“Mayavan” (ತಮಿಳು)

ಮನುಷ್ಯ ಹೇಗೆ ಜೀವಿಸಿದ್ದಾನೆ….?

ಅವನು ತನ್ನ ನೆನಪುಗಳ ಸಹಾಯದಿಂದ ಭೂತ-ಭವಿಷ್ಯ-ವರ್ತಮಾನಗಳನ್ನು ಅರಿತು ಮುನ್ನಡೆಯುತ್ತಾನೆ. ಹಾಗಾದರೆ ನೆನಪಿನಿಂದ ಮನುಷ್ಯ ಶಾಶ್ವತವಾಗಿ ಬದುಕಿರುತ್ತಾನೆ ಅಂತಾಯ್ತು.

ಹೇಗೆಂದರೆ ನಮ್ಮ ನೆನಪುಗಳನ್ನು ಒಂದೆಡೆ ಶೇಖರಿಸಿ ನಮಗೆ ಬೇಕಾದವರ ಮೆದುಳಿಗೆ ವರ್ಗಾಯಿಸಿಬಿಟ್ಟರೆ, ನಾವು ಈ ದೇಹದಲ್ಲಿ ಸತ್ತರೂ ಮತ್ತೊಂದು ದೇಹದಲ್ಲಿ ನಮ್ಮದೇ ನೆನಪುಗಳ ಆಧಾರದಲ್ಲಿ ನಮ್ಮ ಮುಂದಿನ ಜೀವನ ನಡೆಸಬಹುದು.

ಈ ರೀತಿ ಸಂಶೋಧಿಸುವ “ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ನ್ಯೂರೋ ಸೈನ್ಸಸ್” ನ ವಿಜ್ಞಾನಿಯೊಬ್ಬ ಅದನ್ನು ಯಾರಿಗೂ ಗೊತ್ತಾಗದಂತೆ ಪ್ರಯೋಗ ಮಾಡಲು ಪ್ರಾರಂಭಿಸುತ್ತಾನೆ. ಮತ್ತೊಂದೆಡೆ…..

ನಗರದಲ್ಲಿ ಒಂದೇ ಸಮನೆ ಸರಣಿ ಕೊಲೆಗಳಾಗಲು ತೊಡಗುತ್ತವೆ. ಅದನ್ನು ಇನ್ವೆಸ್ಟಿಗೇಟ್ ಮಾಡುವ ಪೊಲೀಸರಿಗೆ ಗೊತ್ತಾಗುವುದೇನೆಂದರೆ ಸಾಯುವ ಎರಡು ಮೂರು ದಿನ ಮುಂಚೆ ಆ ವ್ಯಕ್ತಿಗಳೆಲ್ಲರೂ ಒಂದೇ ರೀತಿಯಾದ “ವಿಚಿತ್ರ ವರ್ತನೆ” ತೋರಿಸಿರುತ್ತಾರೆ ಅಂತ.

ಉದಾಹರಣೆಗೆ……

ಎಲ್ಲರೂ ಹೊಸದಾಗಿ ಒಂದು ನಿರ್ದಿಷ್ಟ ಬ್ರಾಂಡಿನ ಸಿಗರೇಟ್ ಸೇದುವುದನ್ನು ಶುರು ಮಾಡಿರುತ್ತಾರೆ. ಆದರೆ ಅವರು ಯಾಕೆ ಆ ಹೊಸ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ ಮತ್ತು ಆ ಅಭ್ಯಾಸ ಬೆಳೆಸಿಕೊಂಡ ಎರಡು ಮೂರು ದಿನಕ್ಕೇ ಯಾಕೆ ಸಾಯುತ್ತಾರೆ ಅಂತ ಎಷ್ಟು ತಲೆ ಕೆಡಿಸಿಕೊಂಡರೂ ನಾಯಕನಾದ ಪೊಲೀಸನಿಗೆ ಗೊತ್ತಾಗುವುದಿಲ್ಲ.

ನಂತರ ನಾಯಕನಿಗೆ ಪ್ರಾಜೆಕ್ಟ್ “ಮಾಯಾವನ” ಬಗ್ಗೆ ಗೊತ್ತಾಗುತ್ತದೆ.

