” ಅರುವಿ” (ತಮಿಳು)

ಎಲ್ಲಾ ಸಿನೆಮಾಗಳು ಸುಖಾಂತ್ಯ ಕಾಣಲಿ ಅಂತ ನಮ್ಮ ಆಸೆ. ನಾಯಕ ಅಥವಾ ನಾಯಕಿ ಮೊದಲಿನಿಂದ ಎಷ್ಟೇ ಕಷ್ಟಪಟ್ಟಿರಲಿ ಕೊನೆಯಲ್ಲಿ ಅವರಿಗೆ ಒಳ್ಳೆಯದಾದರೆ ನಮಗೆ ಖುಷಿಯಾಗುತ್ತದೆ. ಒಳ್ಳೆಯದಾಗಲಿ ಎಂದೇ ನಾವೂ ಬಯಸುತ್ತೇವೆ. ಆದರೆ ಕಡೆಯಲ್ಲಿ ಒಳ್ಳೆಯದಾಗಲೇಬೇಕೇ?

ಈ ಪ್ರಶ್ನೆಗೆ “ಅರುವಿ” ಚಿತ್ರ ಉತ್ತರ ಕೊಡುತ್ತದೆ.

ಏಕೆಂದರೆ “ಅರುವಿ”ಯದ್ದು ಎಲ್ಲಾ ಸಿನೆಮಾ ಸಿದ್ಧ ಸೂತ್ರಗಳನ್ನು ಪುಡಿ ಮಾಡುವ ಕಥೆ. ಇಂತಹ ಕಥೆ ಮಾಡಲು ಎದೆಗಾರಿಕೆ ಬೇಕು. ನಾಯಕನಿಲ್ಲದ, ನಾಯಕಿ ಇಲ್ಲದ ಅಥವಾ ಮುಖ್ಯ ಪಾತ್ರಧಾರಿಯನ್ನೇ ನಾಯಕಿ ಎಂದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಭಾರತೀಯ ಸಿನೆಮಾಗಳು ಚೌಕಟ್ಟನ್ನು ಮೀರಲಾರವು.

ಅರುವಿ ಅದನ್ನು ಮೀರಿದೆ.

ಸಿನೆಮಾದ ಮೊದಲಲ್ಲಿಯೇ ನಾಯಕಿ(?)ಯನ್ನು ಯಾವುದೋ ಮಾಡಬಾರದ ಕೆಲಸ ಮಾಡಿದ್ದಾಳೆ ಎಂಬಂತೆ ಆಕೆಯನ್ನು ತಂದೆ ತಾಯಿ ಮನೆಯಿಂದ ಆಚೆ ಹಾಕುತ್ತಾರೆ. ಆದರೆ ಅವಳೇನು ಮಾಡಿದ್ದಾಳೆ ಅಂತ ನಮಗೆ ಹೇಳದೇ ಕಾಡಿಸುತ್ತಾರೆ‌. ಅದೇನಿರಬಹುದು ಅಂತ ನಾವು ಊಹಿಸಿ ಸುಸ್ತಾಗುತ್ತೇವೆ. ಇಷ್ಟು ದಿನ ನೆಮ್ಮದಿಯಿಂದ ಇದ್ದವಳು ಏಕಾಏಕಿ ಎಲ್ಲಿಗೆ ಹೋಗಬೇಕು? ಸ್ವಲ್ಪ ದಿನ ತನ್ನ ಸ್ನೇಹಿತೆಯ ಆಶ್ರಯದಲ್ಲಿ ಇರುತ್ತಾಳೆ.

ನಂತರ ಒಬ್ಬ ಮಂಗಳಮುಖಿಯ ಬಳಿ ಆಶ್ರಯ ಪಡೆಯುತ್ತಾಳೆ. ಆ ಮಂಗಳಮುಖಿಯ ಜೊತೆ ಗಾರ್ಮೆಂಟ್ಸಿಗೆ ಸೇರಿಕೊಂಡು ದುಡಿಯಲೂ ಶುರು ಮಾಡುತ್ತಾಳೆ. ಜೊತೆಗೆ ಮನಸ್ಸಿನ ತುಮುಲ ಬಗೆಹರಿಸಿಕೊಳ್ಳಲು ಒಬ್ಬ ಸ್ವಾಮೀಜಿಯನ್ನು ಸಹ ಭೇಟಿ ಮಾಡುತ್ತಾಳೆ.

ಈ ನಡುವೆ ಆಕೆಯ ತಂದೆಗೆ ಆಪರೇಷನ್ನಿಗಾಗಿ ಒಂದು ಲಕ್ಷ ಬೇಕಾಗುತ್ತದೆ. ಆಕೆ ಆ ಹಣಕ್ಕಾಗಿ ಗಾರ್ಮೆಂಟ್ಸ್ ಓನರ್ ಅನ್ನು ಸಂಪರ್ಕಿಸಿ ತಂದೆಗೆ ಹಣ ಕಳಿಸುತ್ತಾಳೆ. ನಂತರ ಆಕೆ ಕೆಲಸಕ್ಕೆ ಬರುವುದಿಲ್ಲ.

ಒಮ್ಮೆ ಏಕಾಏಕಿ ಒಂದು ಚಾನೆಲ್ಲಿಗೆ ಹೋಗಿ, ಆ ಚಾನೆಲ್ಲಿನ ರಿಯಾಲಿಟಿ ಷೋನಲ್ಲಿ ತನಗೆ ಅವಕಾಶ ಕೊಡಬೇಕೆಂದೂ, ತನ್ನ ಮೇಲೆ ಮೂವರು ಅತ್ಯಚಾರ ಎಸಗಿದ್ದಾರೆಂದೂ ಹೇಳುತ್ತಾಳೆ. ಆ ಮೂವರು ಯಾರೆಂದರೆ ತನಗೆ ಆಶ್ರಯ ಕೊಟ್ಟಿದ್ದ ಸ್ನೇಹಿತೆಯ ತಂದೆ, ಗಾರ್ಮೆಂಟ್ಸ್ ಮಾಲೀಕ, ಮತ್ತೊಬ್ಬ ಸ್ವಾಮೀಜಿ.

ಚಾನೆಲ್ಲಿನವರು ಇವಳ ಕಥೆ ಪ್ರಸಾರ ಮಾಡಲು ಒಪ್ಪಿಕೊಂಡು ಆ ಮೂವರನ್ನು ಪ್ರೋಗ್ರಾಮಿಗೆ ಕರೆಸುತ್ತಾರೆ. ಆಗ ಅರುವಿ ತನಗೆ ಏಡ್ಸ್ ಇದೆ ಎಂಬ ವಿಚಾರ ಸ್ಫೋಟಿಸುತ್ತಾಳೆ.‌ ಆ ಕಾರಣದಿಂದಲೇ ಅವಳನ್ನು ತಂದೆ-ತಾಯಿ ಮನೆಯಿಂದಾಚೆ ಹಾಕಿರುತ್ತಾರೆ. ಆದರೆ ತಂದೆ-ತಾಯಿ ತಿಳಿದಂತೆ ಆಕೆ ಕೆಟ್ಟಕೆಲಸ ಮಾಡಿರುವುದಿಲ್ಲ. ಬದಲಾಗಿ ಏಡ್ಸ್ ಅವಳಿಗೆ ಎಳನೀರು ಮಾರುವವನು ಎಳನೀರು ಕೊಚ್ಚುವಾಗ ಅವನ ಬೆರಳಿಗೆ ಗಾಯವಾಗಿ, ಆ ರಕ್ತ ಎಳನೀರಿನೊಳಗೆ ಸೇರಿ ಆ ಖಾಯಿಲೆ ಈಕೆಗೆ ಬಂದಿರುತ್ತದೆ.

ಈ ಮೂವರು ಅತ್ಯಾಚಾರದ ಆರೋಪಿಗಳಿಗೆ ಈ ವಿಷಯ ತಿಳಿದಾಗ ಭೂಕಂಪವಾದ ಹಾಗೆ ಆಗುತ್ತದೆ. ಇಷ್ಟು ಹೊತ್ತೂ ಅರುವಿಯ ಪರವಾಗಿದ್ದ ಕಾರ್ಯಕ್ರಮದ ನಿರೂಪಕಿ ಈಗ ಅರುವಿಯ ವಿರುದ್ಧವಾಗುತ್ತಾಳೆ. ಅರುವಿ ಬೇಕೂಂತಲೇ ಅವರಿಗೆ ಏಡ್ಸ್ ಹಂಚಿದ್ದಾಳೆ ಅಂತ ಕೋಪಗೊಳ್ಳುತ್ತಾಳೆ.

ಇದರಿಂದ ಸ್ಫೋಟಗೊಳ್ಳುವ ಅರುವಿ ತನ್ನ ಬ್ಯಾಗಿನಿಂದ ಪಿಸ್ತೂಲು ತೆರೆದು ಅಷ್ಟೂ ಚಾನೆಲ್ ಯೂನಿಟ್ ನವರನ್ನು ತನ್ನ ವಶದಲ್ಲಿ ಇರಿಸಿಕೊಳ್ಳುತ್ತಾಳೆ. ಅಷ್ಟೇ ಅಲ್ಲ…. ಪಿಸ್ತೂಲಿನ ಮೊನೆಯಲ್ಲಿ ಬೆದರಿಸಿ ಅವರಿಂದ ತನಗೆ ಬೇಕಾದದ್ದು ಮಾಡಿಸಿಕೊಳ್ಳುತ್ತಾಳೆ. ಹೀಗೆ ಮಾಡುತ್ತಾ ಅಲ್ಲಿರುವವರಿಗೆ ಆಪ್ತವಾಗುತ್ತಾ ಹೋಗುತ್ತಾಳೆ. ಕಡೆಗೆ ಪೊಲೀಸರಿಗೆ ಶರಣಾಗುತ್ತಾಳೆ.‌

ಪೊಲೀಸರು ಆಕೆಯನ್ನು ಜೈಲಿಗೆ ಹಾಕದೇ ಏಡ್ಸ್ ಕ್ಯಾಂಪಿನಲ್ಲಿ ಇಡುತ್ತಾರೆ‌. ದಿನದಿನಕ್ಕೂ ಬಡವಾಗುತ್ತಾ ಖಾಯಿಲೆಗೆ ಬಲಿಯಾಗುತ್ತಾ ಹೋಗುವ ಅವಳ ಮುಖವನ್ನು ನಮ್ಮಿಂದ ನೋಡಲಾಗುವುದಿಲ್ಲ. ಪ್ರತೀಕ್ಷಣವೂ ಸಾವಿನೆಡೆಗೆ ಸಾಗುತ್ತಿರುವ ಆಕೆ ಒಂದು ದಿನ ಕ್ಯಾಂಪಿನಿಂದ ಮಾಯವಾಗುತ್ತಾಳೆ.

ಆಕೆ ಹೋದದ್ದಾದರೂ ಎಲ್ಲಿಗೆ…? ಆಕೆ ಸಾವು ತಪ್ಪಿಸಿಕೊಂಡಳೇ…? ಏಡ್ಸ್ ಆಕೆಯನ್ನು ಜೀವಂತ ಬಿಟ್ಟಿತೇ….? ಬಡಪಾಯಿ ಅರುವಿ ಮಾಡಿದ ತಪ್ಪೇನು…?

ಉತ್ತರಕ್ಕಾಗಿ ಸಿನೆಮಾ ನೋಡಬೇಕಿದೆ.

ಚಿತ್ರ ಅಮೆಜಾನ್ ಪ್ರೈಮಿನಲ್ಲಿದೆ.‌ ಮೊದಲೇ ಹೇಳಿದಂತೆ ಇದರ ಅಂತ್ಯ ಊಹಿಸಲೂ ಆಗುವುದಿಲ್ಲ ಮತ್ತು ಅರಗಿಸಿಕೊಳ್ಳಲೂ ಆಗುವುದಿಲ್ಲ. ಆದರೆ ಇದೇ ಅಂತಿಮ ಸತ್ಯ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply