1986ರ ಎಂ ಎಸ್ ರಾಜಶೇಖರ್ ನಿರ್ದೇಶನದಲ್ಲಿ ಹೊರಬಂದ ಈ ಗೋಲ್ಡನ್ ಜ್ಯೂಬಿಲಿ ಆಚರಿಸಿದ ಚಿತ್ರ ಜನಪ್ರಿಯ ಲೇಖಕಿ ಶ್ರೀಮತಿ ಎಚ್ ಜಿ ರಾಧಾದೇವಿ ಅವರ ಅನುರಾಗದ ಅಂತಃಪುರ ಕಾದಂಬರಿ ಆಧಾರಿತ.
ಶೇಕ್ಸ್‌ಪಿಯರನ ಟೇಮಿಂಗ್ ಆಫ್ ದಿ ಶ್ರ್ಯೂ ಅದೆಷ್ಟು ಬಾರಿ ಬೇರೆ ಬೇರೆ ರೂಪಗಳಲ್ಲಿ ಕಥೆ, ನಾಟಕ ಮತ್ತು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವುದೋ ಅದಕ್ಕೆ ಲೆಖ್ಖವಿಲ್ಲ.
ಇದೂ ದುರಹಂಕಾರಿ ಫ್ಯಾಕ್ಟರಿ ಎಂ ಡಿ ಮಾಧವಿಗೆ ಬುದ್ಧಿ ಕಲಿಸುವ ಚಿತ್ರ. ಆಕೆಯ ಸೆಕ್ರೆಟರಿಯಾಗಿ ಗೀತಾ ಮಾಧವಿಗೆ ಸೆಕೆಂಡ್ ಫಿಡೆಲ್!
ಅಣ್ಣಾವ್ರು ಮಾತು ನಡೆ ನುಡಿ ಫೈಟು ಅಮ್ಮನ ಮೇಲಿನ ಭಕ್ತಿ ಎಲ್ಲಾ ಬಹಳ ಚಂದ.
ನಂಜನಗೂಡಿನ ದೇವಸ್ಥಾನದಲ್ಲಿ ಉರುಳುಸೇವೆ ಮಾಡುವ, ಎಡಗೈ ಸರಿಯಿಲ್ಲದ, ನಡೆಯಲಾಗದ ಅಮ್ಮನನ್ನು ಎತ್ತಿಕೊಂಡು ಹೋಗುವ ಅಣ್ಣಾವ್ರು ಉಪೇಂದ್ರ ಕುಮಾರ್ ಸಂಗೀತ ನಿರ್ದೇಶನದಲ್ಲಿ ‘ಶ್ರೀಕಂಠ ವಿಷಕಂಠ’ ಹಾಡುತ್ತಾರೆ.
ಮಾಧವಿಯ ತಂದೆ ಕೆ ಎಸ್ ಅಶ್ವತ್ಥ್ ಅವರ ಬಳಿ ಉದ್ಯೋಗ ಸಂಪಾದಿಸುತ್ತಾನೆ ಶಂಕರ್ (ರಾಜ್ಕುೆಮಾರ್).
ಮೊದಲ ಕ್ಷಣದಿಂದ ಘರ್ಷಣೆ ಆರಂಭವಾಗುತ್ತದೆ ಅಣ್ಣಾವ್ರು ಮತ್ತು ಆಶಾ(ಮಾಧವಿ) ನಡುವೆ.
ಉಮಾ (ಗೀತಾ) ಅಣ್ಣಾವ್ರ ಜೊತೆಗೆ ಲವ್ ಕನಸು ಕಾಣುತ್ತಾಳೆ(ಅಣ್ಣಾವ್ರು ಮತ್ತು ಜಾನಕಿಯಮ್ಮನವರ ಧ್ವನಿಗಳಲ್ಲಿ’ ಗಂಗಾ ಯಮುನಾ ಸಂಗಮ’)
ಅಣ್ಣಾವ್ರು ಮಾಧವಿಯ ಕನಸಲ್ಲೂ ‘ನೀ ನಡೆದರೇ ಸೊಗಸು’ ಹಾಡುತ್ತಾರೆ.
ಫ್ಯಾಕ್ಟರಿಯಲ್ಲಿ ಸತೀಶ್, ಸದಾಶಿವ ಬ್ರಹ್ಮಾವರ, ಶನಿ ಮಹದೇವಪ್ಪ, ತೂಗುದೀಪ ಶ್ರೀನಿವಾಸ್ ಗುರುತಿಗೆ ಸಿಕ್ಕಿದರು. ಮನೆಯಲ್ಲಿ ಅಡುಗೆಯಾತ ಅಶ್ವತ್ಥ ನಾರಾಯಣ. ಪರ್ವತವಾಣಿ, ಶೃಂಗಾರ್ ನಾಗರಾಜ್, ಕೆ. ಎಸ್. ಶ್ರೀಶೈಲನ್ ಇದ್ದಾರೆ.
ಕೆನ್ನೆಗೆ ಬಾರಿಸಿದ ಅಣ್ಣಾವ್ರನ್ನು ಅವಮಾನ ಮಾಡಲು ಅವರನ್ನು ಮದುವೆ ಆಗುತ್ತಾಳೆ ಮಾಧವಿ. ಅವಳನ್ನು ಅಣಕಿಸಿ ಪಿಯಾನೊ ನುಡಿಸುತ್ತಾ ‘ಸಾರ್ಥಕವಾಯಿತು’ ಹಾಡುತ್ತಾರೆ. ಮಾಧವಿಯ ಬಲೆಗೆ ಅಣ್ಣಾವ್ರು ಬೀಳದಿದ್ದಾಗ ಮಾಧವಿ ವಾಣಿ ಜಯರಾಂ ಧ್ವನಿಯಲ್ಲಿ ‘ಬೀಸದಿರು ತಂಗಾಳಿ’ ಹಾಡಿ ಕುಣಿಯುವುದು ಮೈ ತುಂಬಾ ಬಟ್ಟೆ ಧರಿಸಿದ ಹೆಲೆನ್ ನರ್ತಿಸುವಂತೆ ಅನಿಸಿದ್ದು ನನಗೆ ಮಾತ್ರವೇನಾ?
ಅಣ್ಣಾವ್ರು ಸೈಕಲ್‌ನಿಂದ ಹೆಚ್ಚು ಕಡಿಮೆ ಇಳಿಯದೇ ಒಂದು ಫೈಟು ಮಾಡಿದ್ದಾರೆ.
ಅವರ ಡಯಲಾಗ್ ಡೆಲಿವರಿ ಸೂಪರ್ ಎಂದು ನಾನು ಅಂದರೆ ಸರಿ ಹೋಗದೇನೋ. ಅಭಿನಯದಲ್ಲಿ ಅವರೊಂದಿಗೆ ದೊಡ್ಡ ಇನ್ಸ್ಟಿಟ್ಯೂಶನ್ ಎಂದರೆ ಸರಿ ಹೋದೀತೇನೋ.