“Njan marykutty” (ಮಲಯಾಳಂ)

ಸಿನೆಮಾ ಶುರುವಿನಲ್ಲಿ ಒಬ್ಬ ಯುವಕ ಮನೆಯವರಿಗೆ ಒಂದು ಪತ್ರ ಬರೆದಿಟ್ಟು, ಮನೆ ಬಿಟ್ಟು ಹೋಗುತ್ತಿರುತ್ತಾನೆ. ಅರೆ!! ಮನೆಬಿಡಲು “ಕಾರಣ”ವೇನು ಅಂತ ನಾವು ಯೋಚಿಸುವಂತೆಯೇ ಇಲ್ಲ. ಏಕೆಂದರೆ ಮುಂದಿನ ದೃಶ್ಯದಲ್ಲಿ ಆ “ಕಾರಣ” ಕಣ್ಣಿಗೆ ರಾಚುತ್ತದೆ.

ಅದು ಅವನಲ್ಲ ಅವಳು…..!!!

ಅವನು ಅವಳಾಗುವುದು ಅಷ್ಟು ಸುಲಭವಲ್ಲ. ಮೊಟ್ಟಮೊದಲಿಗೆ ಮನೆಯವರ ವಿರೋಧ ಎದುರಿಸಬೇಕು. ನಂತರ ಬಂಧುಮಿತ್ರರ ಕುಹಕ… ನಂತರ ಸಮಾಜದ ತಿರಸ್ಕಾರ.. ಇದೆಲ್ಲವನ್ನೂ ಸಹಿಸುವ ಶಕ್ತಿಯಿದ್ದರೆ ಮಾತ್ರ ಅವನು ಅವಳಾಗಬಹುದು.

ಚಿಕ್ಕಂದಿನಲ್ಲಿ ಎಲ್ಲರಿಗೂ ಶಾಲೆಯಲ್ಲಿ ಪುಲ್ಲಿಂಗ ಮತ್ತು ಸ್ತ್ರೀಲಿಂಗದ ಜೊತೆ ನಪುಂಸಕ ಲಿಂಗವನ್ನೂ ಸಹ ಕಲಿಸಲಾಗುತ್ತದೆ. ಆದರೆ ಆ ಲಿಂಗದವರಿಗೂ ಮರ್ಯಾದೆ ಕೊಡಬೇಕು ಅಂತ ಮಾತ್ರ ಕಲಿಸಿರುವುದಿಲ್ಲ. ಇದು ನಿಜವಾಗಿ ಲಿಂಗ ತಾರತಮ್ಯದ ವಿಷಯ ಅಲ್ಲ. ಬದಲಿಗೆ ಇದು ಮನುಷ್ಯತ್ವದ ವಿಷಯ.

ತೃತೀಯ ಲಿಂಗಿಗಳು ಒಂದೋ ವೇಶ್ಯಾವಾಟಿಕೆ ನಡೆಸುತ್ತಾರೆ ಅಥವಾ ಭಿಕ್ಷೆ ಬೇಡುತ್ತಾರೆ ಅಂತ ಜನ ಪೂರ್ವನಿರ್ಧಾರ ಮಾಡಿಕೊಂಡುಬಿಟ್ಟಿದ್ದಾರೆ. ಹಾಗಾಗಿ ತೃತೀಯ ಲಿಂಗಿಗಳನ್ನು ಕಂಡಾಗ ಅವರಿಗೆ ಬೇರೇನೂ ನೆನಪಾಗುವುದೇ ಇಲ್ಲ. ಅವರಿಗೂ ಮನಸ್ಸಿದೆ, ಆಸೆಯಿ್ದೆದೆ, ಕನಸಿದೆ… ಊಹೂಂ… ತೃತೀಯ ಲಿಂಗಿ ಎಂದರೆ ಜನರಿಗೆ ಆಡಿಕೊಳ್ಳುವ ಒಂದು ವಸ್ತು ಅಷ್ಟೇ.

ಪೊಲೀಸರಂತೂ ಇವರುಗಳನ್ನು ಸಾಯುವಷ್ಟು ಪೀಡಿಸುತ್ತಾರೆ. ಅವಕಾಶ ಸಿಕ್ಕಷ್ಟು ಶೋಷಿಸುತ್ತಾರೆ. ಯಾಕೆ ಅಂತೀರ? ಏಕೆಂದರೆ ಈ ತೃತೀಯ ಲಿಂಗಿಗಳ ಪರವಾಗಿ ಮಾತನಾಡುವವರು ಯಾರೂ ಇಲ್ಲ. ಯಾರೂ ಇವರ ಜೊತೆ ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ. ಹಾಗಾಗಿ ಇವರುಗಳಿಗೆ ಏನು ಕಿರುಕುಳ ಕೊಟ್ಟರೂ ಅದನ್ನು ಪ್ರಶ್ನಿಸುವವರು ಯಾರೂ ಇರುವುದಿಲ್ಲ.

