Soorarai potru (kannada)

ಈ ಸಿನೆಮಾವನ್ನು ಕೇವಲ ಕಾಲ್ಪನಿಕ ಅಂತ ಯಾರಾದರೂ ಹೇಳಿದ್ದರೆ ನಾನು ಈ ಸಿನೆಮಾ ಅನ್ನು ಖಂಡಿತಾ ಒಪ್ಪುತ್ತಿರಲಿಲ್ಲ. ವಿಮಾನದ ಟಿಕೆಟ್ಟಿಗೆ ದುಡ್ಡಿರದ ವ್ಯಕ್ತಿ ಏರ್ಲೈನ್ಸ್ ನಡೆಸಿ ಯಶಸ್ವಿಯಾದ ಕಥೆ….!!! ಇದು ಸುಮ್ಮನೆ ನಾಯಕನಿಗಾಗಿ ಹೆಣೆದ ಕಥೆ ಆಗಿದ್ದರೆ ಬಹುಶಃ ಯಾರೂ ಇಷ್ಟಪಡುತ್ತಿರಲೂ ಇಲ್ಲ.

ಆದರೆ ಇದು ನಿಜವಾಗಿ ನಡೆದ ಕಥೆ.‌…. !!!!!

ಅದಕ್ಕಾಗಿಯೇ ‌ನಮಗೆ ಇಷ್ಟೊಂದು ಆಶ್ಚರ್ಯ. ಈ ವಿಷಯದ ಬಗ್ಗೆ ಕಥೆ ಬರೆಯಲೂ ಸಹ ಹಿಂದೆ-ಮುಂದೆ ಯೋಚಿಸುವಾಗ, ಇದನ್ನು ಒಬ್ಬ ವ್ಯಕ್ತಿ ಜೀವಿಸಿಬಿಟ್ಟಿದ್ದಾರೆ… !!!!! ಅಕ್ಷರಶಃ ಪವಾಡದಂತೆಯೇ ತೋರುವ ಈ ಯಶಸ್ಸು ನಮ್ಮೆಲ್ಲರಿಗೂ ಸ್ಫೂರ್ತಿಯಾಗುತ್ತದೆ. ನಮ್ಮಂತಹಾ ಸಾಮಾನ್ಯರಿಗೂ ಅಸಾಮಾನ್ಯರಾಗುವ ಬಯಕೆ ಮೂಡಿಸುತ್ತದೆ.

ಸಿನೆಮಾದಲ್ಲಿ ನಾಯಕನೊಬ್ಬ ನೂರು ಜನರನ್ನು ಒಂದೇ ಬಾರಿ ಹೊಡೆದು ಪುಡಿಗಟ್ಟಿದ ಅಂದ್ರೆ ನಂಬ್ತೀವಿ..‌ ಒಂದೇ ತಿಂಗಳಲ್ಲಿ ಕೋಟಿ ರೂಪಾಯಿ ದುಡಿದ ಅಂದ್ರೆ ನಂಬ್ತೀವಿ.. ಸಿನೆಮಾದಲ್ಲಿ ಬರುವ ದೆವ್ವ-ಭೂತಗಳನ್ನು ನಂಬ್ತೀವಿ.. ಆದರೆ ಒಬ್ಬ ಸಾಮಾನ್ಯ ಯುವಕ ಸಾಧನೆ ಮಾಡಿದ ಅಂದ್ರೆ ಯಾಕೆ ನಂಬೋಲ್ಲ? ಅದೂ ವಿಶೇಷವಾಗಿ ಈ ಕಥೆ.

ಯಾಕೆಂದರೆ ನಾನೊಬ್ಬಳು ಸಾಮಾನ್ಯಳು. ನನ್ನಂತಹ ಕೋಟ್ಯಾಂತರ ಜನರಿದ್ದಾರೆ. ನಾವೆಲ್ಲರೂ ವಿಮಾನವನ್ನು ಹತ್ತಿರದಿಂದ ನೋಡಿಯೂ ಇಲ್ಲ. ಅದರೊಳಗೆ ಕುಳಿತೂ ಇಲ್ಲ. ನಾವು ನೋಡದ, ನಮ್ಮ ಜೀವನದ ಅಂಗವಾಗಿರದ ವಿಮಾನ ಹಾರಾಟದ ಕನಸನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅದೆಲ್ಲಾ ದುಡ್ಡಿರುವ ದೊಡ್ಡವರಿಗೆ ಮಾತ್ರ ಅಂತ ಮೈಂಡ್ ಸೆಟ್ ಮಾಡ್ಕೊಂಡಿದ್ದೀವಿ. ಹಾಗಾಗಿ ಮಾರನ್ ತನ್ನ ಕನಸಿನ ಬಗ್ಗೆ ಹೇಳಿದಾಗ ಅವನು ತಲೆಕೆಟ್ಟವನು ಅನ್ಸುತ್ತೆ ನಮಗೆ.

ಸುಂದರಿಗೆ ಬಿಡಿ… ಬೇಕರಿಯ ಕನಸು. ಅದನ್ನು ನಾವೂ ಸಹ ಕಾಣಬಹುದು. ಆದರೆ ವಿಮಾನಯಾನ ಸಂಸ್ಥೆಯ ಕನಸು ಬಹಳ ದುಬಾರಿ ಎನಿಸುತ್ತದೆ. ಅದಕ್ಕಾಗಿ ಊರಿನವರೆಲ್ಲಾ ಹಣ ಕೂಡಿಸಿ ಕೊಟ್ಟಾಗಲಂತೂ ಇಷ್ಟೊಂದು ರಿಸ್ಕ್ ಬೇಕಿತ್ತಾ ಅಂತಲೇ ಅನ್ನಿಸುತ್ತದೆ. ಅದರ ಮೊದಲ ಹಾರಾಟಕ್ಕಾಗಿ ಮಾರನ್ ನಡೆಸುವ ತಿರುಗಾಟದಲ್ಲಿ ಆತ ಸೋತಾಗ ಮನಸ್ಸು ಮುದುಡುತ್ತದೆ. ಆದರೆ ಈ ವಿಷಯದಲ್ಲಿ ಭರವಸೆ ಕಳೆದುಕೊಳ್ಳದೇ ಇರುವುದು ನಾಯಕಿ ಒಬ್ಬಳೇ!!

ನಾಯಕ ಮಾರನ್ ಮಹತ್ತರಲ್ಲಿ ಮಹತ್ವಾಕಾಂಕ್ಷಿ…. ಸ್ವಾಭಿಮಾನ ಆತನ ಗುಣ….. ಸ್ವಭಾವ ನೇರ ನಿಷ್ಠುರ.‌… ಆದರೆ ತಾನು ಬಿಳೀಹಾಳೆಯಷ್ಟು ಸ್ವಚ್ಛ ಇರುವುದರಿಂದ ಎಲ್ಲರೂ ತನ್ನ ಹಾಗೆಯೇ ಅಂತ ತಿಳಿಯುವುದು ಆತನ ದೌರ್ಬಲ್ಯ.

ಆತನ ಕನಸು ಬಡವರಿಗೆ ವಿಮಾನಯಾನ ಮಾಡಿಸುವುದು. ನಿಜಕ್ಕೂ ಬಹಳ ಉತ್ತಮ ಕನಸು ಇದು. ಇದಕ್ಕಾಗಿ ಜನ ಅವನಿಗೆ ಸಪೋರ್ಟ್ ಮಾಡಬೇಕಿತ್ತು. ಆದರೆ ಇಲ್ಲ…. ಸಮಾಜದಲ್ಲಿ ಪರೇಶ್ ಗೋಸ್ವಾಮಿ, ಪ್ರಕಾಶ್ ಬಾಬುವಿನಂತಹವರೂ ಇರುತ್ತಾರೆ. ಅವರಗಳ ಜೀವನದ ಉದ್ದೇಶ ಏನೋ ಗೊತ್ತಿಲ್ಲ. ಆದರೆ ಅವರುಗಳಿಗೆ ಜನಸಾಮಾನ್ಯರು ಸದಾ ಸಾಮಾನ್ಯವಾಗಿಯೇ ಇದ್ದು ಬಿಡಬೇಕು. ಜೀವನದಲ್ಲಿ ಮೇಲೆ ಬರಬಾರದು. ಬಡವನೊಬ್ಬ ವಿಮಾನಯಾನ ಮಾಡುತ್ತಾ ತನ್ನ ಪಕ್ಕದ ಸೀಟಿನಲ್ಲಿ ಕೂರುತ್ತಾನೆ ಅಂತ ನೆನೆದಾಗ ಪರೇಶ್ ಗೋಸ್ವಾಮಿಗೆ ಉರಿಕಿತ್ತುಕೊಳ್ಳುತ್ತದೆ

ಅದಕ್ಕಾಗಿ ಮಾರನ್ನನಿಗೆ ಒಬ್ಬ ಬಡಮಧ್ಯಮ ವರ್ಗದ ವ್ಯಕ್ತಿಯೊಬ್ಬ ತಡೆಯಲಾರದಷ್ಟು ಹೊಡೆತಗಳನ್ನು ಕೊಡುತ್ತಾರೆ. ಆದರೆ ಮಾರನ್ ಅದೆಲ್ಲವನ್ನೂ ತನ್ನ ಸಾಧನೆಯ ಮೆಟ್ಟಿಲಾಗಿಸಿಕೊಂಡು ಮೇಲೇರುತ್ತಾ ಬರುತ್ತಾನೆ.‌ ಯಶಸ್ಸಿನ ಸೀಕ್ರೆಟ್ ಇದು… ನಾವು ಹೊಸದೇನೋ ಮಾಡಲು ಹೋಗಿ ಸೋತಾಗ ಹಣ ಮತ್ತು ಸಮಯವನ್ನು ಕಳೆದುಕೊಂಡಿರುತ್ತೇವೆ. ಆದರೆ ಅಪಾರವಾದ ಅನುಭವವನ್ನು ಕಳಿಸಿಕೊಂಡಿರುತ್ತೇವೆ. ಪದೇ ಪದೇ ಸೋಲುವಾಗ ಸೋತದ್ದರಿಂದಲೇ ಪಾಠ ಕಲಿತು ಮತ್ತೆ ಗೆಲ್ಲಲು ಹೊರಡುವ ಮಾರನ್ ಈಗ ಅದೆಷ್ಟು ಜನರಿ್ಗೆಗೆ ಸ್ಫೂರ್ತಿ ಆಗಿರಬಹುದು?

ನಟ ಸೂರ್ಯನ ಆ ಕಣ್ಣುಗಳು ಕ್ಯಾಪ್ಟನ್ ಗೋಪಿನಾಥರ ಬವಣೆಯನ್ನು ಮೌನವಾಗಿಯೇ ಸಾರುತ್ತವೆ. ಈ ಸಿನೆಮಾ ಅನ್ನು ಡ್ರಾಮಾಟಿಕ್ ಎಂದಿರಬಹುದು. ಆದರೆ ನಿಜ ಜೀವನದಲ್ಲಿ ಈ ಕನಸು ನಿಜ ಮಾಡಲು ಹೊರಟವರಿಗೆ ನಾಟಕೀಯಕ್ಕಿಂತಲೂ ಘೋರ ಅನುಭವ ಆಗಿರುತ್ತದೆ. ಇದನ್ನು ನೋಡುತ್ತಿರುವಾಗ ‌ನಮ್ಮ ಅಪಮಾನಗಳು ನೆನಪಾಗುವುದಿಲ್ಲವೇ? ಈಗದನ್ನೇ ಮೆಟ್ಟಲಾಗಿಸಿ ನಾವೂ ಸಹ ಮೇಲೇರಬೇಕೆಂದು ಅನ್ನಿಸುವುದಿಲ್ಲವೇ? ಯೆಸ್‌… ನಿರ್ದೇಶಕರು ಗೆದ್ದಿದ್ದಾರೆ.

ಪ್ರತೀ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಅನ್ನುವುದನ್ನು “ಸುಂದರಿ” ನಿಜ ಮಾಡಿದ್ದಾಳೆ. ಆಕೆಯ ಬೆಂಬಲ, ಸಾಂತ್ವನ ಇಲ್ಲದಿದ್ದರೆ ನಾಯಕ ಏನಾಗುತ್ತಿದ್ದನೋ ಗೊತ್ತಿಲ್ಲ. ಆಕೆಯ ನಂಬಿಕೆಗೆ ಸಾಟಿಯೇ ಇಲ್ಲ‌. ನಾವೆಲ್ಲರೂ ಚಿಕ್ಕ-ಪುಟ್ಟದ್ದಕ್ಕೆ ಜಗಳ ಮಾಡುವಾಗ ಹೆರಿಗೆ ನೋವಿನಲ್ಲಿಯೂ ಆಕೆ ಗಂಡನಿಗೆ ಕರ್ತವ್ಯ ಪ್ರಜ್ಞೆ ನೆನಪಿಸುತ್ತಾಳೆ. ಸ್ವತಂತ್ರವಾಗಿ ಬದುಕು ಕಟ್ಟಿಕೊಂಡ ಹೆಣ್ಣುಮಗಳು ಆಕೆ.‌ ಆತನನ್ನು ಅವಳೊಬ್ಬಳೇ ಸರಿಯಾಗಿ ಅರ್ಥ ಮಾಡಿಕೊಂಡಿದ್ದು.‌

ಇಡೀ ಚಿತ್ರವನ್ನು ಹಿಡಿದು ನಿಲ್ಲಿಸಿರುವುದು ಸೂರ್ಯನ ನಟನೆ, ಸುಂದರಿ ಮತ್ತು ಸಂಭಾಷಣೆಗಳು. ಸಿನೆಮಾ ಮುಗಿಯಲು ಐದು ನಿಮಿಷ ಇರುವಾಗಲೂ ಸೋಲನ್ನೇ ತೋರಿಸಿ ಕಣ್ಣೀರು ತರಿಸುವ ನಿರ್ದೇಶಕರು ಕೊನೆಯಲ್ಲಿ “ಜಾದೂ” ಮಾಡಿದ್ದಾರೆ. ಮಾರನ್ ಅನುಭವಿಸಿರುವ ಕಷ್ಟಗಳು, ಸತತ ಸೋಲುಗಳು, ಅವಮಾನಗಳನ್ನು ನೋಡಿದರೆ ಅವನ ಮುಂದೆ ನಮ್ಮದೇನೂ ಇಲ್ಲ ಎನಿಸುತ್ತದೆ.

ನಾವು ನಡೆಯುವ ಹಾದಿ ನೈತಿಕವಾಗಿದ್ದು, ಛಲ-ಸ್ವಾಭಿಮಾನ ಬಿಡದೇ, ಯಾರ ಮುಂದೆಯೂ ತಲೆತಗ್ಗಿಸದೇ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಸೂರ್ಯನ ಆ ನೇರ ನಟನೆ ನನಗೆ ಬಹಳ ಇಷ್ಟವಾಯ್ತು.

ಸಿನೆಮಾ ಹೇಗಿರಬೇಕೋ ಹಾಗಿದೆ. ಇಲ್ಲದಿದ್ರೆ ಸಿನೆಮಾ ಹೋಗಿ ಡಾಕ್ಯುಮೆಂಟರಿ ಆಗಿಬಿಡುತ್ತದೆಯಲ್ಲ? ಹಾಡುಗಳು, ಕುಣಿತ, ನಾಯಕಿಯ ಅದ್ಭುತ ನಟನೆ ಎಲ್ಲವೂ ಮೋಡಿ ಮಾಡಿವೆ…

ಕಡೆಗೂ ಕಾಡುವುದು…. ಸೂರ್ಯನ ಕಣ್ಣುಗಳೇ 

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply