27/11/2022

CHITRODYAMA.COM

SUPER MARKET OF CINEMA NEWS

ಎಲ್ಲೆಲ್ಲೂ ರಾಕಿ ಭಾಯ್ ದೇ ಹವಾ

1 min read

ಒಳ್ಳೆಯ ಶಿಲ್ಪಿಯೊಬ್ಬನಿಗೆ ಅತ್ಯುತ್ತಮ ಗುಣಮಟ್ಟದ ಉಳಿ ಮತ್ತು ಕಲ್ಲು ದೊರೆತರರೇ ಹೇಗಿರಬಹುದು? ಖಂಡಿತ ಅವನು ಇಡೀ ವಿಶ್ವವೇ ಕೊಂಡಾಡುವಂತಹ ಆಕೃತಿಯನ್ನು ಕೆತ್ತಬಲ್ಲ. ಅಂತಹ ಅತ್ಯುತ್ತಮ ದೃಶ್ಯ ಕಾವ್ಯ ಕಲಾಕೃತಿಯೇ “ಕೆ.ಜಿ.ಎಫ್” ಸರಣಿಯ ಸಿನಿಮಾಗಳು. ಕೆ.ಜಿ.ಎಫ್.೧ ಅನ್ನು ಇಡೀ ವಿಶ್ವವೇ ಬೆರಗಾಗಿ ನೋಡಿತ್ತು. ಕೆ.ಜಿ.ಎಫ್.೧ ರ ಮುಂದುವರೆದ ಸರಣಿ ಹೇಗಿದ್ದೀತು? ಎಂಬ ಪ್ರಶ್ನೆ ಪ್ರತೀ ಸಿನಿರಸಿಕನಿಗಿತ್ತು. ಮೊದಲ ಭಾಗವನ್ನು ಅದ್ಭುತವಾಗಿ ಮೂಡಿಸಿ, ಎರಡನೇ ಭಾಗವನ್ನು ಸಂಪೂರ್ಣ ನೆಲಕಚ್ಚಿಸಿರುವ ನೂರಾರು ಸಿನಿಮಾಗಳ ಉದಾಹರಣೆ ನಮ್ಮ ಮುಂದಿದೆ. ಹಾಗಾಗಿ ಒಂದು ವೇಳೆ ಕೆ.ಜಿ.ಎಫ್-೨ ಸಿನಿಮಾ ಚನ್ನಾಗಿ ಮೂಡಿಬರದಿದ್ದರೆ? ಎಂಬ ಒಂದು ಚಿಕ್ಕ ಆತಂಕ ಸಿನಿ ಪ್ರೇಮಿಗಳಿಗಿತ್ತು. ಆದರೆ ಪ್ರಶಾಂತ್ ನೀಲ್ ಅಂಡ್ ಟೀಮ್ ನ ಅದ್ಭುತವಾದ ಕೆಲಸದ ಪ್ರತಿಫಲ ಇಡೀ ವಿಶ್ವದಾದ್ಯಂತ ಒಂದಲ್ಲ, ಎರಡಲ್ಲ, ಸಾವಿರಾರು ತೆರೆಗಳಲ್ಲಿ ಕನ್ನಡ ಸಿನಿಮಾ ಒಂದು ಬಿಡುಗಡೆಯಾಗಿದೆ.
ಹಲವು ವಿಶೇಷಗಳು ಮತ್ತು ವಿಷಯಗಳು ಒಗ್ಗೂಡಿದರೆ ಹೇಗಿರಬಹುದು ಎಂಬುದಕ್ಕೆ ಕೆ.ಜಿ.ಎಫ್-೨ ಎಂದೆಂದಿಗೂ ಉದಾಹರಣೆಯಾಗಿ ನಿಲ್ಲಬಹುದು. ಇಡೀ ಚಿತ್ರದ ಮುಖ್ಯ ಜೀವಾಳವೇ ಮೇಕಿಂಗ್. ಕಥೆ, ಚಿತ್ರಕತೆ, ಹಿನ್ನಲೆ, ಕ್ಯಾಮರಾದ ನೆರಳು-ಬೆಳಕಿನ ಆಟ, ಪಾತ್ರಕ್ಕೆ ಜೀವ ಎರೆದಂತೆ ನಟಿಸಿರುವ ಹಿರಿಯ ನಂತರ ಹಿಂಡು.. ಇದನ್ನು ಗ್ರಾಂಡ್ ಸಕ್ಸಸ್ ಸಿನಿಮಾವನ್ನಾಗಿ ಮಾಡಿದೆ. nijavagiyoo ಕೆ.ಜಿ.ಎಫ್. ನಲ್ಲೇ ಚಿತ್ರೀಕರಿಸಿದ್ದರೇನೋ ಎಂಬಷ್ಟರ ಮಟ್ಟಿಗೆ ಇಲ್ಲಿನ ಸೆಟ್ಟುಗಳು ನಮ್ಮನ್ನು ನಂಬಿಸುತ್ತವೆ. ಚಿತ್ರ ಶುರುವಾದ ಮೊದಲ ನಿಮಿಷದಿಂದ ಕಡೆಯ ಕ್ರೆಡಿಟ್ಸ್ ವರೆಗೂ ಪ್ರತಿಯೊಂದು ಫ್ರೆಮ್ ನಲ್ಲಿಯೂ ಪ್ರೇಕ್ಷರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಕಲಾ ನಿರ್ದೇಶಕರು ಕೆಲಸ ಮಾಡಿದ್ದಾರೆ. ಪ್ರಶಾಂತ್ ನೀಲ್ ಅವರು ಕತೆಯನ್ನು ಹೇಳಿರುವ ರೀತಿಯಂತೂ ಅದ್ಭುತ. ಪ್ರತಿ ಕ್ಷಣವೂ ಪ್ರೇಕ್ಷಕನನ್ನು ಸೀಟಿನ ತುದಿಯ ಮೇಲೆ ಕೂರಿಸುವ ಕೆಲಸ ಮಾಡಿದ್ದಾರೆ. ಸಮಯವನ್ನು ತುಂಬಲೆಂದೇ ಇರಬಹುದಾದ ಅಸಂಬದ್ಧ ಹಾಡು, ಕುಣಿತ ಗಳು ಇಲ್ಲ. ಫ್ರೆಮ್ ಟು ಫ್ರೆಮ್ ಕತೆಯನ್ನು ಬಿಟ್ಟರೆ ಬೇರೆಲ್ಲೂ ಎಳೆದುಕೊಂಡು ಹೋಗದೆ ಅವರು ಕತೆಯನ್ನು ಹೇಳಿವೆ ಶೈಲಿಗೆ ಒಂದು ಹ್ಯಾಟ್ಸ್ ಆಫ್. ಸುತ್ತಿ ಬಳಸಿ ಕತೆ ಹೇಳುವುದು, ಪ್ರೇಕ್ಷಕನನ್ನು ಕನ್ಫಯೂಸ್ ಮಾಡುವುದು, ನಿಧಾನವಾಗಿ ಕತೆ ಸಾಗುವುದು ಅಥವಾ ಯಾವುದೇ ರೀತಿಯ ಟೈಮ್ ಕಿಲ್ಲಿಂಗ್ ಸಂಗತಿಗಳಿಗೂ ನನ್ನ ಸಿನಿಮಾದೊಳಗೆ ಪ್ರವೇಶವಿಲ್ಲ ಎಂದು ಸಾರಾಸಗಟಾಗಿ ಹೇಳಿದಂತಿದೆ ಪ್ರಶಾಂತ್ ನೀಲ್ ಅವರ ಶೈಲಿ.
ಕೆ.ಜಿ.ಎಫ್. ೧ ರಲ್ಲಿ ಬಾಂಬೆಯ ರೌಡಿಯಾಗಿದ್ದ ರಾಖಿ ಭಾಯ್ ಸ್ಟೈಲ್ ಅಂತೂ ರಾಜನಾಗಿ ಪಟ್ಟವೇರಿದ ಮೇಲೆ ಪೂರ್ತಿ ಬದಲಾಗಿದೆ. ಸ್ಟೈಲ್, ಸ್ಟೈಲ್, ಸ್ಟೈಲ್… ಸ್ಟೈಲಿಶ್ ಯಂಗ್ ಅಂಡ್ ಹ್ಯಾಂಡ್ಸಮ್ ಗ್ಯಾಂಗ್ ಸ್ಟರ್ ನ ಸ್ಟೈಲ್ ನಲ್ಲಿ ರಾಖಿ ಭಾಯ್ ಅನ್ನು ನೋಡುವುದೇ ಚಂದ. ನಾಯಕನ ಪಕ್ಕ ಇರುವ ನಾಯಕಿ ಶ್ರೀನಿಧಿ ಶೆಟ್ಟಿಯ ಅಭಿನಯ ಕೂಡ ಸಿಂಪ್ಲಿ ಸುಪರ್ಬ್.
ಇನ್ನು ಅಧೀರ ಪಾತ್ರದ ಸಂಜಯ್ ದತ್ ಬಗ್ಗೆಯಂತೂ ಎಷ್ಟು ಹೇಳಿದರೂ ಕಡಿಮೆಯೇ. ಅಧೀರ ಎಂಬ ಖಡಕ್ ವಿಲನ್ ಪಾತ್ರಕ್ಕೆ ಒಂದು ಗ್ರಾಂ ಕೂಡ ಮೋಸವಾಗದ ಹಾಗೆ ಸರಿಯಾದ ಲೆಕ್ಕಾಚಾರದ ತೂಕದಲ್ಲಿ ಸಂಜಯ್ ದತ್ ಅಭಿನಯಿಸಿದ್ದಾರೆ. ರಮಿಕಾ ಸೆನ್ ಪಾತ್ರದ ರವೀನಾ ಟಂಡನ್ ಹೆಚ್ಚಾ? ಅಧೀರದ ಸಂಜಯ್ ದತ್ ಹೆಚ್ಚಾ? ನಾನಾ? ನೀನಾ? ಎಂಬಷ್ಟರಮಟ್ಟಿಗೆ ಸ್ಪರ್ಧೆಯೊಡ್ಡುವ ಮಟ್ಟಿಗೆ ಇವರಿಬ್ಬರ ಅಭಿನಯ ಮೂಡಿಬಂದಿದೆ. ಮೊದಲ ಭಾಗದಲ್ಲಿ ಅನಂತ್ ನಾಗ್ ಕೆ.ಜಿ.ಎಫ್. ಕತೆ ಹೇಳಿದರೆ, ಎರಡನೇ ಭಾಗದಲ್ಲಿ ಅನಂತ್ ನಾಗ್ ಮಗ ಪ್ರಕಾಶ್ ರಾಯ್ ಕೆ.ಜಿ.ಎಫ್. ಕತೆಯನ್ನು ಮುಂದುವರೆಸುತ್ತಾರೆ.
ಸಿನಿಮಾದ ಸ್ಕೇಲ್ ಎಷ್ಟು ದೊಡ್ಡದಾಗಿರೋಬೇಕೋ ಅದಕ್ಕೂ ತುಸು ಹೆಚ್ಚೇ ಬೇಕಾಗುವಷ್ಟು ಸಂಪನ್ಮೂಲಗಳನ್ನು ವಿಜಯ್ ಕಿರಾಗಂದೂರ್ ದೊರಕಿಸಿಕೊಟ್ಟಿದ್ದಾರೆ. ಇನ್ನು ಸಿನಿಮಾದ ಮತ್ತೊಂದು ಬಹು ಮುಖ್ಯ ದೊಡ್ಡ ಹೈಲೈಟ್ ಎಂದರೆ ಕ್ಯಾಮೆರಾ ಮತ್ತು ಹಿನ್ನಲೆ. ರವಿ ಬಸ್ರೂರ್ ಅವರ ಮ್ಯೂಸಿಕ್ ಚೆನ್ನಾಗಿಲ್ಲ ಎಂದು ಎತ್ತಿ ತೋರಿಸುವಂತಹ ಒಂದೇ ಒಂದು ಸೆಕೆಂಡ್ ಅವಧಿಯ ದೃಶ್ಯವನ್ನೂ ಕೂಡ ನೀವು ಕಂಡುಹಿಡಿಯಲಾರಿರಿ. ಇವರೆಲ್ಲರಿಗಿಂತ ನಾನೇನು ಕಡಿಮೆಯಿಲ್ಲ ಎಂದು ಭುವನ್ ಗೌಡ ಕ್ಯಾಮರಾ ಮೂಲಕ ಹೇಳಿದರೆ, ನನ್ನೂ ಕೂಡ ಕಡಿಮೆಯೇನಿಲ್ಲ ಎಂದು ಉಜ್ವಲ್ ಕುಲ್ಕರ್ಣಿ ಎಡಿಟಿಂಗ್ ಮೂಲಕ ಹೇಳಿದ್ದಾರೆ.
ಕೆ.ಜಿ.ಎಫ್. ನ ಸುಲ್ತಾನನಾದ ಮೇಲೆ ರಾಖಿ ಭಾಯ್ ಸುತ್ತ ಇರುವ ವಿಷಸರ್ಪಗಳು ಅವನನ್ನು ಹೇಗೆ ಕುಟುಕುತ್ತವೆ? ಆ ವಿಷ ರಾಖಿ ಭಾಯ್ ದೇಹಕ್ಕೆ ಹತ್ತೀತೆ?? ಕೆ.ಜಿ.ಎಫ್. ೩ ಬರುವ ಸಾಧ್ಯತೆಯಿದೆಯೇ? ಕೆ.ಜಿ.ಎಫ್.ನ ಅಧಿಪತಿಯಾಗಬೇಕು ಎಂಬ ಬಯಕೆ ರಾಖಿ ಭಾಯ್ ಗೆ ಬಂದದ್ದಾದರೂ ಏಕೆ? ಈ ಎಲ್ಲಾ ಪ್ರಶ್ನೆಗಳಿಗೂ ಸಿನಿಮಾ ಮಂದಿರವೇ ನಿಮಗೆ ಉತ್ತರ ನೀಡುತ್ತದೆ. ಕೆ.ಜಿ.ಎಫ್. ೨ ಒಂದು ಸುಂದರ ದೃಶ್ಯ ಕಾವ್ಯವಾಗಿರುವುದರಿಂದ ಕತೆ ಕೇಳುವುದು ಮಜಾ ನೀಡಲಾರದು. ದೊಡ್ಡ ತೆರೆಯ ಮೇಲೆಯೇ ನೋಡಿ ಸವಿಯಬಹುದಾದ ಸಿನಿಮಾ ಇದು. ಇಡೀ ವಿಶ್ವಕ್ಕೆ ವಿಶ್ವವೇ ನಿಬ್ಬೆರಗಾಗಿ ನೋಡುವಂತಹ ಸಿನಿಮಾ ಕನ್ನಡ ಸಿನಿಮಾರಂಗದಿಂದ ಬಂದಿದೆ. ಹೋಗಿ ಸಿನಿಮಾ ನೋಡಿ. ಸಿಂಪಲ್ ಆಗಿ ಒಂದು ಮಾತಲ್ಲಿ ಹೇಳುವುದಾದರೆ ರಾಖಿ ಭಾಯ್ ಗೆದ್ದಿದ್ದಾನೆ. ಗೆದ್ದಿದ್ದಾನೆ ಅನ್ನುವುದಕ್ಕಿಂತ ಪ್ರಚಂಡ ವಿಜಯವನ್ನು ಸಾಧಿಸಿದ್ದಾನೆ. ಸಲಾಂ ರಾಖಿ ಭಾಯ್.

Leave a Reply

Copyright © All rights reserved. | Newsphere by AF themes.