“vellai pookal” (Tamil)

(Amazon prime ನಲ್ಲಿ ಲಭ್ಯವಿದೆ)

ಎರಡು ರೇಖೆಗಳು ಸಮಾನಾಂತರವಾಗಿ ಚಲಿಸುತ್ತಿರುತ್ತವೆ. ಆದರೆ ಅವರೆಡೂ ರೇಖೆಗಳು ಒಂದನ್ನೊಂದು ಸಂಧಿಸುವುದಿಲ್ಲ. ಅಕಸ್ಮಾತ್ ಸಂಧಿಸಿದರೆ ಏನಾಗುತ್ತದೆ….?? ಈ ಸಿನೆಮಾ ಆಗುತ್ತದೆ. ಹೇಗೆ? ನೀವೇ ನೋಡಿ..

ರೇಖೆ-1

ಚೆನ್ನೈ ಪೊಲೀಸ್ ಅಧಿಕಾರಿ ‘ರುದ್ರನ್’ ಕೊಲೆ ಕೇಸುಗಳನ್ನು ಲೀಲಾಜಾಲವಾಗಿ ಬಿಡಿಸುವುದರಲ್ಲಿ ಪ್ರವೀಣ. ಸಿನೆಮಾದ ಶುರುವಿನಲ್ಲಿ ಆತ ಬಗೆಹರಿಸುವ ಕೊಲೆ ಕೇಸಿನಿಂದ ಆತ ಎಷ್ಟು ಚಾಣಾಕ್ಷ ಅಂತ ನಮಗೆ ಗೊತ್ತಾಗುತ್ತದೆ. ಆದರೆ ಎಷ್ಟೇ ಚಾಣಾಕ್ಷನಾಗಿರಲಿ ಸೇವೆಯ ಅವಧಿ ಮುಗಿದ ಮೇಲೆ ರಿಟೈರ್ ಆಗಲೇಬೇಕು. ಹಾಗೆಯೇ ರುದ್ರನ್ ಸಹ ತನ್ನ ಸೇವೆಯಿಂದ ನಿವೃತ್ತನಾಗುತ್ತಾನೆ.‌ ನಂತರ ಆತ ತನ್ನ ಮಗ ನೆಲೆಸಿರುವ ದೇಶವಾದ ಅಮೆರಿಕಾಗೆ ಹೋಗುತ್ತಾನೆ. ಮಗ ಅಲ್ಲಿಯ ಬಿಳಿ ಹೆಂಡತಿಯನ್ನು ಮದುವೆ ಆಗಿದ್ದಾನೆಂದು ರುದ್ರನ್ ಕೋಪ ಮಾಡಿಕೊಂಡು ಬಹಳ ವರ್ಷಗಳಿಂದ ಮಗನನ್ನು ಮಾತು ಸಹ ಆಡಿಸಿರುವುದಿಲ್ಲ. ಈಗ ಆ ಮನಸ್ತಾಪ ಮರೆತು ಮಗನ ಜೊತೆ ಕಾಲ ಕಳೆಯಲು ಅಮೆರಿಕಾಗೆ ಹೋಗುತ್ತಾನೆ ರುದ್ರನ್.

ಮಗ-ಸೊಸೆ ಇಬ್ಬರೂ ಆತನನ್ನು ತುಂಬು ಹೃದಯದಿಂದ ಸ್ವಾಗತಿಸುತ್ತಾರೆ. ಆತನ ಸೊಸೆ ಮಾವನಿಗಾಗಿ ತಮಿಳು ಮಾತನಾಡುವುದನ್ನು, ದಕ್ಷಿಣ ಭಾರತದ ತಿಂಡಿ ಮಾಡುವುದು ಕಲಿಯುತ್ತಿರುತ್ತಾಳೆ. ಆದರೂ ಯಾಕೋ ರುದ್ರನ್ ತನ್ನ ಮಗನನ್ನು ಒಪ್ಪಿಕೊಂಡಷ್ಟು ಮುಕ್ತವಾಗಿ ಸೊಸೆಯನ್ನು‌ ಒಪ್ಪಿಕೊಳ್ಳುವುದಿಲ್ಲ. ಸೊಸೆ ಸೋಲೊಪ್ಪಿಕೊಳ್ಳದೇ ದಿನನಿತ್ಯವೂ ಮಾವನನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿಯೇ ಇರುತ್ತಾಳೆ.

ರೇಖೆ-2

ಒಬ್ಬ ಚಿಕ್ಕ ಹುಡುಗಿ…! ತನ್ನ ಹಾಸಿಗೆ ಹಿಡಿದ ತಾಯಿ ಮತ್ತು ತನ್ನನ್ನು ಸದಾ ಹಿಂಸಿಸುವ ತಂದೆಯೊಂದಿಗೆ ವಾಸಿಸುತ್ತಿರುತ್ತಾಳೆ. ಅವಳ ತಂದೆ ಡ್ರಗ್ ವ್ಯವಹಾರವಲ್ಲದೇ, ಹೆಣ್ಣಿನ ವ್ಯಾಪಾರ ಸಹ ಮಾಡುತ್ತಿರುತ್ತಾನೆ. ಅವನಿಗೆ ಮಾನಸಿಕವಾಗಿ ಏರುಪೇರಾದಾಗಲೆಲ್ಲಾ ಎದ್ದು ನಡೆದಾಡಲಾಗದ ತನ್ನ ಹೆಂಡತಿಯನ್ನು ವಿಪರೀತ ಹಿಂಸಿಸುತ್ತಿರುತ್ತಾನೆ. ಆ ಹುಡುಗಿ ಅದನ್ನು ನೋಡುತ್ತಾ ಬೆಳೆಯುತ್ತಿರುತ್ತಾಳೆ. ಸದಾ ಹಿಂಸೆಯ ನೆರಳಿನಲ್ಲಿಯೇ ಬೆಳೆಯುತ್ತಿರುವ ಆ ಪುಟ್ಟ ಹುಡುಗಿಯ ಹೃದಯ ಸಹ ತನ್ನೊಳಗೇ ತನಗರಿವಿಲ್ಲದೇ ತಾನೂ ಹಿಂಸಾತ್ಮಕವಾಗುತ್ತಾ ಹೋಗುತ್ತಿರುತ್ತದೆ. ಆಕೆ ಎಷ್ಟು ಬಾರಿ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ತಂದೆಯ ಕೈಲಿ ಸಿಕ್ಕಿಕೊಂಡು ವಾಪಸ್ ಬರುತ್ತಿರುತ್ತಾಳೆ. ತಾನಿರುವ ಪರಿಸ್ಥಿತಿಗೆ ಹೊಂದಿಕೊಳ್ಳಲಾಗದೇ, ಹೊಸ ಪರಿಸರಕ್ಕೆ ಕಾಲಿಡಲಾಗದೇ ಆಕೆಯ ಅಸಹಾಯಕತೆ ಮಿತಿಮೀರಿ ಆಕೆಯೊಳಗೆ ಕಿಚ್ಚು ಹುಟ್ಟಿಸುತ್ತದೆ. ಯಾರೇ ಆಗಲಿ ತಮ್ಮ ಮೇಲಿನ ದೌರ್ಜನ್ಯವನ್ನು ಎಷ್ಟು ದಿನ ಅಂತ ತಡೆಯುತ್ತಾರೆ? ಒಂದಲ್ಲ ಒಂದು ದಿನ ಸಿಡಿದು ಬೀಳುತ್ತಾರೆ. ಹಾಗೆಯೇ ಈ ಹುಡುಗಿಯೂ ಸಹಿಸಲಾಗದ ಅಸಹಾಯಕತೆಯಲ್ಲಿ ಅಂದು ತನ್ನ ತಂದೆಯನ್ನೇ ಕೊಲ್ಲುವ ನಿರ್ಧಾರ ಮಾಡುತ್ತಾಳೆ…

ತಂದೆಯ ಕಾರಿ‌ನ ಸದ್ದಿನಿಂದ ಆತ ಮನೆಗೆ ಬಂದನೆಂದು ಗೊತ್ತಾಗುತ್ತದೆ. ಕೂಡಲೇ ಬಾಗಿಲಿಗೆ ಎದುರಾಗಿ ಆತನದ್ದೇ ಪಿಸ್ತೂಲ್ ಹಿಡಿದು ನಿಲ್ಲುತ್ತಾಳೆ. ಎಂದಿನಂತೆ ನಿರಾಳವಾಗಿ ಮನೆಯೊಳಗೆ ಬರುವ ಆತನಿಗೆ ತನ್ನ ಹಿಂಸೆಯಿಂದಲೇ ಪ್ರೇರಣೆಗೊಂಡು ಆ ಪುಟ್ಟ ಹುಡುಗಿಯೊಳಗೆ ಮತ್ತೊಂದು ಹಿಂಸಾತ್ಮಕ ಜೀವಿ ಹುಟ್ಟಿರುತ್ತದೆ ಅಂತ ಗೊತ್ತಿರುವುದಿಲ್ಲ. ಆದರೆ ಒಳಗೆ ಕಾಲಿಡುವ ಆತನನ್ನು ಸ್ವಾಗತಿಸುವುದು ಆ ಪುಟ್ಟ ಹುಡುಗಿಯ ಪಿಸ್ತೂಲ್ !!!! ಆಕೆ ಆತನನ್ನು ಕೊಂದಳೇ?? ಅಲ್ಲಿಂದ ತಪ್ಪಿಸಿಕೊಂಡಳೇ?? ಮುಂದೆ ನೋಡೋಣ.

ರೇಖೆ-1

ಈಗ ಮೊದಲ ರೇಖೆಗೆ ಮರಳೋಣ. ರುದ್ರನ್ ಅಮೆರಿಕಾದಲ್ಲಿ ಮಗನೊಡನೆ ಚೆನ್ನಾಗಿಯೇ ಸಮಯ ಕಳೆಯುತ್ತಿರುತ್ತಾನೆ. ಆತನಿಗೊಬ್ಬ ಭಾರತಿ ಎಂಬ ರಿಟೈರ್ಡ್ ಬ್ಯಾಂಕ್ ಆಫೀಸರ್ ಸಹ ಜೊತೆಗೆ ಸಿಗುತ್ತಾನೆ. ಪ್ರೀತಿಸುವವರ ಜೊತೆ ಜೀವನ ಸ್ಮೂತ್ ಆಗಿ ನಡೆಯುತ್ತಿರುತ್ತದೆ.

ಅಷ್ಟರಲ್ಲಿ….

ಪಕ್ಕದ ಮನೆಯ ಹೆಂಗಸಿನ ಅಪಹರಣವಾಗುತ್ತದೆ.

ಆಗ ರುದ್ರನ್ ಒಳಗಿನ ಪೊಲೀಸ್ ಜಾಗೃತನಾಗುತ್ತಾನೆ. ಆದರೆ ಇದು ಭಾರತವಲ್ಲ ಅಮೆರಿಕಾ ಅಂತ ಮಗ ಹೇಳಿದರೂ ಕೇಳದೇ ರುದ್ರನ್ ತನ್ನ ಮಿತ್ರನಾದ ಭಾರತೀ ಜೊತೆಗೆ ಕೊಲೆಯ ವಿಚಾರಣೆಗೆ ಇಳಿಯುತ್ತಾನೆ. ಆದರೆ ಈ ಅಪಹರಣ ಯಾರು ಮಾಡಿದ್ದಾರೆ ಅಂತ ಗೊತ್ತಾಗುವ ಮೊದಲೇ ಮತ್ತೊಬ್ಬ ಹುಡುಗನ ಅಪಹರಣವಾಗುತ್ತದೆ. ನಮ್ಮದೇ ಏರಿಯಾದಲ್ಲಿ ಅಪಹರಣವಾಗುತ್ತಿದ್ದರೆ ನಾವು ನೆಮ್ಮದಿಯಿಂದ ಇರಲು ಸಾಧ್ಯವೇ? ಇಂದು ಅವರು, ನಾಳೆ ನಮ್ಮವರೇ ಅಪಹರಣ ಆಗಬಹುದಲ್ಲವೇ?

ಯೆಸ್…. ನಿಜ. ಒಂದು ದಿನ ರುದ್ರನ್ ಮಗ ಸಹ ಅಪಹರಣವಾಗುತ್ತಾನೆ. ಯಾರನ್ನೋ ಹುಡುಕಲು ಹೊರಟ ರುದ್ರನಿಗೆ ತನ್ನ ಮಗನನ್ನೇ ಹುಡುಕುವ ಸಂಕಷ್ಟ ಎದುರಾಗುತ್ತದೆ. ಈ ಅಪಹರಣ ಯಾರು ಮಾಡುತ್ತಿದ್ದಾರೆ, ಯಾಕಾಗಿ ಮಾಡುತ್ತಿದ್ದಾರೆ ಅಂತ ಪೊಲೀಸರಿಗೆ ಗೊತ್ತಾಗುವುದೇ ಇಲ್ಲ. ಈ ಅಪಹರಣ ದುಡ್ಡಿಗಾಗಿ ನಡೆಯುತ್ತಿವೆಯೇ ಅಥವಾ ಯಾವುದೋ ಸೇಡು ತೀರಿಸಿಕೊಳ್ಳಲಿಕ್ಕಾಗಿಯೇ ಅಂತಲೂ ಗೊತ್ತಾಗುವುದಿಲ್ಲ.‌

ಆಗ ಮೊಟ್ಟಮೊದಲು ಅಪಹರಣವಾಗಿದ್ದ ನೆರೆಮನೆಯಾಕೆಯ ಶವ ಸಿಗುತ್ತದೆ.‌ ಅದನ್ನೇ ಮತ್ತಷ್ಟು ಕೂಲಂಕುಷವಾಗಿ ತನಿಖೆ ಮಾಡಿದಾಗ ಎಲ್ಲಾ ಅಪಹರಣಗಳೂ ಕಸ ತೆಗೆದುಕೊಂಡು ಹೋಗಲು ಟ್ರಕ್ ಬರುವ ದಿನವಾದ ಬುಧವಾರವೇ ನಡೆದಿರುವುದು ಅಂತ ಗೊತ್ತಾಗುತ್ತದೆ. ರುದ್ರನ್ ಮಗನ ಅಪಹರಣ ಕೂಡ ಬುಧವಾರವೇ ನಡೆದಿರುತ್ತದೆ. ಈ ಕ್ಲೂ ಇಟ್ಟುಕೊಂಡು ಕಸ ಎತ್ತುವವರ ಬಳಿ ವಿಚಾರಿಸಿದಾಗ ಕೇಸ್ ಅನ್ನು ಮುಂದುವರೆಸಲು ಒಂದು ಚಿಕ್ಕ ಸುಳಿವೂ ಸಹ ಸಿಗದಂತೆ ಆಗುತ್ತದೆ.

ಆಗ ರುದ್ರನ್ ಗೆ ಒಂದು ವಿಷಯ ನೆನಪಾಗುತ್ತದೆ. ಏನೆಂದರೆ ತನ್ನ ಮಗ ಕಾಣೆಯಾಗುವ ಮೊದಲು ಓಡಿಸ್ಸಿ ಎಂಬ ಸ್ಥಳಕ್ಕೆ ಹೋಗಿದ್ದ ಎಂದು ಗೊತ್ತಾಗುತ್ತದೆ. ಆ ಸ್ಥಳ‌ ಯಾವುದೆಂದರೆ ಆ ಪುಟ್ಟ ಹುಡುಗಿಯೂ ತನ್ನ ಅಸಹಾಯಕ ತಾಯಿಯೊಂದಿಗೆ ವಾಸಿಸುತ್ತಿರುವ ಸ್ಥಳವಾಗಿರುತ್ತದೆ. ರುದ್ರನ್ ಕೂಡಲೇ ಅತ್ತ ಕಾರ್ ಓಡಿಸುತ್ತಾನೆ.

ಅದೇ ಸಮಯದಲ್ಲಿ ರೇಖೆ-2 ರ ಆ ಹುಡುಗಿಯ ತಂದೆ ಸಹ ಮನೆಗೆ ಹೋಗುತ್ತಿರುತ್ತಾನೆ. ಮೊದಲೇ ಹೇಳಿದ ಹಾಗೆ ಆ ಹುಡುಗಿ ತನಗಾಗುತ್ತಿರುವ ಹಿಂಸೆಯಿಂದ ರೋಸತ್ತು ಹೋಗಿ ತಂದೆಯನ್ನು‌ ಕೊಲ್ಲಲು ಪಿಸ್ತೂಲ್ ಹಿಡಿದು ನಿಂತಿರುತ್ತಾಳೆ. ರುದ್ರನ್ ಮತ್ತು ಆಕೆಯ ತಂದೆ ಇಬ್ಬರ ಕಾರುಗಳೂ ಮನೆಗೆ ಹತ್ತಿರವಾಗುತ್ತಿರುತ್ತವೆ. ಆಕೆ ಸ್ಟಡಿಯಾಗುತ್ತಾಳೆ. ಯಾವುದೇ ಸೆಕೆಂಡಿಗೆ ಮನೆ ಬಾಗಿಲು ತೆರೆಯಬಹುದು. ತೆರೆದ ಕೂಡಲೇ ಗುಂಡು ಹಾರಿಸಬೇಕೆಂದು ಕಾಯುತ್ತಿರುತ್ತಾಳೆ.