ಪ್ರಮೋದ್ ಎಂಬಾತ ಈ ಪ್ರಾಜೆಕ್ಟ್ ಅನ್ನು ತನ್ನ ಸ್ವಾರ್ಥಕ್ಕಾಗಿ ಬಳಸುತ್ತಿರುತ್ತಾನೆ. ತನ್ನ ನೆನಪುಗಳನ್ನು ಒಂದು ಹಾರ್ಡ್ ಡ್ರೈವ್ ನಲ್ಲಿ ಸಂಗ್ರಹಿಸಿ ತನಗೆ ಯಾರಿಷ್ಟವೋ ಅವರಿಗೆ ಒಂದು ಬಗೆಯಾದ ಜೆಲ್ ಅನ್ನು ಇಂಜೆಕ್ಷನ್ ಮೂಲಕ ನೀಡಿದಲ್ಲಿ ಆ ಹಾರ್ಡ್ ಡಿಸ್ಕಿನಲ್ಲಿರುವ ನೆನಪುಗಳೆಲ್ಲವೂ ಆ ಹೊಸ ವ್ಯಕ್ತಿಯ ಮೆದುಳಿಗೆ ವರ್ಗಾವಣೆಯಾಗುತ್ತದೆ. ಆ ವ್ಯಕ್ತಿ ಸತ್ತರೆ ಮತ್ತೊಬ್ಬ ವ್ಯಕ್ತಿಗೆ ವರ್ಗಾವಣೆ, ಆತನಿಂದ ಮತ್ತೊಬ್ಬನಿಗೆ ಹೀಗೆ ನೆ‌ನಪುಗಳು ವರ್ಗಾವಣೆಯಾಗುತ್ತಾ “ಪ್ರಮೋದ್” ಎಂಬಾತ ದೇಹವನ್ನು ಮಾತ್ರ ಬದಲಾಯಿಸುತ್ತಾ ನೆನಪುಗಳಿಂದ ಸಾವಿರ ವರ್ಷ ಬದುಕಬಲ್ಲವನಾಗಿರುತ್ತಾನೆ.

ಇಷ್ಟೇ ಆಗಿದ್ದರೆ ಪರವಾಗಿಲ್ಲ.

ಈ ತಂತ್ರದ ಮೂಲಕ ಅವನು ಅಮೆರಿಕನ್ ಪ್ರೆಸಿಡೆಂಟ್ ಸಹ ಆಗಬಹುದಾಗಿರುತ್ತದೆ. ಇದು ಬಹಳ ಭಯಾನಕವಾದ ಪರಿಣಾಮಕ್ಕೆ ಎಡೆ ಮಾಡಿಕೊಡಬಹುದಾಗಿರುತ್ತದೆ. ಹಾಗಾಗಿ “ಪ್ರಮೋದ್” ಮುಂದಿನ ವ್ಯಕ್ತಿಗೆ ತನ್ನ ನೆನಪುಗಳನ್ನು ವರ್ಗಾವಣೆ ಮಾಡುವುದನ್ನು ನಾಯಕ ತಡೆಯಬೇಕಾಗಿರುತ್ತದೆ.

ಅದನ್ನು ತಿಳಿದ “ಪ್ರಮೋದ್” ನಾಯಕಿಗೇ ಆ ಜೆಲ್ ತುಂಬಿದ ಇಂಜೆಕ್ಷನ್ ಕೊಟ್ಟು ಬಿಡುತ್ತಾನೆ. ಇದರ ಅರ್ಥ ಈ ದೇಹದಲ್ಲಿರುವ ಪ್ರಮೋದ್ ಸತ್ತ ಕೂಡಲೇ, ನಾಯಕಿಯ ದೇಹದಲ್ಲಿ ಆತ ಪ್ರಕಟವಾಗುತ್ತಾನೆ. ಆಗ ನಾಯಕ ಅವಳನ್ನು ಸಾಯಿಸುವಂತಿಲ್ಲ… ಬಿಡುವಂತಿಲ್ಲ…

ಎಂತಹಾ ಧರ್ಮಸಂಕಟ!!!ಇದರಿಂದ ಆತ ಪಾರಾದನೇ…????

ನಾಯಕಿಯನ್ನು ಪಾರು ಮಾಡಿದನೇ….???ಪ್ರಾಜೆಕ್ಟ್ ಮಾಯಾವನ ಏನಾಯಿತು…..???

ತಿಳಿಯಲು ಸಿನೆಮಾ ನೋಡಿ

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply