ಇದು ಮೆಡಿಕಲ್ ಕ್ರೈಂ ಕುರಿತಾದ ಸಿನೆಮಾ.
ಈ ಜಗತ್ತಿನಲ್ಲಿ ಕೆಲವು ಕ್ರೈಂಗಳು ಹೇಗಿರುತ್ತವೆ ಎಂದರೆ ಅವು ನಮ್ಮ ನೇರ ಸಂಪರ್ಕಕ್ಕೆ ಬರದೇ ನಮಗೆ ಅದರ ಬಗ್ಗೆ ಗೊತ್ತಾಗುವುದೇ ಇಲ್ಲ. ಜನ ಸಾಮಾನ್ಯರಿಗಂತೂ ಇಂತಹಾ ಒಂದು ಪಾತಕ ನಡೆಯುತ್ತಿದೆ ಎಂಬ ಅರಿವು ಸಹ ಇರುವುದಿಲ್ಲ.
ಅಂತಹಾ ಒಂದು ಭಯಾನಕ ಸತ್ಯ ಇದು.
ಎಲ್ಲ ತಂದೆ-ತಾಯಿಯರಿಗೂ ತಮಗೆ ತಮ್ಮದೇ ಆದ ಸ್ವಂತ ಮಕ್ಕಳಾಗಬೇಕು ಎನ್ನುವ ಆಸೆ ಇರುತ್ತದೆ. ಆದರೆ ಎಲ್ಲರಿಗೂ ಆ ಅವಕಾಶ ಸಿಗುವುದಿಲ್ಲ. ಆಗ ಆ ತಾಯ್ತಂದೆಯರು ಟೆಸ್ಟ್ ಟ್ಯೂಬ್ ಅಥವಾ ಕೃತಕ ಗರ್ಭಧಾರಣೆಯ ಮೂಲಕ ಮಗು ಪಡೆಯಲು ಆಸ್ಪತ್ರೆಗಳಿಗೆ / ಫರ್ಟಿಲಿಟಿ ಸೆಂಟರುಗಳಿಗೆ ಹೋಗುತ್ತಾರೆ.
ಆದರೆ ಇವರ ಬಲಹೀನತೆ ಅರಿತ ಆಸ್ಪತ್ರೆಗಳು ಇದನ್ನೇ ಧಂಧೆ ಮಾಡಿಕೊಂಡುಬಿಟ್ಟರೆ??
ಈ ಕಥೆಯಲ್ಲಿಯೂ ನಾಯಕನ ಅತ್ತಿಗೆಗೆ ಬಹಳ ವರ್ಷ ಕಾಲ ಮಕ್ಕಳಾಗಿರುವುದಿಲ್ಲ. ಅವರುಗಳು ಮಾಡದ ಪೂಜೆಯಿಲ್ಲ, ಹರಕೆ ಕಟ್ಟಿಕೊಳ್ಳದ ದೇವರಿಲ್ಲ. ಆದರೂ ಅವರಿಗೆ ಮಕ್ಕಳ ಭಾಗ್ಯ ಸಿಕ್ಕಿರುವುದಿಲ್ಲ. ಕಡೆಗೆ ಅವರು ಮಕ್ಕಳಾಗುವುದಕ್ಕೆ ಟ್ರೀಟ್ಮೆಂಟ್ ತೆಗೆದುಕೊಳ್ಳಲು ನಿರ್ಧರಿಸಿ “ತುಳಸಿ” ಆಸ್ಪತ್ರಗೆ ಹೋಗುತ್ತಾರೆ.
ಅಲ್ಲಿ ಅತ್ತಿಗೆಗೆ ಟ್ರೀಟ್ಮೆಂಟ್ ಶುರುವಾಗುತ್ತದೆ.
ಅದೃಷ್ಟ ಎಂಬಂತೆ ಟ್ರೀಟ್ಮೆಂಟ್ ಫಲಕಾರಿಯಾಗಿ ನಾಯಕನ ಅತ್ತಿಗೆ ಬಸುರಿಯಾಗುತ್ತಾಳೆ. ಅಂತೂ ತಾನು ಬಂಜೆಯಲ್ಲ ಅಂತ ಆಕೆ ಖುಷಿಪಡುತ್ತಾಳೆ. ಮನೆಯವರ ಸಂತಸಕ್ಕೆ ಪಾರವೇ ಇಲ್ಲ ಈಗ. ಎಲ್ಲರೂ ಸೇರಿ ಇದನ್ನು ಸಂಭ್ರಮಿಸುತ್ತಾರೆ.
ಈ ನಡುವೆ ಆ ತುಳಸಿ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಪಡೆದು ಬಸುರಿಯರಾಗಿದ್ದ ಇಬ್ಬರು ಗರ್ಭಿಣಿ ಮಹಿಳೆಯರು ಅಸಹಜವಾಗಿ ಸತ್ತಿರುತ್ತಾರೆ. ನಾಯಕ ಪೊಲೀಸ್ ಆಗಿರುವುದರಿಂದ ಆತನೇ ತನಿಖೆ ನಡೆಸುತ್ತಿರುತ್ತಾನೆ.
ಹೀಗಿರುವಾಗ ಒಂದು ದಿನ ಆತನ ಅತ್ತಿಗೆಯೂ ಆತ್ಮಹತ್ಯೆಗೆ ಶರಣಾಗುತ್ತಾಳೆ…!!!
ಯಾಕೆ…..? ಏನು ಕಾರಣ…? ಅಂತ ಆತನಿಗೆ ಗೊತ್ತಾಗುವುದಿಲ್ಲ. ಬಹಳ ಕಾಲ ಮಕ್ಕಳಿಲ್ಲದ ಆಕೆ ಈಗ ಗರ್ಭಿಣಿ ಆಗಿರುವುದಕ್ಕಾಗಿ ಸಂತಸದಿಂದ ಇರಬೇಕಿತ್ತು. ಇಂತಹಾ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನಿರಬಹುದು? ಅದ್ಯಾವ ಬಾಹ್ಯ ಒತ್ತಡ ಆಕೆಯನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿರಬಹುದು? ಅಂತ ಯೋಚಿಸುತ್ತಾನೆ.
ಆಗ ಈ ಹಿಂದೆ ನಡೆದಿರುವ ಎರಡು ಸಾವಿಗೂ, ತನ್ನ ಅತ್ತಿಗೆಯ ಸಾವಿಗೂ ತುಳಸಿ ಆಸ್ಪತ್ರೆಯ ಕನೆಕ್ಷನ್ ಇರುವುದು ಗೊತ್ತಾಗುತ್ತದೆ. ಅಲ್ಲಿ ಹೋಗಿ ತನಿಖೆ ನಡೆಸಿದಾಗ ಹೈಟೆಕ್ ಆಸ್ಪತ್ರೆಯ ಹೈಟೆಕ್ ಕ್ರೈಂ ಹಿಂದಿನ ಬಂಡವಾಳ ಗೊತ್ತಾಗುತ್ತದೆ. ಈ ಆಸ್ಪತ್ರೆಗಳು ಅತ್ಯಧಿಕ ಬಿಲ್ ಮಾಡಿ ದುಡ್ಡು ಹೊಡೆಯುವುದಲ್ಲದೇ, ನೀತಿಗೆಟ್ಟ ಅನಾಚಾರ ಮಾಡುತ್ತಾ, ಜನಸಾಮಾನ್ಯರ ಭಾವನೆಗಳ ಜೊತೆ ಆಟವಾಡುತ್ತಾ, ಅವರ ನೈತಿಕತೆಗೆ ಹೊಡೆತ ಕೊಡುತ್ತಾ ಅವರ ಸಾವಿಗೆ ಕಾರಣವಾಗಿರುತ್ತದೆ.
ಅದ್ಯಾವ ಕ್ರೈಂ ಎಂದು ತಿಳಿಯಬೇಕೇ??
ಸಿನೆಮಾ ನೋಡಿ. ಒಮ್ಮೆ ಮೈ ಜುಂ ಎನ್ನದಿದ್ದರೆ ಕೇಳಿ. ದಂಪತಿಗಳ ತಮ್ಮದೇ ಆದ “ಮಕ್ಕಳು” ಬೇಕೆನ್ನುವ ವ್ಯಾಮೋಹವನ್ನು ಬಳಸಿ ಆಸ್ಪತ್ರೆಗಳು ನಡೆಸುವ ಅನಾಚಾರ ತಿಳಿದರೆ ನಮ್ಮ ದೇಹ ಸಿಟ್ಟಿನಿಂದ ಕಂಪಿಸುತ್ತದೆ. ಏಕೆಂದರೆ… ಇದು ಕೇವಲ ಮನುಷ್ಯರಿಗೆ ಮಾಡಿರುವ ಮೋಸವಲ್ಲ. ಮನುಷ್ಯನ ಅಸ್ತಿತ್ವ ಮತ್ತು ಆತನ ನಂಬಿಕೆಗಳಿಗೆ ಮಾಡಿರುವ ದ್ರೋಹವಾಗಿದೆ.