ಎರಡೂ ರೇಖೆಗಳಾದ ರುದ್ರನ್ ಮತ್ತು ಆ ಪುಟ್ಟ ಹುಡುಗಿಯ ತಂದೆ ಒಟ್ಟಿಗೆ ಮನೆಯ ಬಳಿ ಬಂದು ಕಾರಿನಿಂದ ಒಟ್ಟಿಗೆ ಕೆಳಗಿಳಿದು ಮನೆಯ ಕಡೆ ಹೆಜ್ಜೆ ಹಾಕುತ್ತಾರೆ. ಎರಡೂ ರೇಖೆಗಳು ಸಂಧಿಸುವ ಸಮಯ ಇದು… ಉಸಿರು ಬಿಗಿ ಹಿಡಿದುಕೊಳ್ಳಿ…..

ಈಗ ಆಕೆ ಯಾರ ಮೇಲೆ ಗುಂಡು ಹಾರಿಸಬಹುದು?

ಆ ಗುಂಡಿಗೆ ತಂದೆ ಸಾಯುತ್ತಾನಾ? ಅಥವಾ ರುದ್ರನ್ ಸಾಯುತ್ತಾನಾ?

ಇದಕ್ಕೂ ಆ ಅಪಹರಣಗಳಿಗೂ ಏನು ಸಂಬಂಧ?

ರುದ್ರನ್ ಮಗನನ್ನು ಯಾರು ಅಪಹರಿಸಿರುತ್ತಾರೆ? ಈಗವನು ಎಲ್ಲಿರುತ್ತಾನೆ?

ಎಲ್ಲಕ್ಕಿಂತ ಮುಖ್ಯವಾಗಿ ಏನಿದು ಎರಡು ರೇಖೆಯ ಪ್ರಯಾಣದ ಕಥೆ? ಅವು ಒಂದನ್ನೊಂದು ಭೇಟಿಯಾದಾಗ ಏನಾಯ್ತು?

ಇದುವರೆಗೂ ಬಹುಶಃ ಯಾರೂ ಊಹಿಸಿರದ ಸ್ಪೆಷಲ್ ಟರ್ನಿಂಗ್ ಪಾಯಿಂಟ್ ಇಲ್ಲಿ ಬರುತ್ತದೆ.. ಅದೇನೆಂದು ಸಿನೆಮಾ ನೋಡಿಯೇ ತಿಳಿದುಕೊಳ್ಳಿ.

ಆದರೆ…..

ಹಿಂಸೆ ಎಂದಿಗೂ ಹಿಂಸೆಯನ್ನೇ ಹುಟ್ಟು ಹಾಕುತ್ತದೆ ಹೊರತೂ ಪ್ರೀತಿಯನ್ನಲ್ಲ. ಹಿಂಸೆಗೆ ಒಳಗಾದ ವ್ಯಕ್ತಿ ತನಗರಿವಿಲ್ಲದೇ ತಾನೂ ಸಹ ಹಿಂಸೆಗೆ ಇಳಿಯುತ್ತಾನೆ. ಅದರಲ್ಲಿಯೂ ಪುಟ್ಟಮಕ್ಕಳು ಬೆಳೆಯುವ ಪರಿಸರ ಹಿಂಸಾತ್ಮಕತೆಯಿಂದ ಕೂಡಿದ್ದರೆ ಏನಾಗುತ್ತದೆ ಅಂತ ಈ ಸಿನೆಮಾ ನೋಡಿದಾಗ ಅರ್ಥವಾಗುತ್ತದೆ. ಪುಟ್ಟ ಮಕ್ಕಳಿಗೆ ಉತ್ತಮ ಪರಿಸರ ಕಲ್ಪಿಸುವುದು ತಂದೆ-ತಾಯಿಯರ ಕರ್ತವ್ಯ. ಇಲ್ಲದಿದ್ದರೆ ಆಕೆ ಈ ಪುಟ್ಟ ಹುಡುಗಿಯಂತೆ ಆಗಿ ಕೊಲೆಗಾರಳಾಗಬೇಕಾಗುತ್ತದೆ.

ಹೌದೂ….

ಆ ಹುಡುಗಿ ಕೊಂದಿದ್ದು ಯಾರನ್ನು..?

ತಿಳಿಯಲು ಸಿನೆಮಾ ನೋಡಿ. A must watch movie.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply