#Rudra– on Hotstar- ವಯಸ್ಕ ವೀಕ್ಷಕರಿಗೆ ತಕ್ಕ ಪೋಲೀಸ್ ಪತ್ತೇದಾರಿ ಸರಣಿ~~~~~~~~~~~~~
Rudra- The Edge of darkness (A) ಎಂಬ ವೆಬ್ ಸರಣಿ ಹಾಟ್ಸ್ಟಾರ್ ಒಟಿಟಿಯಲ್ಲಿ ಬಿಡುಗಡೆಯಾಗಿದೆ.
ಬಿಬಿಸಿಯಲ್ಲಿ ಜನಪ್ರಿಯವಾಗಿದ್ದ ಲೂಥರ್ ಎಂಬ ಪೋಲೀಸ್ ವೆಬ್ ಸರಣಿಯನ್ನು ಇಲ್ಲಿ ರೀಮೇಕ್ ಮಾಡಿದ್ದಾರೆ.ಇ
ದು ವಯಸ್ಕ ವೀಕ್ಷಕರಿಗಾಗಿ (ಎ ಸರ್ಟಿಫಿಕೇಟ್) ತಯಾರಿಸಿರುವ ಹಲವು ಗಂಭೀರ ಹಾಗೂ ಗುರುತರ ಅಪರಾಧಗಳಾದ ಸರಣಿ ಕೊಲೆ, ಲೈಂಗಿಕ ಅತ್ಯಾಚಾರ, ಮಾನಸಿಕ ಅಸ್ವಸ್ಥ ಪೀಡಕರು, ಅನೈತಿಕ ಸಂಬಂಧಗಳ ಪರಿಣಾಮವಾದ ಪ್ಯಾಶನ್ ಕಿಲಿಂಗ್, ಮುಂತಾದ ಕೇಸುಗಳನ್ನೇ ತನಿಖೆ ಮಾಡಿ ಅವಕ್ಕೆ ಅಂತ್ಯ ಕಾಣಿಸುವ ಎಸ್ ಸಿ ಯು ಎಂಬ ವಿಶೇಷ ಸೆಲ್ಲಿನವರು ಪರಸ್ಪರ ಸಂಬಂಧಗಳು, ಅವರ ವೃತ್ತಿ ಜೀವನದ ಚಿತ್ರ ವಿಚಿತ್ರ ಸವಾಲೆಸೆಯುವ ಕೇಸುಗಳ ಬಗ್ಗೆ ನಿರ್ದೇಶಕರು ಬಹಳ ಆಸಕ್ತಿಕರವಾಗಿ ಹೆಣೆದಿದ್ದಾರೆ.ನಾಯಕ ಪಾತ್ರದಲ್ಲಿ ಡಿಸಿಪಿ ರುದ್ರ- ರುದ್ರವೀರಸಿಂಗ್ ಪಾತ್ರದಲ್ಲಿ ಗಂಭೀರ ಮುಖದ ಆ್ಯಕ್ಷನ್ ಹೀರೋ ಅಜಯ್ ದೇವಗನ್ ಅತಿ ಸಮರ್ಥ ಅಭಿನಯವಿತ್ತು ಜೀವ ತುಂಬಿದ್ದಾರೆ.
ಈ ಸರಣಿಯಲ್ಲಿ ಎಲ್ಲಾ ಈಗಿನ ಕಾಲದ ಒಡೆದ ಕುಟುಂಬಗಳ, ವೈವಾಹಿಕ ಬಿರುಕುಗಳ ಚಿತ್ರಣವೂ ತೋರಿಸಿದ್ದಾರೆ. ಉದಾ. ನಾಯಕನ ಮದುವೆಯೇ ಪತ್ನಿ ಎಶಾ ದೇವಲ್ (ಹೇಮಾಮಾಲಿನಿ ಪುತ್ರಿ ಇದರಲ್ಲಿ ಮರು ಪ್ರವೇಶ) ಪರಪುರುಷನ ಜೊತೆಯ ಅನೈತಿಕ ಸಂಬಂಧದಿಂದ ಇಬ್ಬಾಗವಾಗಿ ಹೋಗಿದೆ. ಅವನೇ ಅದರ ರಿಪೇರಿಗೂ ಯತ್ನಿಸುತ್ತಿದ್ದಾನೆ.
