಿಂದ ಏನು ಮಾಡಿಸಿಕೊಳ್ಳಲು ಬಯಸಿರಬಹುದು? ಭೂಮಿಯ ಮೇಲಿನ ಜನರನ್ನು ಮುಂದೆ ಎದುರಾಗಲಿರುವ ಆಪತ್ತಿನಿಂದ ಕಾಪಾಡಲು ಕೂಪರನೇ ಸೂಕ್ತ ವ್ಯಕ್ತಿ ಅಂತ ಆ ಅದೃಶ್ಯ ಶಕ್ತಿಗಳು ತಿಳಿದಿರಬಹುದೇ?
ಅರೆ…..!!! ಭೂಮಿಗೇನಾಯ್ತು?? ಯಾವ ವಿಪತ್ತು?? ಅಂತ ಕಂಗಾಲಾದಿರಾ?
ಮುಂದುವರೆಯುವುದು