“ಅಪರಿಚಿತ”

ಯಾವುದನ್ನೂ ಪರ್ಸನಲ್ ಆಗಿ ತೆಗೊಳ್ಳಬಾರದು ಅಂತ ಆಗಾಗ ಪ್ರತಿಜ್ಞೆ ಮಾಡುತ್ತಲೇ ಇರುತ್ತೇನೆ. ಮುರಿಯುತ್ತಲೇ ಇರುತ್ತೇನೆ. ಮಾನವನ ಸಂಬಂಧಗಳು ತುಂಬಾ ಸಂಕೀರ್ಣವಾದದ್ದು. ಇದು ಹೀಗೇ ಅಂತ ಗೆರೆ ಹಾಕಲಿಕ್ಕೆ ಬರದಂಥದ್ದು. ಒಬ್ಬರಿಗೆ ಸರಿ ಎನ್ನಿಸಿದರೆ ಮತ್ತೊಬ್ಬರಿಗೆ ತಪ್ಪೆನಿಸುತ್ತದೆ. ಎಲ್ಲರಿಗೂ ತಪ್ಪೆನಿಸಿದ್ದು ‌ನನಗೆ ಸರಿ ಎನಿಸುತ್ತದೆ.

ಅಪರಿಚಿತ” ಸಹಾ ಅನೈತಿಕ ಸಂಬಂಧದ ಕಥಾವಸ್ತುವನ್ನು ಹೊಂದಿರುವಂಥದ್ದು. ಆದರೆ ಒಬ್ಬ ಸಂಪ್ರದಾಯಸ್ಥ ಮನೆತನದವಳಾಗಿ ನಾನು ಯೋಚಿಸಿ ನೋಡಿದರೆ ಹೆಣ್ಣಿನ ಮಾನದ ಮುಂದೆ ಯಾವ ಕೊಲೆಯೂ ತಪ್ಪಲ್ಲ ಅಂತ ಅನಿಸುತ್ತದೆ.

ಇದರಲ್ಲಿ ಎರಡು ರೀತಿಯ ಸಂಬಂಧಗಳನ್ನು ತೋರಿಸಿದ್ದಾರೆ ನಿರ್ದೇಶಕರು. ಎರಡೂ ಅನೈತಿಕವೇ.

1) ಒಬ್ಬರು ಪ್ರತಿದಿನವೂ ತನ್ನ ದೈಹಿಕ ಬಯಕೆ ಪೂರೈಸಿಕೊಂಡು, ಅದು ತಪ್ಪು ಅಂತ ಗೊತ್ತಿದ್ದರೂ ಮನಸಾಕ್ಷಿಗೆ ಹೆದರದೇ ಬದುಕಿದ್ದವರು.

2) ಮತ್ತೊಬ್ಬರು ತನ್ನ ಪುರುಷ ಮದುವೆಯಾಗುತ್ತೇನೆಂದು ಮೋಸ ಮಾಡಿದ ಎಂಬ ಒಂದೇ ಕಾರಣಕ್ಕೆ ಪ್ರಾಣ ಕಳೆದುಕೊಂಡವರು.

ಯೋಚಿಸಿ ನೋಡಿದರೆ ಹೆಣ್ಣಿನ ಮಾನಕ್ಕೂ ದುಡ್ಡಿಗೂ ಸಂಬಂಧ ಇರುವುದು ಕಾಣುತ್ತದೆ. ದುಡ್ಡಿರುವ ಚಿನ್ನಮ್ಮ ಏನು ಮಾಡಿದರೂ ಸರಿ, ಅದೇ ಬಡವಳಾದ ಮನೆಕೆಲಸದ ಹುಡುಗಿ ಮಾತ್ರ ಮದುವೆಗೂ ಮುಂಚೆ ಬಸಿರಾದದ್ದು ತಪ್ಪು.

ದುಡ್ಡಿನ ಮಹಿಮೆಯಷ್ಟೇ.

ಎರಡೂ ಕೈ ಸೇರಿದರೆ ಮಾತ್ರವೇ ಚಪ್ಪಾಳೆ. ಆದರೆ ದೂಷಣೆಗೆ ಗುರಿಯಾಗುವುದು ಹೆಣ್ಣು ಮಾತ್ರ. ಎಂದೋ ತನಗಿಷ್ಟವಿದ್ದರೂ, ಇರದಿದ್ದರೂ ಒಬ್ಬನ ಕಾಮುಕತೆಗೆ ಬಲಿಯಾದರೆ ಆಕೆಯ ಬದುಕೇ ಮುಗಿದಂತೆ ಲೆಕ್ಕ. ಅಷ್ಟಕ್ಕೇ ಯಾಕೆ ಸಮಾಜ ಅವಳನ್ನು ಪ್ರಾಣ ಕಳೆದುಕೊಳ್ಳುವಷ್ಟರ ಮಟ್ಟಿಗೆ ನಿಷ್ಠುರವಾಗಿ ನೋಡುತ್ತದೋ?ಅವರು ತಮ್ಮ ಮಾನ ಕಳೆದುಕೊಂಡವರು. ಯಾವುದೇ ಕೊಲೆ, ದರೋಡೆ ಮಾಡಿದವರಲ್ಲ. ಆದರೂ ಅವರೇ ಪ್ರಾಣ ಕಳೆದುಕೊಂಡರು. ಅದು ಇಂದಿಗೂ ಬದಲಾಗಿಲ್ಲ