ಮತ್ತೊಂದೆಡೆ ಅವನನ್ನು ಕಾಡುವ ಅಶಿಸ್ತು, ಮತ್ತು ಡಿಪಾರ್ಟ್ಮೆಂಟಿನ ನಿಯಮ ವಿರುದ್ಧ ಹೊಡೆದಾಡುವ ಗುಣದಿಂದ ಉದ್ಭವವಾದ ಸಮಸ್ಯೆಗಳು, ಇವೆಲ್ಲಾ ನಾಯಕನ ಅವಗುಣಗಳನ್ನು ಬ್ರಿಟಿಷ್ ಅಥವಾ ಅಮೆರಿಕನ್ ಚಿತ್ರದಲ್ಲಿ ಮಾತ್ರ ನಾವು ಕಾಣಲು ಸಾಧ್ಯ.ನಮ್ಮಲ್ಲಿ ಚಿತ್ರನಾಯಕನನ್ನು ಅತಿ ಸಭ್ಯಸ್ಥ, ಎಲ್ಲಾ ಕಡೆಯೂ ಬೆಚ್ಚಗಿರುವಂತೆಯೆ ಚಿತ್ರಿಸುವುದು ಸಂಪ್ರದಾಯ. ಇದರಲ್ಲಿ ಆ ಹೊಸ ವ್ಯತ್ಯಾಸ ಕಾಣಬಹುದು.ಈಗಿರುವ ಸೀಸನ್ 1 ನಲ್ಲಿ ಆರು ಎಪಿಸೋಡುಗಳಿವೆ.ಒಂದೊಂದರಲ್ಲಿ ಒಂದು ತರಹದ ವಿಚಿತ್ರ ಗಂಭೀರ ಅಪರಾಧಿಗಳು ಮಾಡುವ ತಬ್ಬಿಬ್ಬುಗೊಳಿಸುವ ಅಪರಾಧಗಳ ಕೇಸುಗಳಿವೆ. ಚಾಣಾಕ್ಷ ಜೀನಿಯಸ್- ಸುಳಿವೇ ಬಿಡದ ತಂದೆತಾಯಿಯರ ಕೊಲೆಗಾರ್ತಿ ಪಾತ್ರಧಾರಿ ನಟಿ ರಾಶಿ ಖನ್ನಾ, ತಂದೆಯ ಹಿಂಸಾತ್ಮಕ ಬೆದರಿಕೆ ಬಗ್ಗಿ ಪೋಲೀಸರ ಸರಣಿ ಕೊಲೆ ಮಾಡುವ ಒಬ್ಬ ತಲೆಕೆಟ್ಟ ಸೈನಿಕ, , ಸೇಡಿಗಾಗಿ ನಪುಂಸಕ ಟ್ಯಾಕ್ಶಿ ಡ್ರೈವರ್ ನೆಡೆಸುವ ಅಪರಿಚಿತ ಯುವತಿಯರ ಹತ್ಯೆ, ಡೈಮಂಡ್ ಸ್ಮಗಲಿಂಗ್ ಮಾಡುವ ಆರ್ಟ್ ಡೀಲರ್ ಮತ್ತು ಕ್ರೂರ ಕಿಡ್ನ್ಯಾಪರ್ ಇವೆಲ್ಲದರಲ್ಲೂ ಕ್ರೌರ್ಯ, ಚಿತ್ರಹಿಂಸೆ, ದೌರ್ಜನ್ಯ ಇವೆಲ್ಲಾ ಹಾಸುಹೊಕ್ಕಾಗಿದೆ.
ಅಲ್ಲಲ್ಲಿ ಎದೆ ಜಿಲ್ಲೆನಿವಂತಾ ಕೆಲವು ದೃಶ್ಯಗಳಿದ್ದರೂ ಅತಿರೇಕವಾಗಿ ಹೇಸಿಗೆ ಬರುವುದಿಲ್ಲ ಎಂದು ನನ್ನ ಅಭಿಪ್ರಾಯ. ಆ ಜಗತ್ತಿನ ರೀತಿ ರಿವಾಜು, ಕಟು ಸತ್ಯವೇ ಹಾಗೆ.ಇಂತಹಾ ಅಪರಾಧಲೋಕದವರನ್ನು ಬಲಿ ಹಾಕಲು ಹಿಂದೇಟು ಹೊಡೆಯದ ಕಲ್ಲಿನ ಮನಸ್ಸಿನ ನಾಯಕ ರುದ್ರ, ಅವನ ಮಹಿಳಾ ಬಾಸ್, ಪೋಷಕ ಪಾತ್ರದಲ್ಲಿ ಸಹೋದ್ಯೋಗಿ ಅತುಲ್ ಕುಲಕರ್ಣಿ ಹೀಗೆ ಎಲ್ಲರ ಕಥೆಗಳೂ ಇದರಲ್ಲಿ ಸೇರುತ್ತಾ ದೊಡ್ಡ ಸಂಕೀರ್ಣ ಕಥಾಹಂದರವಾಗಿ ಪ್ರತಿ ಎಪಿಸೋಡ್ ಯಾವುದೋ ಕೋನದಲ್ಲಿ ಅಪೂರ್ಣವಾಗಿ ನಿಂತು ಮುಂದಿನ ಸಂಚಿಕೆಯನ್ನು ಕಾತರದಿಂದ ನೋಡುವಂತೆ ಬಲವಂತಪಡಿಸುತ್ತದೆ.
ಒರಿಜಿನಲ್ ಬಿಬಿಸಿಯ ‘ಲೂಥರ್’ ಅಮೆಜ಼ಾನ್ ಪ್ರೈಮ್ ನಲ್ಲಿದೆಯಂತೆ ಅದನ್ನೂ ನೋಡುವ ಮನಸಾಗುತ್ತಿದೆ ಅದರ ನಾಯಕ ಇದ್ರಿಸ್ ಎಲ್ಬಾ ಸಹಾ ನನ್ನ ಮೆಚ್ಚಿನ ನಾಯಕ.ಆದರೆ ಇದು ‘ಡಿಸ್ನಿ-ಹಾಟ್‌ಸ್ಟಾರ್’ ನಲ್ಲಿದೆ.
ಸಸ್ಪೆನ್ಸ್, ತನಿಖೆ, ಓಟ ಎಲ್ಲವೂ ಬಹಳ ಸಮರ್ಥವಾಗಿ ಈ ವರ್ಗದ ಕಥಾಸರಣಿಗೆ ತಕ್ಕಂತೆ ಮೂಡಿಬಂದಿದೆ. ಅತಿ ಮಡಿವಂತರಲ್ಲದಿರುವವರು ಇದನ್ನು ಖಂಡಿತಾ ನೋಡಿ ಇಷ್ಟಪಡಲು ಸಾಧ್ಯ, ಪತ್ತೇದಾರಿ ಲೇಖಕನಾಗಿ ನನಗಂತೂ ಭರಪೂರ ರಂಜನೆ ನೀಡಿತು.
ನನ್ನ ರೇಟಿಂಗ್ 4/5