ನೆಟ್‌ಫ್ಲಿಕ್ಸ್ ವೆಬ್ ಸೀರೀಸ್:ಮುಖ್ಯ ಕಥಾವಸ್ತು ಗಟ್ಟಿಯಾಗಿದ್ದು, ತಾರ್ಕಿಕವಾಗಿ ಮೊದಲಿನಿಂದ ಕೊನೆಯವರೆಗೂ ಹರಿದರೆ ಅದನ್ನು ಸ್ಲೋ-ಬರ್ನ್ ( ನಿಧಾನ ಗತಿಯ) ಸರಣಿಯಾದರೂ ತಾಳ್ಮೆಯಿಂದ ನೋಡುವವ ನಾನು.
ಅಂಥದೇ ಒಂದು ಗೂಢಚರ್ಯ ಮೂಲದ ಅಮೆರಿಕನ್ ಪ್ರೆಸಿಡೆಂಟ್ ಮತ್ತು ಉಗ್ರವಾದಿ ಪಿತೂರಿ ಸಂಬಂಧಿತ ಕಥೆ- ದಿ ನೈಟ್ ಏಜೆಂಟ್ ( 1 ಸೀಸನ್, 10 ಎಪಿಸೋಡ್).( ದಿ ನೈಟ್ ಮ್ಯಾನೇಜರ್ ಎಂಬುದೇ ಬೇರೆ ಸರಣಿ, ಅನಿಲ್ ಕಪೂರ್ ನಟನೆಯದು, ಹೆಸರು ಸ್ವಲ್ಪ ಕನ್ಫ್ಯೂಸ್ ಆಗಿದ್ದು ನಿಜ)ಇದರ ನಾಯಕ ( ಗೇಬ್ರಿಯಲ್ ಬಾಸೋ) ಒಂದು ಬೋರಿಂಗ್ ಡೆಸ್ಕ್ ಜಾಬಿನಲ್ಲಿ ವೈಟ್ ಹೌಸಿನಲ್ಲಿ ಕಾಲ ಕಳೆಯುತ್ತಿರುತ್ತಾನೆ. ಅಲ್ಲಿಗೆ ಒಮ್ಮೆಯೂ ಫೋನ್ ಕರೆಯೂ ಬರುವುದಿಲ್ಲ ಎಂಬ ಪ್ರತೀತಿ. ಆದರೆ ಆಕಸ್ಮಿಕವಾಗಿ ಅವನಿಗೆ ಬಂದ ಮೊದಲನೆಯ ಅಪಾಯ ಸೂಚಕ ಕಾಲ್ ಅವನ ಇಡೀ ಜೀವನವನ್ನೇ ಆ ಕಾಲ್ ಮಾಡಿದ ಮುಗ್ಧ ಸೈಬರ್ ಸೆಕ್ಯುರಿಟಿ ಪರಿಣಿತೆ ನಾಯಕಿ ( ಲೂಸಿಯನ್ ಬ್ಯುಕನನ್)ಯ ಜೊತೆ ಊರೂರು ಸುತ್ತಿ ಕೊಲೆಗಡುಕರಿಂದ, ತಮ್ಮವರಿಂದ ತಪ್ಪಿಸಿಕೊಳ್ಳುವಂತ ಸಂಧರ್ಭ ತಂದಿಡುತ್ತದೆ.
ಇದೊಂದು ಹೈ ಆಕ್ಟೇನ್ ಥ್ರಿಲರ್ ಅಲ್ಲದಿದ್ದರೂ ಕಥೆಯಲ್ಲಿ ಸಾಕಷ್ಟು ಪಂಚ್ ಇದೆ, ಹೆಚ್ಚಾಗಿ ಪತ್ತೇದಾರಿ ತನಿಖೆ ಕೂಲಂಕಷವಾಗಿದೆ. ನಾಯಕ ಮತ್ತು ನಾಯಕಿ ಜೀವವುಳಿಸಿಕೊಳ್ಳಲು ಮತ್ತು ದೇಶಕ್ಕೆ ಬಂದ ದೊಡ್ಡ ಅಪಾಯವನ್ನು ತಡೆಗಟ್ಟಲು ಹೆಚ್ಚೆಚ್ಚು ಕೆದಕಿದಂತೆಲ್ಲ, ರಾಷ್ಟ್ರಾಧ್ಯಕ್ಷ, ಉಪ ಅಧ್ಯಕ್ಷ ಕಚೇರಿಯ ದೊಡ್ಡ ದೊಡ್ಡ ತಲೆಗಳೇ ಅನುಮಾನಾಸ್ಪದವಾಗಿ ಕಂಡು ಬರುತ್ತವೆ. ಅವರ ಜೀವ ತೆಗೆಯಲು ಬಂದ ವಿಲನ್ ಜೋಡಿ ಬೇರೆ ಮಹಾ ಚಾಣಾಕ್ಷರು…
ಹಾಗಾಗಿ, ಯಾರು ಹಿತವರು ಈ ಅಮಾಯಕ ಜೋಡಿಗೆ? ಇದರಲ್ಲಿ ಎರಡನೇ ಸೀಕ್ರೆಟ್ ಸರ್ವೀಸ್ ಜೋಡಿಯೂ ಇದೆ, ಆ ಕಪ್ಪು ಅಮೆರಿಕನ್ ಜೋಡಿ ಏಜೆಂಟರು ( ಫೋಲಾ ಎವನ್ಸ್ ಮತ್ತು ವುಡ್ಸೈಡ್) ಈಗ ಒಂದಾಗಿದ್ದಾರೆ, ಆದರೆ ಅವರಿಗೊಂದು ಬ್ಯಾಕ್ ಸ್ಟೋರಿ ಇದೆ. ಈಗ ಅವರು ಉಪಾಧ್ಯಕ್ಷರ ಮಗಳ ಎಸ್ಕಾರ್ಟ್ ಆಗಿರುವಾಗ ಅವಳ ಅಪಹರಣವಾಗುತ್ತದೆ. ಮೊದಲನೆಯ ಜೋಡಿ ಮತ್ತು ಈ ಎರಡನೇ ಜೋಡಿಯ ಕಥೆಗಳ ಎಳೆಗಳು ಎಲ್ಲೋ ಸಂಗಮವಾಗಿ ನಾಲ್ವರೂ ಒಟ್ಟಾಗಬೇಕಾಗುತ್ತದೆ, ಅಲ್ಲಿಂದ ಕಥೆ ಸರಾಗವಾಗಿ ಹರಿಯುತ್ತದೆ.
ಈ ಸರಣಿ ನೋಡಲು ಸ್ವಲ್ಪ ತಾಳ್ಮೆ ಹೆಚ್ಚು ಬೇಕು. ಅತಿ ವೇಗದ ಘಟನಾವಳಿ ಇಲ್ಲವಾದರೂ, ಆದರೆ ಮೊದಲೇ ಹೇಳಿದಂತೆ ಹಲವು ಎಳೆಗಳ ಮಂದಗತಿಯ ಸರಣಿ ಎನ್ನಬಹುದು.ನನಗಂತೂ ಒಟ್ಟಾರೆ ಚೆನ್ನಾಗಿದೆ ಎನಿಸಿತು, ವಿಪರೀತ ಆಕ್ಷನ್ ಪೀಸುಗಳಿಲ್ಲ, ಅದೇಕೋ ಅಂಥವನ್ನು ನೋಡಿ ನೋಡಿ ಚರ್ವಿತಚರ್ವಣವಾಗಿತ್ತು,
ಹಾಗಾಗಿ ಇಂಥ ಕಥೆ ಇಷ್ಟವಿದ್ದವರು ಇದನ್ನು ನಿಧಾನವಾಗಿ ನೋಡಿ…. 10 ಸಂಚಿಕೆ – 2-3 ದಿನ ನನಗೆ ಬೇಕಾಯಿತು,