1991ರ ಅಮೆರಿಕಾದ ಸೈನ್ಸ್ ಫಿಕ್ಷನ್ ಸಿನೆಮಾ ಇದು. ಈಗ ನಾವು 2021 ಕ್ಕೆ ಬಂದಿದ್ದೇವೆ. ಈಗಾಗಲೇ ನಾವು ಬಹಳಷ್ಟು ಸೈನ್ಸ್ ಫಿಕ್ಷನ್ ಕಥೆ ಓದಿದ್ದೇವೆ, ಕೇಳಿದ್ದೇವೆ. ಆದರೆ ಆಗ ಈ “ಸಬ್ಜೆಕ್ಟ್” ಮತ್ತು ಅದನ್ನು ಪ್ರಸ್ತುತ ಪಡಿಸಿರುವ ರೀತಿ ಸಿನೆಮಾರಂಗಕ್ಕೆ ಹೊಸತು. ಈ ಸಿನೆಮಾ ಒಂದು ದೊಡ್ಡ ಸಂಚಲನವನ್ನೇ ಉಂಟು ಮಾಡಿತ್ತು. ಈ ಸಿನೆಮಾ ನೋಡುತ್ತಾ ನೋಡುತ್ತಾ ಜನರು ಆಶ್ಚರ್ಯದಿಂದ ಬಾಯ್ತೆರೆಯುತ್ತಿದ್ದರಷ್ಟೇ. ಮತ್ತೆ ಮುಚ್ಚಲು ಮರೆಯುತ್ತಿದ್ದರು.
ಅಂತಹಾ ಮೋಡಿ ಮಾಡಿದ ಸಿನೆಮಾ ಇದು.
ಈ ಸಿನೆಮಾದಲ್ಲಿ ಎರಡು ರೋಬಾಟುಗಳಿವೆ. ಈ ಎರಡೂ ರೋಬಾಟುಗಳು ಭವಿಷ್ಯದಿಂದ (ಕ್ರಿ.ಶ. 2029) ಬಂದಿರುತ್ತವೆ. ಚಿತ್ರದಲ್ಲಿ ಹತ್ತು ವರ್ಷದ ಬಾಲಕ ಜಾನ್ ಎಂಬ ಪಾತ್ರಧಾರಿ ಇದ್ದಾನೆ. ಅವನನ್ನು ಕೊಲ್ಲಲು ಒಂದು ರೋಬಾಟ್ ಬಂದಿದ್ದರೆ, ಮತ್ತೊಂದು ಆತನನ್ನು ಉಳಿಸಲು ಬಂದಿರುತ್ತದೆ.
ಭವಿಷ್ಯದಲ್ಲಿ ರೋಬಾಟುಗಳ ಹಾವಳಿ ಅತಿಯಾಗಿ ರೋಬಾಟುಗಳಿಗೂ-ಮನುಷ್ಯರಿಗೂ ಸಂಘರ್ಷ ಏರ್ಪಟ್ಟಾಗ ಈಗ ಬಾಲಕನಾಗಿರುವ ಜಾನ್ ಭವಿಷ್ಯದಲ್ಲಿ ಮನುಷ್ಯರ ಮುಖ್ಯಸ್ಥನಾಗುತ್ತಾನೆ. ಅದನ್ನು ತಪ್ಪಿಸಲು “ಜಾನ್” ಅನ್ನು ಚಿಕ್ಕವಯಸ್ಸಿನಲ್ಲೇ ಸಾಯಿಸಲು T-1000 ಎಂಬ ನೂತನ ತಂತ್ರಜ್ಞಾನ ಹೊಂದಿರುವ ರೋಬಾಟ್ ಅನ್ನು ಭೂತಕಾಲಕ್ಕೆ ಕಳಿಸಲಾಗುತ್ತದೆ. ಅದು ಗೊತ್ತಾಗಿ ಭವಿಷ್ಯದ ಜಾನ್ ತನ್ನನ್ನು ತಾನೇ ಕಾಪಾಡಿಕೊಳ್ಳಲು ಮತ್ತೊಂದು ರೋಬಾಟ್ Model-101 Terminator ಅನ್ನು ತನ್ನ ಭೂತಕಾಲಕ್ಕೆ ಕಳಿಸುತ್ತಾನೆ.
ಎರಡೂ ರೋಬಾಟುಗಳು ಏಕಕಾಲಕ್ಕೆ ಭೂತಕಾಲದಲ್ಲಿ ಅವತರಿಸುತ್ತವೆ.
ಅವು ಬಂದಾಗಿನಿಂದ ಕ್ಷಣಕ್ಷಣಕ್ಕೂ ರೋಚಕ ತಿರುವುಗಳಿಂದ ಸಿನೆಮಾ ಆಕರ್ಷಕವಾಗಿ ಕಾಣತೊಡಗುತ್ತದೆ. ಒಂದು ರೋಬಾಟ್ ಬಾಲಕ ಜಾನ್ ಅನ್ನು ಕೊಲ್ಲಲು ಹೊರಟರೆ, ಮತ್ತೊಂದು ರೋಬಾಟ್ ಜಾನ್ ಅನ್ನು ರಕ್ಷಿಸುತ್ತಾ ಸಾಗುತ್ತದೆ. ಆಗ ನಡೆಯುವ ಚೇಸಿಂಗ್ ಸೀನ್ ನೋಡುವುದೇ ಸೊಗಸು.
ಈ ಸಂದರ್ಭದಲ್ಲಿ T-1000 ರೋಬಾಟ್ ಲೋಹದ ವಸ್ತುವಿನಿಂದ ತಯಾರಾಗಿದ್ದು, ತಾನು ಸಂಪರ್ಕಕ್ಕೆ ಬಂದ ಯಾವುದೇ ವ್ಯಕ್ತಿಗಳ ಪ್ರತಿರೂಪಿಯಾಗಿ ಬದಲಾಗುವ ಗುಣ ಹೊಂದಿರುತ್ತದೆ. ಅದು ಆ ರೀತಿ ತನಗಿಷ್ಟ ಬಂದಂತೆ ಬದಲಾಗುತ್ತಿದ್ದರೆ ನಾವು ಕಣ್ ಕಣ್ ಬಿಟ್ಟು ನೋಡುವುದೊಂದೇ ದಾರಿ. ಯಾವ ಭಾವನೆಯನ್ನೂ ತೋರದ ಸದಾ ಒಂದೇ ಮುಖಭಾವದ T-1000 ರೋಬಾಟಿಗೆ ನಗಲೂ ಬರೋಲ್ಲವೇನೋ ಎನಿಸುತ್ತದೆ.
ಇತ್ತ ಜಾನ್ ಅನ್ನು ಕಾಪಾಡುವ Terminator ರೋಬಾಟ್ ಜಾನ್ ನೊಂದಿಗೆ ಇರುತ್ತಾ ಮನುಷ್ಯರ ಗುಣ-ಸ್ವಭಾವಗಳನ್ನೆಲ್ಲ ಅರಗಿಸಿಕೊಂಡು ಅಳವಡಿಸಿಕೊಳ್ಳುತ್ತಾ ಬರುತ್ತದೆ. ಜಾನ್ ನೊಂದಿಗೆ ಆತನ ತಾಯಿಯನ್ನು ರಕ್ಷಿಸುತ್ತದೆ. ಈ ರೋಬಾಟಿಗೆ ಮನುಷ್ಯರು ಯಾಕೆ ಅಳುತ್ತಾರೆ ಅಂತ ಗೊತ್ತಾಗೋಲ್ಲ. ‘ನಿನ್ನ ಕಣ್ಣಿ್ಗೆಗೆ ಏನಾಯ್ತು?’ ಅಂತ ಕೇಳುತ್ತದೆ. ಜಾನ್ ನಿಗೆ ಮನುಷ್ಯರು ಯಾಕೆ ಅಳುತ್ತಾರೆ ಅಂತ ವಿವರಿಸಲು ಗೊತ್ತಾಗುವುದಿಲ್ಲ. ಆದರೆ ಕೊನೇ ದೃಶ್ಯದಲ್ಲಿ ‘ನೀನ್ಯಾಕೆ ಅಳುತ್ತಿದ್ದೀಯ ಅಂತ ಗೊತ್ತಾಯ್ತು’ ಎನ್ನುತ್ತದೆ ರೋಬಾಟ್.
ಬಹುಶಃ ಮನುಷ್ಯ ಸಹವಾಸದಿಂದ ರೋಬಾಟುಗಳೂ ಭಾವನೆಗಳನ್ನು ಹೊಂದಬಲ್ಲವೋ ಏನೋ?
T-1000 ಮತ್ತು Terminator ನಡುವಿನ ಫೈಟಿಂಗ್ ರೋಚಕವಾಗಿದೆ. ಎಷ್ಟು ಗುಂಡು ಹೊಡೆದರೂ, ಕತ್ತಿಯಿಂದ ಪೀಸ್ ಮಾಡಿದರೂ, ಇಡೀ ದೇಹವೇ ನಾಶವಾದರೂ T-1000 ರೋಬಾಟ್ ಪದೇ ಪದೇ ಎದ್ದು ಬರುತ್ತಲೇ ಇರುತ್ತದೆ. ಇದಕ್ಕೆ ಸಾವೇ ಇಲ್ಲವೇ ಅಂತ ನಮಗೆ ಗಾಬರಿಯಾಗುತ್ತದೆ. ಈ ಮಧ್ಯೆ
T-1000 ರೋಬಾಟ್ Terminator ಅನ್ನು ಸೋಲಿಸಿ, ಅದನ್ನು ನಾಶಪಡಿಸಿ ಜಾನ್ ಅನ್ನು ಸಾಯಿಸಲು ಮುನ್ನುಗ್ಗುತ್ತದೆ.
ಕೇವಲ ಹತ್ತು ವರ್ಷದ ಜಾನ್ ತನ್ನನ್ನು ತಾನು ಕಾಪಾಡಿಕೊಳ್ಳುತ್ತಾನಾ? ಏನು ಮಾಡಿದರೂ ಸಾಯದ T-1000 ರೋಬಾಟ್ ಅನ್ನು ಹೇಗೆ ನಾಶ ಪಡಿಸುತ್ತಾನೆ? ತನ್ನ ತಾಯಿಯನ್ನು ಹೇಗೆ ಕಾಪಾಡುತ್ತಾನೆ? Terminator ಕಥೆ ಏನಾಯ್ತು?
ಇದೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿನೆಮಾದಲ್ಲಿದೆ.
(Amazon prime)