ಈ ಸಿನೆಮಾದ ಕಥೆ ಮೂಡಿ ಬರಲು ಬಹಳ ಮುಖ್ಯವಾದ ಕಾರಣವೆಂದರೆ ಮಾನವನ ಅತಿಯಾದ ದುರಾಸೆ. ಸಾವಿರಾರು ವರ್ಷಗಳ ಹಿಂದಿನ ಮಾನವ, ಯಾವುದೋ ಉದ್ದೇಶಕ್ಕಾಗಿ ಕಟ್ಟಿರುವ ಪಿರಮಿಡ್ಡುಗಳಲ್ಲಿ ಅವಿತಿರಬಹುದಾದ ‘ಅಮಿತವಾದ ಖಜಾನೆ’ಯನ್ನು ಪಡೆಯಲು ಜನರು ಮುಗಿಬೀಳುವುದೇ ಸಿನೆಮಾ ಕಥೆಯಾಗಿದೆ.
ಯಾರಿಗೂ ಅಂದಿನ ದಿನದ ಮನುಷ್ಯರ ಜೀವನಶೈಲಿ, ಅಂದಿನ ಜನರ ಅಭ್ಯಾಸ-ಹವ್ಯಾಸಗಳನ್ನು ತಿಳಿದುಕೊಳ್ಳುವ ಕುತೂಹಲವಿಲ್ಲ. ಮರೆಯಾಗಿ ಹೋಗಿರುವ ಒಂದು ಶ್ರೀಮಂತ ಸಂಸ್ಕೃತಿಯನ್ನು ಮತ್ತೆ ಪುನರುತ್ಥಾನಗೊಳಿಸಬೇಕೆಂಬ ಬಯಕೆಯಿಲ್ಲ. ಅವರ ಜೀವನದಲ್ಲಿ ಅಳವಡಿಸಿಕೊಂಡಿದ್ದಿರಬಹುದಾದ ಮೌಲ್ಯಗಳನ್ನು ತಿಳಿದು ತಾವೂ ಬದಲಾಗಬಹುದೆಂಬ ಅಭಿಲಾಷೆಯಿಲ್ಲ.
ಅವರ ಗುರಿ ಒಂದೇ…. ಮುಚ್ಚಿಟ್ಟ ಖಜಾನೆ!!
ಆದರೆ ನಾಯಕಿಯೊಬ್ಬಳೇ ಅಂದಿನ ಸಂಸ್ಕೃತಿ, ಅಂದಿನ ಲಿಪಿಗಳ ಅಧ್ಯಯನ ಮಾಡುತ್ತಿರುವವಳು. ಅವಳ ಈ ಪಯಣದಲ್ಲಿ ಜೊತೆಯಾಗುವ ನಾಯಕನಿಗೆ ನಾಯಕಿಯ ಆದರ್ಶ ಹುಚ್ಚಿನಂತೆ ಕಾಣುತ್ತದೆ. ಎಲ್ಲರೂ ದುಡ್ಡಿಗಾಗಿ ಬಾಯ್ಬಿಡುವಾಗ ಈಕೆಯ ಈ ನಡೆ ವಿಚಿತ್ರವಾಗಿ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ ಅಲ್ಲವೇ?
ಎಲ್ಲರೂ ತಮ್ಮ ತಮ್ಮ ಗುರಿಯೊಂದಿಗೆ ಪಿರಮಿಡ್ ಪ್ರವೇಶ ಮಾಡುತ್ತಾರೆ. ಒಳ್ಳೆಯದರ ಜೊತೆ ಕೆಟ್ಟದು ಸೇರಿರುವಂತೆ ಈಜಿಪ್ಟಿನ ಸಾಂಸ್ಕೃತಿಕ ಅಧ್ಯಯನಕಾರ್ತಿಯ ಜೊತೆ ನಿಧಿಯಾಸೆಯ ಮನುಷ್ಯರು!!! ಇಬ್ಬರ ಗುರಿ ಬೇರೆ ಬೇರೆ. ಆದರೆ ದಾರಿ ಒಂದೇ. ವಿಧಿಯಿಲ್ಲದೇ ಒಂದಾಗಿ ಮುಂದುವರೆಯುತ್ತಾರೆ.
ವಿಪರ್ಯಾಸವೆಂದರೆ ಯಾವುದೋ ಗುಂಪಿನ ಯಾರೋ ಒಬ್ಬರ ಒಂದು ನಿರ್ಧಾರ ಎಲ್ಲರ ಮೇಲೆಯೂ ಪರಿಣಾಮ ಬೀರುತ್ತದೆ. ಹೇಗೆಂದರೆ…. ಪಿರಮಿಡ್ಡಿನೊಳಗೆ ‘ಗೋಲ್ಡನ್ ಬುಕ್ ಆಫ್ ಅಮುನ್ ರಾ’ ಬದಲು ಆ ತಂಡದವರಿಗೆ ‘ಬ್ಲಾಕ್ ಬುಕ್ ಆಪ್ ಡೆಡ್’ ಸಿಗುತ್ತದೆ. ಆ ಲಿಪಿಯ ಪುಸ್ತಕ ಸಿಕ್ಕಿದ ಖುಷಿಯಲ್ಲಿ ನಾಯಕಿ ಒಂದೆರೆಡು ಸಾಲು ಓದುತ್ತಾಳೆ ನೋಡಿ…. ಅದರಿಂದ ಸಹಸ್ರಾರು ವರ್ಷಗಳ ಹಿಂದಿನ “ಮಮ್ಮಿ”ಯೊಂದಕ್ಕೆ ಜೀವ ಬಂದು ಬಿಡುತ್ತದೆ.
ಆ “ಮಮ್ಮಿ”ಯೇ ಸಿನೆಮಾದ ವಿಲನ್!!!
ಆ ಮಮ್ಮಿಯ… ಬೇರೆ ಎಲ್ಲರಿಗಿಂತಲೂ ನಾಯಕಿಯನ್ನೇ ಹೆಚ್ಚು ಕಾಡುತ್ತದೆ. ನಾಯಕಿಗೆ ಬೇಕಿತ್ತಾ ಇದು…?? ಜೀವ ಪಡೆದುಕೊಂಡ ಮಮ್ಮಿಯು ತನಗೆದುರಾದ ಮನುಷ್ಯರಿಂದ ಒಂದೊಂದೇ ಅಂಗಾಗ ಪಡೆಯುತ್ತಾ ಮನುಷ್ಯರಂತೆಯೇ ಆಗಿಬಿಡುತ್ತದೆ.
ಅಷ್ಟಕ್ಕೇ ಸುಮ್ಮನಾಗೋಲ್ಲ ಅದು.
ತನ್ನ ಆ ಕಾಲದ ಹಳೆಯ ಪ್ರೇಯಸಿಯ “ಮಮ್ಮಿ”ಯನ್ನೂ ಹುಡುಕಿ ತಂದು ಅದನ್ನೂ ಜೀವಂತಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗುತ್ತದೆ….. ಒಟ್ಟಿನಲ್ಲಿ ಬರೀ ಯಡವಟ್ಟಿನ ಮೇಲೆ ಯಡವಟ್ಟುಗಳಾಗುತ್ತವೆ. ಚಿನ್ನ ಹುಡುಕಿಕೊಂಡು ಬಂದವರೆಲ್ಲ ದಾರುಣವಾಗಿ ಸಾಯುತ್ತಾರೆ.
ಹಾಗಾದರೆ ನಾಯಕ… ನಾಯಕಿ…. ಆಕೆಯ ಅಣ್ಣ…?
ಅವರ ಗತಿ ಏನಾಯ್ತು? ಆ ಮುಚ್ಚಿಟ್ಟ ಖಜಾನೆ ಅವರಿಗೆ ಸಿಕ್ಕಿತಾ? ಅಥವಾ ಉಳಿದೆಲ್ಲರಂತೆ ಅವರೂ ಸಾಯುತ್ತಾರಾ? ಈಗ ಮತ್ತೆ ಜೀವ ಬಂದು ಎದ್ದಿರುವ ಮಮ್ಮಿಯ (ದೆವ್ವದ) ಕಥೆ ಮುಂದೇನಾಯ್ತು? ಅಧ್ಯಯನ ಮಾಡುತ್ತೇನೆ ಅಂತ ಹೋಗಿರುವ ನಾಯಕಿ ದೆವ್ವ-ಭೂತಗಳನ್ನು ಕಂಡು ಹೆದರಿದಳೇ? ಅವುಗಳಿಂದ ತನ್ನ ಜೀವ ಉಳಿಸಿಕೊಳ್ಳಲಿಕ್ಕಾಗಿ ಏನು ಮಾಡಿದಳು? ಧೈರ್ಯ ತೋರಿದಳೇ ಅಥವಾ ಧೈರ್ಯಗೆಟ್ಟಳೇ?
ಇವೆಲ್ಲಾ ಪ್ರಶ್ನೆಗಳಿಗೂ ಸಿನೆಮಾ ಉತ್ತರ ಕೊಡುತ್ತದೆ.
ನಾಯಕಿಯ ಅಣ್ಣನ ಹಾಸ್ಯವೇ ಸಿನೆಮಾದ ಪ್ರೇರಕ ಶಕ್ತಿ. ಆತ ಮಾಡುವುದು ತಂಟೆಯಾಗಿರಲಿ ಅಥವಾ ಗಂಭೀರತೆಯಾಗಿರಲಿ, ನಮಗೆ ನಗು ತರಿಸುವುದು ಗ್ಯಾರಂಟಿ. ಎಂತಹಾ ಸೀರಿಯಸ್ ಸನ್ನಿವೇಶಗಳಲ್ಲಿಯೂ ಸಹ ಆತ ನಮ್ಮನ್ನು ನಗಿಸುತ್ತಾನೆ. ಮತ್ತೊಂದು ಮುಖ್ಯವಾದ ಅಂಶವೆಂದರೆ ಈ ಸಿನಿಮಾದ ಪ್ರತಿನಾಯಕ ಅಂದರೆ ವಿಲನ್. ಇಷ್ಟು ಹ್ಯಾಂಡ್ಸಮ್ ಆಗಿರುವ ವಿಲನ್ ಅನ್ನು ಇಲ್ಲಿಯೇ ನಾನು ನೋಡಿದ್ದು. ನಾಯಕ-ನಾಯಕಿಯ ಜೊತೆ ಅವನೂ ಸಹ ಇಷ್ಟವಾಗುತ್ತಾನೆ.
ಈ ಸಿನೆಮಾದ ಶೂಟಿಂಗ್ “ಸಹಾರಾ” ಮರುಭೂಮಿಯಲ್ಲಿ ಹದಿನೇಳು ವಾರಗಳ ಕಾಲ ನಡೆದಿತ್ತಂತೆ. ಆಗ ಸಿನೆಮಾ ಮಂದಿ ನಿರ್ಜಲೀಕರಣ, ಮರಳಿನ ಬಿರುಗಾಳಿ, ಮರುಭೂಮಿಯ ಹಾವುಗಳಿಂದ ತೊಂದರೆಗೊಳಗಾಗಿದ್ದರಂತೆ. ಆದರೂ ಸಹ ಸಿನೆಮಾವನ್ನು ಅತ್ಯುತ್ತಮವಾಗಿ ಚಿತ್ರೀಕರಿಸಿದ್ದಾರೆ.
ಮನುಷ್ಯನ ಅತಿಯಾದ ದುರಾಸೆಯೇ ಅವನ ಸಾವಿಗೆ ಕಾರಣ ಅಂತ ಹೇಳುವ ಸಿನೆಮಾ ಇದು.