ಕಣ್ಮುಂದೆ ಕಾಣುವುದಷ್ಟೇ ಸತ್ಯ ಎಂದು ಅಂದುಕೊಳ್ಳುತ್ತೇವೆ ನಾವು. ಆದರೆ ನಮಗೆ ಕಾಣದ ಎಷ್ಟೋ ಸತ್ಯಗಳು ಈ ಪ್ರಪಂಚದಲ್ಲಿವೆ. ನಾವು ಏನನ್ನಾದರೂ ಕಾಣಲು ಕಣ್ಣೇ ಆಧಾರ. ಅಕಸ್ಮಾತ್ ಯಾವುದಾದರೊಂದು ಘಟನೆ ನಾವು ಕಣ್ಮುಚ್ಚಿರುವಾಗ ನಡೆ್ದದುಬಿಟ್ಟರೆ ನಮಗೆ ಅದರ ಅರಿವೇ ಇರುವುದಿಲ್ಲ. ಕಣ್ಣಿಗೆ ಕಂಡಿ್್ದದ್ದಷ್ಟೇ ಸತ್ಯ ಅಂತ ತಿರುಗುತ್ತಿರುತ್ತೇವೆ.
ನಾಯಕ ಶೀಲಂ ಇಂತಹಾ ವ್ಯಕ್ತಿತ್ವದವನು.
ಯಾರೂ ಕಾಣದ್ದನ್ನು ತಾನು ಕಾಣಬೇಕೆಂಬ ಹಂಬಲ. ಇದುವರೆಗೂ ಜನರ ಕಲ್ಪನೆಗಳಲ್ಲಷ್ಟೇ ಮನೆಮಾಡಿರುವ ದೆವ್ವ-ಭೂತಗಳನ್ನು ಕಣ್ಣಾರೆ ಕಾಣಬೇಕೆಂಬ ಕುತೂಹಲ ಆತನಿಗೆ. ಅದಕ್ಕಾಗಿ ಹಗಲೂ-ರಾತ್ರಿ ಕ್ಯಾಮೆರಾ ಹೊತ್ತು ತಿರುಗುತ್ತಾನೆ. ಕ್ಯಾಮೆರಾ ಯಾಕೆ ಅಂದ್ರಾ? ತಾನು ಕಂಡ “ಸತ್ಯ”ವನ್ನು ಜನರಿಗೂ ತಿಳಿಸುವುದಕ್ಕೆ
ಒನ್ಸ್ ಎಗೇನ್.. ಕಣ್ಣಿಗೆ ಕಾಣುವ “ಸತ್ಯ”ವನ್ನು ಮಾತ್ರ!
ಒಂದು ಚಾನೆಲ್ಲಿನಲ್ಲಿ ಅವನ ಈ ಕಾರ್ಯಕ್ರಮ ಭರ್ಜರಿ ಟಿಆರ್ಪಿ ಗಳಿಸಿರುತ್ತದೆ. ಕಾಣದ ವಿಷಯಗಳ ಬಗ್ಗೆ ಜನರಿಗೆ ಕುತೂಹಲ ಜಾಸ್ತಿ. ಹಾಗಾಗಿ ಅವನ ಈ ಕಾರ್ಯಕ್ರಮ ಯಾವುದೇ ಅಡೆತಡೆಯಿಲ್ಲದೇ ತೊಂಬತ್ತೊಂಬತ್ತು ಎಪಿಸೋಡ್ ಮುಗಿಸಿರುತ್ತದೆ. ಆದರೆ ಇಷ್ಟು ಎಪಿಸೋಡುಗಳಲ್ಲಿಯೂ ಆತನಿಗೆ ದೆವ್ವ-ಭೂತಗಳ ಇರುವಿಕೆಯ ಬಗ್ಗೆ ಒಂದು ಚಿಕ್ಕ ಸುಳಿವು ಸಹ ದೊರಕಿರುವುದಿಲ್ಲ. ಹಾಗಾಗಿ ಅವುಗಳನ್ನು ಕಣ್ಣಾರೆ ಕಾಣದ ಆತ ದೆವ್ವ-ಭೂತಗಳು ಮನಸ್ಸಿನ ಭ್ರಮೆ ಮಾತ್ರ ಅಂತ ತೀರ್ಮಾನಿಸಿರುವ ಸಾಧ್ಯತೆ ಇದೆ.
ಈಗವನ ಕಾರ್ಯಕ್ರಮದ ನೂರನೇ ಎಪಿಸೋಡು!
ಅದು ಬಹಳ ವಿಶೇಷವಾಗಿರಬೇಕು ಎಂಬ ಕಾರಣದಿಂದ ಯಾವುದೋ ಬ್ರಹ್ಮರಾಕ್ಷಸ ವಾಸಿಸುವ ಸ್ಥಳದಲ್ಲಿ ಚಿತ್ರೀಕರಣ ಮಾಡಲು ಎಲ್ಲಾ ತಯಾರಿ ನಡೆಸಿರುತ್ತಾನೆ.
ಆದರೆ ಮನುಷ್ಯರ ಯೋಚನೆ ಎಷ್ಟು ಸಂಕುಚಿತ ನೋಡಿ. ಶೀಲಂ ಕಾರ್ಯಕ್ರಮವನ್ನು ನೋಡಿದ ಒಬ್ಬ ವ್ಯಕ್ತಿ ಅದನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಾನೆ. ಹೇಗೆ ಅಂದ್ರಾ? ಆ ವ್ಯಕ್ತಿಗೆ ಒಂದು ಮನೆ ಇರುತ್ತದೆ. ಅದನ್ನು ಆತ ಮಾರಬೇಕು ಅಂತಿರುತ್ತಾನೆ. ಆದರೆ ಆ ಮನೆಯಲ್ಲಿ ದೆವ್ವ-ಭೂತವಿದೆ ಅನ್ನುವ ಕಾರಣಕ್ಕೆ ಯಾರೂ ಅದನ್ನು ಕೊಂಡುಕೊಳ್ಳುತ್ತಿರುವುದಿಲ್ಲ. ಅದನ್ನು ಮೀರಿ ಹೋದವರು ಸತ್ತಿರುತ್ತಾರೆ. ಹಾಗಾಗಿ ಅದೊಂದು ಭೂತಬಂಗಲೆಯಾಗಿಯೇ ಉಳಿದಿರುತ್ತದೆ.
ಈಗ ಶೀಲಂ ತನ್ನ ಎಪಿಸೋಡಿನಲ್ಲಿ ಈ ಮನೆಯೊಳಗೆ ಒಂದು ರಾತ್ರಿ ವಾಸಿಸಿ, ಅಲ್ಲಿ ಭೂತವಿಲ್ಲ ಅಂತ ಪ್ರೂವ್ ಮಾಡಿದ್ರೆ ನಂತರ ಆ ಮನೆ ಮಾರಾಟವಾಗುತ್ತೆ ಎಂಬ ಸ್ವಾರ್ಥ ಆ ವ್ಯಕ್ತಿಯದು. ಅದಕ್ಕಾಗಿ ಶೀಲಂ ಗೆ ಈ ಬಗ್ಗೆ ಓಪನ್ ಛಾಲೆಂಜ್ ಕೊಡ್ತಾನೆ. ಶೀಲಂ ಆ ಛಾಲೆಂಜ್ ಸ್ವೀಕರಿಸಿ, ತನ್ನ ನೂರನೇ ಎಪಿಸೋಡನ್ನು ಆ ಮನೆಯಲ್ಲಿಯೇ ಚಿತ್ರಿಸುವುದಾಗಿ ನಿರ್ಧಾರ ಮಾಡುತ್ತಾನೆ.
ಮುಂದೆ????
ಆ ಒಂದು ರಾತ್ರಿ ಆ ಮನೆಯಲ್ಲಿ ಶೀಲಂ ಜೊತೆ ನಡೆದದ್ದೇನು…? ತೊಂಬತ್ತೊಂಬತ್ತು ಎಪಿಸೋಡಿನಲ್ಲಿ ಕಾಣಿಸಿಕೊಂಡಿರದ ದೆವ್ವ ಈಗ ಕಾಣಿಸಿಕೊಳ್ಳಬಹುದಾ…..? ಅಥವಾ ಇದರ ಹಿಂದೆಯೂ ಮಾನವನ ದುರಾಸೆಯ ಕೈವಾಡ ಇರಬಹುದಾ……?
ಈ ಮೇಲಿನ ರಹಸ್ಯ ಹೊರಬಂದಾಗ ನಮ್ಮ ಮೆದುಳು ಅದುರುವುದು ಗ್ಯಾರಂಟಿ!!!!
ಯಾಕೆಂದರೆ…. ನಾವು ಇಲ್ಲಿಯವರೆಗೂ ಕಂಡಿರದ ಸತ್ಯವೊಂದನ್ನು ಎಳೆಎಳೆಯಾಗಿ ಅನಾವರಣಗೊಳಿಸುತ್ತಾರೆ ನಿರ್ದೇಶಕರು. ಆಗ ಉಸಿರು ಬಿಗಿಹಿಡಿದು ನಡೆದ ಘಟನೆಗಳನ್ನೆಲ್ಲಾ ಮತ್ತೊಮ್ಮೆ ಮೆಲುಕು ಹಾಕಬೇಕಾಗುತ್ತದೆ. ಆಗ ನಮ್ಮಲ್ಲಿ ಮೂಡುವ ಭಯಾಶ್ಚರ್ಯ ವರ್ಣನಾತೀತ!!!
ಒಂದು ಕುತೂಹಲಕರ ಸಸ್ಪೆನ್ಸ್-ಥ್ರಿಲ್ಲರ್ ಅನುಭವಕ್ಕಾಗಿ ಈ ಸಿನೆಮಾ ವೀಕ್ಷಿಸಬಹುದು.
*************