ಅದು 1994.
ಜನ ಸಾಮಾನ್ಯರು ಜೀವನ ನಡೆಸಲು ಇನ್ನೂ ಪರದಾಡುತ್ತಿದ್ದ ಕಾಲ ಅದು. ಅಂತಹ ಕಾಲದಲ್ಲಿ, ಏನಾದರೂ ಮ್ಯಾಜಿಕ್ ನಡೆದು ನಾವು ಅಂದುಕೊಂಡದ್ದೆಲ್ಲ ಸಿಗಬಾರದೇ ಅಂತ ಜನಸಾಮಾನ್ಯ ಹಂಬಲಿಸುತ್ತಿರುವಾಗ ಬಂತು ನೋಡಿ ಈ ಸಿನೆಮಾ..
The Mask!!!
ಹೌದು. ಇದೊಂದು “ಮಾಸ್ಕ್” ಹಾಕಿಕೊಂಡರೆ ನಾವು ಅಂದುಕೊಂಡದ್ದೆಲ್ಲಾ ಪಡೆಯಬಹುದು. ಅಂತಹಾ ಮ್ಯಾಜಿಕ್ ಮಾಸ್ಕ್ ಇದು. ಈ ಮಾಸ್ಕ್ ಒಬ್ಬ ಸಾಮಾನ್ಯ ಬ್ಯಾಂಕ್ ನೌಕರನಾದ ಸ್ಟೇನ್ಲಿಗೆ ಸಿಗುತ್ತದೆ. ಅಲ್ಲಿಯವರೆಗೆ ಆತನೂ ಸಾಮಾನ್ಯರಲ್ಲಿ ಒಬ್ಬ ಸಾಮಾನ್ಯನಂತಿರುತ್ತಾನೆ. ಆದರೆ ಈ ಮಾಸ್ಕ್ ಧರಿಸಿದ ಕೂಡಲೇ ಅಸಾಮಾನ್ಯನಾಗಿಬಿಡುತ್ತಾನೆ.
ಆತ ಮಾಸ್ಕ್ ಧರಿಸಿ ಮಾಡುವ ಜಾದೂಗಳನ್ನು ನಾವು ಕಣ್ಣು ಬಿಟ್ಟುಕೊಂಡು ನೋಡುತ್ತಾ ಎಂಜಾಯ್ ಮಾಡಬೇಕಷ್ಟೇ…
ಮಾಸ್ಕ್ ಮಾನವನಾಗಿ ಅಭಿನಯಿಸಿರುವ ಜಿಮ್ ಕ್ಯಾರಿ ಎಂಬ ಅದ್ಭುತ ನಟ ನಮಗೆ ಬೇರೇನೂ ಯೋಚಿಸಲು ಬಿಡದೇ ಇಡೀ ಸಿನೆಮಾ ಉದ್ದಕ್ಕೂ ರಂಜಿಸುತ್ತಾನೆ. ಒಂದು ಕ್ಷಣ ಸುಮ್ಮನಿರದ ಲವಲವಿಕೆಯ ನಟ ಆತ. ಆತನದ್ದು ಒಂದು ಚಂದದ ಹಾಡು-ಡ್ಯಾನ್ಸ್ ಕೂಡ ಇದೆ ಸಿನೆಮಾದಲ್ಲಿ.
ಅಲ್ಲದೇ ಸಿನೆಮಾದೊಳಗೆ ಅತ್ಯಂತ ಸುಂದರಿಯಾದ ಹೀರೋಯಿನ್ ಸಹ ಇದ್ದಾಳೆ. ಆದರೆ ಅವಳ ಪ್ರಿಯಕರ ಒಬ್ಬ ದುಷ್ಟ. ಆತ ಈ ಮಾಸ್ಕಿಗಾಗಿ ನಾಯಕನ ಹಿಂದೆ ಬಿದ್ದಿರುತ್ತಾನೆ. ಕಡೆಗೆ ಪಡೆದೂ ಪಡೆಯುತ್ತಾನೆ. ಆದರೆ ಖಳನಾಯಕ ಮಾಸ್ಕ್ ಹಾಕಿಕೊಂಡಾಗ ನಾಯಕನ ಹಾಗೆ ವಿನೋದದ ಮುಖವುಳ್ಳವನ ಹಾಗೆ ಇರುವುದಿಲ್ಲ. ಒಂದು ರೀತಿ ರಾಕ್ಷಸನ ಹಾಗೆ ಕಾಣುತ್ತಾನೆ.
ಈ ಮಾಸ್ಕ್ ಅವನಿಂದ ಇವನಿಗೆ, ಇವನಿಂದ ಅವನಿಗೆ ಅಂತ ಹಾರಾಡುತ್ತಿರುವಾಗ ಒಮ್ಮೆ ನಾಯಕನ ಸಾಕುನಾಯಿಗೆ ಅದು ಸಿಕ್ಕುಬಿಡುತ್ತದೆ. ಅದೋ ಮೊದಲೇ ತರಲೆ ನಾಯಿ. ಈಗ ಮಾಸ್ಕ್ ಧರಿಸಿ ಅಸಾಮಾನ್ಯ ನಾಯಿಯಾಗಿ ಮತ್ತಷ್ಟು ತರಲೆ ಮಾಡಿ ನಮ್ಮನ್ನು ರಂಜಿಸುತ್ತದೆ.
ಒಟ್ಟಿನಲ್ಲಿ ಸಿನೆಮಾ ಪೂರ್ತಿ ಬರೀ ನಗುವುದು-ಎಂಜಾಯ್ ಮಾಡುವುದಷ್ಟೇ ನಮ್ಮ ಕೆಲಸ. ಇಂದಿಗೂ ಇದು ಎವರ್ ಗ್ರೀನ್ ಸಿನೆಮಾ ಆಗಿ ಉಳಿದಿದೆ. ಕಾರಣ ಜಿಮ್ ಕ್ಯಾರಿಯ ಅದ್ಭುತ ನಟನೆ.
ಸಿನೆಮಾ ಪೂರ್ತಿ ತಮಾಷೆಯೇ ಇದ್ದರೂ ಒಂದು ಗಂಭೀರವಾದ ಅಂಶವೂ ಇದೆ.
ಈ ಮಾಸ್ಕ್ ಹಾಕಿಕೊಂಡವರು ಏನು ಬೇಕಾದರೂ ಪಡೆಯಬಲ್ಲರು. ನಾಯಕ ಒಳ್ಳೆಯದಕ್ಕೆ ಬಳಸಿದರೆ ಖಳನಾಯಕ ಅದನ್ನು ಕೆಟ್ಟದಕ್ಕೆ ಬಳಸುತ್ತಾನೆ. ತನಗಾಗಿ ದುಡ್ಡು-ಕಾಸು ಏನೂ ಇಲ್ಲದ ನಾಯಕ ಆ ಮಾಸ್ಕ್ ಇಟ್ಟುಕೊಂಡು ಬೇಕಾದ್ದು ಪಡೆಯಬಹುದಿತ್ತು. ಆದರೆ ಆತ ಆ ಮಾಸ್ಕಿನ ಮೋಹಕ್ಕೆ ಒಳಗಾಗದೇ, ದುಡಿದು ತಿನ್ನುವತ್ತ ಮನಸ್ಸು ಮಾಡುತ್ತಾನೆ. ಅದೇ ಕ್ಷಣದಲ್ಲಿ ಆತನ ಮಿತ್ರ ಆ ಮಾಸ್ಕ್ ಪಡೆಯುವ ಮನಸ್ಸು ಮಾಡುತ್ತಾನೆ.
ಕಡೆಗೆ ಮಾಸ್ಕ್ ಯಾರಿಗೆ ಸಿಗುತ್ತದೆ…?
ಅದು ಸಿಕ್ಕರೆ ಒಳ್ಳೆಯದಾ ಅಥವಾ ಕೆಟ್ಟದಾ….?
ಪ್ರಶ್ನೆ ನಮ್ಮಲ್ಲೇ ಉಳಿಯುತ್ತದೆ.