ಇದು ಎಲ್ಲರೂ ನೋಡಲೇಬೇಕಾದ ಸಿನೆಮಾ.
ಸದಾಕಾಲವೂ ಜಾತಿ, ಮೀಸಲಾತಿ, ರಾಜಕೀಯ ಎಂಬ ವಿಷಯಗಳ ಬಗ್ಗೆ ಪರ ಅಥವಾ ವಿರೋಧ ಮಾಡುತ್ತಿರುವ ಜನರು ಸಮಾಜದ ಮತ್ತೊಂದು ಶೋಷಿತರ ವರ್ಗವನ್ನು ಮರೆತೇ ಬಿಟ್ಟಿದ್ದಾರೆ. ಈ ಶೋಷಿತರುಗಳಿಗೆ ದನಿಯಾಗುವವರು ಯಾರಿಲ್ಲ, ಇವರುಗಳಿಗೆ ಯಾರ ಆಸರೆಯೂ ಇಲ್ಲ, ಯಾರ ಸಹಾಯಹಸ್ತವೂ ಇಲ್ಲ…. ಇವರುಗಳದ್ದು ಕೇವಲ ಮೂಕರೋಧನೆಯಷ್ಟೇ..
ಹಾಗಿದ್ದರೆ ಯಾರಿವರು?
ಇವರು ಯಾರೆಂದು ಹೇಗೆ ಹೇಳಲಿ? ಇವರುಗಳ ಬಗ್ಗೆ ಏನೆಂದು ಬರೆಯಲಿ? ಇವರುಗಳು ನಮ್ಮ-ನಿಮ್ಮ ನಡುವೆಯೇ ಇದ್ದಾರೆ. ಆದರೆ ನಮಗೆ ಇವರುಗಳನ್ನು ಕಂಡರೆ ಒಂದು ರೀತಿಯ ದಿವ್ಯ ನಿರ್ಲಕ್ಷ್ಯ. ಏಕೆಂದರೆ ಇವರುಗಳು ಹೀಗೇ ಇರಬೇಕು ಎಂಬ ಕಟ್ಟುಪಾಡು ಮಾಡಿರುವವರು ನಾವೇ. ಅವರು ಹಾಗೇ ಇರಬೇಕಷ್ಟೇ… ಅದನ್ನು ಅವರು ಮೀರಿದಾಗ ಮಾತ್ರವೇ ನಮ್ಮ ದೃಷ್ಟಿ ಅವರತ್ತ ಹರಿಯುತ್ತದೆ.
ಈ ಸಿನೆಮಾದಲ್ಲಿ ಮೂರು ಮುಖ್ಯ ಪಾತ್ರಗಳಿವೆ.
1) ಹುಟ್ಟಿಸಿದವರು ಯಾರೆಂದೇ ಗೊತ್ತಿಲ್ಲದಿದ್ದರೂ, ತುತ್ತು ಅನ್ನಕ್ಕೂ ತತ್ವಾರವಾಗಿದ್ದರೂ, ಸಮಾಜದ ಜನರಿಂದ ‘ಅಸ್ಪೃಶ್ಯ’ ಎಂಬ ಬಿರುದು ಪಡೆದಿದ್ದರೂ, ತಾನು ಓದಲೇಬೇಕೆಂದು ಹಠದಿಂದ ಸ್ಕೂಲ್ ಫೀಸಿಗಾಗಿ ಕಷ್ಟ ಪಡುತ್ತಿರುವ ‘ಚೋಟಿ’ ಎಂಬ ಒಂಭತ್ತರ ಬಾಲಕಿ.
2) ಇಷ್ಟವಿಲ್ಲದ ಮುದುಕನೊಂದಿಗೆ ಮದುವೆಯಾಗಿ, ಜೀವನ ಏನು ಅಂತ ಗೊತ್ತಾಗುವಷ್ಟರಲ್ಲಿ ಆತ ಸತ್ತು, ‘ವಿಧವೆ’ ಎಂಬ ಹಣೆಪಟ್ಟಿ ಅಂಟಿಸಿಕೊಂಡು, ಜೀವನದ ಸುಖಭೋಗಗಳಿಂದ ವಂಚಿತಳಾಗಿ, ಇಷ್ಟವಿಲ್ಲದ ಜೀವನ ನಡೆಸುತ್ತ ಇರುವ ‘ನೂರ್’ ಎಂಬ ವಿಧವೆ.
3) ಪೊಲೀಸನ ಹೆಂಡತಿಯಾಗಿ ಈಗಾಗಲೇ ಮೂವರು ಹೆಣ್ಣುಮಕ್ಕಳಿಗೆ ಜನ್ಮ ನೀಡಿ, ನಾಲ್ಕನೆಯ ಮಗು ಗಂಡಾಗಲೇಬೇಕು ಎಂಬ ಷರತ್ತಿಗೆ ಒಳಪಟ್ಟ ಹೆಂಗಸು.
ತೊಂಭತ್ತು ನಿಮಿಷದ ಈ ಸಿನೆಮಾದಲ್ಲಿ ಸಮಾಜದ ಮತ್ತೊಂದು ಕರಾಳ ಮುಖವನ್ನು ನಮಗೆ ತೋರಿಸಿ ನಮ್ಮ ಕಣ್ಣು ತೇವವಾಗಿಸುತ್ತಾರೆ. ಎಂತಹಾ ಕಲ್ಲೆದೆಯವರೂ ಸಹ ಕಣ್ಣೀರು ತಡೆದುಕೊಳ್ಳಲಾರರು….. ಹಾಗೆ ಹಂತಹಂತವಾಗಿ ನಮ್ಮನ್ನು ಸಿನೆಮಾದೊಳಗೆ ಸೆಳೆದುಕೊಳ್ಳುತ್ತಾರೆ ನಿರ್ದೇಶಕರು.
ಚೋಟಿ ಎಂಬ ಬಾಲಕಿಗೆ ಓದುವ ಆಸೆ. ಆದರೆ ಹಣವಿಲ್ಲ. ಆಕೆಗೊಬ್ಬ ಜೀವದ ಗೆಳೆಯನಿದ್ದಾನೆ. ಆತನೂ ಅನಾಥನೇ. ಅವನು ಆಕೆಯ ಓದಿಗೆ ಹಣ ಹೊಂದಿಸಿ ಕೊಡುವುದಾಗಿ “ಮಾತು” ಕೊಟ್ಟಿರುತ್ತಾನೆ. ಚೋಟಿಯೂ ಹಗ್ಗದ ಮೇಲೆ ಬ್ಯಾಲನ್ಸ್ ಮಾಡುತ್ತಾ ನಡೆಯುವ ಸರ್ಕಸ್ ಮಾಡುತ್ತಾ ಮತ್ತು ಹೂ ಮಾರುತ್ತಾ ಅಲ್ಪಸ್ವಲ್ಪ ಸಂಪಾದಿಸಿರುತ್ತಾಳೆ. ಆದರೆ ಆಕೆಗೆ ಇರಲು ಒಂದು ಆಸರೆ ಇರುವುದಿಲ್ಲ. ಹಾಗಾಗಿ ಅನಾರ್ಕಲಿ ಎಂಬ ಮಂಗಳಮುಖಿಯ ಜೊತೆ ಇರುತ್ತಾಳೆ.
ಈ ಚೋಟಿಗೆ ಒಮ್ಮೆ ವಿಧವೆಯಾದ ‘ನೂರ್’ ಭೇಟಿಯಾಗುತ್ತಾಳೆ. ಅಸ್ಪೃಶ್ಯರಾದ ಚೋಟಿಯನ್ನು ಕಂಡು ನೂರ್ ಮೂರು ಮೈಲಿ ದೂರ ಹಾರಿದರೂ, ಚೋಟಿಯ ಮುಗ್ಧತೆಗೆ ನೂರ್ ಮನಸೋಲುತ್ತಾಳೆ. ಇಬ್ಬರ ನಡುವೆ ಗಾಢವಾದ ಬಾಂಧವ್ಯ ಬೆಸೆಯುತ್ತದೆ. ಎಷ್ಟೆಂದರೆ ಚೋಟಿ ನೂರ್ ಗಾಗಿ ಪಿಂಕ್ ಕಲರ್ ನೇಲ್ ಪಾಲಿಶ್ ತಂದು ಹಚ್ಚಿದರೆ, ನೂರ್ ಚೋಟಿಗಾಗಿ ತನ್ನ ಹಳೆಯ ಸೀರೆ ಹರಿದು ಲಂಗ ಹೊಲೆದು ಕೊಡುತ್ತಾಳೆ.
ನೂರ್ ಚೋಟಿಯೊಂದಿಗೆ ಅಡ್ಡಾಡುವುದು ಹಲವು ಜನರ ಕಣ್ಣು ಕೆಂಪಾಗಿಸುತ್ತದೆ. ಏಕೆಂದರೆ ನೂರ್ ವಿಧವೆ. ಆಕೆ ಸಮಾಜದ ನಿಯಮದ ಪ್ರಕಾರ ತೆಪ್ಪಗಿರಬೇಕು. ಆದರೆ ವಿಧವೆಯ ನಿಯಮಗಳನ್ನು ಸಾವಿರಾರು ವರ್ಷಗಳ ಹಿಂದೆ ಆಗಿನ ಕಾಲಕ್ಕೆ ತಕ್ಕಂತೆ ಮಾಡಿದ್ದಿರಬಹುದು. ಕಾಲ ಕಳೆದಂತೆ ಆ ನಿಯಮಗಳು ಈಗಿನ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಅಂತ ಯಾರಿಗೂ ಅನ್ನಿಸಿಯೇ ಇಲ್ಲ. ಇಂದಿಗೂ ಆ ಅನಿಷ್ಠ ಪದ್ಧತಿಯೇ ಜಾರಿಯಲ್ಲಿರುವುದು. ಮತ್ತು ಒಬ್ಬ ವಿಧವೆ ಇಂದಿಗೂ ಹಾಗೆಯೇ ನಡೆದುಕೊಳ್ಳಬೇಕು ಅಂತ ಸಮಾಜ ಬಯಸುತ್ತದೆ.
ವಿಧವೆಯಾದರೂ ಆಕೆಯೂ ಒಬ್ಬ ಹೆಣ್ಣು ಅಂತಾಗಲೀ, ಆಕೆಯೊಳಗೂ ಉಂಡುಟ್ಟು ಮಾಡುವ ಆಸೆ-ಆಕಾಂಕ್ಷೆಗಳು ಇರುತ್ತವೆ ಅಂತಾಗಲೀ ನಾವೆಲ್ಲರೂ ಮರೆತು ಬಿಡುತ್ತೇವೆ. ಆದರೆ ಅದನ್ನು ಚೋಟಿ ಕಂಡುಕೊಳ್ಳುತ್ತಾಳೆ. ನೂರ್ ಗೆ ಪಿಂಕ್ ಕಲರ್ ಎಂದರೆ ಬಹಳ ಇಷ್ಟ ಅಂತ ಚೋಟಿಗೆ ಗೊತ್ತಾಗುತ್ತದೆ. ಇನ್ನೇನು ಹತ್ತಿರದಲ್ಲಿ ಬರುತ್ತಿರುವ ಹೋಳಿ ಹಬ್ಬದಂದು ನೂರ್ ಮೇಲೆ ಪಿಂಕ್ ಬಣ್ಣ ಹಾಕುವುದಾಗಿ ಚೋಟಿ ಹೇಳುತ್ತಾಳೆ.
ಆದರೆ ನೂರ್ ಒಪ್ಪುವುದಿಲ್ಲ.
ಏಕೆಂದರೆ ಈ ಸಮಾಜದಲ್ಲಿ ವಿಧವೆಯರು ಹೋಳಿ ಆಡುವಂತಿಲ್ಲ. ಇದು ಸಮಾಜದ ಕಟ್ಟಳೆ. ಇಷ್ಟವಿರಲಿ ಬಿಡಲಿ ಪಾಲಿಸಲೇಬೇಕು. ಆದರೆ ಒಂಭತ್ತರ ಬಾಲಕಿಯಾದ ಚೋಟಿಗೆ ಇದೆಲ್ಲಾ ಹೇಗೆ ಗೊತ್ತಾಗಬೇಕು. ಅವಳ ಪ್ರಕಾರ ಮಾತೆಂದರೆ ಮಾತು. ಹೋಳಿಯಲ್ಲಿ ಬಣ್ಣ ಹಾಕುತ್ತೇನೆ ಎಂದ ಮೇಲೆ ಹಾಕಿಯೇ ಹಾಕುತ್ತೇನೆ ಅಂತ ಹೇಳುತ್ತಾಳೆ.