ಚಿಕ್ಕಂದಿನಿಂದ ಹೆಣ್ಣುಮಕ್ಕಳಿಗೆ ಉನ್ನತ ಸಂಸ್ಕಾರ ಕಲಿಸುವ ನಾವು ತಿಳಿದೋ ತಿಳಿಯದೆಯೋ ಅವಳ ತಲೆಯಲ್ಲಿ ತುಂಬುವುದು ಮಾತ್ರ ಅದೊಂದೇ. ಏನೆಂದರೆ ಹೆಣ್ಣಿಗೆ ಮಾತ್ರ ಶೀಲ ಇದೆ ಅಂತ. ಹಾಗಾಗಿ ಆಕೆ ಶೀಲ ಕಳೆದುಕೊಂಡು ಬದುಕಲು‌ ಇಚ್ಚಿಸಲಾರಳು. ಇನ್ನೆರೆಡು ಶತಮಾನ ಕಳೆದರೂ ಪರಿಸ್ಥಿತಿ ಬದಲಾಗೋಲ್ಲ.

ಪುಣ್ಯಕ್ಕೆ ಕುಸುಮ ತನ್ನ ಮಾನ ರಕ್ಷಣೆಗೆ ಬಂದೂಕು ಎತ್ತಿದ್ದೇ ದೊಡ್ಡದು ಬಿಡಿ. ಆಗಿನ ಕಾಲದಲ್ಲಿ ಈ ಕೆಲಸ ಮಾಡಿದ ಆಕೆಗೆ ಬ್ರೇವರಿ ಅವಾರ್ಡ್ ಕೊಡಬೇಕು. ಅದು ಕೊಲೆಯೇ ಇರಬಹುದು. ಆದರೆ ಕೊಲೆಗೆ ಕಾರಣ??? ಗಂಡು ಹೇಗಿದ್ದರೂ, ಏನು ಮಾಡಿದರೂ ಸುಮ್ಮನಿರಬೇಕೇ? ಜೊತೆಗೆ ಕುಸುಮಾ ತಾಯಿಯನ್ನು ಸಾಯಿಸಿದ ಆ ಮೂವರು ಜಮೀನ್ದಾರರ ಕಥೆಯೇನೂ ಕಟ್ಟುಕಥೆಯಲ್ಲ. ಆಗಿನ ಕಾಲವೇ ಹಾಗಿತ್ತು. ನಿಜಜೀವನದಲ್ಲಿ ನಡೆದದ್ದನ್ನೇ ಕಥೆ ಮಾಡುವುದು. ಬೆಂಕಿ ಇಲ್ಲದೇ ಹೊಗೆಯಾಡಲು ಸಾಧ್ಯವೇ?

ಇಷ್ಟರಮೇಲೆ ನನಗೆ ಕಾಡುವ ಪ್ರಶ್ನೆ ಒಂದೇ…

“ಹೆಣ್ಣಿಗೆ ಮಾತ್ರ ಯಾಕೆ ಸಂಬಂಧಗಳನ್ನು ನಿಭಾಯಿಸುವ ಕಷ್ಟ?”

ಕಾಶೀನಾಥ್ ಅವರು ಕಾಲಕ್ಕಿಂತ ಬಹು ಮುಂದಿದ್ದರು. ಇವರ ಟ್ಯಾಲೆಂಟ್ ಅಮೋಘವಾದುದು. ಅವರನ್ನು ಕಳೆದುಕೊಂಡ ಬೇಸರ ಕಾಡುತ್ತಿದೆ ಈಗ. ಸಿನೆಮಾ ಅಂತೂ ಚೂರೂ ಬೇಸರಿಸದ ಹಾಗೆ ಕುತೂಹಲದಿಂದ ನೋಡಿಸಿಕೊಂಡಿತು.

ಸಿನೆಮಾದಲ್ಲಿ ಹುಡುಕಿದರೂ ಒಂದು ಅನಗತ್ಯ ಸಂಭಾಷಣೆ, ಅನಗತ್ಯ ದೃಶ್ಯ ಕಂಡುಬರಲಿಲ್ಲ. ನಿಜಕ್ಕೂ ಸಿನೆಮಾ ಮಾಡುವವರು ಇದನ್ನು ಅಭ್ಯಸಿಸಬೇಕು. ಹಳಬರ ಸಿನೆಮಾವನ್ನೇ ಯಾಕೆ ಅಭ್ಯಾಸ ಮಾಡಬೇಕೆಂದರೆ ಆಗಿನ ಕಾಲದಲ್ಲಿ ಲಭ್ಯವಿದ್ದ ಅತ್ಯಲ್ಪ ತಂತ್ರಾಂಶದಲ್ಲಿಯೂ ಅಂತಹ ಅದ್ಭುತ ಸಿನೆಮಾ ಕಟ್ಟಿಕೊಟ್ಟ ನಿರ್ದೇಶಕರು ಗ್ರೇಟ್ ಅಲ್ಲವೇ? ಈಗಿನ ಸಿನೆಮಾಗಳೋ ಕೇವಲ ಅರ್ಧಗಂಟೆಗೇ ಬೋರ್ ಹೊಡೆಸುತ್ತದೆ.

ಅಂತೂ ಒಂದು ಅದ್ಭುತ ಪತ್ತೇಧಾರಿ ಸಿನೆಮಾ ನೋಡಿ ಖುಷಿಯಾಯ್ತು.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

One thought on ““ಅಪರಿಚಿತ”

Leave a Reply