ಅಮೇರಿಕ ಅಮೇರಿಕ @ 25

america

“ನೂರು ಜನ್ಮಕೂ ನೂರಾರೂ ಜನ್ಮಕೂ” ಎಂಬ ಹಾಡು ಕಿವಿಗೆ ಬಿದ್ದೊಡನೆಯೇ ತೊಂಬತ್ತರ ದಶಕದ ಹೃದಯಗಳು ಒಮ್ಮೆ ಝಲ್ ಎನ್ನುತ್ತದೆ.

ರಾಜೇಶ್ ಕಂಠದಿಂದ ಬಂದ ಸುಶ್ರಾವ್ಯವಾದ ಹಾಡಿಗೆ ಕಿವಿ ನಿಮಿರುತ್ತದೆ, ಸಮುದ್ರದ ದಡದಲ್ಲಿ ಅಲೆಗಳಂತೆ ತೇಲುವ ಹಾಡಿನ ಚಿತ್ರಣ ಕಣ್ಣ ಮುಂದೆ ಹಾದು ಹೋಗುತ್ತದೆ.

ಬೆಂಗಳೂರನ್ನೇ ಸರಿಯಾಗಿ ನೋಡದ ನಮ್ಮಂಥಹ ಎಷ್ಟೋ ಜನರಿಗೆ ಅಮೇರಿಕ ದೇಶದ ಪರಿಚಯ ಮಾಡಿಕೊಟ್ಟ ಚಿತ್ರ ಇದು. ಅಮೇರಿಕಾದ ಸೊಬಗು, ರಂಗು, ಗಗನ ಚುಂಬಿ ಕಟ್ಟಡಗಳು, ನಯಾಗರ ಫಾಲ್ಸ್ ಇವೆಲ್ಲವೂ ನೋಡಿದ ಪ್ರೇಕ್ಷಕ ಮಂತ್ರ ಮುಗ್ಧ.

ಸೂರ್ಯ, ಭೂಮಿ ಹಾಗು ಶಶಿ, ಪಕೃತಿಯ ಈ ಮೂರು ಅಂಶವನ್ನು ಒಂದು ನವಿರಾದ ತ್ರಿಕೋಣ ಪ್ರೀತಿಗೆ ಹೋಲಿಸಿ, ಈ ಮೂರೂ ಪಾತ್ರದ ಅಂತರಂಗದ ವಿಶ್ಲೇಷಣೆಯನ್ನು ನಾಜೂಕಾಗಿ ಈ ಚಿತ್ರ ಎತ್ತಿ ಹಿಡಿಯುತ್ತದೆ.

ಅಮೇರಿಕವನ್ನು ವಿಜೃಂಭಿಸುತ್ತಾ ಅಲ್ಲಿನ ಏಕಾಂಗಿತನ, ಸಮಾಜದಲ್ಲಿನ ಒಡನಾಟದ ಕೊರತೆ, ನುರಿತ ಕೆಲಸಗಾರರನ್ನು ಮುಲಾಜಿಲ್ಲದೆ ತೆಗೆಯುವ ಪದ್ಧತಿ ಹೀಗೆ ಈ ಭವ್ಯ ದೇಶದ ನ್ಯೂನ್ಯತೆಗಳ ಚಿತ್ರಣವನ್ನು ನೀಡುತ್ತಾ ಚಿತ್ರ ಸಾಗುತ್ತದೆ.

ಅಡಿಗರ “ಯಾವ ಮೋಹನ ಮುರಳಿ ಕರೆಯಿತು” ಕವನವು ಕಥೆಗೆ ಪುಷ್ಟಿ ನೀಡುತ್ತಾ ಹಂತ ಹಂತವಾಗಿ ಪ್ರತಿಧ್ವನಿಸಿ ನಮ್ಮನ್ನು ಭಾವ ಪರವಶತೆಗೆ ದೂಡುತ್ತದೆ.
ಹೇಗಿದೆ ನಮ್ಮ ದೇಶ, ಬಾನಲ್ಲಿ ಓಡೋ ಮೇಘ.. .. ಮನೋ ಮೂರ್ತಿಯವರ ಸಂಗೀತ ಚಿತ್ರದ ಜೀವಾಳ.

ತ್ಯಾಗರಾಜ ಎಂಬ ಖ್ಯಾತಿಯ ನಮ್ಮ ರಮೇಶ್ ಅಭಿನಯ ಈಗಲೂ ಎಲ್ಲರ ಮನದಲ್ಲಿ ಚಿರಸ್ಥಾಯಿ, ಅವರಿಗೆ ಸರಿಸಾಟಿಯಾಗಿ ಹೇಮಾ ಹಾಗು ದತ್ತಣ್ಣ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಬರುವ ಪುಟ್ಟ ಪಾತ್ರ “ಮಿಂಚು” ಎಂಬ ಮೊಲವನ್ನು ನಾವು ಮೆಚ್ಚಲೇ ಬೇಕು.

ಹಳ್ಳಿಯ ಪರಿಸರ, ಪ್ರಬುದ್ಧ ಪ್ರೀತಿ, ದಾಂಪತ್ಯದ ಬಿರುಕುಗಳು, ಸ್ನೇಹದ ಒಡನಾಟ, ದೇಶಾಭಿಮಾನ, ಅಮೇರಿಕಾದ ವೈಭವ, ಮುದ ನೀಡುವ ಸಂಗೀತ ಹೀಗೆ ಚಿತ್ರ ರಸಿಕನಿಗೆ ಬೇಕಿರುವ ಎಲ್ಲವನ್ನೂ ಉಣಬಡಿಸಿದ್ದಾರೆ ನಮ್ಮ ನೆಚ್ಚಿನ ನಿರ್ದೇಶಕರಾದ “ನಾಗತಿಹಳ್ಳಿ ಚಂದ್ರಶೇಖರ್”.

ಜೂನ್ 16ಕ್ಕೆ ಈ ಚಿತ್ರಕ್ಕೆ ಇಪ್ಪತೈದು ವರ್ಷದ ಸಂಭ್ರಮ…….

ಒಂದು ವರ್ಷಕ್ಕೂ ಹೆಚ್ಚಿನ ಕಾಲ ಓಡಿದ ಚಿತ್ರ, ರಾಷ್ಟ್ರ ಪ್ರಶಸ್ತಿಯೂ ಸೇರಿ ಸುಮಾರು 28 ಪ್ರಶಸ್ತಿಗಳನ್ನು ಪಡೆದ ಚಿತ್ರ, ಅಮೇರಿಕಾದಲ್ಲಿಮೂಹೂರ್ತ ಆಚರಿಸಿದ ಕನ್ನಡದ ಮೊದಲ ಚಿತ್ರ, ಇವೆಲ್ಲಾ ಹೆಗ್ಗಳಿಕೆಯಿಂದ ಈ ಚಿತ್ರ ಬೀಗುತ್ತಿದೆ.

ಸದಾಭಿರುಚಿಯ ಚಿತ್ರ ಎಂದೊಡನೆ ಮುಂಚುಣಿಯಲ್ಲಿ ನಿಲ್ಲುವ “ಅಮೇರಿಕ ಅಮೇರಿಕ” ಎಷ್ಟೋ ಆಶ್ಚರ್ಯವನ್ನು ಮೂಡಿಸುತ್ತಾ ಪ್ರೇಕ್ಷಕನ ಸ್ಮೃತಿ ಪಲ್ಲಟದಲ್ಲಿ ಇಂದೂ ರಾರಾಜಿಸುತ್ತಿದೆ.

ಪ್ರದೀಪ್ ಬೇಲೂರ್

Pradeep K S

Pradeep K S

ಪ್ರದೀಪ್ ಕೆ ಎಸ್ ಮೂಲತಹಃ ಶಿಲ್ಪ ಕಲೆಗೆ ತವರೂರಾದ ಬೇಲೂರಿನವನು. ವೃತ್ತಿ ಒರಾಕಲ್ ಕಂಪನಿಯಲ್ಲಿ ಪ್ರವೃತ್ತಿ ಓದುವುದು ಹಾಗು ಕಥೆ ಕವನ ಅಂಕಣ ಬರೆಯುವುದು.

Leave a Reply