ಈ ನಡುವೆ ಚೋಟಿಯ ಜೊತೆ ಇದ್ದ ಮಂಗಳಮುಖಿಯನ್ನು ಸ್ಥಳಿಯ ಪೊಲೀಸ್ ತನ್ನ ತೃಷೆಗಾಗಿ ಬಳಸಿಕೊಂಡು, ಶೋಷಿಸಿ ಕೊಂದೇ ಬಿಡುತ್ತಾನೆ. ಆ ಕೊಲೆಯ ಆಪಾದನೆಯನ್ನು ಚೋಟಿಯ ಮೇಲೆ ಹಾಕುತ್ತಾನೆ. ಅವನಿ್ಗೆಗೆ ಮೊದಲಿನಿಂದಲೂ ಚೋಟಿಯ ಮೇಲೆ ಕಣ್ಣಿರುತ್ತದೆ. ಹೇಗಿದ್ದರೂ ಅನಾಥ ಮಗು ಅಲ್ವಾ ಅದು? ಅವಳಿಗೇನು ಮಾಡಿದರೂ ಯಾರೂ (ಅಂದರೆ ಸಮಾಜ) ಕೇಳುವಂತಿಲ್ಲ ಅಂತ ಅವನ ಧೈರ್ಯ. ಈ ಸಮಾಜವೂ ಅಷ್ಟೇ….. ತಮ್ಮ ಮಕ್ಕಳಿಗೆ ಕೆಟ್ಟದಾಗಬಾರದು ಹೊರತೂ, ಯಾವುದೋ ಅನಾಥ ಹುಡುಗಿಗೆ ಏನಾದರೆ ತನಗೇನು ಅಂತ ಸುಮ್ಮನಿರುತ್ತದೆ.
ಅಸ್ಪೃಶ್ಯರು ಹೀಗೆಯೇ ಇರಬೇಕು, ವಿಧವೆಯರು ಹೀಗೆಯೇ ಬಾಳಬೇಕು, ಹೆಣ್ಣಾದವಳು ಗಂಡು ಮಗುವನ್ನೇ ಹೆರಬೇಕು ಅಂತ ಲಕ್ಷಗಟ್ಟಲೆ ಕಟ್ಟಳೆ ಮಾಡಿರುವ ಸಮಾಜ, ಈ ಶೋಷಿತರನ್ನು ಮನಸೋ ಇಚ್ಛೆ ಪೀಡಿಸುವ ರಾಕ್ಷಸರಿ್ಡಗೆ ಯಾವುದೇ ಕಟ್ಟಳೆ ಮಾಡಿಲ್ಲದೇ ಇರುವುದು ಆಶ್ಚರ್ಯ. ಹೆಣ್ಣನ್ನು ಗೌರವಿಸಬೇಕು ಅನ್ನುವ ನಾಡಿನಲ್ಲಿ ಒಂಭತ್ತರ ಬಾಲಕಿಯ ಮಾನದ, ಮಂಗಳಮುಖಿಯ ಪ್ರಾಣದ ಪರಿವೆಯಿಲ್ಲ.
ಏಕೆಂದರೆ ಅವರುಗಳು ಅನಾಥರು.
ಡಾರ್ವಿನ್ ಹೇಳಿಬಿಟ್ಟಿದ್ದಾನೆ…. ಪ್ರಬಲರು ಮಾತ್ರ ಬದುಕುತ್ತಾರೆ ಅಂತ. ಶೋಷಿತರು ಅನ್ಯಾಯಗಳಿಗೆ ತಲೆಬಾಗದೇ ಪ್ರಬಲರಾಗಬೇಕಿದೆ. ಒಮ್ಮೆ ನೂರ್ ಸಹ ಚೋಟಿಗೆ ಈ ಮಾತು ಹೇಳುತ್ತಾಳೆ. ‘ಯಾರು ನಿನ್ನನ್ನು ಅಸ್ಪೃಶ್ಯ ಎಂದು ಕರೆಯುತ್ತಾರೋ, ಅವರ ಮುಂದೆ ನೀನೆಷ್ಟು ಎತ್ತರ ಬೆಳೆಯಬೇಕೆಂದರೆ, ಅವರಿಗೆ ನಿನ್ನನ್ನು ಮುಟ್ಟಲೂ ಆಗಬಾರದು, ಅಷ್ಟು ಬೆಳೆಯಬೇಕು’ ಅಂತ. ಈ ಕಾರಣಕ್ಕಾಗಿಯೇ ಸಮಾಜ ಅವರನ್ನು ಯೋಚಿಸಲು ಬಿಡದಂತೆ ಶೋಷಿಸುತ್ತದೆ. ಒಮ್ಮೆ ಶೋಷಣೆ ನಿಂತರೆ ಅವರು ಯೋಚಿಸಿ ಬೆಳೆದುಬಿಡುತ್ತಾರಲ್ಲ.
ಇರಲಿ…. ನೂರ್ ಚೋಟಿಯನ್ನು ಅಡಗಿಸಿಡುತ್ತಾಳೆ. ಆದರೂ ಪೊಲೀಸರು ಚೋಟಿಯನ್ನು ಕಂಡುಹಿಡಿದು ಬಂಧಿಸುತ್ತಾರೆ. ಅದೂ ಸಹ ಗಂಡಸರ ಜೈಲಿನಲ್ಲಿ…. ಒಂಭತ್ತರ ಬಾಲಕಿಯ ಮೇಲೆ ಅಲ್ಲಿ ಯಾವ ದೌರ್ಜನ್ಯ ನಡೆದಿರಬಹುದು ಅಂತ ಊಹಿಸಿ…. ಕಡೆಗೆ ರಾಕ್ಷಸರ ನಡುವೆಯೂ ಒಬ್ಬ ದೇವರು ಇರುವಂತೆ ಪೊಲೀಸಿನವನೊಬ್ಬ ಚೋಟಿಯನ್ನು ಅಲ್ಲಿಂದ ಪಾರು ಮಾಡುತ್ತಾನೆ.
ಆದರೆ ಅಷ್ಟರಲ್ಲಿ ಆಶ್ರಮದವರು ಸೇರಿ ನೂರ್ ಳನ್ನು ಇಲ್ಲದ ಅಪವಾದ ಹೊರೆಸಿ ಮಹಡಿಯಿಂದ ಬೀಳಿಸಿ ಆಕೆಯನ್ನು ಸಾಯಿಸಿರುತ್ತಾರೆ. ಒನ್ಸ್ ಎಗೇನ್ ಈ ಅನ್ಯಾಯ ಕೇಳುವವರೂ ಯಾರಿಲ್ಲ. ಏಕೆಂದರೆ ನೂರ್ ಎಂಬ ವಿಧವೆ ಸಹ ಅನಾಥೆ.
ಈ ವಿಷಯ ಚೋಟಿಗೆ ತಿಳಿಯುತ್ತದೆ.
ಚೋಟಿಗೆ ತಾನು ಆಕೆಗೆ ಕೊಟ್ಟ ಮಾತಿನ ಮೇಲೆ ಗಮನ!!! ಈ ಬಾರಿ ಹೋಳಿ ಹಬ್ಬದಲ್ಲಿ ನೂರ್ ಮೇಲೆ ಪಿಂಕ್ ಬಣ್ಣ ಹಾಕುವುದಾಗಿ ಚೋಟಿ ಮಾತು ಕೊಟ್ಟಿರುತ್ತಾಳಲ್ಲ….. ಅದನ್ನು ಈಗ ಪೂರೈಸಬೇಕಿದೆ. ಮಾತೆಂದರೆ ಮಾತು. ಹಾಗಾಗಿ ವಾರಣಾಸಿಯ ಬೀದಿಯಲ್ಲಿ ನೂರ್ ಶವಯಾತ್ರೆ ನಡೆಯುತ್ತಿರುವಾಗ, ಕಟ್ಟಡಗಳ ಮೇಲಿನಿಂದ, ಹಗ್ಗದ ಮೇಲೆ ಬ್ಯಾಲನ್ಸ್ ಮಾಡುತ್ತಾ ಬರುವ ಚೋಟಿಯು ‘ನೂರ್’ ಶವದ ಮೇಲೆ ಕಡೆಯದಾಗಿ ಬಣ್ಣ ಎಸೆಯುತ್ತಾಳೆ.
The last color…….!!!!!!
ಇಪ್ಪತ್ತೈದು ವರ್ಷದ ನಂತರ ಇದೇ ‘ಚೋಟಿ’ ಈಗ ‘ನೂರ್ ಸೆಕ್ಸೇನಾ’ ಆಗಿದ್ದಾಳೆ. ಸುಪ್ರೀಂ ಕೋರ್ಟ್ ಅಡ್ವೋಕೇಟ್ ಆಗಿ ಬೆಳೆದು ನಿಂತಿರುವ ಈ ಚೋಟಿ ಯಾರೂ ಮುಟ್ಟಲಾರದಷ್ಟು ಎತ್ತರದಲ್ಲಿದ್ದಾಳೆ. ಈಗ ದೇಶಾದ್ಯಂತ “ವಿಧವೆಯರು ಹೋಳಿ ಆಡಬಹುದಾದ” ಮಹತ್ತರ ಬಿಲ್ ಪಾಸ್ ಮಾಡಿಸುವಲ್ಲಿ ಯಶಸ್ಸು ಸಹ ಗಳಿಸಿದ್ದಾಳೆ.
ಸಮಾಜ ಒಪ್ಪಲಿ ಬಿಡಲಿ…. ಇಪ್ಪತ್ತೈದು ವರ್ಷಗಳ ನಂತರ ಅದೇ ಆಶ್ರಮದಲ್ಲಿ ವಯಸ್ಸಾದ ವಿಧವೆಯರ ಜೊತೆ, ಸುಪ್ರೀಂ ತೀರ್ಪಿನ ನಂತರ ಮೊದಲ ಬಾರಿ ಹೋಳಿ ಆಡುತ್ತಿದ್ದಾಳೆ. ಆ ವಿಧವೆಯರ ಮುಖದ ಮೇಲಿನ ಸಂತಸ ಕಂಡು ನಮ್ಮ ಕಣ್ಣಲ್ಲಿಯೂ ನೀರು…
ಚೋಟಿಗೆ ಓದಲು ಸಹಾಯ ಮಾಡಿದ್ದ ಚಿಂಟು ಸಹ ಅದೇ ಏರಿಯಾದಲ್ಲಿ ಪೊಲೀಸಾಗಿದ್ದಾನೆ. ಚೋಟಿಗೆ ತಾನು ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳುವ ಮೂಲಕ ಗೆಳೆತನದ ಮಹತ್ವ ಸಾರಿದ್ದಾನೆ. ಯಾವುದೋ ಭಾವೋದ್ವೇಗಕ್ಕೆ ಒಳಗಾಗಿ ಕೊಡುವ ಮಾತು ಮಾತಲ್ಲ. ಬದಲಿಗೆ ಯಾವ ಸಂದರ್ಭದಲ್ಲಿ ಮಾತು ಕೊಟ್ಟಿದ್ದರೂ ಅದನ್ನು ಎಷ್ಟೇ ವರ್ಷವಾದರೂ ಪೂರೈಸುವುದೇ ನಿಜವಾದ “ಮಾತು”.
ಸಿನೆಮಾ ಅಮೆಜಾನ್ ಪ್ರೈಮಿನಲ್ಲಿದೆ.
ಹೊಸತನದ ಯೋಚನೆಗಾಗಿ ಮತ್ತು ಮನಸ್ಸಿನ ವಿಶಾಲತೆಯನ್ನು ಮತ್ತಷ್ಟು ಹಿಗ್ಗಿಸಿಕೊಳ್ಳಲು ಈ ಸಿನೆಮಾ ನೋಡಿ. ನಂತರ ಅನಾಥ ಮಕ್ಕಳ ಕುರಿತು ನಮ್ಮ ಮನಸ್ಸು ಮರುಗದಿದ್ದರೆ ಹೇಳಿ…