ಸಿನೆಮಾದ ನಾಯಕಿ ಮೇರಿಕುಟ್ಟಿಗೆ ಪೊಲೀಸ್ ಆಗುವ ಕನಸು.

ಆದರೆ ಅದಕ್ಕೆ ಒಬ್ಬ ಪೊಲೀಸಪ್ಪನೇ ಅಡ್ಡಗಾಲು ಹಾಕುತ್ತಿರುತ್ತಾನೆ. ಆ ಪೊಲೀಸನಿಗೆ ಇಂಥವರೆಂದರೆ ಏನೋ ಅಸಹನೆ. ಯಾಕೆ ಅಂತ ಕಾರಣ ಅವನಿಗೂ ಗೊತ್ತಿಲ್ಲದಿದ್ದರೂ, ಸ್ವಂತ ವ್ಯಕ್ತಿತ್ವ ಹೊಂದಿಲ್ಲದೇ ಅಸಹಾಯಕವಾಗಿರುವ ಇಂತಹಾ ವ್ಯಕ್ತಿಗಳನ್ನು ಹೆದರಿಸಿ- ಬೆದರಿಸಿ ತಾನು ಮೇಲು ಅಂತ ತೋರಿಸಿಕೊಳ್ಳುವ ಹಂಬಲ ಇರಬಹುದು. ತಾನು ಬೆದರಿಸಿದಾಗ ಬೆಚ್ಚುವ ಈ ಅಮಾಯಕರನ್ನು ಕಂಡು ಅವನ ಈಗೋ ತೃಪ್ತವಾಗುತ್ತಿರಬಹುದು.

ಮುಂದೆ ಮೇರಿ ಕುಟ್ಟಿ ಇದನ್ನೆಲ್ಲ ಮೆಟ್ಟಿ ನಿಂತು ಪೊಲೀಸ್ ಆಗುತ್ತಾಳಾ? ಎನ್ನುವುದಷ್ಟೇ ಸಿನೆಮಾ ಅಲ್ಲ….

ಬದಲಿಗೆ ಹೆಜ್ಜೆಹೆಜ್ಜೆಗೂ ಆಕೆಗೆ ಸಮಾಜ ತೋರುವ ಅನಾದರ, ಅದಕ್ಕೆ ಆಕೆಯ ಪ್ರತಿಕ್ರಿಯೆ, ಆಕೆಯ ಛಲ, ಸಾಧಿಸಬೇಕೆಂಬ ಹಠ, ವಿರೋಧಿಗಳ ಸಂಚು, ಸಾರ್ವಜನಿಕವಾಗಿ ಆಕೆಗೆ ಎದುರಾಗುವ ಸಂಕಷ್ಟಗಳು, ಸರದಿಯಲ್ಲಿ ಕಾಯುವಾಗ ಜನ ಆಕೆಯ ಪಕ್ಕ ನಿಲ್ಲಲು ಹಿಂಜರಿಯುವುದು, ಅಂಥವರಿಗಾಗಿ ವಿಶೇಷ ಶೌಚಾಲಯ ಇಲ್ಲದಿರುವುದು….

ಇವೆಲ್ಲವನ್ನೂ ಕಣ್ಣಾರೆ ನೋಡಿಯೇ ಕಣ್ತುಂಬಿಕೊಳ್ಳಬೇಕು. ನಿರ್ದೇಶಕರು ಅತ್ಯಂತ ಸೂಕ್ಷ್ಮಾತಿಸೂಕ್ಷ್ಮವಾಗಿ ತೃತೀಯ ಲಿಂಗಿಗಳ ಮನಸ್ಥಿತಿಯನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ನಾಯಕ / ನಾಯಕಿ ಅದನ್ನು ಅಷ್ಟೇ ಸೂಕ್ಷ್ಮವಾಗಿ ಪ್ರೆಸೆಂಟ್ ಮಾಡಿದ್ದಾರೆ.

ಹಿಂದಿ ವರ್ಷನ್ ಯೂ ಟ್ಯೂಬಿನಲ್ಲಿ ಲಭ್ಯವಿದೆ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

One thought on ““Njan marykutty” (ಮಲಯಾಳಂ)

Leave a Reply